ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಡಿಕೇರಿ: ಮಾನವ– ಪ್ರಾಣಿ ಸಂಘರ್ಷ ತಪ್ಪಿಸಿ: ಕೆ.ಜಿ.ಬೋಪಯ್ಯ ಸಲಹೆ

ಅರಣ್ಯಾಧಿಕಾರಿಗಳ ಕಾರ್ಯವೈಖರಿಗೆ ಶಾಸಕ ಕೆ.ಜಿ.ಬೋಪಯ್ಯ ಅಸಮಾಧಾನ
Last Updated 3 ಫೆಬ್ರುವರಿ 2023, 6:13 IST
ಅಕ್ಷರ ಗಾತ್ರ

ಮಡಿಕೇರಿ: ‘ನಾಗರಹೊಳೆ ಅರಣ್ಯದೊಳಗೆ ಆಹಾರದ ಕೊರತೆ ಇರುವುದರಿಂದಲೇ ವನ್ಯಜೀವಿಗಳು ಹಳ್ಳಿಗಳತ್ತ ಬರುತ್ತಿವೆ. ಹವಾ ನಿಯಂತ್ರಿತ ಕೋಣೆಯಲ್ಲಿ ಕುಳಿತು ಯೋಜನೆ ರೂಪಿಸುವ ಅರಣ್ಯಾಧಿಕಾರಿಗಳಿಗೆ ಹಾಗೂ ಅರಣ್ಯ ಏನೆಂದು ತಿಳಿಯದ ಅರಣ್ಯ ಸಚಿವರಿಗೆ ಈ ಮೂಲ ಕಾರಣ ತಿಳಿಯುತ್ತಿಲ್ಲ’ ಎಂದು ಶಾಸಕ ಕೆ.ಜಿ.ಬೋಪಯ್ಯ ಅಸಮಾಧಾನ ವ್ಯಕ್ತಪಡಿಸಿದರು.

ಕೊಡಗು ಪತ್ರಕರ್ತರ ಸಂಘ ಮತ್ತು ಕೊಡಗು ಪತ್ರಿಕಾಭವನ ಟ್ರಸ್ಟ್‌ ವತಿಯಿಂದ ಇಲ್ಲಿನ ಪತ್ರಿಕಾ ಭವನದಲ್ಲಿ ಗುರುವಾರ ನಡೆದ ‘ಸಂವಾದ’ದಲ್ಲಿ ಸುದ್ದಿಗಾರರು ‘ಮಾನವ– ವನ್ಯಜೀವಿ ಸಂಘರ್ಷ’ ಕುರಿತು ಕೇಳಿದ ಪ್ರಶ್ನೆಗೆ ಅವರು ಪ್ರತಿಕ್ರಿಯಿಸಿದರು.

‘ಕಾಡೊಳಗೆ ಬಿದಿರು ಸಂಪೂರ್ಣ ನಶಿಸಿದೆ. ಅದರ ಬದಲು ಅರಣ್ಯಾಧಿಕಾರಿಗಳು ತೇಗವನ್ನೇ ಹೆಚ್ಚು ಬೆಳೆಸಿದ್ದಾರೆ. ಹಣ್ಣಿನ ಮರಗಳೂ ಈಗ ಇಲ್ಲ. ಹೀಗಾಗಿ, ವನ್ಯಜೀವಿಗಳೆಲ್ಲ ಆಹಾರ ಹುಡುಕಿಕೊಂಡು ಹೊಲ, ಗದ್ದೆಗಳಿಗೆ ಬರುತ್ತಿವೆ. ಈ ಮೂಲ ಸಮಸ್ಯೆಗೆ ಪರಿಹಾರ ಹುಡುಕದ ಅರಣ್ಯಾಧಿಕಾರಿ ಸೋಲಾರ್ ಬೇಲಿ ಹಾಕುವುದು, ಕಂದಕ ತೋಡುವುದು ಸೇರಿದಂತೆ ವ್ಯರ್ಥ ಪ್ರಯತ್ನಗಳನ್ನು ಮಾಡುತ್ತಿದ್ದಾರೆ’ ಎಂದು ಹರಿಹಾಯ್ದರು.

‘ಯಾವುದೇ ಸರ್ಕಾರ ಇರಲಿ ಅರಣ್ಯ ಎಂದರೆ ಏನೆಂದು ಗೊತ್ತಿರುವ, ಮಲೆನಾಡು ಭಾಗದ ಶಾಸಕರಿಗೆ ಅರಣ್ಯ ಖಾತೆ ನೀಡಬೇಕು. ಆಗ ಸಮಸ್ಯೆಗೆ ಪರಿಣಾಮಕಾರಿಯಾಗಿ ಪರಿಹಾರ ಕಂಡುಕೊಳ್ಳಬಹುದು’ ಎಂದು ಪ್ರತಿಪಾದಿಸಿದರು.

‘ಜಲಜೀವನ್‌ ಮಿಷನ್‌’ನಡಿ ಎಲ್ಲ ಮನೆಗೂ ನೀರು ಸೌಲಭ್ಯ ಕಲ್ಪಿಸಲು ಕೊಳವೆಬಾವಿಯನ್ನೇ ಆಶ್ರಯಿಸಿದರೆ ಯಶಸ್ಸು ಕಾಣಲಾಗದು. ಹಾಗಾಗಿ, ಹೊಳೆ ಹರಿಯುವ ಕಡೆ ಏತ ನೀರಾವರಿ ಯೋಜನೆಗೆ ಅವಕಾಶ ಮಾಡಿಕೊಡಬೇಕು ಎಂದು ಮನವಿ ಮಾಡಿರುವೆ. ಬರಪೊಳೆಯಿಂದ ನೀರನ್ನು ಸರಬರಾಜು ಮಾಡುವ ಯೋಜನೆ ಇದೆ’ ಎಂದರು.

ಜಿಲ್ಲಾಸ್ಪತ್ರೆಯಲ್ಲಿ ಅತ್ಯಾಧುನಿಕ ಸೌಲಭ್ಯಗಳಿದ್ದರೂ ಅನಗತ್ಯವಾಗಿ ಬೇರೆ ಊರಿನ ಆಸ್ಪತ್ರೆಗೆ ಕಳುಹಿಸುತ್ತಾರೆ ಎಂಬ ಆರೋಪ ವೈದ್ಯರ ವಿರುದ್ಧ ಕೇಳಿ ಬಂದಿದೆ. ಇನ್ನು ಮುಂದೆ ಇಂತಹ ಆರೋಪ ಕೇಳಿ ಬಾರದ ಹಾಗೆ ಎಚ್ಚರ ವಹಿಸಬೇಕು. ಲಭ್ಯವಿರುವ ಚಿಕಿತ್ಸೆಯನ್ನು ಇಲ್ಲಿಯೇ ನೀಡಬೇಕು ಎಂದು ಹೇಳಿದರು.

‘ನಾನೊಬ್ಬನೇ ಶಾಸಕನಾಗಿರ ಬೇಕೆಂಬ ದುರಾಸೆ ನನಗಿಲ್ಲ’ ಎಂದು ಸ್ಪಷ್ಟಪಡಿಸಿದ ಅವರು, ‘ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬೇರೆಯವರಿಗೆ ಅವಕಾಶ ನೀಡಿದರೆ ಅಭ್ಯಂತರ ಇಲ್ಲ. ವರಿಷ್ಠರ ಸೂಚನೆಯನ್ನು ಪಾಲಿಸುವೆ’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

‘ಹೊಗಳಿಕೆ ಮತ್ತು ತೆಗಳಿಕೆ ಎರಡನ್ನೂ ಸಮಾನವಾಗಿ ಸ್ವೀಕರಿಸುವೆ. ನನ್ನನ್ನು ತೆಗಳುವವರಿಗೂ ಒಳ್ಳೆಯದಾಗಲಿ ಎಂದು ಹಾರೈಸುವೆ. ಕ್ಷೇತ್ರಕ್ಕೆ ಬಿಡುಗಡೆಯಾಗಿರುವ ಸಾವಿರಾರು ಕೋಟಿ ಅನುದಾನದ ಕುರಿತು ಶ್ವೇತಪತ್ರ ಹೊರಡಿಸಲೂ ಸಿದ್ಧ’ ಎಂದರು.

ಕೊಡಗು ಪತ್ರಕರ್ತರ ಸಂಘದ ಅಧ್ಯಕ್ಷ ಎಸ್.ಎ.ಮುರಳೀಧರ್, ಪ್ರಧಾನ ಕಾರ್ಯದರ್ಶಿ ಉಜ್ವಲ್ ರಂಜಿತ್, ಕೊಡಗು ಪತ್ರಿಕಾ ಭವನ ಟ್ರಸ್ಟ್‌ನ ಖಜಾಂಚಿ ಕೆ.ತಿಮ್ಮಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT