ಶುಕ್ರವಾರ, ಫೆಬ್ರವರಿ 26, 2021
27 °C

ಕೊಡಗು: ಸಂತ್ರಸ್ತರ ಸಹಾಯಕ್ಕೆ ಬಂದವರನ್ನೆ ಪರದಾಡಿಸಿದರು

ಹೇಮಂತ್‌ ಎಂ.ಎನ್‌. Updated:

ಅಕ್ಷರ ಗಾತ್ರ : | |

Deccan Herald

ವಿರಾಜಪೇಟೆ: ಜಿಲ್ಲೆಯಲ್ಲಿ ಈ ಬಾರಿ ಪ್ರವಾಹ ಸಂಭವಿಸಿದಾಗ, ಎಲ್ಲ ಕಡೆಯಿಂದಲೂ ನೆರವಿನ ಮಹಾಪೂರವೇ ಹರಿದುಬಂದಿತು. ಮೊದಲ ಹಂತದ ರಕ್ಷಣಾ ಕಾರ್ಯದ ಬಳಿಕ ವಿವಿಧ ಸಂಘಸಂಸ್ಥೆಗಳು ಹಾಗೂ ಜನತೆ ಸಹಾಯ ಹಸ್ತ ಚಾಚಿದರು.

ಆದರೆ ಇವೆಲ್ಲದರ ನಡುವೆ ‘ಯಾರದೋ ಮದುವೆಯಲ್ಲಿ ಉಂಡವನೇ ಜಾಣ’ ಎಂಬಂತೆ ವರ್ತಿಸಿದ ಕೆಲವರು ಪರಿಹಾರ ಸಾಮಗ್ರಿಯಲ್ಲೂ ಲಾಭ ಪಡೆಯಲು ಮುಂದಾದರು. ಇದಕ್ಕೆ ಉದಾಹರಣೆ ಈ ಘಟನೆ...

ಶಿವಮೊಗ್ಗದ ಹಾರ್ನಳ್ಳಿಯ ಸಂದೀಪ್, ಜಾಧವ್, ಪ್ರದೀಪ್, ದರ್ಶನ್ ಸೇರಿದಂತೆ ಒಂಬತ್ತು ಮಂದಿ, ಜಿಲ್ಲೆಯತ್ತ ಪರಿಹಾರ ಸಾಮಗ್ರಿಗಳನ್ನು ಸಾಗಿಸಿಕೊಂಡು ಬರಲು ಹೊರಟಿದ್ದರು. ಶಿವಮೊಗ್ಗದಿಂದ ಹಾಸನದ ಮೂಲಕ ಕುಶಾಲನಗರಕ್ಕೆ ಮುಂಜಾನೆ ಬಂದ ತಂಡದ ಒಬ್ಬರ ದೂರವಾಣಿ ಸಂಖ್ಯೆಯನ್ನು ಪಡೆದ ಅಪರಿಚಿತರೊಬ್ಬರು ಕರೆ ಮಾಡಿ ಸಂತ್ರಸ್ತರನ್ನು ತೋರಿಸುವುದಾಗಿ ಹೇಳಿ ಪರಿಹಾರ ಸಾಮಗ್ರಿಯೊಂದಿಗೆ ಗೋಣಿಕೊಪ್ಪಲಿಗೆ ಬರುವಂತೆ ಮಾಡಿದ್ದಾರೆ. ಗೋಣಿಕೊಪ್ಪಲಿನ ಪೊನ್ನಂಪೇಟೆ ರಸ್ತೆಯಲ್ಲಿನ ಪ್ರೆಟ್ರೋಲ್ ಬಂಕ್‌ವೊಂದರ ಬಳಿ ವಾಹನವೊಂದರಲ್ಲಿದ್ದ ಐವರು ಅಪರಿಚಿತರು ತಮ್ಮನ್ನು ಹಿಂಬಾಲಿಸುವಂತೆ ಸೂಚಿಸಿದ್ದಾರೆ. ಇವರನ್ನು ನಂಬಿ ಪರಿಹಾರ ಸಾಮಗ್ರಿಯೊಂದಿಗೆ ವಾಹನವನ್ನು ಈ ತಂಡ ಹಿಂಬಾಲಿಸಿದೆ.

ಸುಮಾರು ದೂರ ಪ್ರಯಾಣಿಸಿದರೂ ಸಂತ್ರಸ್ತರಿದ್ದ ಸ್ಥಳ ತಲುಪದ್ದರಿಂದ ಅನುಮಾನಗೊಂಡ ಇವರು, ಮೊಬೈಲ್‌ನಲ್ಲಿ ಜಿಪಿಎಸ್  ಮೂಲಕ ಪರೀಕ್ಷಿಸಿದಾಗ ಕೇರಳದ ಗಡಿಭಾಗದ ಕುಟ್ಟ ಸಮೀಪಕ್ಕೆ ಬಂದಿರುವುದು ತಿಳಿಯಿತು. ಅನುಮಾನಗೊಂಡು, ವಾಹನವೊಂದನ್ನು ನಿಲ್ಲಿಸಿ ಮಾತನಾಡಿಸಿದಾಗ, ಅದರಲ್ಲಿದ್ದ ನಿವೃತ್ತ ಯೋಧರೊಬ್ಬರು ‘ಈ ಭಾಗದಲ್ಲಿ ಯಾವುದೇ ಸಂತ್ರಸ್ತರಿಲ್ಲ ಮಡಿಕೇರಿ ಭಾಗದಲ್ಲಿ ಇದ್ದು, ನೀವು ಅಲ್ಲಿಗೆ ತೆರಳುವುದೇ ಸೂಕ್ತ’ ಎಂದು ಮಾಹಿತಿ ನೀಡಿದ್ದಾರೆ.

ವಾಹನವನ್ನು ಹಿಂದಕ್ಕೆ ತಿರುಗಿಸಲು ಮುಂದಾದಾಗ, ಅನತಿ ದೂರದಲ್ಲಿ ವಾಹನ ನಿಲ್ಲಿಸಿದ್ದ ಅಪರಿಚಿತರು, ಬಳಿ ಬಂದು, ‘ಸಂತ್ರಸ್ತರು ಹಸಿದಿದ್ದಾರೆ. ನಾವು 5 ಸಾವಿರ ಬಾಡಿಗೆ ನೀಡಿ ವಾಹನ ಮಾಡಿಕೊಂಡು ಬಂದಿದ್ದೇವೆ. ಆದ್ದರಿಂದ ಕೆಲವು ಸಾಮಗ್ರಿಗಳನ್ನು ನಮಗೆ ನೀಡಲೇಬೇಕು’ ಎಂದು ತಾಕೀತು ಮಾಡಿದ್ದಾರೆ. ಹೇಗೋ ಅವರಿಂದ ತಪ್ಪಿಸಿಕೊಂಡ ಈ ತಂಡ, ಸಂಜೆ ವೇಳೆಗೆ ವಿರಾಜಪೇಟೆ ಪಟ್ಟಣ ತಲುಪಿದೆ.

ಆ ರಾತ್ರಿಯೇ ಊರಿಗೆ ಹೊರಡಬೇಕಾಗಿದ್ದ ಈ ಯುವಕರು, ದಿನವಿಡೀ ಅಲೆದರೂ ಸಂತ್ರಸ್ತರಿಗೆ ಸಾಮಗ್ರಿಯನ್ನು ಹಂಚಲಾಗದೆ, ಸಮಸ್ಯೆಗೆ ಸಿಲುಕಿದರು. ಕೊನೆಗೂ ವಿರಾಜಪೇಟೆಯಲ್ಲಿ ಸ್ಥಳೀಯರೊಬ್ಬರ ಸಹಕಾರದಿಂದ ತಾಲ್ಲೂಕು ಕಚೇರಿಗೆ ಸಾಮಗ್ರಿಗಳನ್ನು ತಲುಪಿಸಿದರು.

ಇದೇ ರೀತಿ ಮತ್ತೊಂದು ಘಟನೆಯೂ ನಡೆದಿದೆ. ಬಿಜಾಪುರ ಮೂಲದ ಬೆಂಗಳೂರಿನ ಉದ್ಯಮಿಯೊಬ್ಬರು ಸಂತ್ರಸ್ತರ ಕುಟುಂಬಗಳಿಗೆ ನೀಡಲು ಕುಕ್ಕರ್, ಟಾರ್ಚ್ ಸೇರಿದಂತೆ ಉಪಯುಕ್ತ ವಸ್ತುಗಳನ್ನು ಒಳಗೊಂಡ ಪ್ಯಾಕೇಜನ್ನು 500ಕ್ಕೂ ಅಧಿಕ ಸಂಖ್ಯೆಯಲ್ಲಿ ನೀಡಿದ್ದರು. ಇದನ್ನು ಹೊತ್ತು ತಂದಿದ್ದ ಲಾರಿಯ ದಿಕ್ಕು ತಪ್ಪಿಸಿದ್ದ ಅಪರಿಚಿತರೊಬ್ಬರು, ಲಾರಿ ಪಟ್ಟಣದ ಸಿದ್ದಾಪುರ ರಸ್ತೆಯಲ್ಲಿನ ಹೊರವಲಯಕ್ಕೆ ಬರುವಂತೆ ಮಾಡಿದ್ದಾರೆ. ಇದನ್ನು ತಿಳಿದ ಕೆಲವರು ಗೂಡ್ಸ್ ವಾಹನಗಳನ್ನು ಲಾರಿ ಬಳಿ ತಂದು, ತಾವೇ ಸಂತ್ರಸ್ತರೆಂದು ಹೇಳಿ ವಸ್ತುಗಳನ್ನು ಸಾಕಷ್ಟು ತುಂಬಿಸಿಕೊಳ್ಳುತ್ತಿದ್ದರು.

ಆ ಸಮಯಕ್ಕೆ ಮಾಹಿತಿ ಪಡೆದು ಸ್ಥಳಕ್ಕೆ ಆಗಮಿಸಿದ ಸೇವಾ ಭಾರತಿ ತಂಡ, ವಿಚಾರಣೆ ನಡೆಸಿ ವಸ್ತುಗಳನ್ನು ಮರಳಿ ಲಾರಿಗೆ ತುಂಬಿಸಿ ಸಂತ್ರಸ್ತರಿಗೆ ಸೇರಬೇಕಾದುದ್ದು ಅನ್ಯರ ಪಾಲಾಗುವುದನ್ನು ತಪ್ಪಿಸಿದರು.

ಹೀಗೆ, ಸಂತ್ರಸ್ತರಿಗೆ ಹಂಚಲೆಂದು ವಸ್ತುಗಳನ್ನು ಹೊತ್ತು ತಂದ ವಾಹನಗಳ ಹಾದಿ ತಪ್ಪಿಸಿದ, ಸಾಮಗ್ರಿಗಳನ್ನು ತಮಗೆ ಬೇಕಾದವರಿಗೆ ಮಾತ್ರ ಹಂಚುತ್ತಿರುವ ಆರೋಪಗಳು ಸಾಕಷ್ಟು ಕೇಳಿ ಬರುತ್ತಿವೆ.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು