ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಡಗು | ಕೋವಿಡ್ ಪರೀಕ್ಷೆ ಪ್ರಯೋಗಾಲಯ ಸಜ್ಜು

ಇಂದು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಅವರಿಂದ ಉದ್ಘಾಟನೆ
Last Updated 21 ಮೇ 2020, 12:29 IST
ಅಕ್ಷರ ಗಾತ್ರ

ಮಡಿಕೇರಿ: ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಸೂಕ್ಷ್ಮಾಣು ಜೀವಿ ವಿಭಾಗದಲ್ಲಿ ₹ 1.06 ಕೋಟಿ ವೆಚ್ಚದಲ್ಲಿ ವಿಪತ್ತು ನಿಧಿಯಡಿ ಕೋವಿಡ್ ಪರೀಕ್ಷೆಯ ಪ್ರಯೋಗಾಲಯವು ಸಿದ್ಧಗೊಂಡಿದೆ.

ಮೇ 22ರಂದು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಅವರು ಚಾಲನೆ ನೀಡಲಿದ್ದಾರೆ.

ಈ ಪ್ರಯೋಗಾಲಯದಲ್ಲಿ ಒಂದು ಬಾರಿಗೆ 100 ಮಂದಿಯ ಮೂಗು, ಗಂಟಲು ದ್ರವ ಮಾದರಿ ಪರೀಕ್ಷಿಸಬಹುದು. ಇಲ್ಲಿಯವರೆಗೆ ಕೊಡಗು ಜಿಲ್ಲೆಯಿಂದ ಕೋವಿಡ್ ಪರೀಕ್ಷೆಗಾಗಿ ಸಂಗ್ರಹಿತ ಮಾದರಿಗಳನ್ನು ಮೈಸೂರಿನ ವೈದ್ಯಕೀಯ ಕಾಲೇಜಿಗೆ ಕಳುಹಿಸಲಾಗುತ್ತಿತ್ತು. ಇನ್ನು ಮುಂದೆ ಕೋವಿಡ್ ಪರೀಕ್ಷಾ ಸೌಲಭ್ಯವು ಜಿಲ್ಲೆಯಲ್ಲಿಯೇ ಲಭ್ಯವಾಗಲಿದೆ ಎಂದು ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ನಿರ್ದೇಶಕ ಡಾ.ಕಾರ್ಯಪ್ಪ ತಿಳಿಸಿದರು.

ಮುಂದಿನ ಒಂದು ವಾರದಲ್ಲಿ ಪೂರ್ಣ ಪ್ರಮಾಣದ ಪರೀಕ್ಷೆಯು ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಪ್ರಯೋಗಾಲಯದಲ್ಲಿ ಪ್ರಾರಂಭವಾಗಲಿದೆ. ಮುಂದಿನ ದಿನಗಳಲ್ಲಿ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ(icmr)ಯಿಂದ ಅನುಮತಿ ಪಡೆದು ಈ ಪ್ರಯೋಗಾಲಯವನ್ನು ಇತರ ವೈರಾಣುಗಳಿಂದ ಹರಡುವ ರೋಗಗಳ ಪರೀಕ್ಷೆಗೂ ಬಳಸಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ.

ವರದಿ ವಿಳಂಬ:ಮಾರ್ಚ್‌ನಲ್ಲಿ ಜಿಲ್ಲೆಯಲ್ಲೂ ದುಬೈನಿಂದ ಮರಳಿದ್ದ ವ್ಯಕ್ತಿಯಲ್ಲಿ ಕೋವಿಡ್‌ ಲಕ್ಷಣಗಳು ಕಾಣಿಸಿದ್ದವು. ಆಗ ಆ ವ್ಯಕ್ತಿಯ ಗಂಟಲು ದ್ರವದ ಮಾದರಿಯನ್ನು ಸಂಗ್ರಹಿಸಿ ಮೈಸೂರಿಗೆ ರವಾನೆ ಮಾಡಲಾಗಿತ್ತು. ವರದಿ ಬರುವುದು ಮೂರು ದಿನ ತಡವಾಗಿತ್ತು. ಅದಾದ ಮೇಲೂ ನೂರಾರು ಗಂಟಲು ದ್ರವದ ಮಾದರಿಯನ್ನು ಸಂಗ್ರಹಿಸಿ ಮೈಸೂರಿನ ಪ್ರಯೋಗಾಲಯಕ್ಕೆ ರವಾನೆ ಮಾಡಲಾಗಿತ್ತು. ಅಲ್ಲಿಂದ ವರದಿ ಬರುವುದು ತಡವಾದ ಕಾರಣಕ್ಕೆ, ಚಿಕಿತ್ಸೆ ಹಾಗೂ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲು ತಡವಾಗಿತ್ತು. ಇದೀಗ ಜಿಲ್ಲೆಯಲ್ಲೇ ಪ್ರಯೋಗಾಲಯ ಆರಂಭಗೊಂಡಿದ್ದು ಕೋವಿಡ್‌ 19 ಪರೀಕ್ಷೆಗೆ ಅನುಕೂಲವಾಗಲಿದೆ. ಶಂಕಿತರ ಗಂಟಲು ಮಾದರಿ ಪಡೆದು ತಕ್ಷಣವೇ ಚಿಕಿತ್ಸೆ ಆರಂಭಿಸಲು ಅನುಕೂಲ ಆಗಲಿದೆ ಎಂದು ವೈದ್ಯರು ಹೇಳಿದರು.

ಇಂದು ಸಚಿವರ ಜಿಲ್ಲಾ ಪ್ರವಾಸ:ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಅವರು ಮೇ 22ರಂದು ಜಿಲ್ಲಾ ಪ್ರವಾಸ ಹಮ್ಮಿಕೊಂಡಿದ್ದಾರೆ.

ಶುಕ್ರವಾರ ಮಧ್ಯಾಹ್ನ 12ಕ್ಕೆ ಕೋವಿಡ್ 19 ಬಗ್ಗೆ ಜಿಲ್ಲೆಯಲ್ಲಿ ಕೈಗೊಂಡ ಮುಂಜಾಗ್ರತಾ ಕ್ರಮಗಳು ಸೇರಿದಂತೆ, ಸ್ವಚ್ಛತೆ ಹಾಗೂ ಸಾರ್ವಜನಿಕ ಆರೋಗ್ಯ ಕುರಿತು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಪರಿಶೀಲನಾ ಸಭೆ ಹಾಗೂ ಮೇ 29ರಂದು ಮುಖ್ಯಮಂತ್ರಿ ಅವರಿಂದ ಮದೆ ಹಾಗೂ ಜಂಬೂರು ಗ್ರಾಮಗಳಲ್ಲಿ ಪ್ರವಾಹ ಸಂತ್ರಸ್ತರಿಗೆ ನಿರ್ಮಿಸಿದ ಮನೆಗಳ ಹಸ್ತಾಂತರ ಕಾರ್ಯಕ್ರಮ ಹಿನ್ನೆಲೆ ಪೂರ್ವಭಾವಿ ಸಭೆಯನ್ನು ನಗರದ ನೂತನ ಜಿ.ಪಂ ಸಭಾಂಗಣದಲ್ಲಿ ನಡೆಸಲಿದ್ದಾರೆ.

ನಂತರ, ಮಧ್ಯಾಹ್ನ 1.30ಕ್ಕೆ ಜಿಲ್ಲೆಯ ಕೊಡಗು ವೈದ್ಯಕೀಯ ಮಹಾವಿದ್ಯಾಲಯದಲ್ಲಿ ನೂತನವಾಗಿ ಪ್ರಾರಂಭವಾಗಿರುವ ಕೊರೊನಾ ಪರೀಕ್ಷಾ ಕೇಂದ್ರಕ್ಕೆ ಚಾಲನೆ ನೀಡಲಿದ್ದಾರೆ. ಎಂದು ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT