ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೆಂಬು ಗ್ರಾಮಸ್ಥರು ಹೈರಾಣ: ರಾತ್ರಿಯೆಲ್ಲಾ ನಿದ್ದೆ ಇಲ್ಲ; ಶಬ್ದವಾದರೆ ನಡುಗುವ ಜನ!

Last Updated 5 ಜುಲೈ 2022, 19:31 IST
ಅಕ್ಷರ ಗಾತ್ರ

ಮಡಿಕೇರಿ: ಪದೇ ಪದೇ ಭೂಮಿ ಕಂಪಿಸುತ್ತಿರುವುದರಿಂದ ಇಲ್ಲಿನ ಚೆಂಬು ಗ್ರಾಮದಲ್ಲಿ ಭಯ ಮತ್ತು ಆತಂಕ ಮಡುಗಟ್ಟಿದೆ. ಧಾರಾಕಾರವಾಗಿ ಸುರಿಯುತ್ತಿರುವ ಮಳೆಯು ಜನರ ನೆಮ್ಮದಿ ಕೆಡಿಸಿದೆ. ಎಲ್ಲಿ ಯಾವುದೇ ಶಬ್ದವಾದರೂ ಅಂಜುವಂತಹ ಸ್ಥಿತಿ ನಿರ್ಮಾಣವಾಗಿದೆ.

ರಾತ್ರಿ ವೇಳೆ ಅಲ್ಲಿನ ಬಹುತೇಕ ಮನೆಯ ಹಿರಿಯರಿಗೆ ನಿದ್ದೆ ಬರುತ್ತಿಲ್ಲ. ಭೂಮಿ ಕಂಪಿಸಿದರೆ ಜನರನ್ನು ಎಬ್ಬಿಸಿ ಹೊರಕ್ಕೆ ಕರೆತರಲು ಕೆಲವು ಮನೆಗಳಲ್ಲಿ ಸರದಿಯ ಪ್ರಕಾರ ನಿತ್ಯವೂ ಒಬ್ಬರು ಎಚ್ಚರವಾಗಿ ಇರುತ್ತಿದ್ದಾರೆ. ಕೆಲವು ಬೀದಿಗಳಲ್ಲಿ ನಿತ್ಯವೂ ಒಂದೊಂದು ಮನೆಯವರು ರಾತ್ರಿ ಕಾವಲು ಕಾಯುತ್ತಿದ್ದಾರೆ.

ಎತ್ತರ ಪ್ರದೇಶದ ಕೆಳಗೆ ಮನೆ ಇರುವವರು, ಮಣ್ಣು ಕುಸಿಯಬಹುದೆಂಬ ಭೀತಿಯಿಂದ ವರಾಂಡದಲ್ಲೇ ಮಲಗುತ್ತಿದ್ದಾರೆ. ಕೆಲವರು ರಾತ್ರಿ ವೇಳೆ ಮನೆಗೆ ಬೀಗ ಹಾಕಿ ಸುರಕ್ಷಿತ ಸ್ಥಳದಲ್ಲಿರುವ ಸಂಬಂಧಿಕರ ಮನೆಗೆ ಹೋಗುತ್ತಿದ್ದಾರೆ. ಯಾವಾಗ ಏನಾಗುವುದೋ ಎಂಬ ಆತಂಕ ಅವರನ್ನು ಕಾಡುತ್ತಿದೆ.

ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಗ್ರಾಮಸ್ಥ ಜಯಪ್ರಕಾಶ್, ‘ಗ್ರಾಮದ ಎಲ್ಲ ಮನೆಗಳವರೂ ಮುಂಜಾಗ್ರತೆ ವಹಿಸಿದ್ದಾರೆ. ಭೂಮಿ ಕಂಪಿಸುತ್ತಿರುವುದು, ಎಡೆಬಿಡದೇ ಬೀಳುತ್ತಿರುವ ಮಳೆಯಿಂದ ಸಹಜವಾಗಿಯೇ ಆತಂಕಗೊಂಡಿದ್ದಾರೆ’ ಎಂದು ತಿಳಿಸಿದರು.

ಕೆಲವೆಡೆ ಸಣ್ಣಪುಟ್ಟ ಮಣ್ಣು ಕುಸಿತ ಪ್ರಕರಣಗಳೂ ನಡೆದಿವೆ. ಎತ್ತರದ ಪ್ರದೇಶದಿಂದ ಮಣ್ಣು ಕುಸಿದು ಮನೆಯೊಂದಕ್ಕೆ ಹಾನಿಯಾಗಿದೆ. ಊಹಾಪೋಹದ ಸುದ್ದಿಗಳೂ ಅತಿವೇಗದಲ್ಲಿ ವಾಟ್ಸ್‌ಆ್ಯಪ್‌ನಲ್ಲಿ ಹರಡುತ್ತಿದ್ದು, ಇದರಿಂದ ಜನರ ಭೀತಿ ಹೆಚ್ಚಾಗುತ್ತಿದೆ.

ಭೂಕಂಪನದ ಕೇಂದ್ರ ಬಿಂದು ಇದೆ ಎಂದು ಹೇಳಲಾದ ಪ್ರದೇಶದಲ್ಲಿರುವ ಜನರು, ಸಮೀಪದ ಗುಡ್ಡದ ಮೇಲಿರುವವರೂ ತಮ್ಮ ಜಾನುವಾರು ಹಾಗೂ ಮನೆಗಳನ್ನು ತೊರೆಯಲು ಒಪ್ಪುತ್ತಿಲ್ಲ. ನಾವು ಇಲ್ಲೇ ಸುರಕ್ಷಿತವಾಗಿ ಬದುಕಲು ಜಿಲ್ಲಾಡಳಿತ ಅವಕಾಶ ಕೊಡಬೇಕು ಎಂದು ಕೋರುತ್ತಾರೆ.

ವಿಪತ್ತು ನಿರ್ವಹಣಾ ಕೇಂದ್ರದಿಂದ ಧೈರ್ಯ ತುಂಬುವ ಯತ್ನ:ಜಿಲ್ಲಾ ವಿಪತ್ತು ನಿರ್ವಹಣಾ ಕೇಂದ್ರವು ಗ್ರಾಮಸ್ಥರಲ್ಲಿ ಧೈರ್ಯ ತುಂಬುವ ಯತ್ನ ನಡೆಸಿದೆ. ಅಲ್ಲಿನ ಶಾಲೆಯಲ್ಲಿ ಸಿಸ್ಮೋಮೀಟರ್‌ ಅಳವಡಿಸಿ, ಭೂಕಂಪನ ಮಾಪನ ಉಪಕೇಂದ್ರ ತೆರೆದಿದೆ. ಭೂಕಂಪದ ಬಗ್ಗೆ ವೈಜ್ಞಾನಿಕ ಕಾರಣ ತಿಳಿಸುತ್ತಿದ್ದಾರೆ. ಇದರಿಂದ ಅಪಾಯ ಸಂಭವಿಸುವುದಿಲ್ಲ ಎಂದು ಶಾಲಾ ಮಕ್ಕಳು, ಗ್ರಾಮ ಪಂಚಾಯಿತಿ ಸದಸ್ಯರು, ಶಿಕ್ಷಕರಿಗೆ ಧೈರ್ಯ ತುಂಬಿದ್ದಾರೆ.

ಭೂವಿಜ್ಞಾನಿಗಳಿಂದ, ಭೂಕಂಪದ ಬಗ್ಗೆ ಗ್ರಾಮಸ್ಥರಿಗೆ ವೈಜ್ಞಾನಿಕ ವಿವರಣೆ ಕೊಡಿಸುವ ಮತ್ತೊಂದು ಸುತ್ತಿನ ಕಾರ್ಯಕ್ರಮ ಆಯೋಜನೆಗೂ ಸಿದ್ಧತೆ ನಡೆದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT