ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಟ್ಟಡ ಪರಿಶೀಲನೆ: ಶಾಸಕರ ಅಸಮಾಧಾನ

ಕುಶಾಲನಗರ: ಸರ್ಕಾರಿ ಆಯುರ್ವೇದ ಆಸ್ಪತ್ರೆ ಕಟ್ಟಡ ಉದ್ಘಾಟನೆ
Last Updated 5 ಏಪ್ರಿಲ್ 2021, 15:03 IST
ಅಕ್ಷರ ಗಾತ್ರ

ಕುಶಾಲನಗರ: ‘ಪಟ್ಟಣದ ಬಿಜಿಎಸ್ ವೃತ್ತದಲ್ಲಿ ನಿರ್ಮಿಸಿರುವ ಸರ್ಕಾರಿ ಆಯುರ್ವೇದ ಮತ್ತು ಹೋಮಿಯೋಪಥಿ ಆಸ್ಪತ್ರೆ ಕಟ್ಟಡ ಕಾಮಗಾರಿ ಯೋಜನೆ ಪ್ರಕಾರ ನಡೆದಿಲ್ಲ’ ಎಂದು ಶಾಸಕ ಎಂ.ಪಿ.ಅಪ್ಪಚ್ಚುರಂಜನ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಕೊಡಗು ಜಿಲ್ಲಾ ಪಂಚಾಯಿತಿ, ಆಯುಷ್ಮಾನ್ ಇಲಾಖೆ ಹಾಗೂ ಪಟ್ಟಣ ಪಂಚಾಯಿತಿ ವತಿಯಿಂದ ಸೋಮವಾರ ನಡೆದ ಕಾರ್ಯಕ್ರಮದಲ್ಲಿ ಶಾಸಕರು ನೂತನ ಸರ್ಕಾರಿ ಆಯುರ್ವೇದ ಮತ್ತು ಹೋಮಿಯೋಪಥಿ ಸಂಯುಕ್ತ ಆಸ್ಪತ್ರೆ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದರು.

ಇದೇ ಸಂದರ್ಭ ಕಟ್ಟಡ ಪರಿಶೀಲನೆ ನಡೆಸಿದ ಶಾಸಕ ರಂಜನ್, ಗುತ್ತಿಗೆದಾರರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

‘ಆಸ್ಪತ್ರೆ ಮುಂಭಾಗದಲ್ಲಿ ಅಂಗವಿಕಲರಿಗೆ ಹಾಗೂ ರೋಗಿಗಳನ್ನು ವೀಲ್‌ಚೇರ್‌ನಲ್ಲಿ ಕರೆದುಕೊಂಡು ಹೋಗಲು ನಿರ್ಮಾಣ ‌ಮಾಡಿರುವ ರ್‍ಯಾಂಪ್ ಅವೈಜ್ಞಾನಿಕವಾಗಿದೆ. ಶೌಚಾಲಯ ಹಾಗೂ ಕೈತೊಳೆಯುವ ತೊಟ್ಟಿಗಳು ಕೂಡ ಕಳಪೆ ಗುಣಮಟ್ಟದಿಂದ ಕೂಡಿವೆ’ ಎಂದು ಜಿ.ಪಂ. ಸಹಾಯಕ ಎಂಜಿನಿಯರ್ ಹಾಗೂ ಗುತ್ತಿಗೆದಾರರನ್ನು ತೀವ್ರ ತರಾಟೆಗೆ ತೆಗೆದುಕೊಂಡರು.

‘ಈ ಕೂಡಲೇ ರ್‍ಯಾಂಪ್‌ ಹಾಗೂ ಮೆಟ್ಟಿಲು ಸೇರಿದಂತೆ ಇನ್ನಿತರೆ ಕಾಮಗಾರಿಯನ್ನು ವ್ಯವಸ್ಥಿತವಾಗಿ ಕೈಗೊಳ್ಳಬೇಕು’ ಎಂದು ಸೂಚನೆ ನೀಡಿದರು.

‘ವಿನೂತನ ಮಾದರಿಯಲ್ಲಿ ಆಸ್ಪತ್ರೆ ಕಟ್ಟಡ ಇರಬೇಕು. ಈ ಹಿನ್ನೆಲೆಯಲ್ಲಿ ಕೆಲವು ಮಾರ್ಪಾಡುಗಳನ್ನು ತ್ವರಿತ ಗತಿಯಲ್ಲಿ ಮಾಡಿ’ ಎಂದು ಎಂಜಿನಿಯರ್ ಹಾಗೂ ಗುತ್ತಿಗೆದಾರರಿಗೆ ಸೂಚನೆ ನೀಡಿದರು.

ಜಿಲ್ಲಾ ಪಂಚಾಯಿತಿ ಸದಸ್ಯೆ ಕೆ.ಪಿ.ಚಂದ್ರಕಲಾ ಮಾತನಾಡಿ, ‘ಆಸ್ಪತ್ರೆ ಕಟ್ಟಡ ಕಾಮಗಾರಿ ಬೇಕಾಬಿಟ್ಟಿಯಾಗಿ ತರಾತುರಿಯಲ್ಲಿ ನಡೆದಿದೆ. ಯೋಜನೆ ಪ್ರಕಾರ ಒಂದೂ ಕೆಲಸ ನಡೆದಿಲ್ಲ. ರ್‍ಯಾಂಪ್‌ ಹೊಸದಾಗಿ ನಿರ್ಮಾಣ ಮಾಡಬೇಕು’ ಎಂದು ಒತ್ತಾಯಿಸಿದರು.

ಶಾಸಕ ರಂಜನ್ ಸುದ್ದಿಗಾರರೊಂದಿಗೆ ಮಾತನಾಡಿ, ‘₹60 ಲಕ್ಷ ವೆಚ್ಚದಲ್ಲಿ ನೂತನ ಆಯುರ್ವೇದ ಆಸ್ಪತ್ರೆ ಕಟ್ಟಡ ನಿರ್ಮಾಣ ಮಾಡಲಾಗಿದೆ. ಆದರೆ, ಕಟ್ಟಡ ಕಾಮಗಾರಿ ಸರಿಯಾಗಿ ನಡೆದಿಲ್ಲ. ಈ ಬಗ್ಗೆ ಸಂಬಂಧಿಸಿದ ಅಧಿಕಾರಿ ಹಾಗೂ ಗುತ್ತಿಗೆದಾರರನ್ನು ತರಾಟೆಗೆ ತೆಗೆದುಕೊಂಡಿದ್ದೇನೆ. ಅಲ್ಲದೆ ಕೆಲವು ಬದಲಾವಣೆ ಮಾಡುವಂತೆ ಸೂಚನೆ ನೀಡಿದ್ದೇನೆ’ ಎಂದರು.

ಸೋಮವಾರಪೇಟೆ ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಪುಷ್ಪಾ ರಾಜೇಶ್, ಉಪಾಧ್ಯಕ್ಷ ಅಭಿಮಾನ್ಯು ಕುಮಾರ್, ಜಿ.ಪಂ.ಸದಸ್ಯೆ ಕೆ.ಆರ್.ಮಂಜುಳಾ, ಪ.ಪಂ. ಅಧ್ಯಕ್ಷ ಬಿ.ಜೈವರ್ಧನ್, ಉಪಾಧ್ಯಕ್ಷೆ ಸುರೇಯಾಬಾನು, ಸ್ಥಾಯಿ ಸಮಿತಿ ಅಧ್ಯಕ್ಷ ಸುರೇಶ್, ಸದಸ್ಯರಾದ ಅಮೃತ್ ರಾಜ್, ಡಿ.ಕೆ.ತಿಮ್ಮಪ್ಪ, ರೂಪಾ ಉಮಾಶಂಕರ್, ಕೆ.ಜಿ.ಮನು, ನಾರಾಯಣ್, ಕೂಡಾ ಅಧ್ಯಕ್ಷ ಚರಣ್, ನಿರ್ದೇಶಕ ಪುಂಡಾರೀಕಾಕ್ಷ, ವೈಶಾಖ್,ಆಡಳಿತ ವೈದ್ಯಾಧಿಕಾರಿ ಡಾ.ಸ್ಮಿತಾ, ಬಿಜೆಪಿಕುಶಾಲನಗರ ಘಟಕದ ಅಧ್ಯಕ್ಷ ಉಮಾಶಂಕರ್, ಮುಖಂಡರಾದ ಕುಮಾರಪ್ಪ, ಬೋಸ್ ಮೊಣಪ್ಪ, ಆರ್.ಕೆ.ಚಂದ್ರು ಮತ್ತಿತರ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT