ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷಿಯಲ್ಲಿ ಸಂತೃಪ್ತ ಬದುಕು

Last Updated 1 ನವೆಂಬರ್ 2018, 19:30 IST
ಅಕ್ಷರ ಗಾತ್ರ

ಶನಿವಾರಸಂತೆ: ‘ಮಹಾತ್ಮ ಗಾಂಧಿ ಕಂಡ ರಾಮರಾಜ್ಯದ ಕನಸು ಕೃಷಿಯಿಂದಲೇ ನನಸಾಗಬೇಕು. ಯುವಜನರು ಹಳ್ಳಿಗಳಲ್ಲೇ ಉಳಿದು ಇಸ್ರೇಲ್‌ ಮಾದರಿ ಕೃಷಿ ಮಾಡಿದರೆ ಕೃಷಿಯಿಂದ ಹೆಚ್ಚು ಲಾಭ ಪಡೆಯಲು ಸಾಧ್ಯವಿದೆ’.

–ಇದು ಶನಿವಾರಸಂತೆಯಿಂದ 5 ಕಿ.ಮೀ. ದೂರದ ಕಳಲೆ ಗ್ರಾಮದ ಅವಿಭಕ್ತ ಕುಟುಂಬದ ಕೃಷಿಕ ಕೃಷ್ಣೇಗೌಡರ ಆತ್ಮವಿಶ್ವಾಸದ ಮಾತು.

ಪಟೇಲ್ ಮನೆತನದ ದಿವಂಗತ ತಮ್ಮೇಗೌಡ- ಗೌರಮ್ಮ ದಂಪತಿಗೆ ಆರು ಮಂದಿ ಹೆಣ್ಣು ಮಕ್ಕಳು ಹಾಗೂ ಮೂವರು ಪುತ್ರರು.

ಎಸ್ಸೆಸ್ಸೆಲ್ಸಿ ವಿದ್ಯಾಭ್ಯಾಸ ಮಾಡಿರುವ ಮೂವರು ಪುತ್ರರೂ ತಂದೆಯನ್ನೇ ಆದರ್ಶವಾಗಿಸಿಕೊಂಡು ಕೃಷಿಯತ್ತ ಒಲವು ತೋರಿದರು.

ನಾಲ್ಕು ತಲೆಮಾರಿನಿಂದ ಕೃಷಿಯನ್ನೇ ಅವಲಂಬಿಸಿದ್ದು ಅನ್ನದ ಬಟ್ಟಲನ್ನು ತುಂಬಿಸಿಕೊಂಡು ಸಂತೃಪ್ತಿ ಬದುಕನ್ನು ಸಾಗಿಸುತ್ತಿದ್ದಾರೆ.

ಅವಿಭಕ್ತ ಕುಟುಂಬಗಳು ಕಣ್ಮರೆ ಆಗುತ್ತಿರುವ ಕಾಲಘಟ್ಟದಲ್ಲಿ ಈ ಅವಿಭಕ್ತ ಕುಟುಂಬದ ಸದಸ್ಯರು 45 ಎಕರೆ ಕಾಫಿತೋಟ-ಗದ್ದೆಯಲ್ಲಿ ಕೂಲಿ ಕಾರ್ಮಿಕರ ಜತೆಗೆ ದುಡಿಯುತ್ತಾರೆ. ಸಾವಯವದೊಂದಿಗೆ ರಾಸಾಯನಿಕವಾಗಿಯೂ ಕೃಷಿ ಮಾಡುತ್ತಾ ಅಭಿವೃದ್ಧಿ ಕಾಣುತ್ತಿದ್ದಾರೆ.

ಕೃಷಿ ಮಳೆಯಾಶ್ರಿತವಾಗಿದ್ದು ಕೊಳವೆ ಬಾವಿ ಅನುಕೂಲತೆಯೂ ಇದೆ. ಗದ್ದೆಯಲ್ಲಿ ರಾಜಮುಡಿ, ವಿಎನ್‌ಆರ್ ಹಾಗೂ ಸಾಂಪ್ರದಾಯಿಕ ತಳಿ ಚಿಪ್ಪುಗ ಭತ್ತವನ್ನು ಬೆಳೆಯುತ್ತಾರೆ. ತೋಟದಲ್ಲಿ ಕಾಫಿ, ಕಾಳುಮೆಣಸು, ಶುಂಠಿ, ಕಿತ್ತಳೆ ಜತೆಗೆ ಅಡಿಕೆಯನ್ನೂ ಸಮೃದ್ಧಿಯಾಗಿ ಬೆಳೆದಿದ್ದಾರೆ. ಹಳೆ ತಳಿ ಅರೇಬಿಕಾ 795 ನಶಿಸಿದ್ದು ಕಟವಾಯಿ, ಚಂದ್ರಗಿರಿ, ಹೈಬ್ರೀಡ್‌ ಕಾಫಿ- ನಂ.6, ರೋಬಸ್ಟ್ ಬೆಳೆಯುತ್ತಾರೆ.

ಈ ಅವಿಭಕ್ತ ಕುಟುಂಬ ಹೈನುಗಾರಿಕೆಯಲ್ಲೂ ತೊಡಗಿದೆ. ಜಾನುವಾರುಗಳು, ಹಂದಿ, ಕುರಿ, ಕೋಳಿ ಸಾಕಾಣಿಕೆಯೂ ಅನ್ನದ ಬಟ್ಟಲನ್ನು ತುಂಬಿಸುತ್ತಿದೆ. ಜೀವನ ನಿರ್ವಹಣೆಯೊಂದಿಗೆ ಕೃಷಿಯಿಂದ ಅಭಿವೃದ್ಧಿಯನ್ನೂ ಕಾಣುತ್ತಿದೆ.

‘ನೀರಿನ ವ್ಯವಸ್ಥೆ ಚೆನ್ನಾಗಿದ್ದರೆ ಇಳುವರಿ ಪಡೆದು ಆದಾಯ ಗಳಿಸಬಹುದು. ಬೆಳೆಗೆ ವೈಜ್ಞಾನಿಕ ಬೆಂಬಲ ಬೆಲೆ ಸಿಗಬೇಕು. ಖರ್ಚು-ವೆಚ್ಚ ಕಳೆದು ವರ್ಷಕ್ಕೆ ₹ 5ರಿಂದ ₹ 6 ಲಕ್ಷ ಉಳಿತಾಯ ಆಗಲಿದೆ’ ಎಂದು ಕೃಷ್ಣೇಗೌಡ ಹೇಳುತ್ತಾರೆ.

ಕಾರ್ಮಿಕರ ಕೊರತೆ ಈ ಅವಿಭಕ್ತ ಕುಟುಂಬವನ್ನೂ ಕಾಡುತ್ತಿದೆ. ಸ್ಥಳೀಯವಾಗಿ ತೋಟ ಕೆಲಸಕ್ಕೆ ಕಾರ್ಮಿಕರು ಸಿಗುತ್ತಿಲ್ಲ. ಅಸ್ಸಾಂ, ಬಿಹಾರ ಮೂಲದವರನ್ನು ಕೂಲಿ ಕಾರ್ಮಿಕ ಕೆಲಸಗಳಿಗೆ ಕರೆಯಲಾಗುತ್ತಿದೆ’ ಎನ್ನುತ್ತಾರೆ ಪ್ರೇಮ ಕುಮಾರ್, ಜಯದೇವ್ ಸಹೋದರರು.

‘ಹೊಸ ಕೃಷಿ ಪದ್ಧತಿಯಲ್ಲಿ ಯಂತ್ರಗಳ ಬಳಕೆಯಿಂದ ಶ್ರಮ ಮತ್ತು ಸಮಯ ಉಳಿಯಲಿದೆ. ಕಾರ್ಮಿಕರ ಕೊರತೆಯೂ ನೀಗುತ್ತದೆ. ಸ್ವಾಭಿಮಾನದಿಂದ ಕೃಷಿಯಲ್ಲಿ ತೊಡಗಿಸಿಕೊಳ್ಳುವ ರೈತನಲ್ಲಿ ನೈತಿಕತೆ ಉಳಿಯುತ್ತದೆ. ಶಿಕ್ಷಣದ ಜತೆ ಕೃಷಿಯನ್ನು ಅನುಸರಿಸಿದರೆ ಕೃಷಿ ಅಭಿವೃದ್ಧಿ ಹೊಂದುತ್ತದೆ’ ಎಂಬ ಅಭಿಪ್ರಾಯಪಡುತ್ತಾರೆ.

ಹಳೆ ಬೇರು-ಹೊಸ ಚಿಗುರು ಎಂಬಂತೆ ಕೃಷ್ಣೇಗೌಡರ ಅವಿಭಕ್ತ ಕುಟುಂಬ ಹಳೆಯದರ ಜತೆ ಹೊಸ ಕೃಷಿ ಪದ್ಧತಿಯನ್ನು ಅನುಸರಿಸುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT