ಗುರುವಾರ, 30 ನವೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಡಿಕೇರಿ | ‘ಬೆಳಕಿನ ದಸರೆ’ಗೆ ಕ್ಷಣಗಣನೆ; ಸಿದ್ಧವಾಗುತ್ತಿವೆ ಮಂಟಪಗಳು

Published 24 ಅಕ್ಟೋಬರ್ 2023, 9:37 IST
Last Updated 24 ಅಕ್ಟೋಬರ್ 2023, 9:37 IST
ಅಕ್ಷರ ಗಾತ್ರ

ಮಡಿಕೇರಿ: ‘ಬೆಳಕಿನ ದಸರೆ’ ಎಂದೇ ಹೆಸರಾದ ಮಡಿಕೇರಿಯ ದಶಮಂಟಪಗಳ ಶೋಭಾಯಾತ್ರೆಗೆ ಕ್ಷಣಗಣನೆ ಆರಂಭವಾಗಿದೆ. ಇದಕ್ಕಾಗಿ ಇಲ್ಲಿನ 10 ದೇಗುಲಗಳ ಸಮಿತಿಯ ಸದಸ್ಯರು ಮಂಟಪಗಳನ್ನು ಭರದಿಂದ ಸಿದ್ಧಪಡಿಸುತ್ತಿದ್ದಾರೆ.

ಇದರಿಂದ ಮಹದೇವಪೇಟೆ ಮುಖ್ಯ ರಸ್ತೆ, ಕೊಹಿನೂರ್ ಜಂಕ್ಷನ್‌ ಸೇರಿದಂತೆ ಬಹುತೇಕ ರಸ್ತೆಗಳಲ್ಲಿ ಸಂಚಾರ ಸ್ಥಗಿತಗೊಂಡಿದೆ. ಸಂಜೆ 4 ಗಂಟೆಯ ನಂತರ ನಗರದೊಳಗೆ ಎಲ್ಲ ಬಗೆಯ ವಾಹನ ಸಂಚಾರವನ್ನು ಪೊಲೀಸರು ನಿರ್ಬಂಧಿಸಿದ್ದಾರೆ.

ಮಧ್ಯಾಹ್ನದ ಹೊತ್ತಿಗೆ ನೂರಾರು ಮಂದಿ ಹೊರಜಿಲ್ಲೆಗಳಿಂದ ನಗರಕ್ಕೆ ಬರುತ್ತಿದ್ದು, ಮೈಸೂರಿನ ಜಂಬೂಸವಾರಿ ಮುಗಿದ ನಂತರ ಸಹಸ್ರಾರು ಸಂಖ್ಯೆಯಲ್ಲಿ ಜನರು ಬರಲಿದ್ದಾರೆ. ಈಗಾಗಲೇ ನಗರದ ಎಲ್ಲ ಹೋಂಸ್ಟೇಗಳು, ಹೋಟೆಲ್‌ಗಳು ಪ್ರವಾಸಿಗರಿಂದ ಭರ್ತಿಯಾಗಿವೆ. ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರು ನಗರದಲ್ಲಿದ್ದು, ಬಿಗಿ ಭದ್ರತೆ ಕೈಗೊಂಡಿದ್ದಾರೆ.

ಮಂಟಪಗಳಲ್ಲಿ ಹೆಚ್ಚು ಅಬ್ಬರದ ಧ್ವನಿವರ್ಧಕ ಬಳಕೆ ಮಾಡಬಾರದು ಎಂಬ ಕೋರಿ ವಕೀಲ ಅಮೃತೇಶ್ ಅವರು ಹೈಕೋರ್ಟ್‌ನಲ್ಲಿ ಮನವಿ ಸಲ್ಲಿಸಿದ್ದರು. ಮನವಿ ಪುರಸ್ಕರಿಸಿದ ಹೈಕೋರ್ಟ್ ಧ್ವನಿವರ್ಧಕಗಳು ಹೊರಹೊಮ್ಮಿಸುವ ಶಬ್ದದ ಪ್ರಮಾಣ ಸುಪ್ರೀಂಕೋರ್ಟ್‌ನ ನಿರ್ದೇಶನಗಳನ್ನು ಮೀರದಂತೆ ನೋಡಿಕೊಳ್ಳುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಸೂಚಿಸಿದೆ. ಮಡಿಕೇರಿ ದಸರಾ ದಶಮಂಟಪ ಸಮಿತಿಯೂ ಹೆಚ್ಚು ಅಬ್ಬರದ ಡಿ.ಜೆ, ಧ್ವನಿವರ್ಧಕಗಳನ್ನು ಬಳಸದಂತೆ ಮಂಟಪ ಸಮಿತಿಗಳಿಗೆ ಸೂಚಿಸಿದೆ. ಜತೆಗೆ, ಲೇಸರ್‌ ಲೈಟ್‌ಗಳ ಬಳಕೆ ನಿಷೇಧ ಸೇರಿದಂತೆ ಹಲವು ನಿರ್ಬಂಧಗಳನ್ನು ಹೇರಿದೆ.

ಈಗಾಗಲೇ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಜರಾಜನ್ ಅವರು ಕರ್ಕಶ ಧ್ವನಿ ಹೊಮ್ಮಿಸುವ ಪೀಪಿ, ಮುಖವಾಡಗಳ ಮಾರಾಟ ಮತ್ತು ಬಳಕೆ ಎರಡನ್ನೂ ನಿಷೇಧಿಸಿದ್ದಾರೆ.

ರಾತ್ರಿ 8 ಗಂಟೆಯ ನಂತರ ದಶಮಂಟಪಗಳ ಶೋಭಾಯಾತ್ರೆ ಆರಂಭವಾಗಲಿದ್ದು, ಮೊದಲಿಗೆ ಪೇಟೆ ಶ್ರೀರಾಮಮಂದಿರದ ಮಂಟಪ ಹೊರಡಲಿದೆ.

ಪೇಟೆ ಶ್ರೀರಾಮಮಂದಿರವು ₹ 10 ಲಕ್ಷ ವೆಚ್ಚದಲ್ಲಿ ಮಂಟಪ ಸಿದ್ಧಪಡಿಸುತ್ತಿದ್ದು, ‘ವೈಕುಂಠ ದರ್ಶನ’ ಕಥಾವಸ್ತುವನ್ನು ಆಯ್ದುಕೊಂಡಿದೆ. 10 ಕಲಾಕೃತಿಗಳು ಈ ಮಂಟಪದಲ್ಲಿರಲಿದ್ದು, ಗಾಂಧಿ ಮೈದಾನದಲ್ಲಿ ರಾತ್ರಿ 10 ಗಂಟೆಗೆ ತೀರ್ಪುಗಾರರ ಮುಂದೆ ಈ ಮಂಟಪ ಪ್ರದರ್ಶನ ನೀಡಲಿದೆ.

ಈ ಮಂಟಪದ ತರುವಾಯ ಹೊರಡುವ ದೇಚೂರು ಶ್ರೀರಾಮಮಂದಿರದ ಮಂಟಪದಲ್ಲಿ ಈ ಬಾರಿ ‘ಮಧು ಕೈಟಬರ ವಧೆ’ ಕಥಾವಸ್ತು ಪ್ರದರ್ಶನ ಕಾಣಲಿದೆ. ₹ 10 ಲಕ್ಷ ವೆಚ್ಚದಲ್ಲಿ ನಿರ್ಮಾಣವಾಗುವ ಈ ಮಂಟಪದಲ್ಲಿ 24 ಕಲಾಕೃತಿಗಳು ಇರಲಿವೆ. ಈ ಮಂಟಪ ರಾತ್ರಿ 11 ಗಂಟೆಗೆ ಆಂಜನೇಯ ದೇಗುಲದ ಮುಂಭಾಗ ಪ್ರದರ್ಶನ ನೀಡಲಿದೆ.

ನಂತರ ಬರುವ ದಂಡಿನ ಮಾರಿಯಮ್ಮ ದೇಗುಲ ಮಂಟಪ‍ದಲ್ಲಿ ‘ಪರಶಿವನಿಂದ ಜಲಂಧರನ ಸಂಹಾರ’ ಕಥಾವಸ್ತುವನ್ನು ₹ 20 ಲಕ್ಷ ವೆಚ್ಚದಲ್ಲಿ ಪ್ರದರ್ಶಿಸಲಾಗುತ್ತಿದ. ಇದರಲ್ಲಿ 23 ಕಲಾಕೃತಿಗಳು ಇರಲಿದ್ದು, ನಸುಕಿನ 3 ಗಂಟೆಗೆ ಕೊಡವ ಸಮಾಜದ ಮುಂಭಾಗ ತೀರ್ಪುಗಾರರ ಮುಂದೆ ಪ್ರದರ್ಶನ ನೀಡಲಿದೆ.

ಚೌಡೇಶ್ವರಿ ದೇಗುಲದ ಮಂಟಪವು ‘ಶ್ರೀ ಕಟೀಲ್ ಕ್ಷೇತ್ರ ಮಹಾತ್ಮೆ’ಯನ್ನು ಕಥಾವಸ್ತುವನ್ನು ಆಯ್ದುಕೊಂಡಿದೆ. ₹ 20 ಲಕ್ಷ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಈ ಮಂಟಪದಲ್ಲಿ 24 ಕಲಾಕೃತಿಗಳು ಇರಲಿವೆ. ಇದು ರಾತ್ರಿ 12.30ಕ್ಕೆ ಹೋಟೆಲ್ ಪಾಪ್ಯೂಲರ್ ಮುಂಭಾಗ ತೀರ್ಪುಗಾರರ ಮುಂದೆ ಪ್ರದರ್ಶನ ಕೊಡಲಿದೆ.

ಕಂಚಿ ಕಾಮಾಕ್ಷಿ ದೇಗುಲ ಮಂಟಪವು ‘ಶಿವನಿಂದ ತ್ರಿಪುರಾಸುರರ ವಧೆ’ ಪ್ರಸಂಗವನ್ನು ಪ್ರಸ್ತುತಪಡಿಸಲಿದೆ. ಇದಕ್ಕೆಂದೇ ₹ 27 ಲಕ್ಷ ವೆಚ್ಚದಲ್ಲಿ ಮಂಟಪ ಸಿದ್ಧಪಡಿಸುತ್ತಿದ್ದು, ಇದರಲ್ಲಿ 28 ಕಲಾಕೃತಿಗಳು ಇರಲಿವೆ. ತೀರ್ಪುಗಾರರು ನಸುಕಿನ 3.30ಕ್ಕೆ ವಿನೋದ್ ಮೆಡಿಕಲ್ಸ್ ಮುಂಭಾಗ ಇದರ ಪ್ರದರ್ಶನ ವೀಕ್ಷಿಸಲಿದ್ದಾರೆ.

ಚೌಟಿ ಮಾರಿಯಮ್ಮ ದೇಗುಲದ ಮಂಟಪದಲ್ಲಿ ಈ ಬಾರಿ ‘ಕದಂಬ ಕೌಶಿಕೆ’ಯ ಕಥೆಯನ್ನು ಪ್ರಸ್ತುತಪಡಿಸಲು ಅಗತ್ಯ ಸಿದ್ಧತೆ ನಡೆಸಲಾಗಿದೆ. ₹ 26 ಲಕ್ಷ ವೆಚ್ಚದಲ್ಲಿ ಸಿದ್ಧಗೊಳ್ಳುವ ಮಂಟಪದಲ್ಲಿ 24 ಕಲಾಕೃತಿಗಳು ಇರಲಿವೆ. ಈ ಮಂಟಪವು ನಸುಕಿನ 4 ಗಂಟೆಗೆ ಕಾವೇರಿ ಕಲಾಕ್ಷೇತ್ರದ ಮುಂಭಾಗ ತೀರ್ಪುಗಾರರ ಸಮ್ಮುಖದಲ್ಲಿ ಪ್ರದರ್ಶನ ನೀಡಲಿದೆ.

ಕೋದಂಡರಾಮ ದೇಗುಲವು ಪ್ರಸ್ತತಪ‍ಡಿಸುವ ಮಂಟಪದಲ್ಲಿ ಮಣಿಕಂಠನಿಂದ ಮಹಿಷಿಯ ಶಾಪ ವಿಮೋಚನಾ ಪ್ರಸಂಗವು ಪ್ರದರ್ಶನ ಕಾಣಲಿದೆ. ₹ 20 ಲಕ್ಷ ವೆಚ್ಚದಲ್ಲಿ ಸಿದ್ಧವಾಗುತ್ತಿರುವ ಮಂಟಪದ ಪ್ರದರ್ಶನವನ್ನು ತೀರ್ಪುಗಾರರು ರಾತ್ರಿ 1.45ರ ಹೊತ್ತಿಗೆ ಮೆಟ್ರೊ ಫ್ರೆಷ್ ಮುಂಭಾಗ ವೀಕ್ಷಿಸಲಿದ್ದಾರೆ.

ಕೋಟೆ ಮಾರಿಯಮ್ಮ ದೇಗುಲವು ಮಂಟಪದಲ್ಲಿ ಪಂಚಮುಖಿ ಆಂಜನೇಯನಿಂದ ಅಹಿರಾವಣ ಮಹಿರಾವಣರ ಸಂಹಾರ ಕಥಾವಸ್ತುವನ್ನು ಪ್ರಸ್ತುತಪಡಿಸಲಿದೆ. ಇದಕ್ಕಾಗಿ ₹ 25 ಲಕ್ಷ ವೆಚ್ಚ ಮಾಡಲಾಗುತ್ತಿದ್ದು, ತೀರ್ಪುಗಾರರ ಮುಂದೆ ರಾತ್ರಿ 1.45ಕ್ಕೆ ಪ್ರದರ್ಶನ ನೀಡಲಿದೆ.

ಕೋಟೆ ಗಣಪತಿ ದೇಗುಲವು ಈ ಬಾರಿ ಮಂಟಪದಲ್ಲಿ ‘ಮಹಾ ಗಣಪತಿಯಿಂದ ಶತಮಾಹಿಷೆಯ ಸಂಹಾರ’ ಕಥಾ ವಸ್ತುವನ್ನು ಪ್ರಸ್ತುತಪಡಿಸಲಿದೆ. ಇದಕ್ಕಾಗಿ ₹ 31.5 ಲಕ್ಷವನ್ನು ವೆಚ್ಚ ಮಾಡುತ್ತಿದ್ದು, ಬರೋಬರಿ 30 ಕಲಾಕೃತಿಗಳು ಇದರಲ್ಲಿ ಇರಲಿವೆ. ಇದಕ್ಕಾಗಿ ಬಿರುಸಿನ ಸಿದ್ಧತೆ ನಡೆದಿದ್ದು, ತೀರ್ಪುಗಾರರ ಮುಂದೆ ರಾತ್ರಿ 11.45ಕ್ಕೆ ಪ್ರದರ್ಶನ ನೀಡಲಿದೆ.

ಕರವಲೆ ಭಗವತಿ ದೇಗುಲು ಈ ಬಾರಿ ‘ಉಗ್ರ ನರಸಿಂಹನಿಂದ ಹಿರಣ್ಯಕಶ್ಯಪು ಸಂಹಾರ’ ಕಥಾವಸ್ತುವನ್ನು ಮಂಟಪದಲ್ಲಿ ಪ್ರಸ್ತುತಪಡಿಸಲು ಸಿದ್ಧತೆ ನಡೆಸುತ್ತಿದೆ. ಇದಕ್ಕಾಗಿ ₹ 22 ಲಕ್ಷ ವೆಚ್ಚ ಮಾಡುತ್ತಿದ್ದು, 22 ಕಲಾಕೃತಿಗಳನ್ನು ರೂಪಿಸಲಾಗುತ್ತಿದೆ. ತೀರ್ಪುಗಾರರು ನಸುಕಿನ 2.15ಕ್ಕೆ ಮಂಟಪದ ಪ್ರದರ್ಶನವನ್ನು ಸಿಂದೂರ್ ಬಟ್ಟೆ ಮಳಿಗೆ ಮುಂಭಾಗ ವೀಕ್ಷಿಸಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT