ಸೋಮವಾರ, ಸೆಪ್ಟೆಂಬರ್ 28, 2020
23 °C
ಭಾಗಮಂಡಲ ಬಳಿಯ ಚೇರಂಗಾಲದಲ್ಲೂ ಬೆಟ್ಟ ಕುಸಿತ 

ಕೊಡಗು ಜಿಲ್ಲೆ: ಮಹಾಮಳೆಯಿಂದ ಭಾರಿ ಅನಾಹುತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಸುರಿಯುತ್ತಿರುವ ಮಹಾಮಳೆಯಿಂದ ಸಾಕಷ್ಟು ಅನಾಹುತ ಸಂಭವಿಸಿದ್ದು ಹಲವು ಕುಟುಂಬಗಳು ಈ ವರ್ಷವೂ ನೆಲೆ ಕಳೆದುಕೊಂಡಿವೆ.

ಭಾಗಮಂಡಲ ಸಮೀಪದ ಚೇರಂಗಾಲದಲ್ಲಿ ಗುರುವಾರ ರಾತ್ರಿ ಮತ್ತೊಂದು ಬೆಟ್ಟ ಕುಸಿದಿದೆ. ಗ್ರಾಮದ ಸೇತುವೆ ಕೊಚ್ಚಿ ಹೋಗಿದೆ. ಅಪಾಯದಲ್ಲಿ ಸಿಲುಕಿದ್ದ 8 ಕುಟುಂಬಗಳನ್ನು ಸ್ಥಳಾಂತರಿಸಲಾಗಿದೆ. ಬ್ರಹ್ಮಗಿರಿ ಪ್ರದೇಶದಲ್ಲಿ ಹಲವು ಕಡೆ ಬೆಟ್ಟ ಕುಸಿದಿದೆ.

ತಲಕಾವೇರಿ ಬ್ರಹ್ಮಗಿರಿ ಬೆಟ್ಟ ಕುಸಿತದಿಂದ ಕ್ಷೇತ್ರದ ಪ್ರಧಾನ ಅರ್ಚಕರಾದ ನಾರಾಯಣ ಆಚಾರ್‌ ಕುಟುಂಬದ ಐವರು ಕಣ್ಮರೆಯಾಗಿದ್ದು ಕಾರ್ಯಾಚರಣೆಗೆ ಶುಕ್ರವಾರ ಭಾರಿ ಮಳೆ ಹಾಗೂ ಬಿರುಗಾಳಿ ಅಡ್ಡಿಯಾಗಿದೆ. ಆ ಸ್ಥಳದಲ್ಲಿ ಮತ್ತೆ ಮಣ್ಣು ಕುಸಿಯುತ್ತಿದ್ದು ರಕ್ಷಣಾ ತಂಡಕ್ಕೂ ಸ್ಥಳಕ್ಕೆ ತೆರಳಲು ಸಾಧ್ಯವಾಗುತ್ತಿಲ್ಲ.

ತಲಕಾವೇರಿ ರಸ್ತೆಯುದ್ದಕ್ಕೂ ಭೂಕುಸಿತ ಸಂಭವಿಸಿದ್ದು ವಾಹನಗಳು ಸ್ಥಳಕ್ಕೆ ತಲುಪಲು ಸಾಧ್ಯವಾಗುತ್ತಿಲ್ಲ. ಜನರೂ ಕಾಲ್ನಡಿಗೆಯಲ್ಲೇ ಸಾಗಬೇಕಿದೆ. ಬ್ರಹ್ಮಗಿರಿಯಲ್ಲಿ ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿದ್ದು, ಮಳೆಯ ಆರ್ಭಟ ನಿಂತ ಮೇಲೆ ಆರಂಭಿಸಲು ನಿರ್ಧರಿಸಲಾಗಿದೆ.

ಎರಡು ದಿನಗಳು ಕಳೆದರೂ ಅರ್ಚಕ ಕುಟುಂಬದ ಸುಳಿವು ಸಿಕ್ಕಿಲ್ಲ. ಮನೆಯ ಅವಶೇಷಗಳು, ಹಸುವೊಂದರ ಕಳೇಬರ ಭಾಗಮಂಡಲದ ಪ್ರವಾಹದಲ್ಲಿ ತೇಲಿ ಬಂದಿದೆ.

ಭಾಗಮಂಡಲದ ಭಗಂಡೇಶ್ವರ ದೇಗುಲಕ್ಕೆ ಜಲದಿಗ್ಬಂಧನವಾಗಿದೆ. ನೀರು ಗರ್ಭಗುಡಿ ಪ್ರವೇಶಿಸಿದೆ.

ಮಡಿಕೇರಿ– ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಗುಡ್ಡ ಕುಸಿದಿದ್ದು ಆ ಪ್ರದೇಶಕ್ಕೆ ಹೊಂದಿಕೊಂಡಿರುವ ಕೊಡಗು ಜಿಲ್ಲಾಧಿಕಾರಿ ಕಚೇರಿಗೂ ಆತಂಕ ಎದುರಾಗಿದೆ. ನಗರಸಭೆ ಕಚೇರಿಗೆ ಪ್ರಕೃತಿ ವಿಕೋಪ ಸಹಾಯವಾಣಿ ಕೇಂದ್ರ ಹಾಗೂ ತುರ್ತು ಕಚೇರಿಗಳನ್ನು ಸ್ಥಳಾಂತರಿಸಲಾಗಿದೆ. ಉಳಿದ ಕಚೇರಿಗಳನ್ನು ತಾತ್ಕಾಲಿಕವಾಗಿ ಬಂದ್ ಮಾಡಲಾಗಿದೆ.

ಕುಶಾಲನಗರದ ಹಲವು ಬಡಾವಣೆಗಳು ಪ್ರವಾಹಕ್ಕೆ ತುತ್ತಾಗಿವೆ. ತಾವರಕೆರೆ ಬಳಿ, ಹೆದ್ದಾರಿ ಮೇಲೆ ನೀರು ಬಂದಿದ್ದು, ಮಡಿಕೇರಿ– ಕುಶಾಲನಗರ ನಡುವೆ ವಾಹನ ಸಂಚಾರ ಬಂದ್‌ ಆಗಿದೆ.  ಗುಮ್ಮನಕೊಲ್ಲಿ, ಹಾರಂಗಿ, ಗುಡ್ಡೆಹೊಸೂರು ಮಾರ್ಗವಾಗಿ ವಾಹನಗಳು ಸಂಚರಿಸುತ್ತಿವೆ. ಈ ಮಾರ್ಗದಲ್ಲಿ ತುರ್ತು ಹಾಗೂ ಅಗತ್ಯ ವಸ್ತುಗಳ ಪೂರೈಕೆ ವಾಹನಕ್ಕೆ ಮಾತ್ರ ಅವಕಾಶ ನೀಡಲಾಗಿದೆ. ಭೇತ್ರಿ ಸೇತುವೆ ಮುಳುಗಡೆ ಸ್ಥಿತಿಯಲ್ಲಿದೆ. 

ಮಡಿಕೇರಿ– ಸಿದ್ದಾಪುರ ರಾಜ್ಯ ಹೆದ್ದಾರಿಯೂ ಕುಸಿದಿದೆ. ಮಡಿಕೇರಿ– ಮಂಗಳೂರು ನಡುವೆಯ ರಾಷ್ಟ್ರೀಯ ಹೆದ್ದಾರಿ 275ರ ಜೋಡುಪಾಲದ ಬಳಿ ಹೆದ್ದಾರಿಯ ಒಂದು ಬದಿ ಕುಸಿದಿದೆ. ಚೆಟ್ಟಿಮಾನಿ ಬಳಿಯ ಚೆದುಕಾರು ಸೇತುವೆ ಮುಳುಗಿದೆ. ಬಿಳಿಗಿರಿ ಸೇತುವೆ ಕೊಚ್ಚಿ ಹೋಗಿದ್ದು ಬಿಳಿಗಿರಿ– ಹಾಕತ್ತೂರು ಸಂಪರ್ಕ ಕಡಿತವಾಗಿದೆ.

ಕೊಡಗಿನಲ್ಲಿ ಮೊಕ್ಕಾಂ ಹೂಡಿರುವ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಅವರು ಶುಕ್ರವಾರ ಭಾಗಮಂಡಲದ ಪ್ರವಾಹ ಪರಿಸ್ಥಿತಿ ವೀಕ್ಷಿಸಿದರು. ಭೂಕುಸಿತದ ಪ್ರದೇಶ ಅವಲೋಕಿಸಿ ತುರ್ತು ಪರಿಹಾರ ಕ್ರಮಕ್ಕೆ ಸೂಚಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು