ಸೋಮವಾರಪೇಟೆ: ಒಕ್ಕಲಿಗ ಸಮುದಾಯದ ವಿಶಿಷ್ಟ ಕ್ರೀಡಾಕೂಟವಾದ ಕೆಸರು ಗದ್ದೆ ಕ್ರೀಡೆಯನ್ನು ಮುಂದಿನ ಪೀಳಿಗೆಗೂ ಉಳಿಸಿ ಬೆಳಸಬೇಕಾಗಿದೆ ಎಂದು ರಾಜ್ಯ ಒಕ್ಕಲಿಗರ ಸಂಘದ ಗೌರವಾಧ್ಯಕ್ಷ ಹರಪಳ್ಳಿ ರವೀಂದ್ರ ಹೇಳಿದರು.
ಶಾಂತಳ್ಳಿ ಗ್ರಾಮದ ಸತೀಶ್ ಮತ್ತು ಬಿದ್ದಪ್ಪ ಅವರ ಗದ್ದೆಯಲ್ಲಿ ಭಾನುವಾರ ತಾಲ್ಲೂಕು ಒಕ್ಕಲಿಗರ ಯುವ ವೇದಿಕೆ ವತಿಯಿಂದ ನಡೆದ ಕೆಸರುಗದ್ದೆ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ರಾಜ್ಯ ಸುಭೀಕ್ಷೆಗೆ ಒಕ್ಕಲಿಗರು ಕಾರಣರಾಗಿದ್ದಾರೆ. ಕಳೆದ 500 ವರ್ಷಗಳ ಹಿಂದೆಯೇ ನಾಡಪ್ರಭು ಕೆಂಪೇಗೌಡ ಎಲ್ಲ ವರ್ಗದವರ ಏಳಿಗೆಗಾಗಿ ಬೆಂಗಳೂರು ನಗರವನ್ನು ಕಟ್ಟಿದ್ದರು. ಸಮಾಜದವರ ಹಿತದೃಷ್ಟಿಯಿಂದ ರಾಜ್ಯ ಒಕ್ಕಲಿಗರ ಸಂಘ ಹಲವು ಅಭಿವೃದ್ಧಿ ಕೆಲಸಗಳನ್ನು ಮಾಡುತ್ತಿದೆ ಎಂದರು.
ಶೈಕ್ಷಣಿಕ ಕ್ಷೇತ್ರದಲ್ಲಿ ಸಮಾಜದ ಮಕ್ಕಳು ಇನ್ನಷ್ಟು ಸಾಧನೆ ಮಾಡಬೇಕಾಗಿದೆ. ಗ್ರಾಮೀಣ ಮಕ್ಕಳಿಗೂ ಗುಣಮಟ್ಟದ ಶಿಕ್ಷಣ ಸಿಗಬೇಕು. ಈ ಹಿನ್ನೆಲೆಯಲ್ಲಿ ರಾಜ್ಯ ಒಕ್ಕಲಿಗರ ಸಂಘದಿಂದ ಸೋಮವಾರಪೇಟೆ ಪಟ್ಟಣದಲ್ಲಿ ಒಕ್ಕಲಿಗರ ಸಂಘದಿಂದ ₹ 9.99ಕೋಟಿ ವೆಚ್ಚದಲ್ಲಿ ಸುಸಜ್ಜಿತ ಒಕ್ಕಲಿಗರ ಬಾಲಕಿಯರ ವಸತಿ ನಿಲಯ ನಿರ್ಮಾಣಗೊಳ್ಳಲಿದ್ದು, ಸದ್ಯದಲ್ಲಿಯೇ ಭೂಮಿಪೂಜೆ ನಡೆಸಲಾಗುವುದು ಎಂದರು.
ಕ್ರೀಡಾಕೂಟದ ಸಭಾ ಕಾರ್ಯಕ್ರಮವನ್ನು ಎಸ್.ಜಿ.ಮೇದಪ್ಪ ಉದ್ಘಾಟಿಸಿ ಮಾತನಾಡಿ, ಕಳೆದ 9 ವರ್ಷಗಳಿಂದ ಗ್ರಾಮೀಣ ಭಾಗಗಳಲ್ಲಿ ಕೆಸರುಗದ್ದೆ ಕ್ರೀಡಾಕೂಟವನ್ನು ನಡೆಸುವ ಮೂಲಕ ಗ್ರಾಮೀಣ ಪ್ರತಿಭೆಗಳಿಗೆ ವೇದಿಕೆಯನ್ನು ಮಾಡಿಕೊಡಲಾಗಿದೆ. ಯಾವುದೇ ಕೆಲಸವನ್ನಾದರೂ ರಾಜಕೀಯ ರಹಿತವಾಗಿ ಮಾಡಿದಲ್ಲಿ ಮಾತ್ರ ಅದು ಯಶಸ್ಸು ಕಾಣಲು ಸಾಧ್ಯ ಎಂದರು.
ಒಕ್ಕಲಿಗರಿಗೂ ಕೆಸರಿಗೂ ಅವಿನಾಭಾವ ಸಂಬಂಧವಿದೆ. ಕೆಸರುಗದ್ದೆ ಕ್ರೀಡಾಕೂಟ ಎಂಬುದು ಜನಾಂಗದ ನಿಜವಾದ ಕ್ರೀಡೆಯಾಗಿದೆ. ಇದನ್ನು ಉಳಿಸಿಬೆಳೆಸಿಕೊಂಡು ಹೋಗುವುದು ಯುವ ಜನಾಂಗದ ಕರ್ತವ್ಯವಾಗಿದೆ. ನಮ್ಮ ಸಂಸ್ಕೃತಿ, ಆಚಾರ ವಿಚಾರವನ್ನು ಕಾಪಾಡಿಕೊಳ್ಳಲು ಎಲ್ಲರೂ ಮುಂದಾಗಬೇಕೆಂದರು.
ಕ್ರೀಡಾಕೂಟದ ವಿವಿಧ ಸ್ಪರ್ಧೆಯಲ್ಲಿ ಮಹಿಳೆಯರು, ಪರುಷರು, ಮಕ್ಕಳು ಕೆಸರಿನಲ್ಲಿ ಬಿದ್ದೆದ್ದು ಸಂಭ್ರಮಿಸಿದರು. ಮಳೆಯ ಸಿಂಚನದೊಂದಿಗೆ ಪ್ರಾರಂಭವಾದ ಓಟದ ಸ್ಪರ್ಧೆಗಳಲ್ಲಿ ಕೆಸರಿನಲ್ಲಿ ಎದ್ದು ನಂತರ ಗುರಿಮುಟ್ಟಿ ಪ್ರೇಕ್ಷಕರಿಂದ ಚಪ್ಪಾಳೆ ಗಿಟ್ಟಿಸಿದರು. ಪ್ರಾಥಮಿಕ ಶಾಲೆಯ ಮಕ್ಕಳು, ಮಹಿಳೆಯರು ಹಾಗೂ ಪುರುಷರಿಗೆ ವಿವಿಧ ಸ್ಪರ್ಧೆಗಳು ನಡೆದವು.
ಮಹಿಳೆಯರಿಗೆ ನಡೆದ ಥ್ರೋಬಾಲ್ ಪಂದ್ಯ ರೋಚಕವಾಗಿತ್ತು. ಬಟ್ಟೆಯೆಲ್ಲ ಕೆಸರಿನಿಂದ ಒದ್ದೆಯಾಗಿದ್ದರೂ, ಗೆಲುವಿಗಾಗಿ ಆಟವಾಡುವ ದೃಶ್ಯ ಮನಮೋಹಕವಾಗಿತ್ತು. ಪುರುಷರ ವಾಲಿಬಾಲ್ ಅನುಭವಿ ಆಟಗಾರರು ಮಿಂಚಿದರು. ಹೆಂಡತಿಯನ್ನು ಅಪ್ಪಿಕೊಂಡು ಓಡವುದು ಜನರನ್ನು ನಗೆಗಡಲಿನಲ್ಲಿ ತೇಲುವಂತೆ ಮಾಡಿತು. ಹಗ್ಗ ಜಗ್ಗಾಟದಲ್ಲಿ ಹಲವು ತಂಡಗಳು ಪಾಲ್ಗೊಂಡು ಮನರಂಜಿಸಿದರು.
ವೇದಿಕೆಯಲ್ಲಿ ಒಕ್ಕಲಿಗರ ಯುವ ವೇದಿಕೆಯ ಅಧ್ಯಕ್ಷ ಚಕ್ರವರ್ತಿ ಸುರೇಶ್, ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಎಸ್.ಎಂ.ಚಂಗಪ್ಪ, ತಾಲ್ಲೂಕು ಅಧ್ಯಕ್ಷ ಎ.ಆರ್.ಮುತ್ತಣ್ಣ, ವೇದಿಕೆಯ ಮಾಜಿ ಅಧ್ಯಕ್ಷ ಬಿ.ಜೆ.ದೀಪಕ್, ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಕೆ.ಎಂ.ಲೋಕೇಶ್, ಜಿಲ್ಲಾ ಒಕ್ಕಲಿಗರ ಯುವ ವೇದಿಕೆ ಜಿಲ್ಲಾಧ್ಯಕ್ಷ ಗಿರೀಶ್ ಮಲ್ಲಪ್ಪ, ಗೌಡಳ್ಳಿ ಸಹಕಾರ ಸಂಘದ ಅಧ್ಯಕ್ಷ ಎಚ್.ಆರ್. ಸುರೇಶ್, ಜಿಲ್ಲಾಸ್ಪತ್ರೆಯ ತಜ್ಞ ವೈದ್ಯ ಡಾ.ಧನುಂಜಯ ಕುಮಾರ್, ಬೆಟ್ಟದಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ತಮ್ಮಯ್ಯ, ಶಾಂತಳ್ಳಿ ಗ್ರಾಮಾಭಿವೃದ್ಧಿ ಮಂಡಳಿ ಅಧ್ಯಕ್ಷ ಕೆ.ಎಂ. ಧರ್ಮಪ್ಪ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.