ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಡುಗಿದ ಖರೀದಿ ಉತ್ಸಾಹ

ಷೇರುಪೇಟೆಯ ಮೇಲೆ ಕರ್ನಾಟಕ ಚುನಾವಣಾ ಫಲಿತಾಂಶದ ಪ್ರಭಾವ
Last Updated 15 ಮೇ 2018, 19:30 IST
ಅಕ್ಷರ ಗಾತ್ರ

ಮುಂಬೈ: ಕರ್ನಾಟಕ ವಿಧಾನಸಭಾ ಚುನಾವಣೆಯ ಫಲಿತಾಂಶವು  ಮಂಗಳವಾರ ಷೇರುಪೇಟೆಯ ವಹಿವಾಟಿನ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ.

ಸಂವೇದಿ ಸೂಚ್ಯಂಕವು ಭಾರಿ ಏರಿಳಿತ ಕಂಡು ಅಂತಿಮವಾಗಿ ಅಲ್ಪ ನಷ್ಟದೊಂದಿಗೆ ವಹಿವಾಟು ಅಂತ್ಯಕಂಡಿತು.

ಬಿಜೆಪಿಯು ಪೂರ್ಣ ಬಹುಮತ ಗಳಿಸಿ ಕರ್ನಾಟಕದಲ್ಲಿ ಸರ್ಕಾರ ರಚಿಸಲಿದೆ. ಕೇಂದ್ರ ಸರ್ಕಾರವು ಜಾರಿಗೆ ತರುವ ಆರ್ಥಿಕ ಸುಧಾರಣಾ ಕ್ರಮಗಳಿಗೆ ಇನ್ನಷ್ಟು ವೇಗ ಸಿಗಲಿದೆ ಎನ್ನುವುದು ಹೂಡಿಕೆದಾರರ ನಿರೀಕ್ಷೆಯಾಗಿತ್ತು. ಕೊನೆಯಲ್ಲಿ ಅದು ಹುಸಿಯಾಗಿತ್ತು. ಇದು ವಹಿವಾಟುದಾರರ ಖರೀದಿ ಉತ್ಸಾಹ ಉಡುಗಿಸಿತು.

ದಿನದ ಆರಂಭದಲ್ಲಿ ವಹಿವಾಟಿಗೆ ಸಕಾರಾತ್ಮಕ ಚಾಲನೆಯೇ ಸಿಕ್ಕಿತ್ತು. ಬಿಜೆಪಿ ಗೆಲುವಿನ ಕುರಿತ ಆರಂಭಿಕ ವರದಿಗಳು ಪೇಟೆಯ ಪಾಲಿಗೆ ಉತ್ತೇಜನಕಾರಿಯಾಗಿದ್ದವು. ಇದರಿಂದಾಗಿ ಸಂವೇದಿ ಸೂಚ್ಯಂಕವು ಗಮನಾರ್ಹ ಜಿಗಿತ ಕಂಡಿತ್ತು. ಮತ ಎಣಿಕೆ ಮುಂದುವರೆದಂತೆ ಮಧ್ಯಾಹ್ನದವರೆಗೂ ಬಿಜೆಪಿ ಮುನ್ನಡೆ ಕಾಯ್ದುಕೊಂಡಿತ್ತು. ರಾಜ್ಯದಲ್ಲಿ ಬಿಜೆಪಿಗೆ ಸ್ಪಷ್ಟ ಬಹುಮತ ಬರುವ ನಿರೀಕ್ಷೆ ಕಂಡುಬಂದಿದ್ದರಿಂದ ಷೇರುಪೇಟೆಯಲ್ಲಿ ಖರೀದಿ ಉತ್ಸಾಹ ಹೆಚ್ಚಾಗಿತ್ತು. ಆದರೆ, ವಹಿವಾಟಿನ ಅಂತ್ಯದ ವೇಳೆಗೆ ಈ ಪರಿಸ್ಥಿತಿ ಸಂಪೂರ್ಣವಾಗಿ ಬದಲಾಗಿತ್ತು.

ಬೆಳಿಗ್ಗೆ 10 ಗಂಟೆಯ ನಂತರ ಸಂವೇದಿ ಸೂಚ್ಯಂಕ 436 ಅಂಶಗಳವರೆಗೆ ಜಿಗಿತ ಕಂಡಿತ್ತು. ಇದರಿಂದ ಗರಿಷ್ಠ ಮಟ್ಟವಾದ 35,993 ಅಂಶಗಳಿಗೆ ತಲುಪಿತ್ತು. ‘ನಿಫ್ಟಿ’ ಕೂಡ 128 ಅಂಶ ಏರಿಕೆ ಕಂಡಿತ್ತು. ಬಿಜೆಪಿಗೆ ಸ್ಪಷ್ಟ ಬಹುಮತ ಬರುವ ಸಾಧ್ಯತೆ ಇಲ್ಲ ಎನ್ನುವುದು ಖಾತರಿಯಾಗುತ್ತಿದ್ದಂತೆಯೇ ಷೇರುಗಳ ಮಾರಾಟ ಹೆಚ್ಚಾಯಿತು. ಸಂಜೆ ವೇಳೆಗೆ ವಹಿವಾಟು ನಕಾರಾತ್ಮಕ ಮಟ್ಟಕ್ಕೆ ತಲುಪಿತು.

ಬಿಎಸ್‌ಇ 13 ಅಂಶ ಇಳಿಕೆ ಕಂಡು 35,543ರಲ್ಲಿ ಮತ್ತು ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ (ಎನ್‌ಎಸ್‌ಇ) ನಿಫ್ಟಿ 5 ಅಂಶ ಇಳಿಕೆಯಾಗಿ 10,801 ಅಂಶಗಳಲ್ಲಿ ದಿನದ ವಹಿವಾಟು ಅಂತ್ಯ ಕಂಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT