ನಾಪೋಕ್ಲು: ‘ಜಿಲ್ಲೆಯಲ್ಲಿ 1837ರಲ್ಲಿ ನಡೆದ ಅಮರಸುಳ್ಯ ಹೋರಾಟ ಭಾರತದ ಪ್ರಪ್ರಥಮ ಸ್ವಾತಂತ್ರ್ಯ ಸಂಗ್ರಾಮಕ್ಕೆ ನಾಂದಿಯಾಯಿತು’ ಎಂದು ಸಾಹಿತಿ ಸಹನಾ ಕಾಂತಬೈಲು ಪ್ರತಿಪಾದಿಸಿದರು.
‘1857ರಲ್ಲಿ ನಡೆದ ಸಿಪಾಯಿ ದಂಗೆ ಭಾರತದ ಮೊದಲ ಸ್ವಾತಂತ್ರ್ಯ ಹೋರಾಟ ಎಂದು ಇತಿಹಾಸ ಸಾರುತ್ತದೆ. ಆದರೆ ಅದಕ್ಕೂ 20 ವರ್ಷಗಳ ಹಿಂದೆ ಬ್ರಿಟೀಷರನ್ನು ನಮ್ಮ ನೆಲದಿಂದ ಓಡಿಸುವ ಪ್ರಯತ್ನ ನಡೆದಿದೆ. ಕೊಡಗಿನ ರಾಜ ಚಿಕ್ಕವೀರರಾಜೇಂದ್ರ ಅವರನ್ನು ಬ್ರಿಟಿಷರು ರಾಜಪಟ್ಟದಿಂದ ಇಳಿಸಿದ ನಂತರ ಬ್ರಿಟಿಷ್ ಆಳ್ವಿಕೆ ಈ ಪ್ರದೇಶದಲ್ಲಿ ಪ್ರಾರಂಭವಾಯಿತು. ಅತಿಯಾದ ತೆರಿಗೆ ಮತ್ತು ದಬ್ಬಾಳಿಕೆ ಕಾರಣ ಜನರು ಬ್ರಿಟಿಷರ ವಿರುದ್ಧ ದಂಗೆ ಏಳುವ ಪ್ರಯತ್ನ ನಡೆಯಿತು. ಆ ಸಂದರ್ಭದಲ್ಲಿ ರಾಜಮನೆತನದ ಪ್ರತಿನಿಧಿ ಎಂದು ಸ್ವಾಮಿ ಅಪರಾಂಪರ ಎನ್ನುವ ವ್ಯಕ್ತಿ ಇವರೆಲ್ಲರನ್ನೂ ಸಂಘಟಿಸಿ ಬ್ರಿಟಿಷರ ವಿರುದ್ಧ ಹೋರಾಡಿದ್ದು ಇತಿಹಾಸ’ ಎಂದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಮಡಿಕೇರಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು, ಸಂಪಾಜೆ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಜ್ಯೋತಿ ವಿದ್ಯಾ ಸಂಘ ಪೆರಾಜೆ ಇವರ ಸಂಯುಕ್ತ ಆಶ್ರಯದಲ್ಲಿ ಪೆರಾಜೆ ಜ್ಯೋತಿ ಪ್ರೌಢಶಾಲೆ ಸಭಾಂಗಣದಲ್ಲಿ ಇತ್ತೀಚೆಗೆ ನಡೆದ ಗಂಗಾಧರ ಶೇಟ್ ಮತ್ತು ಸುಲೋಚನಾ ಬಾಯಿ ಸ್ಮಾರಕ ದತ್ತಿ ಕಾರ್ಯಕ್ರಮದ ಸ್ವಾತಂತ್ರ್ಯ ಹೋರಾಟಗಾರರ ನೆನಪಿನ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಂ.ಪಿ ಕೇಶವ ಕಾಮತ್ ಪ್ರಾಸ್ತಾವಿಕವಾಗಿ ಮಾತನಾಡಿ, ‘200 ವರ್ಷಗಳಿಗೂ ಹೆಚ್ಚು ಕಾಲ ನಮ್ಮನ್ನಾಳಿದ ಬ್ರಿಟಿಷರ ವಿರುದ್ಧ ಇಡೀ ದೇಶ ಒಂದಾಗಿ ಹೋರಾಡಿ ಸ್ವಾತಂತ್ರ್ಯ ಗಳಿಸಿಕೊಂಡಿತು. ಹೋರಾಟದಲ್ಲಿ ಕೊಡಗು ಜಿಲ್ಲೆ ಪಾತ್ರವೂ ಮಹತ್ವದ್ದು. ಮಾಹಿತಿ ಕೊರತೆಯಿಂದಾಗಿ ನಮ್ಮ ಜಿಲ್ಲೆಯಲ್ಲಿ ನಡೆದ ಹೋರಾಟಗಳು ಜನರನ್ನು ತಲುಪಲಿಲ್ಲ. ನಮ್ಮ ದೇಶಕ್ಕೆ ಸ್ವಾತಂತ್ರ್ಯ ಸುಲಭವಾಗಿ ಸಿಕ್ಕಿದ್ದಲ್ಲ. ಹಿರಿಯರ ತ್ಯಾಗ, ಬಲಿದಾನ, ಹೋರಾಟಗಳು ಇಂದಿನ ಪೀಳಿಗೆಯ ವಿದ್ಯಾರ್ಥಿಗಳಿಗೆ ತಿಳಿಯಪಡಿಸಬೇಕು ಎನ್ನುವ ದೃಷ್ಟಿಯಿಂದ ಗೋಣಿಕೊಪ್ಪಲಿನ ಎಂ.ಜಿ ಮೋಹನ್ ತಂದೆ ತಾಯಿಗಳ ಹೆಸರಿನಲ್ಲಿ ಈ ದತ್ತಿ ಸ್ಥಾಪಿಸಿದ್ದಾರೆ’ ಎಂದರು.
ಪೆರಾಜೆ ಜ್ಯೋತಿ ವಿದ್ಯಾ ಸಂಘದ ಅಧ್ಯಕ್ಷ ಎನ್.ಎ.ಜ್ಞಾನೇಶ್ ಕಾರ್ಯಕ್ರಮ ಉದ್ಘಾಟಿಸಿದರು. ದತ್ತಿದಾನಿ ಗೋಣಿಕೊಪ್ಪಲಿನ ಜಯಲಕ್ಷ್ಮಿ ಜ್ಯುವೆಲ್ಲರಿ ಮಾಲೀಕ ಎಂ.ಜಿ.ಮೋಹನ್ ಅವರನ್ನು ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಸನ್ಮಾನಿಸಲಾಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಎಂ.ಜಿ ಮೋಹನ್,‘ಬ್ರಿಟಿಷರ ಆಳ್ವಿಕೆಯ ದಬ್ಬಾಳಿಕೆ ನಂತರ ನಮ್ಮ ದೇಶಕ್ಕೆ ಸಿಕ್ಕ ಸ್ವಾತಂತ್ರ್ಯದ ಮೌಲ್ಯ ಇಂದಿನ ಪೀಳಿಗೆಗೆ ತಿಳಿಯಬೇಕು’ ಎಂದರು.
ಸಂಪಾಜೆ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಗೋಪಾಲ ಪೆರಾಜೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಟಿ.ಪಿ ರಮೇಶ್, ಪೆರಾಜೆ ಗ್ರಾಮ ಪಂಚಾಯಿತಿ ಸದಸ್ಯ ಸುರೇಶ್ ಪೆರುಮುಂಡ, ಜ್ಯೋತಿ ಪ್ರೌಢಶಾಲೆಯ ಸಂಚಾಲಕ ಮುಡುಕಜೆ ಹರಿಶ್ಚಂದ್ರ, ಮುಖ್ಯೋಪಾಧ್ಯಾಯ ನಾಗರಾಜ್, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ರೇವತಿ ರಮೇಶ್, ಕೊಡಗು ಜಿಲ್ಲಾ ಲೇಖಕ ಮತ್ತು ಕಲಾವಿದರ ಬಳಗದ ಅಧ್ಯಕ್ಷ ಲೋಕನಾಥ್ ಅಮೆಚೂರು, ಹೋಬಳಿ ಕಾರ್ಯದರ್ಶಿ ಸಂಗೀತಾ ರವಿರಾಜ್, ಮಡಿಕೇರಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷೆ ಶ್ರೀಮತಿ ಕಡ್ಲೆರ ತುಳಸಿ ಮೋಹನ್ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.