ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಡಗು: ಕುಂಬಳದಾಳು ರಸ್ತೆ ಕಾಮಗಾರಿ ಕುಂಠಿತ

ಮಳೆಗಾಲಕ್ಕೆ ಮುನ್ನವೇ ರಸ್ತೆಗೆ ಕಾಯಕಲ್ಪ ನೀಡಲು ಆಗ್ರಹ, ಅಧಿಕಾರಿಗಳ ನಡೆಗೆ ಆಕ್ರೋಶ
Last Updated 7 ಜೂನ್ 2020, 9:41 IST
ಅಕ್ಷರ ಗಾತ್ರ

ನಾಪೋಕ್ಲು: ಮೂರ್ನಾಡು– ನಾಪೋಕ್ಲು ಸಂಪರ್ಕ ಕಲ್ಪಿಸುವ ಕುಂಬಳದಾಳು ರಸ್ತೆ ಕಾಮಗಾರಿ ನನೆಗುದಿಗೆ ಬಿದ್ದಿದ್ದು, ಈ ಭಾಗದ ಜನರಿಗೆ ತೀವ್ರ ಸಮಸ್ಯೆ ಉಂಟಾಗಿದೆ.

ಈ ರಸ್ತೆಯು ಸಂಪೂರ್ಣವಾಗಿ ಹದಗೆಟ್ಟಿದ್ದು, ವಾಹನ ಸವಾರರು ಹಾಗೂ ಪ್ರಯಾಣಿಕರು ಪಡಿಪಾಟಲು ಅನುಭವಿಸುತ್ತಿದ್ದರು. ಕುಂಬಳದಾಳು, ಕುಯ್ಯಂಗೇರಿ, ಹೊದವಾಡ, ಕೊಟ್ಟಮುಡಿ, ಹಾಗೂ ಹೊದ್ದೂರು ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಈ ರಸ್ತೆಯನ್ನು ಅಭಿವೃದ್ಧಿ ಪಡಿಸಲು 2018ರ ಫೆಬ್ರುವರಿಯಲ್ಲಿ ಭೂಮಿಪೂಜೆ ನೆರವೇರಿಸಲಾಗಿತ್ತು. 2019ರಲ್ಲಿ ಕಾಮಗಾರಿ ಆರಂಭಗೊಂಡಿತಾದರೂ ಈಗ ಅರ್ಧಕ್ಕೇ ನಿಂತಿದೆ.

ಮೂರ್ನಾಡು ಸಮೀಪದ ಕುಂಬಳ ದಾಳು ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಯಿದು. ಮಳೆಗಾಲದಲ್ಲಿ ಹೊದ್ದೂರು ಬಳಿ ಕಾವೇರಿ ನದಿ ಉಕ್ಕು ಹರಿದು ಸಂಪರ್ಕ ಕಡಿತಗೊಂಡಾಗ ಮೂರ್ನಾಡು– ನಾಪೋಕ್ಲು ನಡುವೆ ಸಂಪರ್ಕ ರಸ್ತೆಯಾಗಿ ಬಳಕೆಯಾಗುವ ಈ ರಸ್ತೆಗೆ ಕಾಯಕಲ್ಪ ನೀಡಲು ಯಾರೂ ಮುಂದಾಗುತ್ತಿಲ್ಲ ಎಂದು ಸ್ಥಳೀಯರು ದೂರುತ್ತಾರೆ.

ದಿನಂಪ್ರತಿ ಈ ರಸ್ತೆಯಲ್ಲಿ ನೂರಾರು ವಾಹನಗಳು ಸಂಚರಿಸುತ್ತವೆ. ಈ ರಸ್ತೆ ಸಂಪೂರ್ಣವಾಗಿ ಹಾಳಾಗಿದ್ದು, ದುರಸ್ತಿ ಕಾಮಗಾರಿಯನ್ನು ಕೂಡಲೇ ಆರಂಭಿಸಬೇಕು ಎಂದು ಆಗ್ರಹಿಸಿದ್ದಾರೆ.

ಕಳೆದ ವರ್ಷ ಮಾರ್ಚ್‌ನಲ್ಲಿ ಅಭಿವೃದ್ಧಿ ನೆಪದಲ್ಲಿ ರಸ್ತೆಯ ಎರಡೂ ಬದಿಯಲ್ಲಿದ್ದ ಮಣ್ಣನ್ನು ಚರಂಡಿಗೆ ಹಾಕಿ ಮುಚ್ಚಲಾಗಿದೆ. ಇದರಿಂದ ರಸ್ತೆ ಹಾಳಾಗಿದೆ. ಮಳೆಗಾಲದಲ್ಲಿ ರಸ್ತೆ ಮತ್ತು ಮಣ್ಣು ಕಿತ್ತು ಹೋಗಿ ರಸ್ತೆ ಕಿರಿದಾಗಿದೆ. ಕೊಡವ ಸಮಾಜದ ಬಳಿ ರಸ್ತೆ ವಿಸ್ತರಣೆಗೆ ಮಣ್ಣು ತೆಗೆದಿದ್ದು ಮಳೆಗೆ ಕೆಸರುಮಯವಾಗಿದೆ. ಜೂನ್ ತಿಂಗಳಲ್ಲಿ ಮಳೆ ಬಿರುಸುಗೊಂಡರೆ ಗ್ರಾಮಸ್ಥರು ಸಾಕಷ್ಟು ಸಮಸ್ಯೆ ಎದುರಿಸ ಬೇಕಾಗುತ್ತದೆ.

ಮೂರ್ನಾಡು– ಕುಂಬಳದಾಳು ರಸ್ತೆಯನ್ನು ಗ್ರಾಮ ಸಡಕ್ ಯೋಜನೆ ಯಡಿ ಅಭಿವೃದ್ಧಿ ಪಡಿಸಬೇಕು. ವಾಹನ ಸಂಚಾರಕ್ಕೆ ಅಡ್ಡಿಯಾಗಿರುವ ಮಿಲ್ ಕಟ್ಟಡ ಹಾಗೂ ಹೋಟೆಲ್‌ ಕಟ್ಟಡಗಳನ್ನು ತೆರವುಗೊಳಿಸಬೇಕು. ಈ ಮಾರ್ಗವಾಗಿ ಸಂಚರಿಸುತ್ತಿದ್ದ ಸಾರಿಗೆ ಬಸ್‌ಗಳನ್ನು ವ್ಯವಸ್ಥೆ ಮಾಡಬೇಕು ಎಂದು ಗ್ರಾಮಸ್ಥ ಬೋಪಣ್ಣ ಒತ್ತಾಯಿಸಿದ್ದಾರೆ.

ರಸ್ತೆ ಒತ್ತುವರಿ ತೆರವಿಗೆ ಆಗ್ರಹ

ಮೂರ್ನಾಡು ಪಟ್ಟಣದ ಮುಖ್ಯ ದ್ವಾರದ ಬಳಿ ಈ ರಸ್ತೆಯನ್ನೇ ಅತಿಕ್ರಮಿಸಿ ಮಿಲ್ ಹಾಗೂ ಎರಡು ಹೋಟೆಲ್‌ಗಳನ್ನು ನಿರ್ಮಿಸಲಾಗಿದ್ದು, ಇದರಿಂದಾಗಿ ರಸ್ತೆಯ ಮೂಲಕ ದೊಡ್ಡ ವಾಹನಗಳು ಪ್ರವೇಶಿಸಲು ಸಾಧ್ಯವಾಗುತ್ತಿಲ್ಲ. ಈ ಕಟ್ಟಡಗಳನ್ನು ತೆರವುಗೊಳಿಸುವಂತೆ ಗ್ರಾಮಸ್ಥರು ಮೂರ್ನಾಡು– ವಿರಾಜಪೇಟೆ ರಾಜ್ಯ ಹೆದ್ದಾರಿಯಲ್ಲಿ ಪ್ರತಿಭಟಿಸಿದ್ದರು. ಆದರೂ ಯಾವುದೇ ಪ್ರಯೋಜನವಾಗಿಲ್ಲ. ರಸ್ತೆಯನ್ನು ಅತಿಕ್ರಮಿಸಿಕೊಂಡು ಹಲವು ಬೆಳೆಗಾರರು ಕಾಫಿ, ಅಡಿಕೆ ತೋಟಗಳನ್ನು ಮಾಡಿದ್ದಾರೆ. ರಸ್ತೆ ಅವ್ಯವಸ್ಥೆಯಿಂದಾಗಿ ಕುಂಬಳದಾಳು, ಹೊದ್ದೂರು, ಕೊಟ್ಟಮುಡಿ, ಹೊದವಾಡ ಗ್ರಾಮಸ್ಥರು ತೊಂದರೆ ಅನುಭವಿಸುವಂತಾಗಿದೆ ಎಂದು ಸ್ಥಳೀಯರು ಅಳಲು ತೋಡಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT