ಕೊಡಗಿನಲ್ಲಿ ಮಹಾಮಳೆಗೆ ಮತ್ತೆ ಪ್ರವಾಹ

7

ಕೊಡಗಿನಲ್ಲಿ ಮಹಾಮಳೆಗೆ ಮತ್ತೆ ಪ್ರವಾಹ

Published:
Updated:

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಸುರಿಯುತ್ತಿರುವ ಮಹಾಮಳೆಗೆ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಕಾವೇರಿ, ಲಕ್ಷ್ಮಣತೀರ್ಥ ನದಿಗಳು ಅಪಾಯಮಟ್ಟ ಮೀರಿ ಹರಿಯುತ್ತಿವೆ. ಹಳ್ಳ ಕೊಳ್ಳಗಳು ಉಕ್ಕಿ ಹರಿಯುತ್ತಿವೆ.

ಮೈಸೂರು– ಬಂಟ್ವಾಳ ರಾಷ್ಟ್ರೀಯ ಹೆದ್ದಾರಿಯ ಮದೆನಾಡು ಎಂಬಲ್ಲಿ ಸೋಮವಾರ ಗುಡ್ಡ ಕುಸಿದಿತ್ತು. ಮಣ್ಣು ತೆರವು ಕಾರ್ಯ ಮಂಗಳವಾರವೂ ಮುಂದುವರೆದಿದೆ. ಮಣ್ಣು ತೆರವು ಮಾಡಿದಂತೆ ಗುಡ್ಡ ಕುಸಿಯುತ್ತಿದ್ದ ಕಾರಣ ತೆರವು ಕಾರ್ಯ ವಿಳಂಬವಾಗಿದೆ. ಈ ಮಾರ್ಗದಲ್ಲಿ ಗುರುವಾರದಿಂದ ವಾಹನ ಸಂಚಾರ ಆರಂಭಗೊಳ್ಳುವ ಸಾಧ್ಯತೆಯಿದೆ. ಸದ್ಯಕ್ಕೆ ಪರ್ಯಾಯ ಮಾರ್ಗದಲ್ಲಿ ವಾಹನಗಳು ಸಂಚರಿಸುತ್ತಿವೆ.

ಭಾಗಮಂಡಲದ ತ್ರಿವೇಣಿ ಸಂಗಮ ಮತ್ತೆ ಜಲಾವೃತಗೊಂಡಿದೆ. ಮಡಿಕೇರಿ– ಭಾಗಮಂಡಲ– ತಲಕಾವೇರಿ ಹಾಗೂ ಭಾಗಮಂಡಲ– ಅಯ್ಯಂಗೇರಿ ರಸ್ತೆ ಸಂಪರ್ಕ ಕಡಿತವಾಗಿದೆ. ಭಗಂಡೇಶ್ವರ ದೇವಸ್ಥಾನದ ಸುತ್ತಲೂ ನೀರು ಆವರಿಸಿದೆ. ದೇವಸ್ಥಾನದ ಸುತ್ತಮುತ್ತಲಿನ ವ್ಯಾಪಾರಸ್ಥರು ಅಂಗಡಿ, ಹೋಟೆಲ್‌ ಬಂದ್‌ ಮಾಡಿ ಸುರಕ್ಷಿತ ಸ್ಥಳಕ್ಕೆ ತೆರಳಿದ್ದಾರೆ. ಅಗ್ನಿಶಾಮಕ ದಳದ ಸಿಬ್ಬಂದಿ ಬೀಡುಬಿಟ್ಟಿದ್ದಾರೆ. ಬ್ರಹ್ಮಗಿರಿಯಲ್ಲಿ ಮಳೆ, ಗಾಳಿ ಆರ್ಭಟಿಸುತ್ತಿದ್ದು ತಲಕಾವೇರಿ ಪ್ರವೇಶ ನಿಷೇಧಿಸಲಾಗಿದೆ.

ಕಾವೇರಿ ನದಿಯಂಚಿನ ಕರಡಿಗೋಡು ಗ್ರಾಮಕ್ಕೆ ಮುಳುಗಡೆಯ ಭೀತಿ ಎದುರಾಗಿದೆ. ಪ್ರವಾಸಿ ತಾಣ ದುಬಾರೆಯಲ್ಲಿ ಕಾವೇರಿ ನದಿಯು ಉಕ್ಕಿ ಹರಿಯುತ್ತಿದೆ. ಜಿಲ್ಲೆಯ ಪ್ರಮುಖ ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರಿಲ್ಲದೇ ಬಿಕೊ ಎನ್ನುತ್ತಿವೆ.

ಹಾರಂಗಿ ಜಲಾಶಯದ ಒಳಹರಿವು ಏರಿಕೆ
ಭೇತ್ರಿ ಸೇತುವೆ ಮುಳುಗಡೆಯಾಗಿದ್ದು, ಸಂಚಾರ ಬಂದ್‌ ಆಗಿದೆ. ಸೋಮವಾರಪೇಟೆ ತಾಲ್ಲೂಕಿನ ಮಾದಾಪುರ ಸೇತುವೆ ಮುಳುಗಡೆಯಾಗಿದೆ. ಪರ್ಯಾಯ ಮಾರ್ಗದಲ್ಲಿ ವಾಹನಗಳು ಸಂಚರಿಸುತ್ತಿವೆ. ಅಬ್ಬಿ, ಮಲ್ಲಳ್ಳಿ ಹಾಗೂ ಇರ್ಪು ಜಲಪಾತಗಳು ಭೋರ್ಗರೆಯುತ್ತಿವೆ. ಬುಧವಾರ ಸಂಜೆ ವೇಳೆಗೆ ಹಾರಂಗಿ ಜಲಾಶಯದ ಒಳಹರಿವು 40,000 ಕ್ಯುಸೆಕ್‌ಗೆ ಏರಿಕೆಯಾಗಿದ್ದು, ಅಷ್ಟೇ ಪ್ರಮಾಣದಲ್ಲಿ ನೀರನ್ನು ನದಿಗೆ ಬಿಡಲಾಗುತ್ತಿದೆ.

ಮಾದಾಪುರದ ಬಳಿ ಬೃಹತ್‌ ಮರ ಬಿದ್ದು ಮೂರು ಗಂಟೆ ಚೆಟ್ಟಳ್ಳಿ– ಮಾದಾಪುರ ಮಾರ್ಗ ಬಂದ್ ಆಗಿತ್ತು. ಗಾಳಿ ಅಬ್ಬರಕ್ಕೆ ಜಿಲ್ಲೆಯ ವಿವಿಧೆಡೆ ಮರಗಳು ಧರೆಗುರುಳುತ್ತಿವೆ. ನೂರಾರು ಎಕರೆ ಜಮೀನು ಜಲಾವೃತವಾಗಿದ್ದು ನಾಟಿ ಮಾಡಿದ್ದ ಪೈರು ಕೊಳೆಯುತ್ತಿದೆ.

24 ಗಂಟೆ ಅವಧಿಯಲ್ಲಿ ಕೊಡಗಿನಲ್ಲಿ ಸುರಿದ ಮಳೆ ವಿವರ 
ಭಾಗಮಂಡಲ 252
ಹುದಿಕೇರಿ 216
ಶ್ರೀಮಂಗಲ 215
ಶಾಂತಳ್ಳಿ 188
ಕೊಡ್ಲಿಪೇಟೆ 170
ನಾಪೋಕ್ಲು 169
ಮಡಿಕೇರಿ 82

Tags: 

ಬರಹ ಇಷ್ಟವಾಯಿತೆ?

 • 4

  Happy
 • 1

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !