ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಪಾಯದಲ್ಲಿ ಕಟ್ಟಡ: ವರದಿಗೆ ಸೂಚನೆ

ಜಿಲ್ಲಾ ಪಂಚಾಯ್ತಿ ಪ್ರಗತಿ ಪರಿಶೀಲನಾ ಸಭೆ: ಶಾಲಾ– ಕಾಲೇಜು ಕಟ್ಟಡದ ಸ್ಥಿತಿ
Last Updated 15 ಜೂನ್ 2019, 14:11 IST
ಅಕ್ಷರ ಗಾತ್ರ

ಮಡಿಕೇರಿ: ಅಪಾಯ ಸ್ಥಿತಿಯಲ್ಲಿರುವ ಶಾಲೆ– ಕಾಲೇಜು ಕಟ್ಟಡ ಹಾಗೂ ಬೀಳುವಸ್ಥಿತಿಯಲ್ಲಿರುವ ಮರಗಳನ್ನು ಪರಿಶೀಲಿಸಿ ಮಕ್ಕಳ ಸುರಕ್ಷತೆಗೆ ಶಿಕ್ಷಣ ಇಲಾಖೆ ಆದ್ಯತೆ ನೀಡಬೇಕು. ಅದರ ವರದಿಯನ್ನೂ ನೀಡಬೇಕು ಎಂದು ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ಬಿ.ಎ. ಹರೀಶ್ ಸೂಚಿಸಿದರು.

ನಗರದ ಕೋಟೆ ಹಳೇ ವಿಧಾನ ಸಭಾಂಗಣದಲ್ಲಿ ಶನಿವಾರ ಜಿಲ್ಲಾ ಪಂಚಾಯಿತಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.

ಜಿಲ್ಲೆಯಲ್ಲಿ ಮಳೆಗಾಲ ಪ್ರಾರಂಭವಾಗಿದೆ. ಶಾಲೆಯ ಕಟ್ಟಡಗಳು ಸುರಕ್ಷಿತವಾಗಿವೆಯೇ ಎಂಬುದನ್ನು ಅಧಿಕಾರಿಗಳು ಮೊದಲು ಪರಿಶೀಲಿಸಬೇಕು. ಜಿಲ್ಲೆಯಲ್ಲಿ ಹೆಚ್ಚಿನ ಶಾಲೆಗಳು ಗ್ರಾಮೀಣ ಭಾಗದಲ್ಲಿರುವುದರಿಂದ ಅಪಾಯಕಾರಿ ಮರಗಳು ಶಾಲೆಯ ಅಕ್ಕಪಕ್ಕದಲ್ಲಿದ್ದರೆ ಅದನ್ನು ಶೀಘ್ರವೇ ತೆರವುಗೊಳಿಸಬೇಕು ಎಂದು ಸೂಚಿಸಿದರು.

ಶಾಲೆಗಳಿಗೆ ಸಮವಸ್ತ್ರ ಇನ್ನು ತಲುಪಿಲ್ಲ. ಶೂ ಹಾಗೂ ಪುಸ್ತಕಗಳನ್ನು ಸಕಾಲದಲ್ಲಿ ತಲುಪಿಸುವ ವ್ಯವಸ್ಥೆ ಆಗಬೇಕು ಎಂದು ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್ ತಿಳಿಸಿದರು.

ಇದಕ್ಕೆ ಪತಿಕ್ರಿಯಿಸಿದ ಡಿಡಿಪಿಐ ಮಚ್ಚಾದೋ, ತಿಂಗಳಾಂತ್ಯಕ್ಕೆ ಮಕ್ಕಳಿಗೆ ಸಮವಸ್ತ್ರ ದೊರೆಯಲಿದೆ ಎಂದು ಭರವಸೆ ನೀಡಿದರು.

ಶಾಲೆಗಳಲ್ಲಿ ಶೌಚಾಲಯ ವ್ಯವಸ್ಥೆ ಹಾಗೂ ಕುಡಿಯುವ ನೀರಿನ ವ್ಯವಸ್ಥೆಗೆ ಬಗ್ಗೆ ಗಮನ ಹರಿಸಬೇಕೆಂದು ಸಲಹೆ ನೀಡಿದರು.

ಕನ್ನಡ ಬಳಕೆ ಇಲ್ಲ– ಅಸಮಾಧಾನ: ರಸ್ತೆ ಬದಿಯಲ್ಲಿ ಆಂಗ್ಲ ಭಾಷೆಯ ನಾಮಫಲಕಗಳೇ ಹೆಚ್ಚು ರಾರಾಜಿಸುತ್ತಿವೆ. ಈ ಬಗ್ಗೆ ಬೋರ್ಡ್‌ ತೆರವುಗೊಳಿಸುವಂತೆ ಸಾಕಷ್ಟು ಬಾರಿ ಸಭೆಯಲ್ಲಿ ಸೂಚನೆ ನೀಡಿದ್ದರೂ ಕ್ರಮ ಕೈಗೊಂಡಿಲ್ಲ ಎಂದು ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಬಿ.ಎಸ್‌. ಲೋಕೇಶ್ ಸಾಗರ್‌ ಅಸಮಾಧಾನ ವ್ಯಕ್ತಪಡಿಸಿದರು.

ರಾಜ್ಯ ಹೆದ್ದಾರಿಯಲ್ಲಿಯೇ ಆಂಗ್ಲ ಪದ ಬಳಕೆ ಕಂಡುಬರುತ್ತಿದೆ. ಈ ವಿಚಾರದಲ್ಲಿ ಜಿಲ್ಲಾ ಪಂಚಾಯಿತಿ ಸಿಇಒ ಕೆ.ಲಕ್ಷ್ಮಿಪ್ರಿಯಾ ಕ್ರಮ ವಹಿಸಬೇಕು ಎಂದು ಕೋರಿದರು.

ಅದಕ್ಕೆ ಪ್ರತಿಕ್ರಿಯಿಸಿದ ಸಿಇಒ ಲಕ್ಷ್ಮೀಪ್ರಿಯಾ, ಸೂಚನೆ ಪಾಲಿಸದ ಅಂಗಡಿಗಳಿಗೆ ನೋಟಿಸ್ ನೀಡಲಾಗಿದೆ ಎಂದರು.

ಒಂದು ವಾರದೊಳಗೆ ಎಲ್ಲಾ ನಾಮಫಲಕ ಕನ್ನಡದಲ್ಲಿಯೇ ಇರಬೇಕು. ಮತ್ತೊಂದು ಸಭೆಯಲ್ಲಿ ಈ ವಿಚಾರ ಚರ್ಚೆಗೆ ಬರಬಾರದು ಎಂದು ಹರೀಶ್ ಸೂಚಿಸಿದರು.

ಜಿಲ್ಲೆಯಲ್ಲಿ 34 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬೆಳೆಯುವ ಗುರಿ ಹೊಂದಲಾಗಿದೆ. ಹಾಗೆಯೇ 4 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಮುಸುಕಿನ ಜೋಳ ಬೆಳೆಯುವ ಗುರಿ ಹೊಂದಲಾಗಿದೆ ಎಂದುಕೃಷಿ ಇಲಾಖೆ ಅಧಿಕಾರಿ ರಾಜು ಮಾಹಿತಿ ನೀಡಿದರು.

ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷೆ ಸರೋಜಮ್ಮ, ಸೋಮವಾರಪೇಟೆಯಲ್ಲಿ ಅರ್ಹ ಫಲಾನುಭವಿಗಳಿಗೆ ಕೃಷಿ ಇಲಾಖೆಯಿಂದ ತಡಪಾಲ್‌ ವಿತರಿಸಲಾಗುತ್ತದೆ. ಆದರೆ, ಇದು ಎಲ್ಲರಿಗೂ ತಲುಪುತ್ತಿಲ್ಲ. ಅರ್ಹರಿಗೆ ಹೆಚ್ಚಿನ ಟಾರ್ಪಲ್ ವಿತರಿಸಲು ಕ್ರಮ ತೆಗೆದುಕೊಳ್ಳಿ ಎಂದು ಆಗ್ರಹಿಸಿದರು.

ಕಾಳುಮೆಣಸಿನ ಸಸಿ ನೀಡಿ: ಜಿಲ್ಲೆಯಲ್ಲಿ ಇಲಾಖೆಯಿಂದ ನೀಡುವ ಕಾಳು ಮೆಣಸಿನ ಗಿಡಕ್ಕೆ ₹ 12 ಇದೆ. ಆದರೆ, ಇದೇ ಗಿಡವನ್ನು ನರ್ಸರಿಯಲ್ಲಿ ₹ 10ಕ್ಕೆ ಮಾರಾಟ ಮಾಡುತ್ತಾರೆ. ಆದ್ದರಿಂದ ಇಲಾಖೆ ಜಿಲ್ಲೆಯ ರೈತರಿಗೆ ಕಾಳುಮೆಣಸನ್ನು ಉಚಿತವಾಗಿ ವಿತರಿಸಬೇಕು ಎಂದು ಒತ್ತಾಯಿಸಿದರು.

ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಕೆ.ಮೋಹನ್, ಕುಶಾಲನಗರ ಸಮುದಾಯ ಆರೋಗ್ಯ ಕೇಂದ್ರದಲ್ಲಿ ವೈದ್ಯರೊಬ್ಬರು ಅನುಚಿತವಾಗಿ ವರ್ತನೆ ಮಾಡಿದ್ದು ಇಲಾಖೆಯ ಗಮನಕ್ಕೆ ಬಂದಿದೆ ಎಂದು ತಿಳಿಸಿದರು.

ವೈದ್ಯರ ಕೊರತೆ: ಸೋಮವಾರಪೇಟೆ ತಾಲ್ಲೂಕಿನ ಶನಿವಾರಸಂತೆ ಸರ್ಕಾರಿ ಆಸ್ಪತ್ರೆಯಲ್ಲಿ ರಾತ್ರಿ ವೇಳೆ ವೈದ್ಯರಿಲ್ಲದೇ ಜನರು ಪರದಾಡುವಂತಾಗಿದೆ ಎಂದು ಕೃಷಿ ಮತ್ತು ಕೈಗಾರಿಕಾ ಸಮಿತಿ ಅಧ್ಯಕ್ಷೆ ಸರೋಜಮ್ಮ ಸಭೆಯ ಗಮನ ಸೆಳೆದರು.

ಜಲಪಾತಕ್ಕೆ ರಕ್ಷಣೆ ನೀಡಿ: ಚೇಲಾವರ ಜಲಪಾತಕ್ಕೆ ಹಲವು ಮಂದಿ ಪ್ರವಾಸಿಗರು ಬಿದ್ದು ಪ್ರಾಣ ಕಳೆದುಕೊಂಡಿದ್ದಾರೆ. ಹೀಗಿದ್ದರೂ ಸೂಕ್ತ ರಕ್ಷಣೆ ವ್ಯವಸ್ಥೆ ಕೈಗೊಳ್ಳುವಲ್ಲಿ ಇಲಾಖೆ ನಿರ್ಲಕ್ಷ್ಯ ವಹಿಸಿದೆ. ಮುಂದಿನ ದಿನಗಳಲ್ಲಿ ಜಲಪಾತದಲ್ಲಿ ಸೂಕ್ತ ರಕ್ಷಣೆ ವ್ಯವಸ್ಥೆ ಮಾಡಿ, ಅಲ್ಲಿರುವ ಗುಂಡಿಯನ್ನು ಮುಚ್ಚಿ ಎಂದು ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಎನ್.ಟಿ. ಕಿರಣ್ ಕಾರ್ಯಪ್ಪ ಆಗ್ರಹಿಸಿದರು.

ಪ್ರವಾಸೋದ್ಯಮ ಅಧಿಕಾರಿ ರಾಘವೇಂದ್ರ ಮಾತನಾಡಿ, ಜಲಪಾತದ ಪ್ರದೇಶದಲ್ಲಿ ಮೆಟ್ಟಿಲುಗಳ ನಿರ್ಮಾಣ, ರೈಲಿಂಗ್ಸ್, ಪಾರ್ಕಿಂಗ್, ಶೌಚಾಲಯ, ಮಳಿಗೆ ಮುಂತಾದ ಸೌಲಭ್ಯಗಳ ನಿರ್ಮಾಣವನ್ನು ಕೈಗೊಂಡಿದೆ. ಶೇಕಡಾ 70 ಕಾಮಗಾರಿ ಪೂರ್ಣಗೊಂಡಿದ್ದು ಮೂವರು ಪ್ರವಾಸಿ ಮಿತ್ರ ಸಿಬ್ಬಂದಿಯನ್ನು ನೇಮಿಸಲಾಗಿದೆ ಎಂದು ತಿಳಿಸಿದರು.

ಜಿ.ಪಂ ಮುಖ್ಯ ಲೆಕ್ಕಾಧಿಕಾರಿ ನಂದ, ಸಹಾಯಕ ಕಾರ್ಯದರ್ಶಿ ಶ್ರೀಕಂಠಮೂರ್ತಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT