ಶುಕ್ರವಾರ, ನವೆಂಬರ್ 22, 2019
24 °C
ಪ್ರವಾಸಿಗರ ಸೆಳೆಯಲು ಯಶಸ್ವಿಯಾಗುವುದೇ ನವರಾತ್ರಿ ವೈಭವ?

ಮಡಿಕೇರಿ ದಸರಾ | ಅನುದಾನದ ಭರವಸೆ ಸಿಕ್ಕರೂ ಸಿದ್ಧತೆ ವಿಳಂಬ

Published:
Updated:
Prajavani

ಮಡಿಕೇರಿ: ಅತ್ತ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ನವರಾತ್ರಿ ರಂಗಿಗೆ ಸಿದ್ಧತೆಗಳು ಬಲು ಜೋರಾಗಿವೆ. ಅಷ್ಟೇ ಪ್ರಸಿದ್ಧಿ ಪಡೆದಿರುವ ‘ಮಂಜಿನ ನಗರಿ’ ಮಡಿಕೇರಿ ದಸರಾಕ್ಕೆ ಮಾತ್ರ ಸಿದ್ಧತೆಗಳು ಕಾಣಿಸುತ್ತಿಲ್ಲ.

ಮಡಿಕೇರಿಯಲ್ಲಿ ಮಳೆಯ ಅಬ್ಬರ ತುಸು ಕಡಿಮೆಯಾಗಿದ್ದು ದಸರಾ ಕಾರ್ಯಕ್ರಮದ ರೂಪುರೇಷೆಗಳು ಆರಂಭಗೊಳ್ಳಬೇಕಿತ್ತು. ನವರಾತ್ರಿ ಸಂಭ್ರಮಕ್ಕೆ ಕೆಲವೇ ದಿನಗಳು ಬಾಕಿಯಿದ್ದು, ಸಣ್ಣ ತಯಾರಿಯೂ ಗೋಚರಿಸುತ್ತಿಲ್ಲ.

ದಸರಾ ಸಮಿತಿ ಸಭೆಗಳು ಪದಾಧಿಕಾರಿಗಳ ಆಯ್ಕೆಗಷ್ಟೇ ಸೀಮಿತವಾಗಿವೆ ಎಂಬ ಆರೋಪಗಳು ಕೇಳಿಬಂದಿವೆ. ಇನ್ನೂ ಅಧಿಕೃತವಾಗಿ ಜಿಲ್ಲಾ ಉಸ್ತುವಾರಿ ಸಚಿವರು ನೇಮಕವಾಗಿಲ್ಲ. ಇದು ಸ್ವಲ್ಪ ಸಿದ್ಧತೆ ಹಿನ್ನಡೆಗೆ ಕಾರಣವಾಗಿದೆ.

ರಾಜ್ಯ ಸರ್ಕಾರವು ಈ ವರ್ಷ ಮಡಿಕೇರಿ ದಸರಾಕ್ಕೆ ₹ 1 ಕೋಟಿ ಅನುದಾನ ಘೋಷಿಸಿದೆ. ಇದು ಇತ್ತೀಚಿನ ವರ್ಷಕ್ಕೆ ಹೋಲಿಸಿದರೆ ದೊಡ್ಡ ಮೊತ್ತವೇ ಸರಿ. ಆದರೆ, ತಯಾರಿ ಮಾತ್ರ ನಿರಾಸೆ ತಂದಿದೆ. ಪೂರ್ಣ ಪ್ರಮಾಣದಲ್ಲಿ ತಯಾರಿ ಮಾಡಿಕೊಂಡು ದಸರಾ ಆಚರಿಸದಿದ್ದರೆ ಅಧಿಕಾರಿಗಳು ಅನುದಾನಕ್ಕೆ ತಕರಾರರು ತೆಗೆಯುತ್ತಾರೆ ಎಂಬ ಅಳಕು ಇದೆ.   

2018ರಲ್ಲಿ ಪ್ರಾಕೃತಿಕ ವಿಕೋಪವು ಮಡಿಕೇರಿ ದಸರೆಯ ಮೇಲೂ ಪರಿಣಾಮ ಬೀರಿತ್ತು. ಸರಳವಾಗಿ ದಸರಾ ಆಚರಣೆ ಮಾಡಲಾಗಿತ್ತು. ಕೊನೆಯ ದಿನ ಮಾತ್ರ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಲಾಗಿತ್ತು. ಪ್ರವಾಸಿಗರೂ ಮಡಿಕೇರಿಯತ್ತ ಹೆಚ್ಚಿನ ಸಂಖ್ಯೆಯಲ್ಲಿ ಬಂದಿರಲಿಲ್ಲ.

ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಸಾ.ರಾ.ಮಹೇಶ್‌ ಅವರು, 2018ರಲ್ಲಿ ₹ 50 ಲಕ್ಷ ಅನುದಾನ ಘೋಷಣೆ ಮಾಡಿದ್ದರು. ಆ ಹಣವು ಇನ್ನೂ ಸಮಿತಿಗಳ ಕೈಸೇರಿಲ್ಲ. ಈ ಬಾರಿ ₹ 1 ಕೋಟಿ ಘೋಷಿಸಲಾಗಿದೆ. ಅನುದಾನದ ಭರವಸೆ ನೀಡಿದರೂ ಅದನ್ನು ಬಿಡುಗಡೆ ಮಾಡಲು ಮೀನಾಮೇಷ ಎಣಿಸಲಾಗುತ್ತಿದೆ ಎಂಬುದು ದಸರಾ ಸಮಿತಿ ಹಾಗೂ ದಶಮಂಟಪ ಸಮಿತಿ ಸದಸ್ಯರ ನೋವು. ಅದೇ ಕಾರಣಕ್ಕೆ ನಾವೂ ಲೆಕ್ಕಾಚಾರ ಹಾಕಿಯೇ ಕಾರ್ಯಕ್ರಮ ಸಿದ್ಧ ಮಾಡಿಕೊಳ್ಳಬೇಕು. ದಶಮಂಟಪ, ಕರಗ ಸಮಿತಿಯವರಿಗೆ ಸುಮ್ಮನೇ ಭರವಸೆ ನೀಡಲು ಸಾಧ್ಯವಿಲ್ಲ ಎಂದು ಪದಾಧಿಕಾರಿಯೊಬ್ಬರು ಹೇಳಿದರು.

‘ಸರಳವೂ ಅಲ್ಲ; ಅದ್ದೂರಿಯೂ ಅಲ್ಲ. ಸಾಂಪ್ರದಾಯಿಕ ರೀತಿಯಲ್ಲಿಯೇ ಐತಿಹಾಸಿಕ ಮಡಿಕೇರಿ ದಸರಾ ಆಚರಿಸುತ್ತೇವೆ. ಈ ವರ್ಷ ಒಂಬತ್ತು ದಿನಗಳೂ ಕಾರ್ಯಕ್ರಮಗಳು ನಡೆಯಲಿವೆ. ಇದೇ ಸೋಮವಾರ (ಸೆ.16) ಸಭೆ ನಡೆಯಲಿದ್ದು, ಅಲ್ಲಿ ಅಂತಿಮ ತೀರ್ಮಾನ ಕೈಗೊಳ್ಳುತ್ತೇವೆ’ ಎಂದು ನೂತನ ಕಾರ್ಯಾಧ್ಯಕ್ಷ ರಾಬಿನ್‌ ದೇವಯ್ಯ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ಎಲ್ಲ ಕಾರ್ಯಕ್ರಮಗಳೂ ಇರಲಿವೆ:

ಈ ಬಾರಿ ದಸರಾಕ್ಕೆ ಸಂಬಂಧಿಸಿದ ಎಲ್ಲ ಕಾರ್ಯಕ್ರಮಗಳೂ ನಡೆಯಲಿವೆ. ಯಾವುದನ್ನೂ ರದ್ದು ಪಡಿಸುವುದಿಲ್ಲ. ಕ್ರೀಡಾಕೂಟ, ಕವಿಗೋಷ್ಠಿ, ಮಕ್ಕಳ ದಸರಾ, ಮಹಿಳಾ ದಸರಾ, ಒಂಬತ್ತು ದಿನವೂ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ ಎಂದೂ ರಾಬಿನ್‌ ದೇವಯ್ಯ ಮಾಹಿತಿ ನೀಡಿದರು.

ಪ್ರವಾಸಿಗರ ಸೆಳೆಯಲು ಯಶಸ್ವಿಯಾಗುವುದೇ?:

2018ರಲ್ಲಿ ಸರಳ ದಸರಾ, ಭೂಕುಸಿತದ ಭಯದಿಂದ ಪ್ರವಾಸಿಗರೂ ಮಡಿಕೇರಿಯತ್ತ ಬಂದಿರಲಿಲ್ಲ. ಕೊಡಗು ಹೋಟೆಲ್ ರೆಸಾರ್ಟ್, ರೆಸ್ಟೋರೆಂಟ್ ಅಸೋಸಿಯೇಷನ್‌ ಮನವಿಯಂತೆ ಕಳೆದ ಜನವರಿಯಲ್ಲಿ ಕೊಡಗು ಪ್ರವಾಸಿ ಉತ್ಸವ ಆಯೋಜಿಸಲಾಗಿತ್ತು. ಅದಕ್ಕೆ ಉತ್ತಮ ಸ್ಪಂದನೆಯೂ ಸಿಕ್ಕಿತ್ತು. ಅದಾದ ನಂತರ ಪ್ರವಾಸೋದ್ಯಮ ಚೇತರಿಕೆಯತ್ತ ಸಾಗುತ್ತಿತ್ತು. ಈ ವರ್ಷ ಆಗಸ್ಟ್‌ನಲ್ಲಿ ಮತ್ತೆ ಪ್ರವಾಹ ಸ್ಥಿತಿ ಉಂಟಾಗಿತ್ತು. ಹೀಗಾಗಿ, ಪ್ರವಾಸಿಗರ ಸಂಖ್ಯೆಯೂ ಕ್ಷೀಣಿಸಿದೆ. ಈ ವರ್ಷದ ನವರಾತ್ರಿಯ ವೈಭವ ಪ್ರವಾಸಿಗರ ಸೆಳೆಯಲು ಯಶಸ್ವಿಯಾಗುವುದೇ ಎಂಬ ಚರ್ಚೆ ಆರಂಭವಾಗಿದೆ.
 

ಪ್ರತಿಕ್ರಿಯಿಸಿ (+)