ಶುಕ್ರವಾರ, ಫೆಬ್ರವರಿ 3, 2023
23 °C
ದಂಡಿನ ಮಾರಿಯಮ್ಮ ದೇಗುಲ ದ್ವಿತೀಯ, ಚೌಟಿ ಮಾರಿಯಮ್ಮ, ಕೋಟೆ ಮಾರಿಯಮ್ಮ ತೃತೀಯ

ಕೋಟೆ ಗಣಪತಿ ದೇಗುಲಕ್ಕೆ ಪ್ರಥಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಡಿಕೇರಿ: ದಸರಾ ದಶಮಂಟಪಗಳ ಶೋಭಾಯಾತ್ರೆಯಲ್ಲಿ ಕೋಟೆ ಗಣಪತಿ ದೇಗುಲ ಪ್ರಥಮ ಸ್ಥಾನ (82 ಅಂಕ), ದಂಡಿನ ಮಾರಿಯಮ್ಮ ದೇಗುಲ ದ್ವಿತೀಯ ಸ್ಥಾನ ಪಡೆದರೆ (79 ಅಂಕ), ಕುಂದೂರುಮೊಟ್ಟೆ ಚೌಟಿ ಮಾರಿಯಮ್ಮ (78) ಹಾಗೂ ಕೋಟೆ ಮಾರಿಯಮ್ಮ (78) ತೃತೀಯ ಸ್ಥಾನವನ್ನು ಹಂಚಿಕೊಂಡವು.

ಪ್ರಥಮ ಸ್ಥಾನಕ್ಕೆ 24 ಗ್ರಾಂ, ದ್ವಿತೀಯ ಸ್ಥಾನಕ್ಕೆ 20 ಗ್ರಾಂ ಹಾಗೂ ತೃತೀಯ ಸ್ಥಾನಕ್ಕೆ 16 ಗ್ರಾಂ ಚಿನ್ನದ ನಾಣ್ಯಗಳನ್ನು ಬಹುಮಾನವಾಗಿ ನೀಡಲಾಯಿತು ಎಂದು ದಸರಾ ದಶಮಂಟಪೋತ್ಸವ ಸಮಿತಿ ಅಧ್ಯಕ್ಷ ಮನು ಮಂಜುನಾಥ್ ತಿಳಿಸಿದರು.

ಬಹಳ ವಿಜೃಂಭಣೆಯಿಂದ ವಿಭಿನ್ನ ಕಥಾವಸ್ತುಗಳನ್ನು ಆಯ್ದುಕೊಂಡು ಹೊಸ ಹೊಸ ತಂತ್ರಜ್ಞಾನಗಳನ್ನು ಬಳಕೆ ಮಾಡಿಕೊಂಡು ಎಲ್ಲ ಹತ್ತು ದಶಮಂಟಪಗಳ ಸಮಿತಿಯವರು ತಮ್ಮ ತಮ್ಮ ಮಂಟಪಗಳನ್ನು ರೂಪಿಸಿದ್ದರು. ಪ್ರದರ್ಶನವೂ ಜಿದ್ದಾಜಿದ್ದಿನಿಂದ ಕೂಡಿತ್ತು. ತೀರ್ಪುಗಾರರಿಗೂ ಈ ಬಾರಿಯ ಪ್ರದರ್ಶನ ಸವಾಲಾಗಿಯೇ ಪರಿಣಮಿಸಿತ್ತು.

ತನ್ನ 46ನೇ ವರ್ಷದ ದಸರಾ ದಶಮಂಟಪೋತ್ಸವದಲ್ಲಿ ಪಾಲ್ಗೊಳ್ಳುತ್ತಿರುವ ಕೋಟೆ ಮಹಾಗಣಪತಿ ದೇಗುಲ ಸಮಿತಿಯು ‘ಮಹಾಗಣಪತಿಗೆ ಸಿಂಧೂರ ಗಣಪತಿ ಎಂಬ ನಾಮ ಪ್ರಾಪ್ತಿ’ ಕಥಾಪ್ರಸಂಗವನ್ನು ಈ ಬಾರಿ ಪ್ರಸ್ತುತಪಡಿಸಿತ್ತು. ಹೆಚ್ಚಿನ ಜನರು ಕೇಳರಿಯದಂತಹ ಕಥಾವಸ್ತುವಿನಿಂದಲೇ ಆರಂಭದಿಂದಲೂ ಈ ಮಂಟಪ ಕುತೂಹಲಗಳನ್ನು ಕೆರಳಿಸಿತ್ತು.

92ನೇ ವರ್ಷದ ದಸರಾ ದಶಮಂಟಪೋತ್ಸವದಲ್ಲಿ ಭಾಗವಹಿಸುತ್ತಿರುವ ದಂಡಿನ ಮಾರಿಯಮ್ಮ ದೇಗುಲ ಸಮಿತಿಯವರು ‘ಭೂಲೋಕ ರಕ್ಷಣೆಗೆ ಪಾರ್ವತಿಯಿಂದ ಶಾಕಾಂಬರಿ ರೂಪ’ ಧರಿಸಿದ ಕಥಾನಕವನ್ನು ತಮ್ಮ ಮಂಟಪದಲ್ಲಿ ಪ್ರದರ್ಶಿಸಿ, ದ್ವಿತೀಯ ಸ್ಥಾನ ಅಲಂಕರಿಸುವಲ್ಲಿ ಯಶಸ್ವಿಯಾದರು.

47ನೇ ವರ್ಷದ ಮಹೋತ್ಸವದಲ್ಲಿ ಪಾಲ್ಗೊಳ್ಳುತ್ತಿರುವ ಕೋಟೆ ಮಾರಿಯಮ್ಮ ದೇಗುಲ ಸಮಿತಿಯು ‘ಸೀತಾಪಹರಣ ಮತ್ತು ರಾವಣನ ಸಂಹಾರ’ ಕಥಾಪ್ರಸಂಗವನ್ನು ಪ್ರಸ್ತುತಪಡಿಸಿದರೆ, ತನ್ನ 49ನೇ ವರ್ಷದ ಮಂಟಪೋತ್ಸವದಲ್ಲಿ ಕುಂದೂರುಮೊಟ್ಟೆ ಚೌಟಿಮಾರಿಯಮ್ಮ ದೇಗುಲ ಸಮಿತಿಯು ‘ಅಂಧಕಾಸುರರ ವಧೆ’ ಕಥಾವಸ್ತುವನ್ನು ಪ್ರಸ್ತುತಪಡಿಸಿ ತೃತೀಯ ಸ್ಥಾನ ಗಳಿಸಿದರು.

ಅತ್ಯಂತ ಹೆಚ್ಚು ಇತಿಹಾಸ ಹೊಂದಿರುವ ಪೇಟೆ ಶ್ರೀರಾಮ ಮಂದಿರವು ‘ಶಿವದರ್ಶನ’ ಮಂಟಪವನ್ನು, 104ನೇ ವರ್ಷದಲ್ಲಿ ಪಾಲ್ಗೊಳ್ಳುತ್ತಿರುವ ದೇಚೂರು ಶ್ರೀರಾಮಮಂದಿರವು ‘ಮಧುಕೈಟಭರ ವಧೆ’ ಕಥಾಪ್ರಸಂಗವನ್ನು, 60ನೇ ವರ್ಷದ ದಸರಾ ಮಹೋತ್ಸವ ಆಚರಿಸುತ್ತಿರುವ ಚೌಡೇಶ್ವರಿ ಬಾಲಕ ಮಂಡಳಿಯು ‘ಶುಂಭ ನಿಶುಂಭರ ಸಂಹಾರ’ ಕಥಾ ಪ್ರಸಂಗವನ್ನು, 59ನೇ ವರ್ಷದ ಕಂಚಿ ಕಾಮಾಕ್ಷಿ ದೇಗುಲವು ‘ಗೋಮಾತೆಯ ಮಹಾತ್ಮೆ’ ಕಥಾಪ್ರಸಂಗವನ್ನು, 48ನೇ ವರ್ಷದ ಕೋದಂಡರಾಮ ಮಂದಿರವು ‘ಶಿವ ಪುತ್ರ ಕಾರ್ತಿಕೇಯನಿಂದ ತಾರಕಾಸುರನ ವಧೆ’ ಪ್ರಸಂಗವನ್ನು ಹಾಗೂ 27ನೇ ವರ್ಷದಿಂದ ಮಹೋತ್ಸವದಲ್ಲಿ ಪಾಲ್ಗೊಳ್ಳುತ್ತಿರುವ ಕರವಲೆ ಭಗವತಿ ಮಹಿಷ ಮರ್ಧಿನಿ ದೇಗುಲವು ‘ಗಣಪತಿಯಿಂದ ಗಜಾಸುರನ ಸಂಹಾರ’ ಕಥಾಪ್ರಸಂಗವನ್ನು ಪ್ರಸ್ತುತಪಡಿಸಿ, ಜನಮನ್ನಣೆ ಗಳಿಸಿದವು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು