ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಡಗಿನಲ್ಲಿ ಸತತ 2ನೇ ವರ್ಷವೂ ‘ಬರೆ’ ಎಳೆದ ಮಳೆ | ಕಾಫಿ ಕೃಷಿಗೆ ಅತಿವೃಷ್ಟಿಯ ಆಘಾತ

Last Updated 21 ಸೆಪ್ಟೆಂಬರ್ 2019, 9:50 IST
ಅಕ್ಷರ ಗಾತ್ರ

ಮಡಿಕೇರಿ: ಮಲೆನಾಡು ಜಿಲ್ಲೆಗಳಲ್ಲಿ ಅತಿವೃಷ್ಟಿಯ ಹೊಡೆತಕ್ಕೆ ಕಾಫಿ ಕೃಷಿ ಹಾಗೂ ಅದರ ಪೂರಕ ಉದ್ಯಮವು ತತ್ತರಿಸಿದೆ. ಸತತ ಎರಡನೇ ವರ್ಷವೂ ಚೇತರಿಸಿಕೊಳ್ಳಲಾರದಷ್ಟು ಮಳೆ ಆಘಾತ ನೀಡಿದೆ. ಕೊಡಗಿನ ಕಾಫಿ ಬೆಳೆಗಾರರು, ಕಳೆದ ವರ್ಷ ಭೂಕುಸಿತದ ತೊಂದರೆಗೆ ಸಿಲುಕಿದ್ದರೆ, ಈ ಬಾರಿಯ ಪ್ರವಾಹ ಗಾಯದ ಮೇಲೆ ಬರೆ ಎಳೆದಿದೆ.

ಕೊಡಗು, ಚಿಕ್ಕಮಗಳೂರು ಹಾಗೂ ಹಾಸನ ಜಿಲ್ಲೆಯ ಸಕಲೇಶಪುರ, ಬೇಲೂರು, ಆಲೂರು ತಾಲ್ಲೂಕಿನ ಕಾಫಿ ತೋಟಗಳಲ್ಲಿ ಗಿಡದಲ್ಲೇ ಅರೇಬಿಕಾ ಹಾಗೂ ರೋಬಸ್ಟಾ ಕಾಫಿ ಕೊಳೆಯುತ್ತಿದ್ದು ಬೆಳೆಗಾರರಿಗೆ ಸಂಕಟ ತಂದೊಡ್ಡಿದೆ. ಅತ್ತ ಕಾಳು ಮೆಣಸಿನ ಬಳ್ಳಿಗಳು ಹಳದಿ ಬಣ್ಣಕ್ಕೆ ತಿರುಗಿವೆ. ಕೊಡಗಿನ ಬಹುತೇಕ ತೋಟದಲ್ಲಿ ತೇವಾಂಶ ಹೆಚ್ಚಾಗಿ ಕಾಫಿ ಫಸಲು ನೆಲಕಚ್ಚಿದ್ದು ವರ್ಷಾಂತ್ಯದಲ್ಲಿ ಕೊಯ್ಲಿಗೂ ಫಸಲು ಇಲ್ಲದ ಸ್ಥಿತಿ ನಿರ್ಮಾಣವಾಗಿದೆ. ಹಲವು ಭಾಗದಲ್ಲಿ ‘ಕಾವೇರಿ’ ತಳಿಯ ಕಾಫಿ ಅಕಾಲಿಕವಾಗಿ ಹಣ್ಣಾಗಿ ನೆಲಕಂಡಿದೆ.

ಪ್ರವಾಹ ಸ್ಥಿತಿ ತಲೆದೋರಿದ್ದ ಕಡೆ ಕಾಫಿ ತೋಟಕ್ಕೆ ಬೆಂಕಿ ಬಿದ್ದಂತೆ, ಗಿಡಗಳೆಲ್ಲ ಕಪ್ಪು ಬಣ್ಣಕ್ಕೆ ತಿರುಗಿವೆ. ಗಿಡಗಳು ಕೊಳೆಯುತ್ತಿವೆ. ಅಂತಹ ತೋಟದಲ್ಲಿ ಗಿಡಗಳನ್ನು ತೆರವು ಮಾಡಿಯೇ ಹೊಸದಾಗಿ ತೋಟ ನಿರ್ಮಿಸಬೇಕು. ಸಾವಿರಾರು ರೂಪಾಯಿ ವ್ಯಯಿಸಿ, ನಾಲ್ಕೈದು ವರ್ಷ ಕಷ್ಟಪಟ್ಟು ಬೆಳೆಸಿದ್ದ ತೋಟಗಳಲ್ಲಿ ಫಸಲು ಬರುವ ಹಂತದಲ್ಲಿ ಗಿಡಗಳು ಬರಿದಾಗಿರುವುದು ಬೆಳೆಗಾರರಿಗೆ ಕಣ್ಣೀರು ತರಿಸಿದೆ.

‘ಸಿಕ್ಕಷ್ಟು ಫಸಲನ್ನಾದರೂ ಮಾರಾಟ ಮಾಡಿ ಜೀವನ ಮಾಡೋಣವೆಂದರೆ ಮಾರುಕಟ್ಟೆಯಲ್ಲಿ ಬೆಲೆಯೂ ಸ್ಥಿರವಾಗಿಲ್ಲ. ಅರೇಬಿಕಾ, ರೋಬಸ್ಟಾದ ಪಾರ್ಚ್‌ಮೆಂಟ್‌ ಧಾರಣೆ ನಿರೀಕ್ಷಿಸಿದಷ್ಟು ಏರಿಕೆ ಕಂಡಿಲ್ಲ. ಕಾಳು ಮೆಣಸಿನ ದರ ಪ್ರತಿ ಕೆ.ಜಿಗೆ ₹ 310 ಇದ್ದು, ಮಾಡಿದ ಖರ್ಚೂ ಸಿಗುತ್ತಿಲ್ಲ. ಈ ವರ್ಷವೂ ದರ ಏರಿಕೆಯಾಗದಿದ್ದರೆ ಅತಿವೃಷ್ಟಿಯ ಆಘಾತದಿಂದ ಬೆಳೆಗಾರರು ಚೇತರಿಸಿಕೊಳ್ಳುವುದು ಕಷ್ಟ’ ಎಂದು ಚೇರಂಬಾಣೆಯ ಬೆಳೆಗಾರ ಕೆ.ತಮ್ಮಯ್ಯ ಕಣ್ಣೀರಾದರು.

ಕೊಡಗು ಜಿಲ್ಲಾಡಳಿತವು ಸಮೀಕ್ಷೆ ನಡೆಸಿದ್ದು 1,18,978 ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆದಿದ್ದ ವಿವಿಧ ಬೆಳೆಗಳು ನೆಲಕಚ್ಚಿವೆ. ₹ 266 ಕೋಟಿ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.

ಸಂತಸವೆಲ್ಲ ಮಾಯ!: ‘ಕಾವೇರಿ, ಲಕ್ಷ್ಮಣತೀರ್ಥ ನದಿ ತಟದಲ್ಲಿ ಕಾಫಿ ತೋಟ ಹೊಂದಿದ್ದವರು ಮಳೆಗಾಲ ಆರಂಭಕ್ಕೂ ಮೊದಲು ಸಂತಸದ ಅಲೆಯಲ್ಲಿದ್ದರು. ಹೂವಿನ ಮಳೆ ಚೆನ್ನಾಗಿ ಸುರಿದಿತ್ತು. ಮಾರ್ಚ್‌, ಏಪ್ರಿಲ್‌ನಲ್ಲಿ ಸ್ಪ್ರಿಂಕ್ಲರ್‌ ಮೂಲಕ ನೀರು ಹಾಯಿಸಿ, ಬೆಳೆಯನ್ನು ಕಾಪಾಡಿಕೊಂಡಿದ್ದರು. ಮಳೆಗಾಲದಲ್ಲಿ ನದಿಗಳು ಉಕ್ಕೇರಿದ್ದರ ಪರಿಣಾಮ ನದಿಯಂಚಿನ ತೋಟಗಳು ನಾಶವಾಗಿವೆ. ಭಾರಿ ಮಳೆಯು ವರ್ಷದ ಕೂಳು ಕಿತ್ತುಕೊಂಡಿದೆ. ಸಂಬಳ ಕೊಡಲು ಸಾಧ್ಯವಾಗದೇ ಕೆಲಸವನ್ನೇ ಸ್ಥಗಿತ ಮಾಡಿದ್ದೇವೆ’ ಎಂದು ಮೂರ್ನಾಡು ಗ್ರಾಮದ ಸಂತೋಷ್‌ ಪರಿಸ್ಥಿತಿ ಬಿಚ್ಚಿಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT