ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಡಗಿನಲ್ಲಿ ಮತ್ಸ್ಯ ಕೃಷಿಗೂ ಅವಕಾಶ: ಸಚಿವ ಕೋಟ ಶ್ರೀನಿವಾಸ ಪೂಜಾರಿ

Last Updated 24 ಜೂನ್ 2020, 13:32 IST
ಅಕ್ಷರ ಗಾತ್ರ

ಮಡಿಕೇರಿ: ‘ಮೀನುಗಾರಿಕಾ ಇಲಾಖೆಯಲ್ಲೂ ಅಭಿವೃದ್ಧಿ ಪರವಾದ ನೂತನ ಪ್ರಯತ್ನಗಳನ್ನು ನಡೆಸಬೇಕು’ ಎಂದು ಮುಜರಾಯಿ, ಮೀನುಗಾರಿಕೆ ಹಾಗೂ ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.

ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ನಡೆದ ಸಭೆಯಲ್ಲಿ ಅವರು ಮಾತನಾಡಿದರು.

‘ಜಿಲ್ಲೆ ಮತ್ಸ್ಯ ಕೃಷಿ ನಡೆಸಲು ಅವಕಾಶಗಳಿವೆ. ಕಾಫಿ ಬೆಳೆಗಾರರು ತಮ್ಮ ಖಾಸಗಿ ಕೆರೆಯಲ್ಲೂ ಸಹ ಮೀನುಗಳ ಸಾಕಣೆ ಮಾಡುತ್ತಿದ್ದಾರೆ. ರಾಜ್ಯದ ಇತರ ಜಿಲ್ಲೆಗಳಿಗೆ ಹೋಲಿಸಿದರೆ ಮೀನುಗಾರಿಕೆಗೆ ಕೊಡಗು ಜಿಲ್ಲೆಯಲ್ಲಿ ವಿಪುಲ ಅವಕಾಶಗಳಿವೆ’ ಎಂದರು.

ಹಾರಂಗಿ ಮೀನುಮರಿ ಪಾಲನಾ ಕೇಂದ್ರದಲ್ಲಿ ಉತ್ತಮ ತಳಿಯ ಮತ್ತು ಬಲಿತ ಮೀನು ಮರಿಗಳನ್ನು ರೈತರಿಗೆ ನೀಡಬೇಕು. ಮೀನುಗಾರಿಕಾ ಇಲಾಖೆ ಸಿಬ್ಬಂದಿಗಳು, ಅಧಿಕಾರಿಗಳು ಮತ್ತಷ್ಟು ಉತ್ಸುಕತೆಯಿಂದ ಕೆಲಸ ಮಾಡಬೇಕಿದೆ. ಮೀನುಗಾರಿಕೆ ಇಲಾಖೆಯಲ್ಲೂ ಸಹ ಮೀನು ಮರಿಗಳ ತಳಿ ಸಂವರ್ಧನೆ ಹಾಗೂ ಮುಂತಾದ ಅಭಿವೃದ್ಧಿ ಪರ ವಿಚಾರಗಳ ಹೊಸ ಪ್ರಯತ್ನಗಳನ್ನು ಕಾರ್ಯರೂಪಕ್ಕೆ ತರುವಂತೆ ಮೀನುಗಾರಿಕಾ ಇಲಾಖೆಯ ಅಧಿಕಾರಿಗಳಿಗೆ ಸಚಿವರು ಸೂಚಿಸಿದರು.

ಮೀನುಗಾರಿಕೆ ಇಲಾಖೆ ಸಹಾಯಕ ನಿರ್ದೇಶಕಿ ಕೆ.ಟಿ.ದರ್ಶನಾ ಮಾತನಾಡಿ, ಹಾರಂಗಿ ಜಲಾಶಯದಲ್ಲಿ ಒಟ್ಟು 1,886 ಹೆಕ್ಟೇರ್ ಜಲ ವಿಸ್ತೀರ್ಣವನ್ನು ಕಾವೇರಿ ಮೀನುಗಾರರ ಸಹಕಾರ ಸಂಘಕ್ಕೆ ವಿಲೇವಾರಿ ಮಾಡಲಾಗಿದೆ. ಚಿಕ್ಲಿಹೊಳೆ ಜಲಾಶಯದ 105 ಹೆಕ್ಟೇರ್ ಜಲ ವಿಸ್ತೀರ್ಣವನ್ನು ಟೆಂಡರ್ ಕಂ ಹರಾಜು ಮೂಲಕ ವಿಲೇವಾರಿ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ಕೆರೆಗಳಿಗೆ ಸಂಬಂಧಿಸಿದಂತೆ ಇಲಾಖೆ ವ್ಯಾಪ್ತಿಯಲ್ಲಿ 6, ಗ್ರಾಮ ಪಂಚಾಯತ್‌ನ 506 ಕೆರೆಗಳು, 3,000 ಖಾಸಗಿ ಕೆರೆಗಳಿವೆ. ಇದರೊಂದಿಗೆ 211 ಕಿ.ಮೀ ಜಲ ವಿಸ್ತೀರ್ಣ ಹೊಂದಿರುವ ನದಿಭಾಗಗಳ 9 ಕೊಳಗಳಿದ್ದು, ಸೋಮವಾರಪೇಟೆ ತಾಲ್ಲೂಕಿನ 35 ಕಿ.ಮೀ ಉದ್ದದ 2 ನದಿ ಭಾಗಗಳನ್ನು ಕೊಡಗು ವನ್ಯಜೀವಿ ಸಂರಕ್ಷಣಾ ಸಂಘಕ್ಕೆ ಗುತ್ತಿಗೆ ನೀಡಲಾಗಿದೆ. ಅಲ್ಲದೇ 5 ಕಿ.ಮೀ ನದಿ ಭಾಗವನ್ನು ಮತ್ಸ್ಯಧಾಮವೆಂದು ಘೋಷಿಸಲಾಗಿದೆ ಎಂದು ಹೇಳಿದರು.

ಜಿಲ್ಲೆಯಲ್ಲಿ ಪ್ರತಿನಿತ್ಯ ಸರಾಸರಿ 4,000 ಕೆ.ಜಿಯಿಂದ 5,000 ಕೆ.ಜಿ ವರೆಗೆ ಮೀನು ಮಾರಾಟವಾಗುತ್ತಿದ್ದು ರಾಜ್ಯದ ಮೊದಲ 10 ಜಿಲ್ಲೆಗಳಲ್ಲಿ ಸ್ಥಾನ ಪಡೆದಿದೆ. 2018-19ನೇ ಸಾಲಿನ ಅಂಕಿ ಅಂಶಗಳ ಅನ್ವಯ ಜಿಲ್ಲೆಯ ಒಟ್ಟು ಉತ್ಪಾದನೆ ಸಾಮರ್ಥ್ಯ 3,582 ಟನ್ ಎಂದು ಹೇಳಿದರು.

ಹಾರಂಗಿ ಮೀನು ಮರಿ ಉತ್ಪಾದನಾ ಕೇಂದ್ರದ ಸಚಿನ್ ಮಾತನಾಡಿ, ಹಾರಂಗಿ ಪ್ರದೇಶದಲ್ಲಿ ಕೊಳಗಳ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. ಜಿಲ್ಲೆಯಲ್ಲಿ 40 ಲಕ್ಷ ಮೀನಿನ ಮರಿಗಳ ಬೇಡಿಕೆಯಿದ್ದು, ಸದ್ಯ 21 ಲಕ್ಷ ಮೀನಿನ ಮರಿಗಳನ್ನು ಹಾರಾಂಗಿ ಮೀನು ಮರಿ ಉತ್ಪಾದನಾ ಕೇಂದ್ರದಿಂದ ಪೂರೈಸಲಾಗುತ್ತಿದೆ ಎಂದರು.
ಇದೇ ವೇಳೆ ಮಾತನಾಡಿದ ಸಚಿವರು, ಜಿಲ್ಲೆಯ ಅವಶ್ಯ ಬೇಡಿಕೆಯನ್ನು ಜಿಲ್ಲೆಯಲ್ಲಿಯೇ ಉತ್ಪಾದಿಸುವ ಸಾಮರ್‌ಥ್ಯ ಬೆಳೆಸಿ. ಮುಂಬರುವ ದಿನಗಳಲ್ಲಿ 50 ಲಕ್ಷ ಮೀನು ಮರಿಗಳ ಉತ್ಪಾದನಾ ಸಾಮರ್ಥ್ಯ ವೃದ್ಧಿಸಿ. ಅಧಿಕಾರಿಗಳು ತಂಡವಾಗಿ ಕಾರ್ಯ ನಿರ್ವಹಿಸಿದಲ್ಲಿ ಇಲಾಖೆಯನ್ನು ಆರ್ಥಿಕವಾಗಿ ಹಾಗೂ ಇನ್ನುಳಿದಂತೆ ಅಭಿವೃದ್ಧಿ ಪಡಿಸಲು ಸಾಧ್ಯವಿದೆ ಎಂದು ತಿಳಿಸಿದರು.

ಜಿ.ಪಂ ಸಿಇಒ ಕೆ.ಲಕ್ಷ್ಮಿಪ್ರಿಯಾ, ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಸ್ನೇಹಾ, ಉಪ ವಿಭಾಗಾಧಿಕಾರಿ ಟಿ.ಜವರೇಗೌಡ, ಜಿ.ಪಂ ಉಪ ಕಾರ್ಯದರ್ಶಿ ಗುಡೂರು ಭೀಮಸೇನ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕೆ.ಮೋಹನ್, ಪಂಚಾಯತ್ ರಾಜ್ ಎಂಜಿನಿಯರಿಂಗ್‍ನ ಇಇ ಪ್ರಭು, ಜಿಲ್ಲಾ ಲೀಡ್ ಬ್ಯಾಂಕ್ ವ್ಯವಸ್ಥಾಪಕ ಬಾಲಚಂದ್ರ ಹಾಜರಿದ್ದರು.

ಪಿಂಡ ಪ್ರದಾನ: ಚರ್ಚಿಸಿ ಅಂತಿಮ ತೀರ್ಮಾನ

ಮಡಿಕೇರಿ: ತಾಲ್ಲೂಕಿನ ಭಾಗಮಂಡಲದಲ್ಲಿ ಪಿಂಡ ಪ್ರಧಾನಕ್ಕೆ ಅವಕಾಶ ನೀಡುವ ಸಂಬಂಧ ಆರೋಗ್ಯ ಇಲಾಖೆಯೊಂದಿಗೆ ಚರ್ಚಿಸಿ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದು ಕೋಟ ಶ್ರೀನಿವಾಸ ಪೂಜಾರಿ ಭರವಸೆ ನೀಡಿದರು.

ನಂತರ ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಸಾರ್ವಜನಿಕರ ಸಂಪ್ರದಾಯ, ಕಟ್ಟುಪಾಡುಗಳನ್ನು ಪಾಲಿಸುವುದು ಅಗತ್ಯ. ರಾಜ್ಯದಲ್ಲಿ ಕೋವಿಡ್ 19 ರ ಈ ಸಂದರ್ಭದಲ್ಲಿ ಸಾರ್ವಜನಿಕರ ಆರೋಗ್ಯದ ಮುನ್ನೆಚ್ಚರಿಕೆಯನ್ನೂ ವಹಿಸಬೇಕಾಗುತ್ತದೆ’ ಎಂದರು.

***

ಮೀನು ಕೃಷಿಕರಿಗೂ ಕಿಸಾನ್ ಕಾರ್ಡ್ ವಿತರಣೆ ಮಾಡಲಾಗುವುದು. ಜತೆಗೆ ಶೂನ್ಯ ಬಡ್ಡಿ ದರದಲ್ಲಿ ₹ 3 ಲಕ್ಷದವರೆಗೆ ಸಾಲ ಸೌಲಭ್ಯವನ್ನೂ ನೀಡಲಾಗಿದೆ

– ಕೋಟ ಶ್ರೀನಿವಾಸ ಪೂಜಾರಿ, ಸಚಿವ

***

ಜಿಲ್ಲೆಯಲ್ಲಿ ಒಟ್ಟು 84 ಸದಸ್ಯರನ್ನು ಒಳಗೊಂಡ ನೋಂದಾಯಿತ ಕಾವೇರಿ ಮೀನುಗಾರರ ಸಹಕಾರ ಸಂಘವಿದೆ. ಜಿಲ್ಲೆಯಾದ್ಯಂತ 200 ಮೀನುಗಾರರು, 95 ಮೀನು ಮಾರಾಟಗಾರರು, 3 ಸಾವಿರ ಮೀನು ಕೃಷಿಕರಿದ್ದಾರೆ

– ಕೆ.ಟಿ.ದರ್ಶನಾ, ಸಹಾಯಕ ನಿರ್ದೇಶಕಿ, ಮೀನುಗಾರಿಕೆ ಇಲಾಖೆ

***

ದೇವಾಲಯಗಳ ಅಭಿವೃದ್ಧಿಗೆ ಮತ್ತಷ್ಟು ಅನುದಾನ ನೀಡಬೇಕು. ಅಭಿವೃದ್ಧಿ ಕಾಮಗಾರಿ ಶೀಘ್ರವೇ ಮುಕ್ತಾಯ ಮಾಡಬೇಕು.

– ವೀಣಾ ಅಚ್ಚಯ್ಯ, ವಿಧಾನ ಪರಿಷತ್‌ ಸದಸ್ಯೆ

***

ಈಗಾಗಲೇ ₹ 2 ಕೋಟಿಯಷ್ಟು ಅನುದಾನ ನೀಡಲಾಗಿದ್ದು ಮುಂದಿನ ದಿನಗಳಲ್ಲಿಯೂ ಹೆಚ್ಚಿನ ಅನುದಾನದ ಅಗತ್ಯವಿದೆ.

– ಸುನಿಲ್‌ ಸುಬ್ರಮಣಿ, ವಿಧಾನ ಪರಿಷತ್‌ ಸದಸ್ಯೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT