ಶನಿವಾರ, 12 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಅರೆಭಾಷೆಯಲ್ಲಿ ಬರವಣಿಗೆ ಹೆಚ್ಚಾಗಲಿ: ಸದಾನಂದ ಮಾವಜಿ

ಅರೆಭಾಷೆ ಬರಹಗಾರರು ಮತ್ತು ಕಲಾವಿದರೊಂದಿಗೆ ಸಂವಾದ ಕಾರ್ಯಕ್ರಮ
Published : 30 ಸೆಪ್ಟೆಂಬರ್ 2024, 4:58 IST
Last Updated : 30 ಸೆಪ್ಟೆಂಬರ್ 2024, 4:58 IST
ಫಾಲೋ ಮಾಡಿ
Comments

ಮಡಿಕೇರಿ: ಅರೆಭಾಷೆಯಲ್ಲಿ ಸಾಹಿತ್ಯ ರಚನೆ ಹೆಚ್ಚಾಗಬೇಕು. ಅರೆಭಾಷಿಕರು ಕವನ, ಲೇಖನ, ಹನಿಗವನ, ಪ್ರಬಂಧ, ಕವಿತೆ ಹೀಗೆ ವಿವಿಧ ಬರಹಗಳನ್ನು ಬರೆಯಬೇಕು ಎಂದು ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿ ತಿಳಿಸಿದರು.

ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ವತಿಯಿಂದ ನಗರದ ಕೊಡಗು ಗೌಡ ಸಮಾಜಗಳ ಒಕ್ಕೂಟ ಸಭಾಂಗಣದಲ್ಲಿ ಭಾನುವಾರ ನಡೆದ ‘ಜಿಲ್ಲೆಯ ಅರೆಭಾಷೆ ಬರಹಗಾರರು ಮತ್ತು ಕಲಾವಿದರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಅಕಾಡೆಮಿ ವತಿಯಿಂದ ‘ಹಿಂಗಾರ’ ತ್ರೈಮಾಸಿಕ ಪತ್ರಿಕೆ ಹೊರತರಲಾಗುತ್ತಿದ್ದು, ಇತ್ತೀಚಿನ ದಿನಗಳಲ್ಲಿ ಅರೆಭಾಷೆಯಲ್ಲಿ ಬರೆಯುವವರ ಸಂಖ್ಯೆ ಕಡಿಮೆಯಾಗುತ್ತಿದೆ. ಆದ್ದರಿಂದ ಅರೆಭಾಷಿಕರು ಸಾಹಿತ್ಯ, ಸಂಸ್ಕೃತಿ, ಕಲೆಗಳ ಬರವಣಿಗೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ತಿಳಿಸಿದರು.

ಮುಂದಿನ ದಿನಗಳಲ್ಲಿ ಅಕಾಡೆಮಿ ವತಿಯಿಂದ ಕೈಗೊಳ್ಳಲಾಗಿರುವ ಕಾರ್ಯಯೋಜನೆ ಬಗ್ಗೆ ಎಲ್ಲರ ಸಹಕಾರ ಅಗತ್ಯ, ಆ ನಿಟ್ಟಿನಲ್ಲಿ ಅಕಾಡೆಮಿಯ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವಂತೆ ಕೋರಿದರು.‌

ಸಾಹಿತ್ಯದಲ್ಲಿ ಮೌಢ್ಯತೆ ಇರಲೇಬಾರದು. ಹೆಚ್ಚು, ಹೆಚ್ಚು ವಾಸ್ತವದ ವಿಚಾರಗಳಿಗೆ ಸಾಹಿತ್ಯದಲ್ಲಿ ಆದ್ಯತೆ ನೀಡಬೇಕು ಎಂದು ಸಾಹಿತಿ ಹಾಗೂ ವಕೀಲರಾದ ಕುಡೇಕಲ್ಲು ವಿದ್ಯಾಧರ ತಿಳಿಸಿದರು.

ಇದಕ್ಕೂ ಮುನ್ನ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಮಡಿಕೇರಿ ಗ್ರಾಮಾಂತರ ಠಾಣೆಯ ಸಿಪಿಐ ಉಮೇಶ್ ಉಪ್ಪಳಿಕೆ, ‘ಅರೆಭಾಷಿಕರು ಮಕ್ಕಳಿಗೆ ಸಣ್ಣ ವಯಸ್ಸಿನಿಂದಲೇ ಅರೆಭಾಷೆ ಕಲಿಸಬೇಕು. ಆಗ ಮಾತ್ರ ಭಾಷೆಯನ್ನು ಉಳಿಸಿ ಬೆಳೆಸಲು ಸಾಧ್ಯ’ ಎಂದು ಪ್ರತಿಪಾದಿಸಿದರು.

ಕೊಡಗು ಜಿಲ್ಲೆಯಲ್ಲಿ ಬಹಳಷ್ಟು ಸಂಖ್ಯೆಯಲ್ಲಿ ಅರೆಭಾಷಿಗರು ಇದ್ದು, ಅರೆಭಾಷೆ ಮಾತನಾಡುವಂತಾಗಬೇಕು ಬರಹಗಾರನೂ ಒಬ್ಬ ಕಲಾವಿದ, ಅವನ ಕಲೆಯ ಮೂಲ ಭಾಷೆ ಆಗಿರುತ್ತದೆ. ಆ ಭಾಷೆಯನ್ನು ಚಿಕ್ಕ ವಯಸ್ಸಿನಲ್ಲಿಯೇ ಆತ ಕರಗತ ಮಾಡಿದರೆ ಉತ್ತಮ ಬರಹಗಾರನಾಗಿ ಮೂಡಿಬರಲು ಸಾಧ್ಯ ಎಂದು ಅವರು ಅಭಿಪ್ರಾಯಪಟ್ಟರು.

ಹಿರಿಯ ಸಾಹಿತಿ ಬಾರಿಯಂಡ ಜೋಯಪ್ಪ ಮಾತನಾಡಿ, ‘ಬರವಣಿಗೆ ಜೊತೆ ಜೊತೆಯಲ್ಲಿಯೇ ಸಾಹಿತ್ಯ ಪ್ರಕಾರಗಳನ್ನು ಓದಬೇಕು. ನಮ್ಮ ಮನಸ್ಸಿಗೆ ಹಿಡಿಸಿದ ಸಾಹಿತ್ಯ ನಮ್ಮ ಬರವಣಿಗೆಗೆ ಪೂರಕವಾಗಿರುತ್ತದೆ. ಮುಂದೆಯೂ ಅದೇ ರೀತಿಯ ಸಾಹಿತ್ಯ ಓದಲು ಮನಸ್ಸು ಪ್ರೇರೇಪಿಸುತ್ತದೆ’ ಎಂದು ಅವರು ವಿವರಿಸಿದರು.

ಅಕಾಡೆಮಿ ಸದಸ್ಯರಾದ ಸೂದನ ಈರಪ್ಪ ಅವರು ಸಂವಾದವನ್ನು ನಡೆಸಿಕೊಟ್ಟರು. ಸಂವಾದದಲ್ಲಿ ಸಭಿಕರು ವಿವಿಧ ವಿಷಯಗಳನ್ನು ಮಂಡಿಸಿದರು.

ಅಕಾಡೆಮಿ ಸದಸ್ಯರಾದ ಕುಡೇಕಲ್ಲು ತೇಜಕುಮಾರ್, ಚಂದ್ರಶೇಖರ ಪೇರಾಲು, ಕೊಡಗು ಗೌಡ ವಿದ್ಯಾಸಂಘದ ಅಧ್ಯಕ್ಷ ಅಂಬೆಕಲ್‌ ನವೀನ್, ಕೊಡಗು ಗೌಡ ಮಹಿಳಾ ಒಕ್ಕೂಟದ ಅಧ್ಯಕ್ಷೆ ಅಮೆ ದಮಯಂತಿ, ಅಕಾಡೆಮಿ ಸದಸ್ಯ ಪುಳಕಂಡ ಸಂದೀಪ್, ವಿನೋದ್ ಮೂಡಗದ್ದೆ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT