ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುರಸಭೆಯಾಗಿ ಮೇಲ್ದರ್ಜೆಗೆ: ಪ್ರಸ್ತಾವ ಸಲ್ಲಿಸಲು ತೀರ್ಮಾನ

ಕುಶಾಲನಗರ ಪಟ್ಟಣ ಪಂಚಾಯಿತಿ ಸಾಮಾನ್ಯ ಸಭೆ
Last Updated 18 ಜುಲೈ 2021, 5:41 IST
ಅಕ್ಷರ ಗಾತ್ರ

ಕುಶಾಲನಗರ: ಪಟ್ಟಣ ಪಂಚಾಯಿತಿ ಯನ್ನು ಪುರಸಭೆಯಾಗಿ ಮೇಲ್ದರ್ಜೆ ಗೇರಿಸುವಂತೆ ಹೊಸದಾಗಿ ಪ್ರಸ್ತಾವವನ್ನು ಸರ್ಕಾರಕ್ಕೆ ಸಲ್ಲಿಸಲು ಶುಕ್ರವಾರ ನಡೆದ ಪಟ್ಟಣ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ತೀರ್ಮಾನಿಸಲಾಯಿತು.

ಇಲ್ಲಿನ ಪಟ್ಟಣ ಪಂಚಾಯಿತಿ ಸಭಾಂಗಣದಲ್ಲಿ ಅಧ್ಯಕ್ಷ ಬಿ.ಜೈವರ್ಧನ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ಹಿಂದೆ ಸಲ್ಲಿಸಲಾದ ಪ್ರಾಸ್ತವನೆ ಸಮರ್ಪಕವಾಗಿ ಇಲ್ಲದ ಹಿನ್ನೆಲೆಯಲ್ಲಿ ಹೊಸದಾಗಿ ವರದಿ ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸಲು
ನಿರ್ಧರಿಸಲಾಯಿತು.

‘ಪಟ್ಟಣ ವ್ಯಾಪ್ತಿಯ ಹಲವು ಅಸಮರ್ಪಕ ಬಡಾವಣೆಗಳಲ್ಲಿ ನಿವೇಶನ ಖರೀದಿಸಿದವರು ಸಂಕಷ್ಟ ಅನುಭವಿಸುತ್ತಿದ್ದಾರೆ. ಯಾವುದೇ ಅಭಿವೃದ್ಧಿ ಕಾಣದ ಬಡಾವಣೆಗಳು ಸಮಸ್ಯೆಗಳ ಆಗರವಾಗಿವೆ. ಪಂಚಾಯಿತಿಗೆ ಬರಬೇಕಾದ ಆದಾಯ ನಷ್ಟವಾಗುತ್ತಿದೆ’ ಎಂದು ಸದಸ್ಯರಾದ ವಿ.ಎಸ್.ಆನಂದಕುಮಾರ್, ರೇಣುಕಾ, ಖಲೀಮುಲ್ಲಾ ಆರೋಪಿಸಿದರು.

ಚಂದ್ರಶೇಖರ್ ಬಡಾವಣೆಯಲ್ಲಿ ಉದ್ಯಾನಕ್ಕೆ ಮೀಸಲಿಡದೆ ಅಭಿವೃದ್ಧಿ ಮಾಡಿಲ್ಲ. ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಸದಸ್ಯೆ ರೇಣುಕಾ ಒತ್ತಾಯಿಸಿದರು. ಈ ಸಂದರ್ಭ ಸುದೀರ್ಘ ಚರ್ಚೆ ನಡೆಯಿತು.

ವಿನಾಯಕ ಹಾಗೂ ಚಂದ್ರಶೇಖರ್ ಬಡಾವಣೆಗಳ ಮಾಲೀಕರಿಗೆ ನೋಟಿಸ್ ನೀಡಿ ಬಡಾವಣೆ ಅಭಿವೃದ್ಧಿ ಪಡಿಸುವಂತೆ ಸೂಚನೆ ನೀಡಲು ತೀರ್ಮಾನಿಸಲಾಯಿತು. ಅಭಿವೃದ್ಧಿ ಆಗಿರುವ ಬಡಾವಣೆಗಳಿಗೂ ಹಾಗೂ ಅಭಿವೃದ್ಧಿಪಡಿಸದ ಬಡಾವಣೆಗಳಿಗೂ ಒಂದೇ ನಿಯಮ ಬೇಡ ಎಂದು ಸದಸ್ಯ ಅಮೃತ್ ರಾಜ್ ಹೇಳಿದರು.

ಸದಸ್ಯ ಪ್ರಮೋದ್ ಮುತ್ತಪ್ಪ ಮಾತನಾಡಿ, ‘ಕಳೆದ ಸಭೆಯ ಚರ್ಚೆಗಳು, ನಿರ್ಣಯಗಳು ಸಮರ್ಪ ಕವಾಗಿ ದಾಖಲು ಮಾಡಲಾಗುತ್ತಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಪಟ್ಟಣಕ್ಕೆ ಕೋವಿಡ್ ಲಸಿಕೆ ಹೆಚ್ಚಿನ ಸಂಖ್ಯೆಯಲ್ಲಿ ಪೂರೈಸಲು ಶಾಸಕರ ಗಮನ ಸೆಳೆಯಬೇಕು. ಎರಡನೇ ಡೋಸ್‌ಗೆ ಕಾಯುತ್ತಿರುವವರಿಗಾದರೂ ಅನುಕೂಲ ಒದಗಿಸಿ’ ಎಂದರು.

ಸದಸ್ಯ ಡಿ.ಕೆ.ತಿಮ್ಮಪ್ಪ ಮಾತನಾಡಿ, ‘ಒಳಚರಂಡಿ ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿದೆ. ರಸ್ತೆ ಮಧ್ಯದಲ್ಲಿ ಮ್ಯಾನ್‌ಹೋಲ್‌ಗಳು ಅಪಾಯಕಾರಿ ಸ್ಥಿತಿಯಲ್ಲಿದ್ದು, ವಾಹನ ಸವಾರರ ಜೀವಕ್ಕೆ ಸಂಚಕಾರ ಉಂಟುಮಾಡಲಿದೆ. ಈ ಬಗ್ಗೆ ಅಗತ್ಯ ಕ್ರಮವಹಿಸಿ’ ಎಂದು ಒಳಚರಂಡಿ ಮಂಡಳಿ ಎಂಜಿನಿಯರ್‌ಗೆ ಸೂಚಿಸಿದರು.

ಸಭೆಯಲ್ಲಿ ಪಟ್ಟಣ ಪಂಚಾಯಿತಿ ಉಪಾಧ್ಯಕ್ಷೆ ಸುರಯ್ಯಭಾನು, ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಬಿ.ಸುರೇಶ್, ಮುಖ್ಯಾಧಿಕಾರಿ ಕೃಷ್ಣಪ್ರಸಾದ್ ಹಾಗೂ ಪ.ಪಂ. ಸದಸ್ಯರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT