ಹಲವು ಕಡೆ ಸಂಪರ್ಕ ಕಳೆದುಕೊಂಡ ಜಿಲ್ಲಾ ಕೇಂದ್ರ ಮಡಿಕೇರಿ: ಮಳೆಯಲ್ಲೂ ದೇಶಪ್ರೇಮ

ಮಡಿಕೇರಿ: ಕೊಡಗು ಜಿಲ್ಲೆಯ ವಿವಿಧೆಡೆ ಮಳೆಯ ನಡುವೆಯೂ ದೇಶಪ್ರೇಮ ಮೆರೆಯಲಾಯಿತು. ಮಡಿಕೇರಿ ಕೋಟೆ ಆವರಣದಲ್ಲಿ ಸುರಿಯುತ್ತಿರುವ ಮಳೆ ನಡುವೆ ಜಿಲ್ಲಾ ಉಸ್ತುವಾರಿ ಸಚಿವ ಸಾ.ರಾ. ಮಹೇಶ್ ಧ್ವಜಾರೋಹಣ ನೆರವೇರಿಸಿದರು.
ಮಳೆ ಹಾಗೂ ಚಳಿಯ ಕಾರಣಕ್ಕೆ ಶಾಲಾ ವಿದ್ಯಾರ್ಥಿಗಳ ಹಾಗೂ ಪೊಲೀಸ್ ಪಥಸಂಚಲನ ರದ್ದು ಮಾಡಲಾಯಿತು. ಕಾರ್ಯಕ್ರಮವೂ ಸರಳವಾಗಿ ಕೆಲವೇ ನಿಮಿಷಗಳಲ್ಲಿ ಮುಕ್ತಾಯಗೊಳಿಸಲಾಯಿತು.
ಇನ್ನು ವಿರಾಜಪೇಟೆ ತಾಲ್ಲೂಕಿನಲ್ಲಿ ಬೇತ್ರಿ ಗ್ರಾಮವು ಕಾವೇರಿ ನದಿಯ ಪ್ರವಾಹಕ್ಕೆ ತುತ್ತಾಗಿದ್ದು, ಗ್ರಾಮಸ್ಥರು ರಸ್ತೆಯ ತುಂಬೆಲ್ಲಾ ಆವರಿಸಿದ್ದ ನೀರಿನಲ್ಲಿ ತೆಪ್ಪ ಬಳಸಿ, ಧ್ವಜಾರೋಹಣ ನೆರವೇರಿಸಿದರು. ಸಿದ್ದಾಪುರ ಸಮೀಪದ ನೆಲ್ಯಹುದಿಕೇರಿ ಗ್ರಾಮದಲ್ಲೂ ಗ್ರಾಮಸ್ಥರು ಜಲಾವೃತ ರಸ್ತೆಬದಿಯಲ್ಲಿ ಧ್ವಜಾರೋಹಣ ನೆರವೇರಿಸಿದರು.
ಸಂಪರ್ಕ ಕಡಿತ: ಹಾರಂಗಿ ಜಲಾಶಯದಿಂದ 45 ಸಾವಿರ ಕ್ಯುಸೆಕ್ ನೀರನ್ನು ನದಿಗೆ ಬಿಡುಗಡೆ ಮಾಡಲಾಗುತ್ತಿದ್ದು, ಕುಶಾಲನಗರ– ಹಾಸನ ಮಾರ್ಗ ಬಂದ್ ಆಗಿದೆ. ಕಾವೇರಿ ಬಡಾವಣೆಗೆ ನೀರು ನುಗ್ಗಿ ಬಹಳಷ್ಟು ಹಾನಿ ಸಂಭವಿಸಿದೆ. ಇನ್ನು ಮೈಸೂರು– ಬಂಟ್ವಾಳ ರಾಷ್ಟ್ರೀಯ ಹೆದ್ದಾರಿಯಲ್ಲಿ ಪದೇ ಪದೇ ಮಣ್ಣು ಕುಸಿಯುತ್ತಿದ್ದು ಹೆದ್ದಾರಿ ಅಪಾಯಕಾರಿ ಆಗುತ್ತಿದೆ. ಎರಡು ದಿನಗಳಿಂದ ರಸ್ತೆ ಬಂದ್ ಆಗಿದೆ. ಜಿಲ್ಲೆಯ ಹಲವು ಕಡೆ ಗುಡ್ಡ ಕುಸಿತ ಪ್ರಕರಣಗಳು ವರದಿಯಾಗಿವೆ.
ಸುರಕ್ಷಿತ ಸ್ಥಳಕ್ಕೆ ಜನರ ಸ್ಥಳಾಂತರ
ಕೊಡಗಿನಲ್ಲಿ ಸುರಿಯುತ್ತಿರುವ ಮಳೆಯಿಂದ ಸಾಕಷ್ಟು ಅನಾಹುತಗಳು ಸಂಭವಿಸುತ್ತಿವೆ. ಹಾರಂಗಿ ಜಲಾಶಯದಿಂದ 45 ಸಾವಿರ ಕ್ಯುಸೆಕ್ ನೀರನ್ನು ನದಿಗೆ ಬಿಡಲಾಗುತ್ತಿದ್ದು ಕುಶಾಲನಗರದ ಹಲವು ಬಡಾವಣೆಗಳು ನೀರಿನಲ್ಲಿ ಮುಳುಗಿವೆ. ಕ್ಷಿಪ್ರ ಕಾರ್ಯ ಪಡೆ 30 ಜನರ ತಂಡ ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಪ್ರವಾಹದಲ್ಲಿ ಸಿಲುಕಿದ್ದವರನ್ನು ಸುರಕ್ಷಿತ ಸ್ಥಳಕ್ಕೆ ಕರೆ ತರುತ್ತಿದ್ದಾರೆ. ಹಲವು ಕಡೆ ಗಂಜಿಕೇಂದ್ರ ತೆರೆಯಲಾಗಿದೆ. ತುಸು ಮಳೆ ಬಿಡುವು ನೀಡಿದ್ದರೂ ಪ್ರವಾಹ ಸ್ಥಿತಿ ತಗ್ಗುತ್ತಿಲ್ಲ.
ಜಿಲ್ಲಾ ಕೇಂದ್ರವು ಹೊರ ಜಿಲ್ಲೆಗಳ ಸಂಪರ್ಕ ಕಳೆದುಕೊಳ್ಳುತ್ತಿದೆ. ಹಲವು ಗ್ರಾಮಗಳು ಎರಡು ದಿನಗಳಿಂದ ಕತ್ತಲೆಯಲ್ಲಿ ಮುಳುಗಿವೆ. ಮೂರ್ನಾಡು– ನಾಪೋಕ್ಲು, ಭಾಗಮಂಡಲ–ಅಯ್ಯಂಗೇರಿ, ಮಡಿಕೇರಿ– ವಿರಾಜಪೇಟೆ ಸಂಪರ್ಕ ಕಡಿತವಾಗಿದೆ.
ಭಾಗಮಂಡಲ ತ್ರಿವೇಣಿ ಸಂಗಮವು ಜಲಾವೃತ ಸ್ಥಿತಿಯಲ್ಲೇ ಇದ್ದು, ಕೊರೆಯುವ ಚಳಿಗೆ ಜನರು ಹೈರಾಣಾಗಿದ್ದಾರೆ.
“ಜಿಲ್ಲೆಯ ಪರಿಸ್ಥಿತಿಯ ಬಗ್ಗೆ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರ ಬಳಿಯಲ್ಲೂ ಚರ್ಚಿಸಿದ್ದೇನೆ. ಜಿಲ್ಲೆಯ ಜನರು ಧೃತಿಗೇಡುವ ಅಗತ್ಯ ಇಲ್ಲ. ಜಿಲ್ಲೆಯ ಜನರ ಸಂಕಷ್ಟಕ್ಕೆ ಸರ್ಕಾರ ಸ್ಪಂದಿಸಲಿದೆ’ ಎಂದು ಸಚಿವ ಸಾ.ರಾ. ಮಹೇಶ್ ಭರವಸೆ ನೀಡಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.