ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಲ್ಲಳ್ಳಿ: ವರ್ಷವಾದರೂ ಪೂರ್ಣವಾಗದ ಕಾಮಗಾರಿ, ಅಪಾಯಕ್ಕೆ ಸಿಲುಕುವ ಪ್ರವಾಸಿಗರು

ಮೋಜು ಮಸ್ತಿ: ಅಪಾಯಕ್ಕೆ ಸಿಲುಕುವ ಪ್ರವಾಸಿಗರು
Last Updated 27 ಸೆಪ್ಟೆಂಬರ್ 2021, 19:30 IST
ಅಕ್ಷರ ಗಾತ್ರ

ಸೋಮವಾರಪೇಟೆ: ಮಳೆಗಾಲದಲ್ಲಿ ಮಲ್ಲಳ್ಳಿ ಜಲಪಾತ ಭೋರ್ಗರೆಯುತ್ತ ಧುಮ್ಮಿಕ್ಕಿ ಹರಿಯಲು ಪ್ರಾರಂಭಗೊಳ್ಳುತ್ತದೆ. ಆಗ ಜಿಲ್ಲೆಯೂ ಸೇರಿದಂತೆ ರಾಜ್ಯದ ಸಾವಿರಾರು ಪ್ರವಾಸಿಗರು ಆಗಮಿಸಿ ಜಲಪಾತದ ಸೊಬಗು ಸವಿಯುತ್ತಾರೆ. ಆದರೆ, ಇಲ್ಲಿ ಬರುವ ಪ್ರವಾಸಿಗರಿಗೆ ಮೂಲಸೌಕರ್ಯ ಕೊರತೆ ಕಾಡುತ್ತಿದೆ.

ನಿಸರ್ಗ ರಮಣೀಯತೆಯನ್ನು ತನ್ನೊಡಲ್ಲಿರಿಸಿಕೊಂಡಿರುವ ಪುಷ್ಪಗಿರಿ ಬೆಟ್ಟದ ತಪ್ಪಲಿನಲ್ಲಿ ಹುಟ್ಟುವ ಕುಮಾರಧಾರಾ ನದಿ ಮಲ್ಲಳ್ಳಿ ಗ್ರಾಮದ ಕಲ್ಲು ಬಂಡೆಯಿಂದ 200 ಅಡಿ ಕೆಳಭಾಗಕ್ಕೆ ಭೋರ್ಗರೆಯುತ್ತಾ ಧುಮ್ಮಿಕ್ಕಿ ಜಲಧಾರೆಯಾಗಿ ಪ್ರವಹಿಸುವ ದೃಶ್ಯ ಸುಂದರ ಹಾಗೂ ನಯನ ಮನೋಹರ.

ಪುಷ್ಪಗಿರಿ ತಪ್ಪಲಿನಲ್ಲಿ ಹುಟ್ಟುವ ಕುಮಾರಧಾರಾ ನದಿ ಮಲ್ಲಳ್ಳಿ ಗ್ರಾಮದ ಕಲ್ಲು ಬಂಡೆಯಿಂದ 390 ಅಡಿ ಎತ್ತರದಿಂದ ಧುಮ್ಮಿಕ್ಕಿ ಜಲಧಾರೆಯಾಗಿ ಪ್ರವಹಿಸುತ್ತದೆ. ಮೊದಲ ಹಂತದ 200 ಅಡಿ ಎತ್ತರದಿಂದ ಕೆಳಕ್ಕೆ ಧುಮ್ಮಿಕ್ಕಿ ನಂತರ 90 ಅಡಿ ಎತ್ತರದಿಂದ ಕೆಳಕ್ಕೆ ಬೀಳುತ್ತದೆ. ಮುಂದೆ ಹರಿದು ಕುಕ್ಕೆ ಸುಬ್ರಮಣ್ಯ ದೇವಾಲಯದ ಸ್ನಾನಘಟ್ಟ ತಲುಪುತ್ತದೆ.

ಹಚ್ಚ ಹಸಿರಿನ ಗಿರಿ–ಕಂದರ, ಪ್ರಕೃತಿಯ ಸೊಬಗಿನ ಎರಡು ಬೆಟ್ಟಗಳ ತಳದಲ್ಲಿ ಧುಮ್ಮಿಕ್ಕುವ ಜಲಧಾರೆ ಪ್ರವಾಸಿಗರನ್ನು ಸೂಜಿಗಲ್ಲಿನಂತೆ ಆಕರ್ಷಿಸುತ್ತಿದೆ. ದಿನನಿತ್ಯ ನೂರಾರು ಪ್ರವಾಸಿಗರನ್ನು ತನ್ನತ್ತ ಕೈಬೀಸಿ ಕರೆದು ಮನ ತಣಿಸುವ ನೈಸರ್ಗಿಕ ಜಲಧಾರೆಯ ಮಲ್ಲಳ್ಳಿ ಜಲಪಾತಕ್ಕೆ ಪ್ರವಾಸಿಗರ ದಂಡು ಲಗ್ಗೆಯಿಡುತ್ತಿದ್ದು, ಅಪಾಯವನ್ನು ಮೀರಿ ಸಂಭ್ರಮಿಸುತ್ತಿದ್ದು, ಕೆಲವು ಸಂದರ್ಭ ಅಪಾಯಕ್ಕೂ ಸಿಲುಕುತ್ತಿದ್ದಾರೆ.

ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವ ಪ್ರಾವಾಸಿಗರಿಗೆ ಮಾತ್ರ ಜಲಪಾತದ ಬಳಿಯಲ್ಲಿ ಇಂದಿಗೂ ಯಾವುದೇ ಮೂಲ ಸೌಕರ್ಯಗಳಿಲ್ಲ. ಶೌಚಾಲಯ, ಕ್ಯಾಂಟೀನ್, ಕುಡಿಯುವ ನೀರಿನ ಯೋಜನೆಗಳು ಸೇರಿದಂತೆ ಹಲವು ಕಾಮಗಾರಿಗಳಿಗೆ ಚಾಲನೆ ನೀಡಿ ಹಲವು ವರ್ಷಗಳೇ ಕಳೆದರೂ ಇಂದಿಗೂ ಯಾವ ಕಾಮಗಾರಿಗಳು ಪೂರ್ಣಗೊಂಡಿಲ್ಲ. ಇದರಿಂದ ಪ್ರವಾಸಿಗರು ಊಟ ಮತ್ತು ವಿಶ್ರಾಂತಿಗಾಗಿ ಹೊರಗಿನ ಖಾಸಗಿ ಹೋಮ್‍ಸ್ಟೇಗಳನ್ನು ಅವಲಂಬಿಸಬೇಕಾಗಿದೆ.

ಲೋಕೋಪಯೋಗಿ ಇಲಾಖೆ ಮೂಲಕ ₹ 3.19 ಕೋಟಿ ವೆಚ್ಚದ ಕಾಂಕ್ರೀಟ್ ರಸ್ತೆ ಕಾಮಗಾರಿ ನಡೆದಿದೆ. ನಬಾರ್ಡ್‍ನ ಆರ್.ಐ.ಡಿ.ಎಫ್ 20ರ ಯೋಜನೆಯ ಅಡಿಯಲ್ಲಿ 2.3 ಕಿಮೀ ಕಾಂಕ್ರಿಟ್ ರಸ್ತೆ, ಏಳು ಮೋರಿಗಳು 18 ಹಾಗೂ 40 ಮೀಟರ್‌ನ ಎರಡು ತಡೆಗೋಡೆಗಳ ನಿರ್ಮಾಣ ಒಳಗೊಂಡ ₹ 3.19 ಕೋಟಿ ವೆಚ್ಚದ ಕಾಮಗಾರಿ ಮಾಡಲಾಗಿದೆ.

ಮಲ್ಲಳ್ಳಿ ಜಲಪಾತವನ್ನು ಹತ್ತಿರದಿಂದ ನೋಡುವುದಕ್ಕೆ 400ಕ್ಕೂ ಅಧಿಕ ಮೆಟ್ಟಿಲಿನ ವ್ಯವಸ್ಥೆ ಮಾಡಿದ್ದು, ಅದಕ್ಕೆ ರೇಲಿಂಗ್ಸ್ ಅಳವಡಿಸಲಾಗಿದೆ. ಮೆಟ್ಟಿಲುಗಳನ್ನು ಇಳಿದು ಹೋಗಬೇಕು. ಎತ್ತರದ ಜಾಗದಲ್ಲೂ ಜಲಪಾತದ ಸೊಬಗನ್ನು ನೋಡಬಹುದು. ಮಳೆಗಾಲದಲ್ಲಿ ಕಲ್ಲುಬಂಡೆಗಳು ಜಾರುವುದರಿಂದ ಎಚ್ಚರ ವಹಿಸುವುದು ಅಗತ್ಯ.

ತಾಲ್ಲೂಕಿನ ಬೆಟ್ಟದಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಲ್ಲಳ್ಳಿ ಎಂಬ ಗ್ರಾಮದಲ್ಲಿ ಮಲ್ಲಳ್ಳಿ ಜಲಪಾತವಿದೆ. ಪಟ್ಟಣದಿಂದ 25 ಕಿ.ಮೀ ಕ್ರಮಿಸಿದರೆ, ಜಲಪಾತ ದರ್ಶನವಾಗುತ್ತದೆ. ಯಡೂರು, ಶಾಂತಳ್ಳಿ, ಕುಮಾರಳ್ಳಿ ಮೂಲಕ 20 ಕಿ.ಮೀ. ಕ್ರಮಿಸಿ, ಹಂಚಿನಳ್ಳಿ ಗ್ರಾಮವನ್ನು ತಲುಪಿ, ಬಲಕ್ಕೆ ತಿರುಗಿ ನಾಲ್ಕು ಕಿ.ಮೀ ತೆರಳಿದರೆ ಮಲ್ಲಳ್ಳಿ ಜಲಪಾತದ ದರ್ಶನವಾಗುತ್ತದೆ. ಜಲಪಾತದವರೆಗೂ ಕಾಂಕ್ರೀಟ್ ರಸ್ತೆ ನಿರ್ಮಾಣ ಮಾಡಿರುವುದರಿಂದ ಸ್ಥಳಕ್ಕೆ ವಾಹನಗಳಲ್ಲಿ ತೆರಳಬಹುದು.

ರಾಜ್ಯ ಸೇರಿದಂತೆ ಅಂತರ ರಾಜ್ಯಗಳಿಂದಲೂ ಸಾಕಷ್ಟು ಪ್ರವಾಸಿಗರು ಆಗಮಿಸುತ್ತಿದ್ದಾರೆ. ಜಲಪಾತದ ಸೊಬಗನ್ನು ಸವಿಯುತ್ತಾರೆ; ಎಚ್ಚರಿಕೆ ವಹಿಸದೇ ಎಂಜಾಯ್ ಮಾಡಲು ಮುಂದಾಗಿದ್ದ ವೇಳೆ ವರ್ಷಕ್ಕೆ ಒಂದೆರೆಡು ಜೀವಹಾನಿಯೂ ಆಗಿದೆ. ಇದನ್ನು ತಪ್ಪಿಸುವ ನಿಟ್ಟಿನಲ್ಲಿ ಪ್ರವಾಸೋದ್ಯಮ ಇಲಾಖೆ, ಮೇಲಿನಿಂದ ಜಲಪಾತದ ಬುಡದವರೆಗೂ ತಂತಿ ಬಲೆಯನ್ನು ಅಳವಡಿಸಿ, ಮುಂಜಾಗ್ರತೆ ವಹಿಸುವಂತೆ ಜಾಗ್ರತಾ ಫಲಕಗಳನ್ನು ಅಳವಡಿಸಿ, ಯಾರೂ ನೀರಿಗೆ ಇಳಿಯಬಾರದು ಎಂದು ಸೂಚನೆಯನ್ನು ನೀಡಿದೆ.

ಆದರೆ, ಇವುಗಳನ್ನೆಲ್ಲಾ ಮೀರಿ ಪ್ರವಾಸಿಗರು ಬೇಲಿಯನ್ನು ಹತ್ತಿ ನೀರಿಗೆ ಇಳಿಯುವ ದುಸ್ಸಾಹಸ ಮಾಡುತ್ತಿರುವುದರಿಂದ ನೀರಿನ ಹರಿವಿನಲ್ಲಿ ಸಿಲುಕಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. 2021ರ ವರೆಗೆ ಒಟ್ಟು 18 ಮಂದಿ ಜಿಲ್ಲೆ ಸೇರಿದಂತೆ ಹೊರ ಜಿಲ್ಲೆಯ ಪ್ರವಾಸಿಗರು ಜೀವ ಕಳೆದುಕೊಂಡಿದ್ದಾರೆ.

ಜಲಪಾತದ ಮೇಲ್ಭಾಗದಲ್ಲಿ ಮಿನಿ ವಿದ್ಯುತ್ ನಿರ್ಮಾಣ ಮಾಡುವುದರಿಂದ ಕೆಲವು ಸಂದರ್ಭ ನೀರನ್ನು ಸಂಗ್ರಹಿಸಿ, ಜಲಪಾತಕ್ಕೆ ಬಿಡುವುದರಿಂದ, ಹೆಚ್ಚಿನ ನೀರಿನ ಹರಿವು ಹೆಚ್ಚಾಗಿರುತ್ತದೆ. ಇದನ್ನು ತಿಳಿಯದ ಪ್ರವಾಸಿಗರು ನೀರಿಗೆ ಇಳಿದು ಬಂಡೆಯ ಮೇಲೆ ಕುಳಿತು ಜಲಕ್ರೀಡೆಯಲ್ಲಿ ತೊಡಗುತ್ತಾರೆ. ಏಕಾಏಕಿ ನೀರು ಬಂದಾಗ ಅಪಾಯಕ್ಕೆ ಸಿಲುಕುತ್ತಿದ್ದಾರೆ. ಇಲಾಖೆ ಎಷ್ಟೇ ಜಾಗೃತ ವಹಿಸಿದರೂ, ಪ್ರವಾಸಿಗರ ಮೋಜು ಮಸ್ತಿಯಿಂದ ಪ್ರಾಣಾಪಾಯವನ್ನು ತಡೆಯಲು ವಿಫಲವಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT