ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಸ್ತೆ ಬದಿ ಭೋರ್ಗರೆಯುವ ಅಭ್ಯಾಲ ಜಲಪಾತ

ಚೆಟ್ಟಳ್ಳಿ– ಸಿದ್ದಾಪುರ ಮಾರ್ಗದಲ್ಲಿದೆ ಜಲಧಾರೆ; ಹಾಲ್ನೊರೆಯಂತೆ ಧುಮ್ಮಿಕ್ಕುವ ಜಲಸಿರಿ; ಪ್ರವಾಸಿಗರ ಭೇಟಿ
Last Updated 25 ಆಗಸ್ಟ್ 2022, 6:57 IST
ಅಕ್ಷರ ಗಾತ್ರ

ಸಿದ್ದಾಪುರ: ಮಡಿಕೇರಿಯಿಂದ ಚೆಟ್ಟಳ್ಳಿ–ಸಿದ್ದಾಪುರ ಮಾರ್ಗದಲ್ಲಿ ಮುಂಗಾರಿನ ಆಗಮನವಾಗುತ್ತಿದ್ದಂತೆ ಅನೇಕ ಜಲಪಾತಗಳು ಕಣ್ಮನ ಸೆಳೆಯುತ್ತವೆ. ಕರಿಬಂಡೆಗಳ ನಡುವೆ ಬೆಳ್ನೊರೆಯಂತೆ ನೀರು ಧಾರೆಯಾಗಿ ಹರಿಯುವ ದೃಶ್ಯಗಳನ್ನು ಕಣ್ತುಂಬಿಕೊಳ್ಳಬಹುದು.

ಈ ಪೈಕಿ ಅಭ್ಯಾಲ ಜಲಪಾತ ಪ್ರಮುಖವಾಗಿದೆ. ಹಾಲ್ನೊರೆಯ ಬಣ್ಣದಲ್ಲಿ ಹರಿಯುವ ಈ ಜಲಪಾತದ ಮುಂದೆ ನಿಂತು ಅದರ ಅಂದವನ್ನು ನೋಡುವುದೇ ಒಂದು ರೀತಿಯ ವಿಶಿಷ್ಟ ಅನುಭವ. ಚೆಟ್ಟಳ್ಳಿಯಿಂದ ಸುಮಾರು 4 ಕಿ.ಮೀ ಹಾಗೂ ಮಡಿಕೇರಿಯಿಂದ ಅಂದಾಜು 12 ಕಿ.ಮೀ ದೂರದಲ್ಲಿರುವ ಅಭ್ಯಾಲ ಜಲಪಾತ ರಸ್ತೆ ಬದಿಯಲ್ಲೇ ಇದ್ದು, ಈ ರಸ್ತೆಯಲ್ಲಿ ಸಂಚರಿಸುವ ಪ್ರಯಾಣಿಕರ ಕಣ್ಮನ ಸೆಳೆಯುತ್ತಿದೆ.

ಸುಮಾರು 60ರಿಂದ 70 ಅಡಿಗಳಿಂದ ಧುಮ್ಮಿಕ್ಕುವ ಈ ಜಲಧಾರೆಯಿಂದ ಬೀಳುವ ನೀರಿನ ತುಂತುರು ಹನಿಗಳು ದೇಹದ ಮೇಲೆಲ್ಲ ಸೂಕ್ಷ್ಮ ಹನಿಗಳನ್ನು ಸಿಂಪಡಿಸುತ್ತವೆ. ನೋಡಿದಷ್ಟೂ ಹೊತ್ತು ನೋಡುತ್ತಲೇ ಇರುವಂತೆ ಮಾಡುವಲ್ಲಿ ಈ ಜಲಸಿರಿ ಮೋಡಿ ಮಾಡುತ್ತದೆ. ಅಲ್ಲೇ ಕಟ್ಟೆಯ ಮೇಲೆ ಕುಳಿತರಂತೂ ಸಮಯ ಕಳೆಯುವುದು ಗೊತ್ತಾಗುವುದೇ ಇಲ್ಲ.

ವಾಹನಗಳಲ್ಲಿ ಬರುವವರನ್ನು ಕೆಲವು ಮೀಟರ್‌ ದೂರದಿಂದಲೇ ಇದರ ಭೋರ್ಗರೆತ ವಾಹನದ ವೇಗವನ್ನು ಕಡಿಮೆ ಮಾಡಿಸುತ್ತದೆ. ಇದರ ಬಳಿ ಬಂದೊಡನೆ ಇದರತ್ತ ತಿರುಗಿ ನೋಡದೇ ಹೋಗುವವರೇ ಇಲ್ಲ ಎನಿಸುವಷ್ಟರ ಮಟ್ಟಿಗೆ ದಾರಿಹೋಕರ ಗಮನವನ್ನು ಈ ಜಲಪಾತ ಸೂಜಿಗಲ್ಲಿನಂತೆ ಸೆಳೆಯುತ್ತಿದೆ.

ಜುಳುಜುಳನೇ ಹರಿಯುವ ಜಲಧಾರೆಗಳು: ಇದೇ ಹಾದಿಯಲ್ಲಿ ಅನೇಕ ಜಲಧಾರೆಗಳು ಮಳೆ ಬರುವಾಗ ಕಾಣಿಸುತ್ತವೆ. ಮುಂಗಾರಿನ ಸಂದರ್ಭದಲ್ಲಿ 3 ಜಲಧಾರೆಗಳು ಒಂದಷ್ಟು ತಿಂಗಳು ಹರಿಯುತ್ತವೆ. ಅವುಗಳನ್ನು ನೋಡುವುದಕ್ಕೆ ತೀರಾ ಚಿಕ್ಕದಾಗಿದ್ದರೂ, ರಸ್ತೆ ಬದಿಯಲ್ಲೇ ಜುಳುಜುಳನೇ ಶಬ್ದವನ್ನು ಹೊಮ್ಮಿಸುತ್ತಾ ಎತ್ತರದ ಬಂಡೆಗಳಿಂದ, ಕೊರಕಲುಗಳಿಂದ ಹೊರ
ಹೊಮ್ಮುವ ಈ ಜಲಧಾರೆಗಳೂ ಕಣ್ಮನ ಸೆಳೆಯುತ್ತವೆ.

ಈಚೆಗೆ ರಸ್ತೆ ಮಣ್ಣು ಕುಸಿತ ವಾಗಿದ್ದು, ಜಿಲ್ಲಾಡಳಿತ ಅವುಗಳನ್ನು ತೆರವುಗೊಳಿಸಿದೆ. ರಸ್ತೆ ಬದಿಯ ಗುಡ್ಡದಲ್ಲಿ ಸಾಲು ಸಾಲು ಮರಗಳ ಬೇರು ಹೊರಚಾಚಿವೆ. ರಸ್ತೆ ಬಹುತೇಕ ಹಾಳಾಗಿದೆ. ವಾಹನ ಸವಾರರು ಮುನ್ನೆಚ್ಚರಿಕೆಯಿಂದ ಸಂಚರಿಸಬೇಕಿದೆ. ಈ ಮಾರ್ಗದಲ್ಲಿ ಸಾಕಷ್ಟು ಬಸ್‌ಗಳ ಸಂಚಾರವಿದ್ದರೂ ಈ ಜಲಸುಂದರಿಯನ್ನು ನೋಡಲು ಸ್ವಂತ ವಾಹನದಲ್ಲೇ ಬರುವುದು ಒಳಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT