ಬುಧವಾರ, ಸೆಪ್ಟೆಂಬರ್ 18, 2019
22 °C

ಅಧ್ಯಾತ್ಮ ಗುರು ಬಿದ್ದಂಡ ಕೆ. ಸುಬ್ಬಯ್ಯ ನಿಧನ

Published:
Updated:
Prajavani

ಮಡಿಕೇರಿ: ಅಧ್ಯಾತ್ಮ ಗುರು, ಭಾರತೀಯ ವಿದ್ಯಾಭವನ ಕೊಡಗು ವಿದ್ಯಾಲಯದ ಆಡಳಿತ ಮಂಡಳಿ ಅಧ್ಯಕ್ಷ ಬಿದ್ದಂಡ ಕೆ. ಸುಬ್ಬಯ್ಯ (82) ಭಾನುವಾರ ಹೃದಯಾಘಾತದಿಂದ ಬೆಂಗಳೂರಿನಲ್ಲಿ ನಿಧನರಾದರು.

ಬೆಂಗಳೂರಿನಲ್ಲಿ ಸೋಮವಾರ ಬೆಳಿಗ್ಗೆ ಸತ್ಸಂಗ ಕಾರ್ಯಕ್ರಮ ಆಯೋಜಿಸಲಾಗಿತ್ತು. ಅದರ ಸಿದ್ಧತೆಗಾಗಿ ಕಾರಿನಲ್ಲಿ ತೆರಳುತ್ತಿರುವಾಗ ತೀವ್ರ ಹೃದಯಾಘಾತದಿಂದ ಸುಬ್ಬಯ್ಯ ಮೃತಪಟ್ಟರು ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಅವರಿಗೆ ಪತ್ನಿ, ಪುತ್ರ ಹಾಗೂ ಇಬ್ಬರು ಪುತ್ರಿಯರು ಇದ್ದಾರೆ. ಸೋಮವಾರ ಸಂಜೆ ಇಲ್ಲವೆ ಮಂಗಳವಾರ ಬೆಂಗಳೂರಿನಲ್ಲಿ ಅಂತ್ಯಕ್ರಿಯೆ ನೆರವೇರಲಿದೆ.

ಮೃತರ ಗೌರವಾರ್ಥ ಮಡಿಕೇರಿಯ ಕೊಡಗು ವಿದ್ಯಾಲಯಕ್ಕೆ ಸೋಮವಾರ ರಜೆ ಘೋಷಿಸಲಾಗಿದೆ.

ಸುಬ್ಬಯ್ಯ ಪ್ರಗತಿಪರ ಕೃಷಿಕರಾಗಿದ್ದರು. ಮೇದೂರು ಎಸ್ಟೇಟ್ ಮಾಲೀಕರೂ ಹೌದು. ಛಾಯಾಗ್ರಹಣದಲ್ಲಿ ಅತೀವ ಆಸಕ್ತಿ ಹೊಂದಿದ್ದರು. ಕ್ರಿಕೆಟ್, ಟೆನಿಸ್ ಆಟಗಾರರಾಗಿದ್ದರು. ವಾಂಡರರ್ಸ್‌ ಕ್ಲಬ್‌ನಲ್ಲಿ ಕ್ರಿಕೆಟ್‌ ತಂಡದ ನಾಯಕರಾಗಿದ್ದರು. ಶ್ರೀಲಂಕಾದಲ್ಲಿ ನಡೆದಿದ್ದ ಕ್ರಿಕೆಟ್‌ ಟೂರ್ನಿಯಲ್ಲಿ ರಾಜ್ಯ ತಂಡವನ್ನು ಪ್ರತಿನಿಧಿಸಿದ್ದರು. ‘ಜ್ಯಾಕ್‌’ ಸುಬ್ಬಯ್ಯ ಎಂದೇ ಪ್ರಸಿದ್ಧರಾಗಿದ್ದರು.

‘ಎಲ್ಲ ಧರ್ಮಗಳ ತಿರುಳನ್ನು ಸತ್ಸಂಗದಲ್ಲಿ ಬೋಧಿಸುತ್ತಿದ್ದರು. ವಿದೇಶದಲ್ಲೂ ಅವರಿಗೆ ಅಪಾರ ಶಿಷ್ಯ ವೃಂದವಿದೆ. ಕೊಡಗಿನ ನೆಲಕ್ಕೆ ಅಗಸ್ತ್ಯ ಮಹರ್ಷಿ ಬಲವಿದೆ. ಅದರ ಹಿರಿಮೆಯನ್ನು ಜನರು ಅರಿಯಬೇಕು ಎನ್ನುತ್ತಿದ್ದ ಅವರು, ಧ್ಯಾನ – ಯೋಗಕ್ಕೆ ಆದ್ಯತೆ ನೀಡುತ್ತಿದ್ದರು. ದೈವದೊಡನೆ ಒಂದಾಗುವುದೊಂದೇ ಜೀವನದ ಮೂಲ ಉದ್ದೇಶ ಎನ್ನುತ್ತಿದ್ದರು’ ಎಂದು ಅವರ ಅನುಯಾಯಿಗಳು ನೆನ‍ಪು ಮಾಡಿಕೊಳ್ಳುತ್ತಾರೆ. 

Post Comments (+)