‌ಮಳೆಯ ನಡುವೆ ಕೆಸರಿನ ಮಜ್ಜನ

7
ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಕುಣಿದು ಕುಪ್ಪಳಿಸಿದ ಸ್ಪರ್ಧಿಗಳು

‌ಮಳೆಯ ನಡುವೆ ಕೆಸರಿನ ಮಜ್ಜನ

Published:
Updated:
Deccan Herald

ಮಡಿಕೇರಿ: ಆಹಾ... ಮಳೆಗೆ ಕೊಡಗಿನ ಪ್ರಕೃತಿ ಹಸಿರಾಗಿದೆ. ಎಲ್ಲೆಲ್ಲೂ ನೀರು. ಗದ್ದೆಗಳೂ ಕೆರೆಗಳಾಗಿವೆ. ಇಂತಹ ವಾತಾವರಣದಲ್ಲಿ ಕೆಸರು ಗದ್ದೆ ಕ್ರೀಡಾಕೂಟ ನಡೆದರೆ ಹೇಗಿರುತ್ತೆ! ಹೌದು, ತಾಲ್ಲೂಕಿನ ಕಗ್ಗೋಡ್ಲು ಗ್ರಾಮದಲ್ಲಿ ಶನಿವಾರ ನಡೆದ ಕೆಸರು ಗದ್ದೆ ಕ್ರೀಡಾಕೂಟದಲ್ಲಿ ಸಂಭ್ರಮ ಮೇಳೈಸಿತ್ತು. ಚಳಿ, ಮಳೆ, ಗಾಳಿಯ ನಡುವೆ ನಡೆದ ಸ್ಪರ್ಧೆಯಲ್ಲಿ ಅದೆಷ್ಟೋ ಮಂದಿ ಕೆಸರಿನಲ್ಲಿ ಬಿದ್ದರು. ಕೆಸರಿನ ಸ್ನಾನ ಮಾಡಿದರು.

ಸ್ಪರ್ಧೆಗಳು ನಡೆಯಬೇಕಾದರೆ ಕೆಲವರು ಎದ್ದರು, ಬಿದ್ದರು, ಓಡಿ ಗುರಿ ತಲುಪಲು ಯಶಸ್ವಿಯಾದರು. ಮತ್ತೆ ಕೆಲವರು ಅರ್ಧದಲ್ಲಿಯೇ ಹೊರ ಬಂದರು... ಆದರೆ, ಕೆಸರಿನಲ್ಲಿ ಮಿಂದೇಳುವ ಮೂಲಕ ಸಂಭ್ರಮಿಸಿದ್ದು ವಿಶೇಷ.

ಕಗ್ಗೋಡ್ಲು ಗ್ರಾಮದ ಸಿ.ಡಿ. ಬೋಪಯ್ಯ ಅವರ ಗದ್ದೆಯಲ್ಲಿ ಜಿಲ್ಲಾ ಪಂಚಾಯಿತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಜಿಲ್ಲಾ ಯುವ ಒಕ್ಕೂಟ ಆಶ್ರಯದಲ್ಲಿ ಈ ಕ್ರೀಡಾಕೂಟ ಆಯೋಜಿಸಲಾಗಿತ್ತು.

ವಾಲಿಬಾಲ್‌, ಥ್ರೋಬಾಲ್‌, ಹಗ್ಗಜಗ್ಗಾಟ, ಕೆಸರು ಗದ್ದೆ  ಓಟ, ಮುಕ್ತ ಓಟ, ಸಾಂಪ್ರದಾಯಿಕ ನಾಟಿ ಓಟದ ಸ್ಪರ್ಧೆಗಳನ್ನು ವಿದ್ಯಾರ್ಥಿಗಳಿಗೆ, ಪುರುಷರಿಗೆ ಹಾಗೂ ಮಹಿಳೆಯರಿಗೆ ಪ್ರತ್ಯೇಕ ವಿಭಾಗಗಳಲ್ಲಿ ಆಯೋಜಿಸಲಾಗಿತ್ತು. ಗೆದ್ದ ತಂಡಗಳು ಕೆಸರು ಮೆತ್ತಿಕೊಂಡು ಸಂಭ್ರಮಿಸಿದ್ದ ವಿಶೇಷ.

ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದ ಶಾಸಕ ಕೆ.ಜಿ. ಬೋಪಯ್ಯ, ‘ಕ್ರೀಡಾಪಟುಗಳ ತವರೂರಾದ ಕೊಡಗು ಜಿಲ್ಲೆಯಲ್ಲಿ ಕೆಸರು ಗದ್ದೆ ಕ್ರೀಡಾಕೂಟಕ್ಕೆ ತನ್ನದೇ ಆದ ಚಾರಿತ್ರಿಕ ಹಿನ್ನೆಲೆ ಇದೆ’ ಎಂದು ಹೇಳಿದರು.

ಹಿಂದೆ ಕೆಸರು ಗದ್ದೆ ಕ್ರೀಡಾಕೂಟದಲ್ಲಿ ಪಾಲ್ಗೊಂಡು ಜಯಗಳಿಸಿದವರಿಗೆ ಬಾಳೆಗೊನೆ, ತೆಂಗಿನ ಕಾಯಿ ಹಾಗೂ ಎಲೆ ಅಡಿಕೆ ನೀಡಿ ಗೌರವಿಸುತ್ತಿದ್ದರು ಎಂದು ಸ್ಮರಿಸಿದರು. 

ಕೆಸರು ಗದ್ದೆ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುವುದರಿಂದ ಶಕ್ತಿ, ಯುಕ್ತಿ ಹಾಗೂ ಮನಸ್ಸಿನ ದೃಢತೆ ಹೆಚ್ಚುತ್ತದೆ. ಕೊಡಗಿನಲ್ಲಿ ಕೆಸರು ಗದ್ದೆ ಕ್ರೀಡಾಕೂಟ ಆರಂಭಿಸಿದ ನಂತರ ಇತರ ಭಾಗಗಳಲ್ಲೂ ಪ್ರೆರಣೆಯಾಗಿ ಕೆಸರು ಗದ್ದೆ ಕ್ರೀಡಾಕೂಟವನ್ನು ಕಾಣಬಹುದಾಗಿದೆ ಎಂದು ಬೋಪಯ್ಯ ಹೇಳಿದರು.

ಜಿಲ್ಲೆಯಲ್ಲಿ ಯಾರೂ ನಿರೀಕ್ಷೆ ಮಾಡದಷ್ಟು ಮಳೆಯಾಗುತ್ತಿದ್ದು, ವ್ಯಾಪಕ ಮಳೆಯಿಂದಾಗಿ ಅಪಾರ ಪ್ರಮಾಣದಲ್ಲಿ ನಷ್ಟ ಉಂಟಾಗಿದೆ. ಮಳೆ ಕಡಿಮೆಯಾಗಲೆಂದು ಎಲ್ಲರೂ ಪ್ರಾರ್ಥಿಸೋಣ ಎಂದು ಹೇಳಿದರು.  

ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಬಿ.ಎ. ಹರೀಶ್ ಮಾತನಾಡಿ, ಹಿಂದೆ ಎತ್ತುಗಳನ್ನು ಬಳಸಿ ನಾಟಿ ಮಾಡುತ್ತಿದ್ದರು, ಇತ್ತೀಚಿನ ದಿನಗಳಲ್ಲಿ ಯಾಂತ್ರೀಕೃತ ನಾಟಿ ವ್ಯವಸ್ಥೆ ಬಂದಿದೆ. ಭತ್ತ ಗದ್ದೆ ಮಾಡುವುದರಿಂದ ಅಂತರ್ಜಲ ಹೆಚ್ಚಳಕ್ಕೆ ಸಹಕಾರಿಯಾಗಿದೆ ಎಂದು ಹೇಳಿದರು.

ತಾಲ್ಲೂಕು ಪಂಚಾಯಿತಿ ಸದಸ್ಯೆ ಕುಮುದ ರಶ್ಮಿ ಮಾತನಾಡಿ, ಕೆಸರು ಗದ್ದೆ ಕ್ರೀಡಾಕುಟದಲ್ಲಿ ಪಾಲ್ಗೊಳ್ಳುವುದರಿಂದ ಮನಸ್ಸಿನ ದೃಢತೆ ಹೆಚ್ಚಾಗುತ್ತದೆ ಎಂದು ಅಭಿಪ್ರಾಯಪಟ್ಟರು.  

ಹಾಕತ್ತೂರು ಗ್ರಾ.ಪಂ. ಅಧ್ಯಕ್ಷ ಶಾರದ ರಾಮಕೃಷ್ಣ, ಯೂತ್ ಹಾಸ್ಟೆಲ್ ಮೇಲ್ವಿಚಾರಕ ರಾಜಶೇಖರ, ಜಿಲ್ಲಾ ಯುವ ಒಕ್ಕೂಟದ ಅಧ್ಯಕ್ಷ ಎಂ.ಡಿ. ಹರೀಶ್, ತಾಲ್ಲೂಕು ಯುವ ಒಕ್ಕೂಟದ ಅಧ್ಯಕ್ಷ ನವೀನ್ ದೇರಳ, ಸುಕುಮಾರ್ ಹಾಜರಿದ್ದರು.   

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !