ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸ್ವಾಭಾವಿಕ ಹಾಕಿ ಮೈದಾನಗಳ ನಿರ್ಮಾಣವಾಗಲಿ’

ಮಾಧ್ಯಮ ಅಕಾಡೆಮಿ ಮಾಜಿ ಅಧ್ಯಕ್ಷ ಎಂ.ಎ.ಪೊನ್ನಪ್ಪ ಅಭಿಮತ
Last Updated 15 ಫೆಬ್ರುವರಿ 2020, 14:29 IST
ಅಕ್ಷರ ಗಾತ್ರ

ವಿರಾಜಪೇಟೆ: ‘ನೀರಿನ ಕೊರತೆಯಿಂದ ಆಸ್ಟ್ರೋ ಟರ್ಫ್ ಮೈದಾನ ಬಳಸಲು ಇತ್ತೀಚೆಗೆ ಸಾಧ್ಯವಾಗುತ್ತಿಲ್ಲ. ‌ಜರ್ಮನಿ ಹಾಗೂ ಡೆನ್ಮಾರ್ಕ್‌ನಂತಹ ದೇಶಗಳು ಮೈದಾನಕ್ಕಾಗಿ ಸ್ವಾಭಾವಿಕವಾಗಿ ಹುಲ್ಲು ಬೆಳೆಸುತ್ತಿವೆ. ಅದೇ ರೀತಿ ಕೊಡಗಿನ ಹಾಕಿ ಮೈದಾನದಲ್ಲಿಯೂ ಸ್ವಾಭಾವಿಕವಾಗಿ ಹುಲ್ಲು ಬೆಳೆಸಿ ಆಧುನಿಕ ಮೈದಾನ ನಿರ್ಮಿಸಬೇಕು’ ಎಂದು ಮಾಧ್ಯಮ ಅಕಾಡೆಮಿಯ ಮಾಜಿ ಅಧ್ಯಕ್ಷ ಮನೆಯಪಂಡ ಪೊನ್ನಪ್ಪ ಅಭಿಪ್ರಾಯಪಟ್ಟರು.

ಪಟ್ಟಣದ ಕಾವೇರಿ ಕಾಲೇಜು, ಬೆಂಗಳೂರಿನ ಎಚ್ಎಸ್ಆರ್ ಲೇಔಟ್‌ನ ಕೊಡವ ಸಮಾಜ ಹಾಗೂ ಕರ್ತುರ ಕುಟುಂಬದ ಆಶ್ರಯದಲ್ಲಿ ಇಲ್ಲಿನ ಕಾವೇರಿ ಕಾಲೇಜು ಮೈದಾನದಲ್ಲಿ ಆಯೋಜಿಸಿದ್ದ ಕರ್ತುರ ಮುದ್ದಪ್ಪ ಮತ್ತು ಗೌರಿ ಮುದ್ದಪ್ಪ ಸ್ಮಾರಕ ದಕ್ಷಿಣ ವಲಯದ ಅಂತರ ಕಾಲೇಜು ಹಾಕಿ ಟೂರ್ನಿಗೆ ಶನಿವಾರ ಚಾಲನೆ ನೀಡಿ ಅವರು ಮಾತನಾಡಿದರು.

‘ಜಿಲ್ಲೆಯಲ್ಲಿ ನಡೆಯುತ್ತಿರುವ ಕೌಟುಂಬಿಕ ಹಾಕಿ ಸೇರಿದಂತೆ ಬಹುತೇಕ ಹಾಕಿ ಟೂರ್ನಿಗಳು ಮಣ್ಣಿನ ಮೈದಾನದಲ್ಲೆ ನಡೆಯುತ್ತಿವೆ. ಹೊಸ ಅವಿಷ್ಕಾರದಂತೆ ಸ್ವಾಭಾವಿಕ ಹುಲ್ಲು ಬೆಳೆಸಿ ಮೈದಾನ ರಚನೆ ಮಾಡುವುದು ಉತ್ತಮ’ ಎಂದರು.

ಆಸ್ಟ್ರೋ ಟರ್ಫ್ ಮೈದಾನದಲ್ಲಿ ಪಂದ್ಯವಾಡಲು ಸಾಕಷ್ಟು ಪ್ರಮಾಣದ ನೀರು ಅಗತ್ಯವಿದೆ. ಇದೀಗ ಎಲ್ಲೆಡೆ ಜಲಕ್ಷಾಮ ತಲೆದೋರಿರುವ ಕಾರಣ ಭವಿಷ್ಯದಲ್ಲಿ ಆಸ್ಟ್ರೋ ಟರ್ಫ್‌ ಮೈದಾನಕ್ಕೆ ಉಳಿಗಾಲವಿಲ್ಲ ಎಂದು ಪೊನ್ನಪ್ಪ ಅವರು ಹೇಳಿದರು.

‘ದೇಶದೆಲ್ಲೆಡೆ ಇರುವ ಆಸ್ಟ್ರೋ ಟರ್ಫ್ ಮೈದಾನ ನಿರ್ವಹಣೆ ಬಹುದೊಡ್ಡ ಸವಾಲಾಗಿದೆ’ ಎಂದು ಹೇಳಿದರು.

ಕಳೆದ 2 ವರ್ಷಗಳ ಹಿಂದೆ ದಕ್ಷಿಣ ಆಫ್ರಿಕಾದ ಕೇಪ್‌ಟೌನ್‌ನಲ್ಲಿ ಜಲಕ್ಷಾಮದ ಕಾರಣದಿಂದ ಆಸ್ಟ್ರೋ ಟರ್ಫ್ ಮೈದಾನದಲ್ಲಿ ನಡೆಯಬೇಕಿದ್ದ ಹಲವಾರು ಪಂದ್ಯಗಳನ್ನು ರದ್ದುಪಡಿಸಲಾಗಿತ್ತು. ಇದು ಭಾರೀ ಸುದ್ದಿಯಾಗಿತ್ತು. ಇದೇ ರೀತಿ ಘಟನೆಗಳು ಬೇರೆ ಬೇರೆ ದೇಶಗಳಲ್ಲೂ ನಡೆದಿದೆ. ಇದನ್ನು ಪರಿಗಣಿಸಿರುವ ಅಂತರರಾಷ್ಟ್ರೀಯ ಹಾಕಿ ಫೆಡರೇಷನ್, ಕಳೆದ ವರ್ಷ ನಡೆಸಿದ ಉನ್ನತ ಮಟ್ಟದ ಸಭೆಯಲ್ಲಿ ಜಲಕ್ಷಾಮದ ವಿಷಯ ಗಂಭೀರ ಚರ್ಚೆಗೆ ಒಳಪಟ್ಟಿದೆ. ಅಲ್ಲದೇ ಮುಂದೆ ನೈಸರ್ಗಿಕ ಹುಲ್ಲಿನ ಮೈದಾನಗಳಲ್ಲಿ ಹಾಕಿ ಪಂದ್ಯಗಳನ್ನು ಆಯೋಜಿಸಲು ಹೆಚ್ಚು ಒತ್ತು ನೀಡುವ ಬಗ್ಗೆ ಸುದೀರ್ಘ ಚರ್ಚೆ ನಡೆದಿದೆ ಎಂದು ಮಾಹಿತಿ ನೀಡಿದರು.

ಹಳೆಯ ಕಾಲದ ನೈಸರ್ಗಿಕ ಹುಲ್ಲಿನ ಮೈದಾನದ ಬಳಕೆ ಮತ್ತೆ ಪ್ರಾಮುಖ್ಯತೆ ಪಡೆದುಕೊಳ್ಳುವ ಕಾಲ ಸನ್ನಿಹಿತವಾಗಿದೆ ಎಂದು ಹೇಳಿದರು.

ಲೆಫ್ಟಿನೆಂಟ್ ಕರ್ನಲ್ (ನಿವೃತ್ತ) ಕೊಂಗಂಡ ಮಾಚಯ್ಯ, ಕಾವೇರಿ ಎಜುಕೇಷನ್ ಸೊಸೈಟಿ ನಿರ್ದೇಶಕ ಪ್ರೊಇಟ್ಟೀರ ಕೆ. ಬಿದ್ದಪ್ಪ, ವಿರಾಜಪೇಟೆ ಪದವಿ ಕಾಲೇಜಿನ ಪ್ರಾಂಶುಪಾಲ ಪ್ರೊ.ಎ.ಎಂ.ಕಮಲಾಕ್ಷಿ, ವಿರಾಜಪೇಟೆ ಕಾವೇರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಎನ್.ಎಂ.ನಾಣಯ್ಯ, ಭಾರತದ ಮಹಿಳಾ ಹಾಕಿ ತಂಡದ ಮಾಜಿ ತರಬೇತುದಾರ ಚಂದಪಂಡ ಪೂಣಚ್ಚ, ಕುಶಾಲನಗರದ ವಕೀಲ ಮುಕ್ಕಾಟಿರ ಅಯ್ಯಪ್ಪ, ಕರ್ತುರ ಮುದ್ದಪ್ಪ ಕುಟುಂಬಸ್ಥರು ಪಾಲ್ಗೊಂಡಿದ್ದರು.

ಕಾವೇರಿ ಎಜುಕೇಷನ್ ಸೊಸೈಟಿ ಅಧ್ಯಕ್ಷ ಸಿ.ಕೆ.ಉತ್ತಪ್ಪ ಅಧ್ಯಕ್ಷತೆ ವಹಿಸಿದ್ದರು. ವಿವಿಧ ಕ್ಷೇತ್ರದ ಸಾಧಕರನ್ನು ಸನ್ಮಾನಿಸಲಾಯಿತು. ಡಾ.ಎಂ.ಎಂ.ದೇಚಮ್ಮ ಅವರು ಸ್ವಾಗತಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT