ಕೊಡಗಿನ ಮಣ್ಣಿನಡಿ ಹುದುಗಿರುವ ಕಥೆಗಳು ನೂರಾರು. ಅವುಗಳಲ್ಲಿ ಕೆಲವರು ಅಧಿಕಾರಿಗಳು, ಕೆಲವರು ವೈದ್ಯರು, ಕೆಲವರು ಸಾಮಾನ್ಯ ಕುಟುಂಬದವರು. ಆದರೆ ಎಲ್ಲರಿಗೂ ಒಂದೇ ಅಂತ್ಯ, ಅದು ಮೌನ. ಅದು ಕೇವಲ ನಿಶ್ಶಬ್ದವಲ್ಲ, ನಿರ್ಲಕ್ಷ್ಯದ ಗುರುತು.

1834ರ ಏಪ್ರಿಲ್ 24ರಂದು ಕೊಡಗಿನ ಕೊನೆಯ ದೊರೆ ಚಿಕ್ಕ ವೀರರಾಜೇಂದ್ರರನ್ನು ಬ್ರಿಟಿಷರು ಗಡಿಪಾರು ಮಾಡಿದರು. ಆ ದಿನದಿಂದ ಕೊಡಗು ಬ್ರಿಟಿಷರ ಆಡಳಿತಕ್ಕೆ ಒಳಪಟ್ಟಿತು. ಮುಂದಿನ 113 ವರ್ಷಗಳು ಬ್ರಿಟಿಷ್ ಅಧಿಕಾರಿಗಳು ಇಲ್ಲಿಯೇ ನೆಲೆಸಿದರು. ಅವರಲ್ಲಿ ನೂರಾರು ಮಂದಿ ಇಲ್ಲಿಯೇ ಮೃತಪಟ್ಟರು. ಅವರ ಸಮಾಧಿಗಳನ್ನು ರಾಜಾಸೀಟ್ ಪ್ರದೇಶದಲ್ಲಿ ನಿರ್ಮಿಸಲಾಯಿತು. ಆದರೆ ಸ್ವಾತಂತ್ರ್ಯ ಬಂದ ನಂತರ ಬ್ರಿಟಿಷರು ಹೋದರು. ಮತ್ತು ಅವರ ನೆನಪುಗಳನ್ನೂ ಮಣ್ಣಿನಡಿ ಹೂತುಬಿಟ್ಟರು. ರಾಜಾಸೀಟ್ ಉದ್ಯಾನವನ ನಿರ್ಮಾಣಕ್ಕಾಗಿ ಸಮಾಧಿಗಳನ್ನು ತೆರವುಗೊಳಿಸಿ ಮಡಿಕೇರಿ ಹೊರವಲಯಕ್ಕೆ ಹಾಕಲಾಯಿತು. ಕಾಲಕ್ರಮೇಣ ಆ ಜಾಗ ದಟ್ಟವಾದ ಕಾಡಾಗಿ ಮಾರ್ಪಟ್ಟಿತು.

ಒಂದು ಕಾಲದಲ್ಲಿ ಗೌರವದಿಂದ ನಿಂತಿದ್ದ ಸಮಾಧಿಗಳು ಇಂದು ಕಳೆದುಹೋಗಿವೆ. ಅವುಗಳ ಮೇಲೆ ಬೆಳೆಯುತ್ತಿರುವುದು ಕೇವಲ ಗಿಡಗಳು ಅಲ್ಲ, ನಿರ್ಲಕ್ಷ್ಯದ ಇತಿಹಾಸ.

ಮೈಕ್, ರೇಖಾ ಮತ್ತು ನಾನು ಹುಡುಕಾಟಕ್ಕೆ ಹೊರಟೆವು.

ಮೊದಲಿಗೆ ರಾಜಾಸೀಟ್. ಗಿಡಗಂಟಿಗಳ ನಡುವೆ ಹೆಜ್ಜೆ ಹಾಕುತ್ತಾ ಹುಡುಕಾಟ ನಡೆಸಿದೆವು. ಅಲ್ಲಿ ಒಂದು ಕಂಬ ಕಣ್ಣಿಗೆ ಬಿತ್ತು. ಅದರ ಸುತ್ತಲಿನ ಗಿಡಗಳನ್ನು ತೆರವುಗೊಳಿಸಿದಾಗ 1929ರಲ್ಲಿ ಭಾರತದ ವೈಸ್ರಾಯ್ ಲಾರ್ಡ್ ಇರ್ವಿನ್ ಅವರ ದರ್ಬಾರದ ಸ್ಮರಣ ಫಲಕವೆಂದು ತಿಳಿಯಿತು. ಸಮಾಧಿ ಸಿಗಲಿಲ್ಲ. ಆದರೆ ಇತಿಹಾಸದ ಒಂದು ತುಣುಕು ಸಿಕ್ಕಿತು. ಮುಂದೆ ಐಟಿಐ ಹಿಂಭಾಗದ ಪ್ರದೇಶಕ್ಕೆ ಹೊರಟೆವು. ಅಲ್ಲಿ ಸಮಾಧಿ ಫಲಕಗಳನ್ನು ಎಸೆದಿರುವುದಾಗಿ ತಿಳಿದು ಹೋದೆವು. ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ನ ಬೇಬಿ ಮ್ಯಾಥ್ಯೂ ನಮ್ಮೊಂದಿಗೆ ಸೇರಿಕೊಂಡರು.

ಆದರೆ ಅಲ್ಲಿ ದಟ್ಟವಾಗಿ ಗಿಡಗಂಟಿಗಳು ಬೆಳೆದುನಿಂತಿದ್ದವು. ದಾರಿಯೇ ಕಾಣದ ಸ್ಥಿತಿ. ಒಂದು ಒಂದು ಫಲಕವನ್ನು ಸ್ವಚ್ಚಗೊಳಿಸಿ ನೋಡಿದರೂ ಮೈಕ್ ಹುಡುಕುತ್ತಿದ್ದ ಹೆಸರು ಕಾಣಿಸಲಿಲ್ಲ. ಅವರ ಮುಖದಲ್ಲಿ ನಿರಾಸೆ ನಿಧಾನವಾಗಿ ಆವರಿಸಿತು. ಹುಡುಕಾಟದ ಉತ್ಸಾಹ ನಿಧಾನಕ್ಕೆ ಕರಗುತ್ತಿತ್ತು.

ಮ್ಯೂಸಿಯಂಗೆ ಮರಳಿದಾಗ ಅಪರೂಪದ ಕ್ಷಣ ಎದುರಾಯಿತು. ಗೋಡೆ ಮೇಲೆ ಇದ್ದ ಒಂದು ಫಲಕ ಮೈಕ್ ಅವರ ಕಣ್ಣಿಗೆ ಬಿತ್ತು. ಅವರು ಕೂಡಲೇ ಎದ್ದು ಉತ್ಸಾಹದಿಂದ ಹೇಳಿದರು– ‘ಇದು ನನ್ನ ಮುತ್ತಜ್ಜಿ ಮಾರ್ಗರೇಟ್ ಮತ್ತು ಅವರ ಸಹೋದರ ಅಲನ್ ಅವರ ಸ್ಮರಣ ಫಲಕ!’. ಆ ಕ್ಷಣದಲ್ಲಿ ಅವರ ಕಣ್ಣುಗಳಲ್ಲಿ ಮಿಂಚಿದ ಸಂತೋಷ ಹುಡುಕಾಟದ ಕಷ್ಟವನ್ನು ಕ್ಷಣಕಾಲ ಮರೆಮಾಚಿತು.

ಆದರೆ ಆ ಸಂತೋಷದ ನೆರಳಲ್ಲಿ ಒಂದು ಅಪೂರ್ಣತೆಯ ನೋವು ಇನ್ನೂ ಉಳಿದಿತ್ತು. ಅವರ ಮುತ್ತಾತನ ಸಮಾಧಿ ಇನ್ನೂ ಸಿಕ್ಕಿರಲಿಲ್ಲ.

ಕೊಡಗಿನಲ್ಲಿ ಐದು ದಿನ ಕಳೆದ ಮೈಕ್ ಇಲ್ಲಿನ ಪ್ರಕೃತಿ ಸೌಂದರ್ಯದಿಂದ ಮಂತ್ರಮುಗ್ಧರಾದರು. ‘ಲೇಡಿ ಕ್ಯಾನಿಂಗ್ ಕೊಡಗನ್ನು ಸ್ಕಾಟ್ಲೆಂಡ್ ಎಂದು ಕರೆಯುವುದೇಕೆ ಎಂಬುದು ಇಲ್ಲಿ ಬಂದಾಗ ಅರ್ಥವಾಯಿತು’ ಎಂದು ಅವರು ಹೇಳಿದರು. ಬೆಟ್ಟಗಳು, ಮಂಜು, ಹಸಿರು ಅವು ಕೇವಲ ದೃಶ್ಯವಲ್ಲ, ಒಂದು ಭಾವನೆ. ‘ನನ್ನ ಮುತ್ತಾತ ಇಲ್ಲಿ ಏಕೆ ವಾಸವಿದ್ದರು ಎಂಬುದು ಈಗ ಸ್ಪಷ್ಟವಾಗಿದೆ’ ಎಂದರು.

ಮೈಕ್ ತಮ್ಮ ಪ್ರವಾಸಕ್ಕೆ ಮುನ್ನ ಡೆರ್ವ್ಲಾ ಮರ್ಫಿ ಅವರ ‘ಆನ್ ಅ ಶೂಸ್ಟ್ರಿಂಗ್ ಟು ಕೂರ್ಗ್’ (On a Shoestring to Coorg) ಪುಸ್ತಕವನ್ನು ಓದಿದ್ದರು. 70ರ ದಶಕದ ಮಡಿಕೇರಿ ಶಾಂತ, ಗ್ರಾಮೀಣ ಸೌಂದರ್ಯದಿಂದ ಕೂಡಿತ್ತು.

ಆದರೆ ಇಂದು ಹೋಟೆಲ್ಗಳು, ಹೋಂಸ್ಟೇಗಳು, ಪ್ರವಾಸಿಗರ ಗದ್ದಲ. ಅಭಿವೃದ್ಧಿ ವೇಗವಾಗಿ ನಡೆಯುತ್ತಿದೆ. ಆದರೆ ಅದೇ ಸಮಯದಲ್ಲಿ ಇತಿಹಾಸ ನಿಧಾನವಾಗಿ ಮರೆಯಾಗುತ್ತಿದೆ. ಒಂದು ಊರು ಎರಡು ಮುಖಗಳು.

ಮ್ಯೂಸಿಯಂನಿಂದ ಹೊರಡುವ ಮುನ್ನ ಮೈಕ್ ನಿಧಾನವಾಗಿ ಹೇಳಿದರು–‘ಇದು ಕೇವಲ ನನ್ನ ಕುಟುಂಬದ ವಿಷಯವಲ್ಲ. ಇಲ್ಲಿ ಹುದುಗಿರುವ ನೂರಾರು ಸಮಾಧಿಗಳು ಮಹನೀಯರದ್ದು. ಅವುಗಳನ್ನು ಗೌರವದಿಂದ ಉಳಿಸಬೇಕು’. ಅವರ ಮಾತುಗಳಲ್ಲಿ ಮನವಿ ಇತ್ತು. ಆದರೆ ಅದಕ್ಕಿಂತ ಹೆಚ್ಚಾಗಿ ಒಂದು ತೀವ್ರವಾದ ನೋವಿತ್ತು.

ಸಂಜೆ ಮಬ್ಬುಗತ್ತಲು ನಿಧಾನವಾಗಿ ಇಳಿಯುತ್ತಿತ್ತು. ಮೈಕ್ ಮ್ಯೂಸಿಯಂನಿಂದ ಹೊರಟರು. ಅವರ ಹುಡುಕಾಟ ಅಪೂರ್ಣವಾಗಿಯೇ ಉಳಿಯಿತು. ಆದರೆ ಅವರು ಬಿಟ್ಟುಹೋದ ಪ್ರಶ್ನೆ ಇನ್ನೂ ನಮ್ಮೊಳಗೆ ಪ್ರತಿಧ್ವನಿಸುತ್ತಿದೆ: ಮಣ್ಣಿನಡಿ ಹುದುಗಿರುವ ಇತಿಹಾಸವನ್ನು ನಾವು ಉಳಿಸಿಕೊಳ್ಳುತ್ತೇವೆಯೇ… ಅಥವಾ ಅದು ಹಾಗೆಯೇ ಮರೆಯಾಗಲು ಬಿಡುತ್ತೇವೆಯೇ?

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260405-51-1224654232

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.