ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏಕಾಂತ ಸ್ಥಳದ ಹೋಮ್‌ಸ್ಟೇಗೆ ಬೇಡಿಕೆ

ಕೊಡಗಿಗೆ ಲಗ್ಗೆಯಿಟ್ಟ ಪ್ರವಾಸಿಗರು, ವಾಹನ ದಟ್ಟಣೆ
Last Updated 26 ಡಿಸೆಂಬರ್ 2020, 19:30 IST
ಅಕ್ಷರ ಗಾತ್ರ

ಮಡಿಕೇರಿ: ಕೊರೊನಾ ಎರಡನೇ ಅಲೆಯ ಆತಂಕದ ನಡುವೆಯೂ ಕ್ರಿಸ್‌ಮಸ್‌, ವರ್ಷಾಂತ್ಯದ ಸಂಭ್ರಮಕ್ಕೆ ಕೊಡಗು ಜಿಲ್ಲೆಗೆ ಪ್ರವಾಸಿಗರು ಲಗ್ಗೆಯಿಟ್ಟಿದ್ದಾರೆ. ಎಲ್ಲೆಡೆ ವಾಹನ ದಟ್ಟಣೆಯೂ ಕಂಡುಬರುತ್ತಿದೆ.

ಕುಶಾಲನಗರದಿಂದ ಮಡಿಕೇರಿ ತನಕ ಎರಡು ದಿನಗಳಿಂದ ಸಾಲು ಸಾಲು ವಾಹನಗಳು ಕಂಡುಬರುತ್ತಿವೆ. ಎಲ್ಲ ಪ್ರವಾಸಿ ತಾಣಗಳಲ್ಲೂ ಪ್ರವಾಸಿಗರಿಂದ ತುಂಬಿವೆ. ಕೊರೊನಾ ಆತಂಕವನ್ನು ಲೆಕ್ಕಿಸದೇ ಪ್ರವಾಸಿಗರು ಸಂತಸದಿಂದ ಕ್ರಿಸ್‌ಮಸ್‌ ಆಚರಿಸಿ ತೆರಳಿದ್ದಾರೆ. ರಜೆಯ ಕಾರಣಕ್ಕೆ ಇನ್ನು ಕೆಲವರು ಹೊಸವರ್ಷವನ್ನೂ ಇಲ್ಲಿಯೇ ಆಚರಿಸಲು ಹೋಂಸ್ಟೆ, ರೆಸಾರ್ಟ್‌ಗಳನ್ನು ಬುಕ್‌ ಮಾಡಿಕೊಂಡಿದ್ದಾರೆ.

ಕ್ರಿಸ್‌ಮಸ್‌ಗೆ ಬಂದವರು ಕೆಲವರು ಇಲ್ಲೇ ಉಳಿದಿದ್ದಾರೆ. ಮತ್ತೆ ಕೆಲವರು, ಕೊಡಗಿಗೆ ಬುಧವಾರ ಅಥವಾ ಗುರುವಾರ ಬರಲು ಯೋಜನೆ ರೂಪಿಸಿಕೊಂಡು ಕೊಠಡಿ ಬುಕ್ಕಿಂಗ್‌ ಮಾಡಿದ್ದಾರೆ.

ಕೊರೊನಾದಿಂದ ಕಳೆದ ಮಾರ್ಚ್‌ನಿಂದಲೂ ಜಿಲ್ಲೆಯಲ್ಲಿ ಪ್ರವಾಸೋದ್ಯಮ ನೆಲಕಚ್ಚಿತ್ತು. ಅಕ್ಟೋಬರ್‌ನಿಂದ ಪ್ರವಾಸೋದ್ಯಮ ಚೇತರಿಕೆಯ ಹಾದಿಯಲ್ಲಿತ್ತು. ಈಗ ಶೇ 80ರಷ್ಟು ಹೋಂಸ್ಟೆಗಳು ಭರ್ತಿಯಾಗಿವೆ. ಕೊರೊನಾ ಕಾರಣಕ್ಕೆ ನಗರದ ಒಳಗಿರುವ ಹೋಂಸ್ಟೆ ಹಾಗೂ ರೆಸಾರ್ಟ್‌ಗೆ ಡಿಮ್ಯಾಂಡ್‌ ಕಡಿಮೆಯಿದೆ. ಅದರಲ್ಲೂ ಕಾಫಿ ತೋಟದ ಏಕಾಂತ ಸ್ಥಳಗಳಲ್ಲಿರುವ ಹೋಂಸ್ಟೆಗಳು ಭರ್ತಿಯಾಗಿವೆ. ಅವುಗಳಿಗೆ ಬೇಡಿಕೆಯೂ ಇದೆ.

ನೀರಿನಲ್ಲಿ ಚಿನ್ನಾಟ; ಪ್ರೇಮಿಗಳ ಸುತ್ತಾಟ

ಕುಶಾಲನಗರ ಸಮೀಪದ ದುಬಾರೆ ಪ್ರವಾಸಿ ತಾಣದಲ್ಲಿ ಹೆಚ್ಚಿನಸಂಖ್ಯೆ ಪ್ರವಾಸಿಗರು ಕಾಣಿಸುತ್ತಿದ್ದಾರೆ. ಸಾಕಾನೆ ಶಿಬಿರ ವೀಕ್ಷಿಸಿ ಪುಳಕಗೊಂಡಿದ್ದಾರೆ. ಕಾವೇರಿ ನದಿಯಲ್ಲಿ ನೀರಿನ ಮಟ್ಟ ಇಳಿಕೆಯಾಗಿದ್ದು, ನಡೆದೇ ಶಿಬಿರದತ್ತ ಪ್ರವಾಸಿಗರು ತೆರಳುತ್ತಿದ್ದಾರೆ. ನೀರಿನಲ್ಲಿ ಪ್ರವಾಸಿಗರು ಚಿನ್ನಾಟ ನಡೆಯುತ್ತಿದ್ದರೆ, ವರ್ಷಾಂತ್ಯದ ಸವಿಯಲ್ಲಿ ನವ ಜೋಡಿಗಳು, ಪ್ರೇಮಿಗಳು ಕೈಕೈಹಿಡಿದು ವಿಹರಿಸುತ್ತಿರುವ ದೃಶ್ಯ ಸಾಮಾನ್ಯವಾಗಿದೆ. ಅದರಲ್ಲೂ ನೆಚ್ಚಿನ ನಿಸರ್ಗಧಾಮದ ಹಸಿರು ಪರಿಸರದಲ್ಲಿ ಪ್ರವಾಸಿಗರದ್ದೇ ಕಲರವ! ಪ್ರವಾಸಿಗರನ್ನೇ ನಂಬಿ ಉದ್ದಿಮೆ ನಡೆಸುತ್ತಿರುವ ಮಂದಿ ಒಂದಷ್ಟು ಜೇಬಿ ತುಂಬಿಸಿಕೊಳ್ಳುವ ಪ್ರಯತ್ನದಲ್ಲಿದ್ದಾರೆ.

‘ಕೊರೊನಾ 2ನೇ ಅಲೆಯ ಆತಂಕವಿಲ್ಲದಿದ್ದರೆ ಇನ್ನಷ್ಟು ಪ್ರವಾಸಿಗರು ಕಾಫಿ ನಾಡಿಗೆ ಬರುತ್ತಿದ್ದಾರೆ. ವಿದೇಶಕ್ಕೆ ತೆರಳಲು ಬೆಂಗಳೂರು, ಮೈಸೂರಿನ ಪ್ರವಾಸಿಗರು ಹಿಂದೇಟು ಹಾಕುತ್ತಿರುವ ಪರಿಣಾಮ, ಕೊಡಗು ಜಿಲ್ಲೆಯನ್ನೇ ಆಯ್ಕೆ ಮಾಡಿಕೊಂಡಿದ್ದಾರೆ. ಇನ್ನು ಕೆಲವರು, ಗೋವಾ, ಮಂಗಳೂರು, ಕಾರವಾರ, ಸಕಲೇಶಪುರ, ಚಿಕ್ಕಮಗಳೂರು ಕಡೆಯತ್ತಲೂ ಹೋಗಿದ್ದಾರೆ’ ಎನ್ನುತ್ತಾರೆ ಪ್ರವಾಸಿ ಏಜೆಂಟ್‌ ಪ್ರದೀಪ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT