ಗುರುವಾರ , ಡಿಸೆಂಬರ್ 5, 2019
24 °C
ಮತ್ತೆ ಗಾಯದ ಮೇಲೆ ‘ಬರೆ’; ಕಣ್ಣೀರಿನಲ್ಲಿ ಕಾಫಿ ಬೆಳೆಗಾರರು

ಕೊಡಗು | ರೈತರು, ಕಾಫಿ ಬೆಳೆಗಾರರ ಕನಸು ಛಿದ್ರಗೊಳಿಸಿದ ವರುಣನ ಮುನಿಸು

ಆದಿತ್ಯ ಕೆ.ಎ. Updated:

ಅಕ್ಷರ ಗಾತ್ರ : | |

Prajavani

ಮಡಿಕೇರಿ: ಕೊಡಗು ಜಿಲ್ಲೆಯ ಕಾಫಿ ಹಾಗೂ ಭತ್ತದ ಬೆಳೆಗಾರರ ಮೇಲೆ ವರುಣದೇವ ಮತ್ತೆ ಮತ್ತೆ ಮುನಿಸಿಕೊಳ್ಳುತ್ತಿದ್ದಾನೆ. ಜೂನ್‌, ಜುಲೈ ಹಾಗೂ ಆಗಸ್ಟ್‌ ತಿಂಗಳಲ್ಲಿ ಸುರಿದ ಮಳೆಯ ಹೊಡೆತದ ಬಳಿಕ ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದ ಕಾಫಿ ಬೆಳೆಗಾರರಿಗೆ ಮತ್ತೆ ಬೀಳುತ್ತಿರುವ ಮಳೆಯು ಗಾಯದ ಮೇಲೆ ಬರೆ ಎಳೆದಿದೆ.

ಮೊದಲೇ ಅತಿವೃ‌ಷ್ಟಿಯಿಂದ ಕಂಗಾಲಾಗಿದ್ದ ರೈತರಿಗೆ ಎರಡು ದಿನಗಳಿಂದ ಬೀಳುತ್ತಿರುವ ಮಳೆ ಹಾಗೂ ಮೋಡ ಕವಿದ ವಾತಾವರಣ ಅವರ ಜಂಘಾಬಲವನ್ನೇ ಉಡುಗಿಸಿದೆ. ಮಳೆಯು ನೋವಿನ ಮೇಲೆ ನೋವು ನೀಡುತ್ತಿದೆ ಎಂದು ಬೆಳೆಗಾರರು ಕಣ್ಣೀರು ಸುರಿಸುತ್ತಿದ್ದಾರೆ. 

ಜಿಲ್ಲೆಯಲ್ಲಿ ಅರೇಬಿಕಾ ಹಾಗೂ ರೋಬಸ್ಟಾ ಕಾಫಿ ಬೆಳೆಯಲಾಗುತ್ತಿದೆ. ಸಹಜವಾಗಿ ಡಿಸೆಂಬರ್‌ ತಿಂಗಳಲ್ಲಿ ಅರೇಬಿಕಾ ಕಾಫಿ ಕೊಯ್ಲು ಸಮಯ. ಈ ಸಮಯದಲ್ಲಿ ಒಳ್ಳೆಯ ಬಿಸಿಲಿದ್ದರೆ, ಕೃಷಿ ಚಟುವಟಿಕೆಗೆ ಅನುಕೂಲಕರ ವಾತಾವರಣ. ಕೆಲವೆಡೆ ಕಾಫಿ ಕೊಯ್ಲು ಆರಂಭವಾಗಿದೆ. ಕೊಯ್ಲು ಮಾಡಿದ್ದವರು ಅದನ್ನು ಒಣಗಿಸಲು ಪರದಾಡಿದರೆ, ಕೊಯ್ಲು ಮಾಡದ ರೈತರು ಕಾಫಿ ನೆಲಕಚ್ಚುವ ಆತಂಕ ಎದುರಿಸುತ್ತಿದ್ದಾರೆ. ಹಣ್ಣಾಗಿರುವ ಕಾಫಿಯನ್ನು ಈಗ ಕೊಯ್ಲು ಮಾಡಿ ಒಣಗಿಸಬೇಕು. ಅದು ಸಾಧ್ಯವಾಗದಿದ್ದರೆ ಗಿಡದಲ್ಲೇ ಕೊಳೆತು ನಾಶವಾಗಲಿದೆ ಎನ್ನುತ್ತಾರೆ ರೈತರು.


ಕೊಯ್ಲು ಮಾಡಿರುವ ಕಾಫಿ ಮಳೆಯಲ್ಲಿ ನೆನೆದಿದೆ

ನಾಪೋಕ್ಲು, ಚೆಟ್ಟಿಮಾನಿ, ಅಯ್ಯಂಗೇರಿ, ಸಿದ್ದಾಪುರ, ಕಕ್ಕಬ್ಬೆ, ಗೋಣಿಕೊಪ್ಪಲು, ಪೊನ್ನಂಪೇಟೆ, ಶ್ರೀಮಂಗಲ, ಬಾಳೆಲೆ, ಮಾದಾಪುರ, ಸಿಂಕೋನ ವ್ಯಾಪ್ತಿಯ ಕಾಫಿ ಎಸ್ಟೇಟ್‌ಗಳಲ್ಲಿ ಕಾಫಿ ಹಣ್ಣಾಗಿದೆ. ಅದನ್ನು ಕೊಯ್ಲು ಮಾಡಬೇಕು ಎಂಬುವಷ್ಟರಲ್ಲಿ ಮಳೆಯು ಹೊಡೆತ ನೀಡಿದೆ.

ಕಾಳುಮೆಣಸಿಗೂ ತೊಂದರೆ: ಕಾಫಿ ಮಾತ್ರವಲ್ಲ. ತೋಟದಲ್ಲಿ ಉಪ ಬೆಳೆಯಾಗಿ ಬೆಳೆಯುವ ಕಾಳುಮೆಣಸಿನ ಬೆಳೆಗೂ ಮಳೆಯಿಂದ ತೊಂದರೆಯಾಗಿದೆ. ಕಾಫಿ ಬೆಳೆಯಂತೂ ಮಹಾಮಳೆಗೆ ಕೈಕೊಟ್ಟಿತ್ತು. ಕಾಳುಮೆಣಸು ಕೈಹಿಡಿಯಬಹುದೆಂದು ರೈತರು ಭಾವಿಸಿದ್ದರು. ಮೋಡ ಕವಿದ ವಾತಾವರಣ ಹಾಗೂ ಮಳೆಯಿಂದ ತೇವಾಂಶ ಹೆಚ್ಚಾಗಿ ಕಾಳು ಕಟ್ಟಿದ್ದ ಕರಿಮೆಣಸು ಫಸಲು ನೆಲದಲ್ಲಿದೆ. ಇದು ರೈತರನ್ನು ಮತ್ತಷ್ಟು ಆತಂಕಕ್ಕೆ ದೂಡಿದೆ.


ಕೊಡಗು ಜಿಲ್ಲೆಯ ನಾಪೋಕ್ಲು ವ್ಯಾಪ್ತಿಯಲ್ಲಿ ಕಾಫಿ ತೋಟದಲ್ಲಿ ಹಣ್ಣಾಗಿರುವ ಕಾಫಿ

ತಾಲ್ಲೂಕಿನ ಮೇಕೇರಿಯಲ್ಲಿ ಮಾತಿಗೆ ಸಿಕ್ಕ ಕಾಫಿ ಬೆಳೆಗಾರರ ರೋಷನ್‌ ಆಕಾಶವನ್ನು ಒಮ್ಮೆ ದಿಟ್ಟಿಸಿ ‘ಎಲ್ಲವೂ ಮಳೆಯಲ್ಲಿ ಕೊಚ್ಚಿ ಹೋಯ್ತು. ಎರಡು ವರ್ಷದಿಂದ ಮನೆಗೆ ಸ್ವಲ್ವವೂ ಬೆಳೆ ಕೊಂಡೊಯ್ಯಲು ಸಾಧ್ಯವಾಗುತ್ತಿಲ್ಲ. ಅತಿವೃಷ್ಟಿಯ ಹೊಡೆತವು ಬೆಳೆಗಾರರನ್ನು ಕಂಗಾಲು ಮಾಡುತ್ತಿದೆ’ ಎಂದು ಕಣ್ಣೀರಾದರು.

‘ಕಳೆದ ವರ್ಷವಾದರೂ ಸ್ವಲ್ಪ ಬೆಳೆ ಪರಿಹಾರ ಸಿಕ್ಕಿತ್ತು. ಈ ಬಾರಿ ಅದೂ ಕೈಸೇರಿಲ್ಲ. ಸರ್ಕಾರವು ಕಾಫಿ ಬೆಳೆಗಾರರು ಶ್ರೀಮಂತರೆಂದು ಭಾವಿಸಿದೆ. ಆದರೆ, ನಮ್ಮ ಕಷ್ಟ ಯಾರಿಗೂ ತಿಳಿಯುತ್ತಿಲ್ಲ’ ಎಂದು ನೊಂದು ಹೇಳಿದರು.


ಭತ್ತದ ಗದ್ದೆಯನ್ನು ಒಣಗಿಸಲು ತೆಗೆದಿದ್ದ ಕಾಲುವೆಯಲ್ಲಿ ನೀರು ತುಂಬಿದೆ.

ಇನ್ನೂ ಎರಡು ದಿನ ಮಳೆ: ರಾಜ್ಯದಲ್ಲಿ ಇನ್ನೂ ಎರಡು ದಿನ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದು ರೈತರನ್ನು ಮತ್ತಷ್ಟು ಆತಂಕಕ್ಕೆ ತಳ್ಳಿದೆ.

ಇಳುವರಿ ಕುಸಿತ: ಕೊಡಗು ಜಿಲ್ಲೆಯಲ್ಲೇ ಈ ವರ್ಷ ಶೇ 40ರಿಂದ 50ರಷ್ಟು ಇಳುವರಿ ಕುಸಿತವಾಗಲಿದೆ ಎಂದು ಕಾಫಿ ಬೆಳೆಗಾರರ ಸಂಘವು ತಿಳಿಸಿದೆ. ಆದ್ದರಿಂದ ಬೆಳೆಗಾರರ ಸಂಪೂರ್ಣ ಸಾಲ ಮನ್ನಾ ಮಾಡಬೇಕು. ಇಲ್ಲದಿದ್ದರೆ ಕಾಫಿ ಬೆಳೆಯನ್ನು ಮುಂದುವರಿಸುವುದು ಕಷ್ಟ ಎಂದು ಸಂಘದ ಪದಾಧಿಕಾರಿಗಳು ಹೇಳಿದ್ದಾರೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು