ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಡಿಕೇರಿ: ಕೋಲಾಟ, ಉಮ್ಮತ್ತಾಟ್‌ ಸಂಭ್ರಮ

ಹುತ್ತರಿಯ ಮರುದಿನ ನಾಡಿನ ಮಂದ್‌ಗಳಲ್ಲಿ ಸಂತಸದ ಕಲರವ
Last Updated 9 ಡಿಸೆಂಬರ್ 2022, 11:25 IST
ಅಕ್ಷರ ಗಾತ್ರ

ಮಡಿಕೇರಿ: ಹುಣ್ಣಿಮೆಯ ಬೆಳದಿಂಗಳಲ್ಲಿ ಹುತ್ತರಿಯನ್ನು ಆಚರಿಸಿದ ಕೊಡಗಿನ ಜನರು ಮರುದಿನ ಗುರುವಾರ ನಾಡಿನ ಮಂದ್‌ಗಳಲ್ಲಿ ವಿವಿಧ ಬಗೆಯ ಕೊಡವ ಜನಪದ ನೃತ್ಯಗಳನ್ನು ಪ್ರದರ್ಶಿಸಿ ಸಂಭ್ರಮಿಸಿದರು. ಎಲ್ಲೆಲ್ಲೂ ಸಂಭ್ರಮದ ಹೊನಲು ಹರಿದಿತ್ತು. ಕೋಲಾಟವನ್ನು ಪುರುಷರು ಪ್ರದರ್ಶಿಸಿದರೆ, ಮಹಿಳೆಯರು ಉಮ್ಮತ್ತಾಟ್ ಪ್ರದರ್ಶಿಸಿ ಸಂತಸಪಟ್ಟರು. ಮಕ್ಕಳೂ ಇದರಲ್ಲಿ ಭಾಗಿಯಾಗುವ ಮೂಲಕ ಕೊಡವ ಸಂಸ್ಕೃತಿಯ ಮುಂದುವರಿಕೆ ಕುರಿತು ಭರವಸೆಯ ಬೀಜಗಳನ್ನು ಬಿತ್ತಿದರು.

ಇಲ್ಲಿನ ಐತಿಹಾಸಿಕ ಕೋಟೆ ಆವರಣದಲ್ಲಿ ಓಂಕಾರೇಶ್ವರ ದೇಗುಲ, ಪಾಂಡೀರ ಕುಟುಂಬಸ್ಥರು, ಕೊಡವ ಸಮಾಜದ ವತಿಯಿಂದ ನಡೆದ ‘ಹುತ್ತರಿ ಕೋಲಾಟ’ ಜನಮನಸೂರೆಗೊಂಡಿತು.

ಪಾಂಡೀರ ಕುಟುಂಬದವರು ಕೋಲಾಟ, ಬೊಳಕಾಟ್, ಪಾಲಿಪಟ್, ಉಮ್ಮತ್ತಾಟ್ ಪ್ರದರ್ಶಿಸಿದರೆ, ಮಡಿಕೇರಿ ಕೊಡವ ಸಮಾಜದವರು ಕೋಲಾಟ, ಉಮ್ಮತ್ತಾಟ್, ಪರೆಯಕಳಿಯನ್ನು ಪ್ರದರ್ಶಿಸಿದರು. ಪ್ರದರ್ಶನದ ಕೊನೆಯಲ್ಲಿ ಸಮಾರಂಭದಲ್ಲಿ ಸೇರಿದ್ದ ಎಲ್ಲರೂ ಸಂಗೀತಕ್ಕೆ ಹೆಜ್ಜೆ ಹಾಕುವ ಮೂಲಕ ಸಂಭ್ರಮಿಸಿದ್ದು ವಿಶೇಷ ಎನಿಸಿತು.

ಮಧ್ಯಾಹ್ನ ಭೋಜನದ ನಂತರ ಆರಂಭವಾದ ಈ ವಿಶೇಷ ಕಾರ್ಯಕ್ರಮ ಸಂಜೆ ಸೂರ್ಯ ಅಸ್ತಮಿಸುವವರೆಗೂ ನಡೆಯಿತು. ಕೊಡವ ಸಾಂಪ್ರದಾಯಿಕ ವೇಷಭೂಷಣ ಧರಿಸಿ ಎಲ್ಲರೂ ಭಾಗಿಯಾಗಿದ್ದರು. ಬಂದಿದ್ದವರಿಗೆ ಉಪಾಹಾರದ ವ್ಯವಸ್ಥೆಯೂ ಇತ್ತು.

ಹಿರಿಯ ಮುಖಂಡರಾದ ಪಾಂಡೀರ ಮುತ್ತಣ್ಣ, ರಮೇಶ್ ಹೊಳ್ಳ, ಕೊಡವ ಸಮಾಜದ ನಿರ್ದೇಶಕ ವಿಜು ದೇವಯ್ಯ ಹಾಗೂ ಇತರರು ಇದ್ದರು.

ನಾಡಮಂದ್‌ ಕಲರವ

ನಾಪೋಕ್ಲು: ಇಲ್ಲಿನ ವಿವಿಧ ಮಂದ್‌ಗಳಲ್ಲಿ ಹುತ್ತರಿ ಕೋಲಾಟದ ಸದ್ದು ಮಾರ್ದನಿಸಿತು. ಭಾಗಮಂಡಲದ ಕಾವೇರಿ ಕೋಲ್‌ಮಂದ್‌ನಲ್ಲಿ ಗುರುವಾರ ನಾಲ್ಕು ಗ್ರಾಮದವರಿಂದ ಹುತ್ತರಿ ಕೋಲಾಟ ಸಂಭ್ರಮದಿಂದ ನಡೆಯಿತು.

ಭಾಗಮಂಡಲದ ತಾವೂರು, ಚೇರಂಗಾಲ, ಕೋರಂಗಾಲ ಮತ್ತು ತಣ್ಣಿಮಾನಿ ಗ್ರಾಮಸ್ಥರು ಒಟ್ಟಾಗಿ ಕಾವೇರಿ ಹಿರಿಯ ಮಾನಿಮಂದ್‌ನಲ್ಲಿ ಹುತ್ತರಿ ಕೋಲಾಟ ನಡೆಸಿದರು. ತಾವೂರು ಗ್ರಾಮದ ಮಹಿಷಾಸುರ ಮರ್ದಿನಿ ದೇವಾಲಯದ ತಕ್ಕರಾದ ಕುರುಂಜಿ ದೇವಯ್ಯ, ಚೇರಂಗಾಲ ಗ್ರಾಮದ ಸಿರಕಜ್ಜೆ ಸುಂದರ, ತಣ್ಣಿಮಾನಿ ಭಗವತಿ ದೇವಾಲಯದ ತಕ್ಕರಾದ ದಂಡಿನ ರಮೇಶ್ ಹಾಗೂ ಕೋರಂಗಾಲ ಗ್ರಾಮದ ಸುಬ್ರಹ್ಮಣ್ಯ ದೇವಾಲಯದ ನಂಗಾರು ವಿಜಯ ನೇತೃತ್ವದಲ್ಲಿ ಹುತ್ತರಿಕೋಲು ನಡೆಯಿತು.

ಬಳಿಕ ಭಾಗಮಂಡಲಕ್ಕೆ ಆಗಮಿಸಿ ತ್ರಿವೇಣಿ ಸಂಗಮದಲ್ಲಿ ಎಲ್ಲರೂ ಸೇರಿ ಭಗಂಡೇಶ್ವರ ದೇವಾಲಯಕ್ಕೆ ತೆರಳಿದರು. ಅಲ್ಲಿಂದ ವಾದ್ಯಗೋಷ್ಠಿಯೊಂದಿಗೆ ತೆರಳಿದ ಮಂದಿ ಎಂಟು ಸುತ್ತಿನ ಕೋಲಾಟ ನಡೆಸಿದರು. ನಂತರ, ಭಾಗಮಂಡಲದ ಭಗಂಡೇಶ್ವರ ದೇವಾಲಯಕ್ಕೆ ಹಿಂತಿರುಗಿ ಕೋಲು ಒಪ್ಪಿಸಲಾಯಿತು. ತಣ್ಣಿಮಾನಿ ಗ್ರಾಮದ ಭಗವತಿ ದೇವಾಲಯದಲ್ಲಿ ಶುಕ್ರವಾರ ಹುತ್ತರಿ ಕೋಲು ನಡೆದು ಅಲ್ಲಿಯೇ ಕೋಲು ಒಪ್ಪಿಸುವ ಸಂಪ್ರದಾಯವಿದೆ.

ಹುತ್ತರಿ ಹಬ್ಬವನ್ನು ಕಕ್ಕಬ್ಬೆಯ ಶ್ರೀ ಪಾಡಿ ಇಗ್ಗುತಪ್ಪ ದೇವಾಲಯದಲ್ಲಿ, ಶ್ರದ್ಧೆ ಹಾಗೂ ಭಕ್ತಿಪೂರ್ವಕವಾಗಿ ಬುಧವಾರ ಆಚರಿಸಲಾಯಿತು. ಕಕ್ಕಬ್ಬೆಯ ಪಾಡಿ ಸನ್ನಿಧಿಯಲ್ಲಿ ಸಂಪ್ರದಾಯದಂತೆ ಪೊಂಗೇರ, ಕನಿಯಂಡ, ಕೋಲೆಯಂಡ, ಬೊಳ್ಳನಮಂಡ ಮತ್ತು ಐರಿರ ಮನೆಯವರು ಹುತ್ತರಿ ಆಚರಣೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಐದು ಮನೆತನದ ಕುಟುಂಬದ ಮಹಿಳೆಯರು ತಳಿಯಕ್ಕಿ ಬೊಳಕ್‌ನೊಂದಿಗೆ ಬಂದು ದೇವಾಲಯಕ್ಕೆ ಪ್ರದಕ್ಷಿಣೆಗೈದರು. ಹುತ್ತರಿ ಹಬ್ಬದ ಅಂಗವಾಗಿ ದೇವಾಲಯದಲ್ಲಿ ಪೊಂಗೇರ ಉಲ್ಲಾಸ್ ನಾಡಿನ ಸುಭಿಕ್ಷೆಗಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಪೊಲಿ ಪೊಲಿಯೇ ದೇವಾ ಎಂಬ ಉದ್ಘೋಷದೊಂದಿಗೆ ಕದಿರು ಕತ್ತರಿಸಿ ಇಗ್ಗುತ್ತಪ್ಪ ಸನ್ನಿಧಿಯಲ್ಲಿ ಪ್ರದಕ್ಷಿಣೆ ಬಂದು ಕದಿರನ್ನು ನಮಸ್ಕಾರ ಮಂಟಪದಲ್ಲಿಟ್ಟು ವಿಶೇಷ ಧಾನ್ಯಲಕ್ಷ್ಮಿ ಪೂಜೆ ನೆರವೇರಿಸಲಾಯಿತು.

ಅರ್ಚಕರಾದ ಕುಶ ಭಟ್ ಜಗದೀಶ್, ಶ್ರೀಕಾಂತ್ ಹೆಬ್ಬಾರ್, ಗುರುಪ್ರಸಾದ್ ಪೂಜೆ ನೆರವೇರಿಸಿದರು. ಶನಿವಾರ ನಾಪೋಕ್ಲುವಿನ ಬಿದ್ದಾಟಂಡ ವಾಡೆಯಲ್ಲಿ, ಮೂರ್ನಾಡಿನ ಪಾಂಡಾಣೆ ನಾಡಮಂದ್‌ನಲ್ಲಿ ಮುಖ್ಯ ಕೋಲಾಟ ಜರುಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT