
ಹಂಪಿ ಭಾಗದಲ್ಲಿ ರಾಜ್ಯ ಪುರಾತತ್ವ ಇಲಾಖೆಯ ಸುಪರ್ದಿಯಲ್ಲಿ 1,200ರಷ್ಟು ಸಂರಕ್ಷಿತ ಪ್ರದೇಶಗಳಿವೆ. ಜನಪ್ರಿಯ ಹಾಗೂ ಶಿಥಿಲಗೊಂಡವುಗಳ ಸಂರಕ್ಷಣೆಗೆ ಮೊದಲ ಆದ್ಯತೆ ನೀಡುತ್ತಿದ್ದೇವೆ. ಹೊಸಪೇಟೆ ಸಮೀಪದ ಜಂಬುನಾಥ ದೇವಸ್ಥಾನದ ಜೀರ್ಣೋದ್ಧಾರ ಇಂತಹವುಗಳಲ್ಲಿ ಒಂದು. ಈ ದೇವಸ್ಥಾನದ ಬಳಿಯಲ್ಲೇ ದಶಕದ ಹಿಂದೆ ನಡೆಯುತ್ತಿದ್ದ ಗಣಿಗಾರಿಕೆಯು ಜನರ ಹೋರಾಟ, ಇಲಾಖೆಯ ಕಾಳಜಿಯಿಂದ ಸ್ಥಗಿತಗೊಂಡಿತ್ತು. ಮುಜರಾಯಿ ಇಲಾಖೆಯಿಂದ ಪೂಜೆ ಹಾಗೂ ಪುರಾತತ್ವ ಇಲಾಖೆಯಿಂದ ಸಂರಕ್ಷಣೆ ನಡೆಯುವ ಕಡೆ ಸೂಕ್ಷ್ಮವಾಗಿ ಪರಿಸ್ಥಿತಿ ನಿರ್ವಹಿಸಬೇಕು.-ಆರ್.ಶೇಜೇಶ್ವರ, ಉಪನಿರ್ದೇಶಕ, ರಾಜ್ಯ ಪುರಾತತ್ವ ಮತ್ತು ವಸ್ತುಸಂಗ್ರಹಾಲಯಗಳ ಇಲಾಖೆ
ಮಹತ್ವದ ಸ್ಮಾರಕಗಳು ಇನ್ನೂ ಕೇಂದ್ರ, ರಾಜ್ಯ ಪುರಾತತ್ವ ಇಲಾಖೆಗಳ ಸುಪರ್ದಿಗೆ ಬಾರದಿದ್ದರೆ ತಕ್ಷಣ ಸುಪರ್ದಿಗೆ ತರಬೇಕು. ಮೂಲ ರಚನೆಗೆ ಧಕ್ಕೆಯಾಗದಂತೆ ದುರಸ್ತಿ ಮಾಡಬೇಕು. ಕಳೆ, ಸಸ್ಯಗಳು ಬೆಳೆಯದಂತೆ ನಿರ್ವಹಿಸಬೇಕು. ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಬಾರದಂತೆ ನಿಯಂತ್ರಿಸಬೇಕು. ಡ್ರೋನ್, ಜಿಐಎಸ್ ಸರ್ವೇಯಂತಹ ಆಧುನಿಕ ತಂತ್ರಜ್ಞಾನ ಬಳಸಿ ಹಾನಿ ಗುರುತಿಸಬೇಕು. ದುರಸ್ತಿಗೆ ಕ್ರಮ ಕೈಗೊಳ್ಳಬೇಕು.-ಪ್ರೊ.ಎಸ್.ವೈ.ಸೋಮಶೇಖರ್, ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ಅಧ್ಯಯನ ವಿಭಾಗ, ಹಂಪಿ ಕನ್ನಡ ವಿಶ್ವವಿದ್ಯಾಲಯ
ಪ್ರಾಚೀನ ಸ್ಮಾರಕಗಳ ರಕ್ಷಣೆಗಿಂತ ಮೊದಲು ಅದರ ಸುತ್ತಲು ವಾಸಿಸುತ್ತಿರುವ ಜನರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಪ್ರವಾಸಿಗರಿಗೆ ಮೂಲ ಸೌಕರ್ಯ ಒದಗಿಸಬೇಕು. ಉಡುಪಿ ಜಿಲ್ಲೆಯ ಅವಲಕ್ಕಿಪಾರೆ, ಬುದ್ಧನ ಜೆಡ್ಡು, ಗಾವಳಿಯಲ್ಲಿರುವ ಆದಿಮ ಕಲೆ ಇರುವ ಸ್ಥಳಗಳನ್ನು ರಕ್ಷಿಸಿ, ಹೆಚ್ಚಿನ ಅಧ್ಯಯನ ನಡೆಸಬೇಕು.– ಪ್ರೊ. ಟಿ. ಮುರುಗೇಶಿ, ಮೂಲ್ಕಿ ಸುಂದರ್ ರಾಮ್ ಶೆಟ್ಟಿ ಕಾಲೇಜಿನ ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ಶಾಸ್ತ್ರ ವಿಭಾಗದ ನಿವೃತ್ತ ಪ್ರಾಧ್ಯಾಪಕ
ಕಲಬುರಗಿ ಜಿಲ್ಲೆಯ ಪ್ರವಾಸಿ ತಾಣಗಳನ್ನು ನೋಡಿದರೆ ತೀವ್ರ ನಿರಾಸೆಯಾಗುತ್ತದೆ. ನಾಲ್ಕೈದು ವರ್ಷಗಳ ಹಿಂದೆ ವಿದೇಶಿ ಪ್ರವಾಸಿಗರು ಕಲಬುರಗಿ ತಾಣಗಳ ವೀಕ್ಷಣೆ ಸಲುವಾಗಿ ಇಲ್ಲಿಯೇ ವಾಸ್ತವ್ಯ ಮಾಡುತ್ತಿದ್ದರು. ಈಗ ಬೀದರ್, ವಿಜಯಪುರಕ್ಕೆ ತೆರಳುತ್ತಿದ್ದಾರೆ. ರಾಜ್ಯ ಪುರಾತತ್ವ ಇಲಾಖೆಗೆ ಬಜೆಟ್‌ನಲ್ಲಿ ಹೆಚ್ಚಿನ ಅನುದಾನ ನೀಡಿ ದುರಸ್ತಿ ಮಾಡಿ ಸಂರಕ್ಷಿಸಬೇಕು.-ಪ್ರೊ. ಶಂಭುಲಿಂಗ ವಾಣಿ, ಇತಿಹಾಸತಜ್ಞ.
ಪುರಾತತ್ವ ವಸ್ತುಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಗೆ ದೊರಕುತ್ತಿರುವ ಅನುದಾನಕ್ಕೆ ಕೊರತೆ ಇಲ್ಲ. ಪ್ರತಿ ವರ್ಷ ₹ 15 ಕೋಟಿ ನಿರ್ವಹಣೆಗೆ ಬರುತ್ತಿದೆ. ಇತರೆ ಅನುದಾನಗಳನ್ನೂ ಸೇರಿಸಿಕೊಂಡು ಆದ್ಯತೆಯ ಮೇರೆಗೆ ಸ್ಮಾರಕಗಳನ್ನು ನಿರ್ವಹಿಸಲಾಗುತ್ತಿದೆ.-ಎ.ದೇವರಾಜು, ಪುರಾತತ್ವ ವಸ್ತುಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯ ಆಯುಕ್ತ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.