ಮಣ್ಣು ಕುಸಿತ: ವ್ಯಕ್ತಿ ಜೀವಂತ ಸಮಾಧಿ

7

ಮಣ್ಣು ಕುಸಿತ: ವ್ಯಕ್ತಿ ಜೀವಂತ ಸಮಾಧಿ

Published:
Updated:
Deccan Herald

ಸೋಮವಾರಪೇಟೆ: ತಾಲ್ಲೂಕಿನಲ್ಲಿ ಸುರಿಯುತ್ತಿರುವ ಭಾರಿ ಮಳೆಗೆ ಸಾಕಷ್ಟು ಹಾನಿಯಾಗಿದ್ದು, ಮಳೆಗೆ ಉಂಟಾದ ಭೂಕುಸಿತಕ್ಕೆ ತಾಲ್ಲೂಕಿನ ಮಾದಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೂವತ್ತೊಕ್ಲು ಗ್ರಾಮದ ಮುಕ್ಕಾಟಿರ ಉತ್ತಪ್ಪ (ಸಾಬು) ಅವರು ಮನೆಯೊಂದಿಗೆ ಜೀವಂತ ಮಣ್ಣು ಪಾಲಾದ ಘಟನೆ ನಡೆದಿದೆ.

ಗುರುವಾರ ಸುರಿಯುತ್ತಿದ್ದ ಭಾರಿ ಗಾಳಿ ಮಳೆಗೆ ಸಂಜೆ 5ರ ವೇಳೆಗೆ ಮೂವತ್ತೊಕ್ಲುವಿನ ಮುಕ್ಕಾಟಿರ ಸಾಬು ಹಾಗೂ ಪತ್ನಿ ತಂಗಮ್ಮ ಮನೆಯಲ್ಲಿರುವಾಗಲೇ ಭೂ ಕುಸಿತ ಉಂಟಾಗಿದೆ. ಇದನ್ನು ಗಮನಿಸಿದ ಪತ್ನಿ ಅಂಗನವಾಡಿ ಶಿಕ್ಷಕಿ ತಂಗಮ್ಮ ಅವರು ಪತಿಯನ್ನು ಕೂಗಿ ಮನೆಯಿಂದ ಹೊರಗಡೆ ಓಡಿ ಬಂದಿದ್ದಾರೆ. ಆದರೆ, ಮಲಗಿದ್ದ 62ರ ವಯಸ್ಸಿನ ಮುಕ್ಕಾಟಿರ ಉತ್ತಪ್ಪ (ಸಾಬು) ಹೊರಗೆ ತಕ್ಷಣ ಬರಲು ಸಾಧ್ಯವಾಗದೆ ಪತ್ನಿಯ ಎದುರೇ ಮನೆಯ ಮೇಲೆ ಮಣ್ಣು ಬಂದು ಬಿದ್ದು, ಹೂತು ಹೋಗಿದ್ದಾರೆ.

ಭಾರಿ ಮಳೆಯ ಕಾರಣ ಶವದ ಶೋಧನಾ ಕಾರ್ಯಾಚರಣೆ ಸಾಧ್ಯವಿಲ್ಲದ ಪರಿಸ್ಥಿತಿ ಎದುರಾಗಿದೆ. ಇದೀಗ ಮನೆಯ ಮೇಲೆ ಬಿದ್ದಿರುವ ಮಣ್ಣನ್ನು ತೆರವುಗೊಳಿಸಲು ಮುಂದಾದಲ್ಲಿ ಮತ್ತೆ ಪುನಃ ಗುಡ್ಡ ಕುಸಿಯುವ ಭೀತಿ ಇರುವುದರಿಂದ ಯಾವುದೇ ಕಾರ್ಯಕ್ಕೆ ಮುಂದಾಗಿಲ್ಲ. ಕಳೆದ ಎರಡು ದಿನಗಳಿಂದಲೇ ಅಲ್ಪ ಸ್ವಲ್ಪ ಭೂಕುಸಿತ ಉಂಟಾಗಿದ್ದು, ಮೂವತ್ತೊಕ್ಲು ಗ್ರಾಮದ ಮಾಚಯ್ಯ ಕುಟುಂಬ ಸ್ಥಳಾಂತರಗೊಂಡಿದೆ. ಆದರೂ ಎಚ್ಚರವಾಗದ ಸಾಬು ಕುಟುಂಬ ಅಲ್ಲಿಯೇ ವಾಸ್ತವ್ಯ ಹೂಡಿತ್ತು. ಆದರೆ, ಇವರ ಇಬ್ಬರು ಪುತ್ರರು ಮನೆಯಿಂದ ಹೊರಗಡೆ ಇದ್ದುದರಿಂದ ಅವರು ಅನಾಹುತದಲ್ಲಿ ಸಿಲುಕದೇ ಪಾರಾಗಿದ್ದಾರೆ.

ಮನೆಯ ಸಮೀಪದಲ್ಲೇ ಇದ್ದ ಚಾಮುಂಡೇಶ್ವರಿ ದೇವಸ್ಥಾನ ಕೂಡ ಮಣ್ಣಿನ ಅಡಿಯಲ್ಲಿ ಹುದುಗಿಹೋಗಿದೆ. ತಮ್ಮ ಕಣ್ಣು ಮುಂದೆಯೇ ಮಣ್ಣುಪಾಲಾದ ಸಾಬು ಕುರಿತು ಪ್ರತಿಕ್ರಿಯಿಸಿದ ಪಕ್ಕದ ಮನೆಯ ನಿವಾಸಿ ಮುಕ್ಕಾಟಿರ ನಾಣಿಯಪ್ಪ, ‘ಇನ್ನೂ ಎರಡು ಸೆಕೆಂಡ್ ಅಲ್ಲೇ ಇದ್ದಿದ್ದರೇ ನಾನು ಕೂಡ ಸಾವನ್ನಪ್ಪಬೇಕಾಗಿತ್ತು’ ಎಂದು ಹೇಳಿದರು. ಇದೀಗ ಇಡೀ ಗ್ರಾಮವೇ ಮನೆ ಮಠವನ್ನು ಬಿಟ್ಟು ನಿರಾಶ್ರಿತರ ಕೇಂದ್ರಕ್ಕೆ ತೆರಳಿದ್ದು, ಗ್ರಾಮದಲ್ಲಿ ಸ್ಮಶಾನ ಮೌನ ವ್ಯಾಪಿಸಿದೆ. ಇದ್ದ ದನ–ಕರುಗಳು ಆಹಾರವಿಲ್ಲದೆ ಅಲೆಯುತ್ತಿದ್ದು, ಹಾಲು ಕೊಡುವ ಹಸುವೊಂದು ಕರುವನ್ನು ಹುಡುಕಿಕೊಂಡು ತಿರುಗುವ ದೃಶ್ಯ ಮನ ಕಲಕುವಂತಿತ್ತು.

ಕೊಡಗು ಸಹಾಯವಾಣಿ: 08272 221077
ಜಿಲ್ಲಾಧಿಕಾರಿ: Pi Shreevidya - 94826 28409
ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ: Summan D. -94808 04901

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !