ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಪೋಕ್ಲು: ಕೊಡವ ಕೌಟುಂಬಿಕ ಹಾಕಿ ಟೂರ್ನಿಗೆ ಕ್ಷಣಗಣನೆ

ಚೆರಿಯಪರಂಬು ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ಅಂತಿಮ ಹಂತದ ಸಿದ್ಧತೆಗಳು ಪೂರ್ಣ
Last Updated 18 ಮಾರ್ಚ್ 2023, 4:34 IST
ಅಕ್ಷರ ಗಾತ್ರ

ನಾಪೋಕ್ಲು: ಕೊಡವ ನಾಡಿನಲ್ಲಿ ಮತ್ತೆ ಹಾಕಿ ಹಬ್ಬದ ಸಂಭ್ರಮ ಮರುಕಳುಹಿಸುತ್ತಿದೆ. ಇಂದಿನಿಂದ ಆರಂಭಗೊಳ್ಳುವ 23ನೇ ಕೊಡವ ಕೌಟುಂಬಿಕ ಹಾಕಿ ಟೂರ್ನಿಗೆ ಕ್ಷಣಗಣನೆ ಆರಂಭವಾಗಿದ್ದು, ಇಲ್ಲಿನ ಚೆರಿಯಪರಂಬು ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ಅಂತಿಮ ಹಂತದ ಸಿದ್ಧತೆಗಳು ಪೂರ್ಣಗೊಂಡಿವೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹಾಕಿ ಟೂರ್ನಿಯ ಉದ್ಘಾಟನೆಗೆ ಆಗಮಿಸಲಿದ್ದು, ಉತ್ಸವದ ಮೆರುಗು ಮತ್ತಷ್ಟು ಹೆಚ್ಚಲಿದೆ. ಅಪ್ಪಚೆಟ್ಟೋಳಂಡ ಕುಟುಂಬ ಕೌಟುಂಬಿಕ ಹಾಕಿ ಉತ್ಸವದ ಆತಿಥ್ಯ ವಹಿಸಿದ್ದು, ಶುಕ್ರವಾರ ಅಂತಿಮ ಹಂತದ ಸಿದ್ಧತೆ ನಡೆಸಿತು.

ಕೌಟುಂಬಿಕ ಕೊಡವ ಹಾಕಿ ಟೂರ್ನಿಗಾಗಿ ಕ್ರೀಡಾಂಗಣದಲ್ಲಿ ತಯಾರಿ ನಡೆದಿದ್ದು, ಕೊಡಗಿನ ಹಾಕಿ ಪ್ರಿಯರು ವೀಕ್ಷಿಸಲು ಎಲ್ಲ ಸೌಲಭ್ಯಗಳನ್ನು ಒಳಗೊಂಡ ₹32 ಲಕ್ಷ ವೆಚ್ಚದಲ್ಲಿ ಬೃಹತ್ ಗ್ಯಾಲರಿ ನಿರ್ಮಾಣ ಮಾಡಲಾಗಿದೆ. 25 ಸಾವಿರ ಜನರು ಒಟ್ಟಾಗಿ ಪಂದ್ಯ ವೀಕ್ಷಿಸಬಹುದಾಗಿದೆ. ಅಲ್ಲದೇ ಗಣ್ಯರು ಕಳಿತುಕೊಳ್ಳಲೆಂದೇ 600 ಆಸನಗಳ ವಿಐಪಿ ಗ್ಯಾಲರಿಯನ್ನು ನಿರ್ಮಿಸಲಾಗಿದೆ. ಮೈದಾನ ಹಾಗೂ ಗ್ಯಾಲರಿ ನಿರ್ಮಾಣ ಕಾರ್ಯ ಮುಕ್ತಾಯಗೊಂಡಿದೆ. ಒಂದೇ ಮೈದಾನದಲ್ಲಿ ಒಟ್ಟು ಮೂರು ಸುಸಜ್ಜಿತ ಹಾಕಿ ಮೈದಾನಗಳು ತಯಾರಾಗಿದ್ದು, ಒಂದು ತಿಂಗಳ ಕಾಲ ನಡೆಯುವ ಈ ಹಾಕಿ ಉತ್ಸವ ನಡೆಯಲಿದೆ.

ಪಾಂಡಂಡ ಕುಟ್ಟಪ್ಪ– ಕಾಶಿ ಸಹೋದರರ ಪರಿಕಲ್ಪನೆಯಲ್ಲಿ ಕೊಡವ ಹಾಕಿ ಸಂಸ್ಥೆ ಮೂಲಕ ಪ್ರತಿವರ್ಷ ಒಂದೊಂದು ಕೊಡವ ಕುಟುಂಬದ ನೇತೃತ್ವದಲ್ಲಿ ಹಾಕಿ ಉತ್ಸವ ಆಯೋಜಿಸಲಾಗುತ್ತಿದೆ. ಪ್ರಕೃತಿ ವಿಕೋಪ, ಕೋವಿಡ್ ಹಿನ್ನೆಲೆಯಲ್ಲಿ ನಾಲ್ಕು ವರ್ಷಗಳಿಂದ ಸ್ಥಗಿತಗೊಂಡಿದ್ದ ಹಾಕಿ ಉತ್ಸವಕ್ಕೆ ಈ ವರ್ಷ ಚಾಲನೆ ದೊರೆತಿದ್ದು, 336 ತಂಡ ಪಾಲ್ಗೊಳ್ಳುತ್ತಿರುವುದು ಐತಿಹಾಸಿಕ ದಾಖಲೆ ಎಂದು ಕ್ರೀಡಾ ಸಂಚಾಲಕ ಅಪ್ಪಚೆಟ್ಟೋಳಂಡ ಮನು ಮುತ್ತಪ್ಪ ತಿಳಿಸಿದರು.

‘ಅಪ್ಪಚೆಟ್ಟೋಳಂಡ ಹಾಕಿ ಉತ್ಸವಕ್ಕೆ ₹1.50 ಕೋಟಿಯಿಂದ ₹2 ಕೋಟಿ ಖರ್ಚಾಗಲಿದೆ. ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಹಾಕಿ ಉತ್ಸವವನ್ನು ವ್ಯವಸ್ಥಿತ ಹಾಗೂ ಅದ್ಧೂರಿಯಾಗಿ ಆಚರಿಸಲು ಸಕಲ ಸಿದ್ಧತೆ ನಡೆಸಲಾಗಿದೆ’ ಎಂದು ಹೇಳಿದರು.

ಈ ಸಂದರ್ಭದಲ್ಲಿ ತಾಂತ್ರಿಕ ನಿರ್ದೇಶಕ ನಾಯಕಂಡ ದೀಪು ಚಂಗಪ್ಪ, ನಾಪೋಕ್ಲು ಲಯನ್ಸ್ ಕ್ಲಬ್ ಅಧ್ಯಕ್ಷ ಮುಕ್ಕಾಟಿರ ವಿನಯ್, ಕಾಟುಮಣಿಯಂಡ ಉಮೇಶ್, ಚೆಂಗೇಟಿರ ಅಚ್ಚಯ್ಯ, ಶಿವಚಾಳಿಯಂಡ ಅಂಬಿ ಕಾರ್ಯಪ್ಪ, ಕ್ರೀಡಾ ಕೂಟದ ವಿವಿಧ ಸಮಿತಿಗಳ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.

ರೋಲಿಂಗ್ ಟ್ರೋಫಿ

ಕೊಡವ ಕೌಟುಂಬಿಕ ಹಾಕಿ ಉತ್ಸವದಲ್ಲಿ ವಿಜೇತರಾಗುವ ಕುಟುಂಬಗಳಿಗೆ ಆಕರ್ಷಕ ಬಹುಮಾನ ನೀಡಲಾಗುತ್ತದೆ. ಪ್ರಥಮ ಬಹುಮಾನ ₹3 ಲಕ್ಷ, ದ್ವಿತೀಯ ಬಹುಮಾನ ₹2 ಲಕ್ಷ, ತೃತೀಯ ಬಹುಮಾನ ₹ 1 ಲಕ್ಷ, ನಾಲ್ಕು ಮತ್ತು ಐದನೇ ಬಹುಮಾನ ತಲಾ ₹50 ಸಾವಿರ ನಗದು ಬಹುಮಾನ ಹಾಗೂ ಆಕರ್ಷಕ ಟ್ರೋಫಿ ನೀಡಲಾಗುತ್ತದೆ. ಹಾಕಿ ಉತ್ಸವದಲ್ಲಿ ಅತ್ಯುತ್ತಮ ಆಟದ ಪ್ರದರ್ಶನ ನೀಡುವ ಐವರು ಆಟಗಾರರಿಗೆ ಕೊಡವ ಸಾಂಪ್ರದಾಯಿಕ ಆಭರಣವಾಗಿ ನೀಡಲಾಗುತ್ತದೆ.

ಕೊಡವ ಕೌಟುಂಬಿಕ ಹಾಕಿ ಉತ್ಸವದ ಜನಕ ಪಾಂಡ ಕುಟ್ಟಪ್ಪನವರ ಹೆಸರಿನಲ್ಲಿ ಒಂದು ಕೆ.ಜಿ ತೂಕದ ಬೆಳ್ಳಿಯ ರೋಲಿಂಗ್ ಟ್ರೋಫಿಯನ್ನು ಕೊಡವ ಹಾಕಿ ಅಕಾಡೆಮಿಯಿಂದ ಕೊಡವ ಕೌಟುಂಬಿಕ ಹಾಕಿ ಉತ್ಸವದ ವಿಜೇತ ತಂಡಕ್ಕೆ ನೀಡಲಾಗುತ್ತದೆ.

‘ಭಾರತೀಯ ಸೇನೆಗೆ ಆಯ್ಕೆ’

ಭಾರತದ ಹಾಕಿ ತಂಡದಲ್ಲಿ ಕೊಡಗಿನ ಯುವಕರು ಇಲ್ಲ. ಸೈನ್ಯದಲ್ಲಿ ಸೇರಲು ಯುವಕರಿಗೆ ಅವಕಾಶ ಕಲ್ಪಿಸಿಕೊಡುವ ಅಗತ್ಯವಿದೆ. ಭಾರತೀಯ ಸೇನೆಯಿಂದ ಆಯ್ಕೆ ಮಾಡುವ ಅಧಿಕಾರಿಗಳನ್ನು ಪಂದ್ಯಾಟಕ್ಕೆ ಕರೆಸಲಾಗುವುದು. ಅವರು ಯುವಕರನ್ನು ಆಯ್ಕೆ ಮಾಡಿ ತರಬೇತಿ ನೀಡಿ ಭಾರತೀಯ ಸೇನೆಗೆ ಆಯ್ಕೆ ಮಾಡಿಕೊಳ್ಳಲಿದ್ದಾರೆ ಎಂದು ಭಾರತ ಕೊಡವ ಹಾಕಿ ಅಕಾಡೆಮಿಯ ಉಪಾಧ್ಯಕ್ಷ ಕುಕ್ಕೆರ ಜಯ ಚಿಣ್ಣಪ್ಪ ತಿಳಿಸಿದರು.

ಕಾರ್ಯಕ್ರಮದ ವಿಶೇಷಗಳು

ಬೆಳಿಗ್ಗೆ 10 ಗಂಟೆಗೆ ಆಕರ್ಷಕ ಸಾಂಸ್ಕೃತಿಕ ಮೆರವಣಿಗೆ

ಕೊಡವ ಕುಟುಂಬಗಳ 23 ಮಂದಿ ಪ್ರತಿನಿಧಿಗಳಿಂದ ಆಕಾಶಕ್ಕೆ ಗುಂಡು ಹಾರಿಸುವ ಮೂಲಕ ಟೂರ್ನಿಗೆ ಸಾಂಪ್ರದಾಯಿಕ ಚಾಲನೆ

ಬೆಳಿಗ್ಗೆ 11.15 ಗಂಟೆಗೆ ಕೊಡವ ಹಾಕಿ ಅಕಾಡೆಮಿ ಮತ್ತು ಅಪ್ಪಚೆಟ್ಟೋಳಂಡ ಹಾಕಿ ಉತ್ಸವದ ಧ್ವಜಾರೋಹಣ

ಬೆಳಿಗ್ಗೆ 11.30 ಗಂಟೆಗೆ 37ನೇ ಕೂರ್ಗ್ ಫೀಲ್ಡ್ ರೆಜಿಮೆಂಟ್ ತಂಡ ಮತ್ತು ಕೊಡವ ಅಕಾಡೆಮಿ ಇಲೆವೆನ್ ತಂಡಗಳ ನಡುವೆ ಪ್ರದರ್ಶನ ಪಂದ್ಯ

ಮಧ್ಯಾಹ್ನ 2.30ಕ್ಕೆ ಇಂಡಿಯಾ ಜೂನಿಯರ್ ಇಲೆವೆನ್ ಮತ್ತು ಕರ್ನಾಟಕ ಇಲೆವೆನ್ ತಂಡಗಳ ನಡುವೆ ಮತ್ತೊಂದು ಪ್ರದರ್ಶನ ಪಂದ್ಯ

***

ನಾಲ್ಕು ವರ್ಷಗಳ ನಂತರ ಹಾಕಿ ಉತ್ಸವ ಆಯೋಜನೆ ಗೊಳ್ಳುತ್ತಿದೆ. ಉತ್ಸವಕ್ಕೆ ಹಾಕಿ ಅಕಾಡೆಮಿಯಿಂದ ಸಂಪೂರ್ಣ ಸಹಕಾರ ನೀಡಲಾಗಿದೆ.

-ಪಾಂಡಂಡ ಕೆ.ಅಪ್ಪಣ್ಣ, ಅಧ್ಯಕ್ಷ, ಕೊಡವ ಹಾಕಿ ಅಕಾಡೆಮಿ

***

ಜಿಲ್ಲೆಯಲ್ಲಿ 252 ಕುಟುಂಬ ಗಳಿದ್ದು, 46 ಕೊಡವ ಕುಟುಂಬಗಳು ಹಾಕಿ ಅಕಾಡೆಮಿಯಲ್ಲಿ ನೋಂದಣಿ ಆಗಿವೆ. ಪ್ರಸಕ್ತ ಪಂದ್ಯಾಟ ದಲ್ಲಿ 336 ತಂಡಗಳು ಪಾಲ್ಗೊಳ್ಳುತ್ತಿವೆ.

-ಕುಲ್ಲೇಟಿರ ಅರುಣ ಬೇಬ, ಹಿರಿಯ ನಿರ್ದೇಶಕ, ಕೊಡವ ಹಾಕಿ ಅಕಾಡೆಮಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT