ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಡವ ವಿವಾಹ ಪದ್ಧತಿ: ನಿರ್ಣಯ ಮಂಡನೆ

‘ಗಂಗಾ ಪೂಜೆ’ ಅಲ್ಲ ‘ಚಾಣ ನೀರ್ ಕೈಪೊ’ – ತಿರಿಬೊಳ್‍ಚ ಕೊಡವ ಸಂಘದ ಸಭೆಯಲ್ಲಿ ನಿರ್ಣಯ
Last Updated 31 ಮಾರ್ಚ್ 2021, 12:14 IST
ಅಕ್ಷರ ಗಾತ್ರ

ಮಡಿಕೇರಿ: ಕೊಡವ ಸಾಂಪ್ರದಾಯಿಕ ವಿವಾಹದಲ್ಲಿ ವಧು ನೀರು ತರುವ ಶಾಸ್ತ್ರವನ್ನು ‘ಗಂಗಾ ಪೂಜೆ’ ಎನ್ನುವ ಬದಲಿಗೆ ‘ಚಾಣ ನೀರ್ ಕೈಪೊ’ ಎಂದು ಹೇಳಬೇಕು ಮತ್ತು ಈ ಶಾಸ್ತ್ರವನ್ನು ಕಡ್ಡಾಯವಾಗಿ ವರನ ಐನ್‍ಮನೆಯಲ್ಲಿ ನಡೆಸುವಂತಾಗಬೇಕು ಎಂಬುದೂ ಸೇರಿದಂತೆ ‘ಕೊಡವ ಮದುವೆಯಲ್ಲಿ ಮೂಡಿ ನೀರೆಡ್ ಪೊ’ ಸಂಪ್ರದಾಯದ ಕುರಿತು ಕಟ್ಟುನಿಟ್ಟಿನ ನಿರ್ಣಯಗಳನ್ನು ತಿರಿಬೊಳ್‍ಚ ಕೊಡವ ಸಂಘದ ವತಿಯಿಂದ ನಡೆದ ಸಭೆಯಲ್ಲಿ ಕೈಗೊಳ್ಳಲಾಗಿದೆ.

ನಗರದ ಕೊಡವ ಸಮಾಜದಲ್ಲಿ ತಿರಿಬೊಳ್‍ಚ ಕೊಡವ ಸಂಘದ ವತಿಯಿಂದ ‘ಕೊಡವ ಮದುವೆಯಲ್ಲಿ ಮೂಡಿ ನೀರೆಡ್ ಪಪೊ’ (ಚಾಣ ನೀರ್ ಕೈಪೊ) ಪದ್ಧತಿಯ ಇಂದಿನ ಕೆಲವು ನ್ಯೂನತೆಗಳ ಕುರಿತು ನಡೆಸಿದ ಕೊಡವ ಮುಖಂಡರ ವಿಚಾರ ಸಂಕಿರಣದಲ್ಲಿ ಕೊಡವ ಸಾಂಪ್ರದಾಯಿಕ ವಿವಾಹದ ಕುರಿತು ಚರ್ಚಿಸಲಾಯಿತು.

ಚಾಣ ನೀರ್ ಕೈಪೊ ಪದ್ಧತಿಯ ಸಂದರ್ಭ ಮದ್ಯ ಬಳಕೆ ನಿಷೇಧಿಸಬೇಕು, ವಧುವಿನ ತಲೆಯ ಮೇಲೆ ನೀರು ಇಟ್ಟ ಒಂದು ಗಂಟೆಯಲ್ಲೇ ನೆಲ್ಲಕ್ಕಿ ನಡುಬಾಡೆಲ್ ನೀರು ತೆಗೆಯಬೇಕು. ಗಂಡಿನ ಸಹೋದರರು (ಮಾಚ್ಚಿಣಂಗ) ಮಾತ್ರ ಆಡುತ್ತ ಕರೆ ತರುವಂತಾಗಬೇಕು, ವಧು ನೀರು ತೆಗೆದುಕೊಂಡು ಹೋಗುವ ಸಂದರ್ಭವೂ ಮದ್ಯಪಾನ ಸೇವಿಸುವಂತಿಲ್ಲ, ಯಾರೂ ಅಡ್ಡಿಪಡಿಸುವಂತಿಲ್ಲ.

ವಧು ತಲೆಯಲ್ಲಿ ನೀರು ತೆಗೆದುಕೊಂಡು ಹೋಗುವಾಗ ಕಾವೇರಿ ತಾಯಿಯ ತೀರ್ಥ ಎಂದು ಭಾವಿಸಿ ಶುದ್ಧ ಮುದ್ರಿಕೆಯಲ್ಲಿ ಭಯ, ಭಕ್ತಿಯಿಂದ ಮೌನದಿಂದ ಇರಬೇಕು, ಅಲ್ಲದೇ ವಧುವಿಗೆ ಹೊಸ ಹೆಸರು ಇಡಬೇಕು. ಮತ್ತು ಈ ಸಂದರ್ಭ ವಧುವಿಗೆ ಗುಲಾಬಿ ನೀಡುವುದು, ಕೇಕ್ ಕತ್ತರಿಸುವುದು, ಶಾಂಪೇನ್ ನೀಡುವ ಯಾವುದೇ ಪದ್ಧತಿಯನ್ನು ಅನುಸರಿಸಬಾರದು.

ಈ ಎಲ್ಲಾ ನಿರ್ಣಯಗಳನ್ನು ಕೊಡವ ಸಮಾಜಗಳ ವಧುವಿನ ಕೋಣೆಯಲ್ಲಿ ಕಡ್ಡಾಯವಾಗಿ ಅಳವಡಿಸಿರಬೇಕು. ಎಲ್ಲ ಕೊಡವ ಸಮಾಜ, ಕೊಡವ ಸಂಘ ಸಂಸ್ಥೆಗಳ, ತಕ್ಕ ಮುಖ್ಯಸ್ಥರು, ಒಕ್ಕಡ ಪಟ್ಟೆದಾರರು, ವಧು-ವರರ ಪೋಷಕರು ಕಡ್ಡಾಯವಾಗಿ ನಿರ್ಣಯಗಳನ್ನು ಪಾಲಿಸಬೇಕು. ಕುಟುಂಬದ ಸದಸ್ಯರುಗಳಿಗೆ ಪದ್ಧತಿಯ ಬಗ್ಗೆ ಅರಿವು ಮೂಡಿಸುವಂತಾಗಬೇಕು ಎಂದು ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಯಿತು.

ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ತಿರಿಬೊಳ್‍ಚ ಕೊಡವ ಸಂಘದ ಅಧ್ಯಕ್ಷೆ ಉಳ್ಳಿಯಡ ಡಾಟಿ ಪೂವಯ್ಯ, ‘ಇಡೀ ದೇಶದಲ್ಲಿಯೇ ಅತ್ಯಂತ ವಿಶಿಷ್ಟವಾದ ಕೊಡವಾಮೆ ಪದ್ಧತಿಯನ್ನು ಆದಿ ಕಾಲದಿಂದ ಅತ್ಯಂತ ಶ್ರದ್ಧೆಯಿಂದ ಅನುಸರಿಸಿಕೊಂಡು ಬರಲಾಗುತ್ತಿತ್ತು. ಆದರೆ, ನಾಗರಿಕತೆ ಬದಲಾದಂತೆ ಪದ್ಧತಿಗಳು ಬದಲಾವಣೆಯನ್ನು ಕಾಣುತ್ತಾ ಬಂದಿವೆ. ಕೊಡವ ಸಂಸ್ಕೃತಿ, ಆಚಾರ–ವಿಚಾರಗಳೂ ಇದಕ್ಕೆ ಹೊರತಾಗಿಲ್ಲ. ಆದ್ದರಿಂದ, ಮೂಲ ಸಂಸ್ಕೃತಿ, ಪದ್ಧತಿಯನ್ನು ಮತ್ತೆ ಉಳಿಸಿ ಬೆಳೆಸಬೇಕೆನ್ನುವ ಉದ್ದೇಶದಿಂದ ಕೊಡವ ಸಮಾಜಗಳು ಕಾರ್ಯ ಪ್ರವೃತ್ತವಾಗಿದ್ದು, ಹಲವು ಕೊಡವ ಸಂಘ ಸಂಸ್ಥೆಗಳು, ಕೊಡವ ಪತ್ರಿಕೆಗಳು ಈ ಕಾರ್ಯದಲ್ಲಿ ಕೈಜೋಡಿಸಿವೆ ಎಂದರು.

ಮೂಲ ಪದ್ಧತಿಯ ಕುರಿತು ಕೊಡವ ಕುಟುಂಬಗಳಿಗೂ ಜಾಗೃತಿ ಮೂಡಿಸುವ ಕಾರ್ಯ ಆಗಬೇಕು ಎಂದು ಅಭಿಪ್ರಾಯಪಟ್ಟರು.

ಕೊಡವ ಸಮಾಜಗಳ ಒಕ್ಕೂಟದ ಅಧ್ಯಕ್ಷ ಕಳ್ಳಿಚಂಡ ವಿಷ್ಣು ಕಾರ್ಯಪ್ಪ ಮಾತನಾಡಿ, ‘ಮಗುವಿನ ಜನನದಿಂದಲೇ ಕೊಡವರ ವಿಶಿಷ್ಟ ಪದ್ಧತಿ ಪ್ರಾರಂಭವಾಗಲಿದ್ದು, ಎಲ್ಲೂ ಕಾಣಸಿಗದ ಈ ಸಂಸ್ಕೃತಿ ಉಳಿಸುವ ಕಾರ್ಯಕ್ಕೆ ಎಲ್ಲಾ ಕೊಡವ ಸಮಾಜಗಳು ಮುಂದಾಗಬೇಕು’ ಎಂದು ಕರೆ ನೀಡಿದರು.

ತಿರಿಬೊಳ್‍ಚ ಕೊಡವ ಸಂಘದ ಪ್ರಮುಖ ಉಳ್ಳಿಯಡ ಪೂವಯ್ಯ ಮಾತನಾಡಿ, ಮದುವೆ ಪದ್ಧತಿ ಕೊಡವ ಸಂಸ್ಕೃತಿಯ ಬಹುಮುಖ್ಯ ಭಾಗವಾಗಿದ್ದು, ಇತ್ತೀಚಿನ ಆಧುನಿಕ ಯುಗದಲ್ಲಿ ಕೊಡವ ವಿವಾಹದಲ್ಲಿ ವಧು ನೀರು ತರುವ ಸಂದರ್ಭದಲ್ಲಿ ಮೂಲ ಪರಂಪರೆಗೆ ಒತ್ತುಕೊಡದೇ ಪಾಶ್ಚಿಮಾತ್ಯ ಆಡಂಬರಕ್ಕೆ ಮಾರು ಹೋಗುತ್ತಿರುವುದು ವಿಷಾದನೀಯ ಎಂದರು.

ಮಡಿಕೇರಿ ಕೊಡವ ಸಮಾಜದ ಅಧ್ಯಕ್ಷ ಕೊಂಗಂಡ ಎಸ್.ದೇವಯ್ಯ, ಅಮ್ಮತ್ತಿ ಕೊಡವ ಸಮಾಜದ ಅಧ್ಯಕ್ಷ ಕೂಡಂಡ ಬೋಸ್ ದೇವಯ್ಯ, ಮೈಸೂರು ಕೊಡವ ಸಮಾಜದ ಅಧ್ಯಕ್ಷ ಮಿದೇರಿರ ಪ್ರಕಾಶ್, ಮಕ್ಕಂದೂರು ಕೊಡವ ಸಮಾಜದ ನಿರ್ದೇಶಕ ಕಾಳಚಂಡ ಪವನ್, ತಿರಿಬೊಳ್ಚ ಕೊಡವ ಸಂಘದ ನಿರ್ದೇಶಕ ಚೆಯ್ಯಂಡ ಸತ್ಯ ಗಣಪತಿ, ಕೊಡವ ದಿನಬಂಧು ಚಾರಿಟಬಲ್ ಟ್ರಸ್ಟ್‌ನ ಅಧ್ಯಕ್ಷ ಕಡ್ಲೇರ ಕಾರ್ಯಪ್ಪ, ಪ್ರಮುಖರಾದ ಪುಡಿಯಂಡ ಮುತ್ತಣ್ಣ, ಮೂಡೇರ ದಮಯಂತಿ ಕಾವೇರಮ್ಮ, ಅಳಮಂಡ ಶಾಂತಿ ದೇವಯ್ಯ, ಪಾರ್ಥ ಚಿಣ್ಣಪ್ಪ, ಪರುವಂಡ ಪೊನ್ನಪ್ಪ, ಮುಂಡೋಟ್ಟಿರ ಜಯಾಚಿಣ್ಣಪ್ಪ, ಅಜ್ಜಮಾಡ ರಮೇಶ್ ಕುಟ್ಟಪ್ಪ, ಕೂಪದಿರ ಶಾರದನಂಜಪ್ಪ, ಚೋಕಿರ ಅನಿತಾ ದೇವಯ್ಯ, ಕನ್ನಂಡ ಕವಿತಾದೇವಯ್ಯ, ರಾಜೀವ್ ಬೋಪಯ್ಯ, ಕೊಕ್ಕಲೆಮಾಡ ಮಂಜು ಚಿಣ್ಣಪ್ಪ ಮತ್ತಿತತರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT