ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾರ್ಚ್‌ 31ರ ತನಕ ‘ಕೊಡಗು ಲಾಕ್‌ಡೌನ್‌’: ಭವಿಷ್ಯ ನೆನೆದು ಜನರು ಆತಂಕ

ಮನೆಯಲ್ಲಿ ಇರಲು ಜನರೂ ಸಜ್ಜು
Last Updated 22 ಮಾರ್ಚ್ 2020, 19:30 IST
ಅಕ್ಷರ ಗಾತ್ರ

ಮಡಿಕೇರಿ: ಕೊರೊನಾ ಸೋಂಕು ದಿನದಿಂದ ದಿನಕ್ಕೆ ವ್ಯಾಪಿಸುತ್ತಿದ್ದು ಅದನ್ನು ತಡೆಯಲು, ಕೇಂದ್ರ ಸರ್ಕಾರ ನಿರ್ದೇಶನದ ಮೇರೆಗೆ ರಾಜ್ಯ ಸರ್ಕಾರವು ಮಹತ್ವದ ಆದೇಶ ಮಾಡಿದೆ. ಮಾರ್ಚ್‌ 31ರ ತನಕ ಕೊಡಗು ಜಿಲ್ಲೆಯ ಲಾಕ್‌ಡೌನ್‌ ಆಗಲಿದೆ. ದುಬೈನಿಂದ ಬಂದಿದ್ದ ವ್ಯಕ್ತಿಯಲ್ಲಿ ಕೋವಿಡ್‌– 19 ದೃಢವಾಗಿತ್ತು. 5 ಮಂದಿಗೆ ಕೊರೊನಾ ಸೋಂಕು ಶಂಕೆ ವ್ಯಕ್ತವಾಗಿದ್ದು, ಅದು ಇನ್ನುಷ್ಟು ವ್ಯಾಪಕವಾಗುವ ಆತಂಕ ಎದುರಾಗಿದೆ.

ಒಂದು ಪ್ರಕರಣ ದೃಢವಾಗುತ್ತಿದ್ದಂತೆಯೇ ಕಾಫಿ ನಾಡಿನ ಜನರೂ ಆತಂಕಗೊಂಡಿದ್ದಾರೆ. ಪ್ರತಿ ನಿಮಿಷವೂ ಯಾರಿಗೇ ಏನೋ ಎಂಬ ಭಯ ಕಾಣಿಸುತ್ತಿದೆ. ರಾಜ್ಯ ಸರ್ಕಾರವು ಲಾಕ್‌ಡೌನ್‌ಗೆ ಆದೇಶ ನೀಡಿದ್ದು ಅದಕ್ಕೆ ಸ್ಪಂದಿಸಲು ಜನರು ಸಜ್ಜಾಗಿದ್ದಾರೆ. ಅನಿವಾರ್ಯ ಕಾರಣಹೊರತು ಪಡಿಸಿ ಯಾರೂ ಮನೆಯಿಂದ ಹೊರಗೆ ಬರುವುದಿಲ್ಲ ಎಂಬ ನಿರ್ಧಾರಕ್ಕೆ ಬಂದಿದ್ದಾರೆ. ಒಂದು ವಾರ ಯಾರೂ ಹೊರಗೆ ಬರದಿದ್ದರೆ ಒಳ್ಳೆಯದು ಎಂದು ವೈದ್ಯರು ಎಚ್ಚರಿಕೆ ನೀಡುತ್ತಾರೆ.

ಅಗತ್ಯವಾದ ನಿರ್ಧಾರ

ದುಬೈ ಸೇರಿದಂತೆ ವಿದೇಶಗಳಿಂದ 278 ಮಂದಿ ಬಂದಿದ್ದು ಅವರನ್ನು ಹೋಂ ಕ್ವಾರಂಟೈನ್‌ ಮಾಡಲಾಗಿದೆ. ಹೀಗಾಗಿ, ಲಾಕ್‌ಡೌನ್‌ ಮಾಡುವ ಅನಿವಾರ್ಯ ಪರಿಸ್ಥಿತಿ ಎದುರಾಗಿತ್ತು. ಅದರಂತೆಯೇ ರಾಜ್ಯ ಸರ್ಕಾರವು ಕ್ರಮ ಕೈಗೊಂಡಿದೆ.

ಇದಕ್ಕೂ ಮೊದಲೇ ಜಿಲ್ಲಾ ಚೇಂಬರ್‌ ಆಫ್‌ ಕಾಮರ್ಸ್‌ ಇದೇ 23 ಹಾಗೂ 24ರಂದು ಎಲ್ಲ ಅಂಗಡಿ ಮುಂಗಟ್ಟು ಬಂದ್‌ ಮಾಡುವಂತೆ ಮನವಿ ಮಾಡಿತ್ತು. ಅದು ಇನ್ನಷ್ಟು ವಿಸ್ತರಣೆಗೊಂಡು 31ರ ತನಕ ಎಲ್ಲ ಸೇವೆಗಳೂ ವ್ಯತ್ಯಯ ಆಗಲಿವೆ.

ಕಾರ್ಮಿಕರ ಪಾಡು

ರೆಸಾರ್ಟ್‌, ಹೋಂಸ್ಟೆ, ಕಾಫಿ ತೋಟಗಳಲ್ಲಿ ನೂರಾರು ಕಾರ್ಮಿಕರು ಕೆಲಸ ಮಾಡುತ್ತಿದ್ದರು. ರೆಸಾರ್ಟ್‌, ಹೋಂಸ್ಟೇ ಬಂದ್‌ ಆಗಿ ವಾರವೇ ಕಳೆದಿದೆ. ತೋಟದಲ್ಲಿ ಕೆಲಸವನ್ನು ಸ್ಥಗಿತ ಮಾಡಲಾಗಿದೆ. ಕೆಲವು ಕಾರ್ಮಿಕರು ಲೈನ್‌ಮನೆಯಲ್ಲೇ ಉಳಿದಿದ್ದಾರೆ. ಇನ್ನು ಕೆಲವರು ಕಳೆದ ವಾರ ಊರು ಸೇರಿದ್ದಾರೆ. ಎಲ್ಲ ಕಾರ್ಮಿಕರಲ್ಲೂ ಆತಂಕ ವಾತಾವರಣವಿದೆ. ಎಲ್ಲರೂ ಭವಿಷ್ಯ ನೆನೆದು ಕಣ್ಣೀರು ಹಾಕುತ್ತಿದ್ದಾರೆ.

ಮಾತನಾಡಿಸಲೂ ಭಯ

ರೆಸಾರ್ಟ್‌ ಹಾಗೂ ಹೋಂ ಸ್ಟೇಗಳಲ್ಲಿ ಹೊರ ರಾಜ್ಯದ ಕಾರ್ಮಿಕರೇ ಹೆಚ್ಚಾಗಿ ಕೆಲಸಕ್ಕಿದ್ದರು. ಅವರೆಲ್ಲರೂ ತಮ್ಮ ರೂಂನಲ್ಲೇ ಕಾಲಕಳೆಯುತ್ತಿದ್ದಾರೆ. ಯಾರಿಗೂ ಊರಿನತ್ತ ತೆರಳಲು ಸಾಧ್ಯವಾಗುತ್ತಿಲ್ಲ. ಯಾರನ್ನೇ ಆಗಲಿ ಮಾತನಾಡಿಸಲೂ ಈಗ ಭಯದ ವಾತಾವರಣ ನಿರ್ಮಾಣವಾಗಿದೆ.

ಸಂಕಷ್ಟ ಖಚಿತ

ಮಡಿಕೇರಿ, ಸುಂಟಿಕೊಪ್ಪ, ವಿರಾಜಪೇಟೆ, ನಾಪೋಕ್ಲು ಭಾಗಕ್ಕೆ ಪಿರಿಯಾಪಟ್ಟಣ, ಹುಣಸೂರು, ನೆರೆಯ ಹಾಸನ ಜಿಲ್ಲೆಯಿಂದ ಹಾಲು, ತರಕಾರಿ ನಿತ್ಯ ಪೂರೈಕೆ ಆಗುತ್ತದೆ. ಜಿಲ್ಲೆಯಲ್ಲಿ ಸೋಮವಾರದಿಂದ ಅಂಗಡಿಗಳು ತೆರೆದಿದ್ದರೂ, ಅವುಗಳ ಪೂರೈಕೆ ಆಗುವುದು ಕಷ್ಟ ಎಂದು ವ್ಯಾಪಾರಸ್ಥರು ಹೇಳುತ್ತಾರೆ.

ಬಹಳ ದಿನ ಬೇಕು

ಕೊರೊನಾ ವೈರಸ್‌ ಮಾಯವಾಗಿ ಕೊಡಗು ಮತ್ತೆ ಚೇತರಿಕೆ ಕಾಣಲು ಬಹಳ ದಿನಗಳೇ ಬೇಕು ಎಂದು ಚೇಂಬರ್ ಆಪ್‌ ಕಾಮರ್ಸ್‌ ಪ್ರತಿನಿಧಿಗಳು ಹೇಳುತ್ತಾರೆ. 2018 ಹಾಗೂ 2019ರಲ್ಲಿ ಮಹಾಮಳೆ ಜಿಲ್ಲೆಯಲ್ಲಿ ಆರ್ಭಟಿಸಿ ಸಾವು– ನೋವು ತಂದಿತ್ತು. ಇನ್ನೇನು ಮಳೆಗಾಲ ಆರಂಭದ ಆತಂಕದಲ್ಲಿದ್ದ, ಜನರಿಗೆ ಕೊರೊನಾ ವೈರಸ್‌ ಶಾಪವಾಗಿ ‍ಪರಿಣಮಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT