ಕೋಟೆ ಸಂರಕ್ಷಣೆಯ ಕೆಲಸ ಆರಂಭ

7
ಕೊನೆಗೂ ಕ್ರಮಕ್ಕೆ ಮುಂದಾದ ಭಾರತೀಯ ಪುರಾತತ್ವ ಇಲಾಖೆ

ಕೋಟೆ ಸಂರಕ್ಷಣೆಯ ಕೆಲಸ ಆರಂಭ

Published:
Updated:
ಮಡಿಕೇರಿ ಕೋಟೆ ಆವರಣದ ಸುತ್ತ ಕಬ್ಬಿಣದ ಬೇಲಿ ನಿರ್ಮಾಣ ಕಾರ್ಯ

ಮಡಿಕೇರಿ: ಇಲ್ಲಿನ ಐತಿಹಾಸಿಕ ಕೋಟೆಯನ್ನು ಆಕರ್ಷಣೀಯ ತಾಣವಾಗಿ ಅಭಿವೃದ್ಧಿಪಡಿಸಿ, ಕೋಟೆ ಸಂರಕ್ಷಣೆ ಮಾಡಲು ಪುರಾತತ್ವ ಇಲಾಖೆ ಆಶ್ರಯದಲ್ಲಿ ಕೆಲಸಗಳು ಆರಂಭಗೊಂಡಿರುವುದು ಇತಿಹಾಸ ತಜ್ಞರಿಗೆ ನೆಮ್ಮದಿಯನ್ನು ಉಂಟುಮಾಡಿದೆ.

ಕೊಡಗು ಜಿಲ್ಲಾಡಳಿತ ಮತ್ತು ಭಾರತೀಯ ಪುರಾತತ್ವ ಇಲಾಖೆ ಆಶ್ರಯದಲ್ಲಿ ಹಳೇ ಕೋಟೆಯನ್ನು ಮೈಸೂರು ಅರಮನೆ ಮಾದರಿಯಲ್ಲಿ ಅಭಿವೃದ್ಧಿ ಪಡಿಸುವ ಯೋಜನೆಯನ್ನು ಐದು ವರ್ಷಗಳ ಹಿಂದೆಯೇ ರೂಪಿಸಲಾಗಿತ್ತು. ಆದರೆ, ಅದಕ್ಕೆ ಕಾಲ ಮಾತ್ರ ಕೂಡಿಬಂದಿರಲಿಲ್ಲ. ಈಗ ಆಸ್ತಿಯನ್ನು ಸಂರಕ್ಷಣೆ ಮಾಡಲು ಬೇಲಿ ನಿರ್ಮಾಣ ಕಾರ್ಯ ಬರದಿಂದ ಸಾಗುತ್ತಿದೆ.

2014ರಲ್ಲಿ ಕೊಡಗು ಜಿಲ್ಲಾಧಿಕಾರಿ ಆಗಿದ್ದ ಅನುರಾಗ್ ತಿವಾರಿ ಅವರು ಹಿಂದಿನ ಪುರಾತತ್ವ ಇಲಾಖೆ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿ, ಐತಿಹಾಸಿಕ ಸ್ಮಾರಕ ಸಂರಕ್ಷಣೆಗೆ ಮೊದಲ ಹೆಜ್ಜೆ ಇಟ್ಟಿದ್ದರು. ನಂತರ, ಅವರು ವರ್ಗಾವಣೆಗೊಂಡ ಬಳಿಕ, ಆ ಆಲೋಚನೆ ನನೆಗುದಿಗೆ ಬಿದ್ದಿತ್ತು. ಈಗ ಆ ಯೋಜನೆಗೆ ಚಾಲನೆ ಸಿಕ್ಕಿದೆ.

ಶೌಚಾಲಯ ನಿರ್ಮಾಣ; ಆಕ್ಷೇಪ: ಕೋಟೆಯ ಪಕ್ಕದಲ್ಲಿ ಪ್ರವಾಸಿಗರಿಗಾಗಿ ಸುಸಜ್ಜಿತ ಶೌಚಾಲಯ ನಿರ್ಮಾಣ ಕಾರ್ಯವೂ ಆರಂಭಗೊಂಡಿದೆ. ಅಡಿಪಾಯ ಸಹ ಹಾಕಲಾಗಿದೆ. ಆದರೆ, ಮಣ್ಣಿನ ಆವರಣ ಗೋಡೆಯ ಬಳಿಕ ಕಟ್ಟಡ ನಿರ್ಮಾಣ ಮಾಡುತ್ತಿರುವುದು ಸಾರ್ವಜನಿಕರ ಆಕ್ಷೇಪಕ್ಕೆ ಕಾರಣವಾಗಿದೆ. ಕೋಟೆ ವ್ಯಾಪ್ತಿಯ 100 ಮೀಟರ್ ಸುತ್ತ ಯಾವುದೇ ಕಟ್ಟಡಗಳ ನಿರ್ಮಾಣ ಅಥವಾ ಜಾಗ ಒತ್ತುವರಿ ಮಾಡಿಕೊಳ್ಳುವಂತಿಲ್ಲ. ಆದರೂ, ನಿಯಮ ಉಲ್ಲಂಘಿಸಿ ಇಲಾಖೆಯವರೇ ಕಟ್ಟಡ ನಿರ್ಮಾಣ ಮಾಡುತ್ತಿದ್ದಾರೆ ಎಂಬ ಆರೋಪವೂ ಇದೆ.

ಈ ಹಿಂದೆ ಕೋಟೆಯ ಹೊರಭಾಗದಲ್ಲಿ ಆಕರ್ಷಣೀಯ ಉದ್ಯಾನ, ವರ್ಣರಂಜಿತ ಬೆಳಕಿನ ವ್ಯವಸ್ಥೆ, ಕೋಟೆಯ ಹಿಂಭಾಗದಲ್ಲೂ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವ ನಿರ್ಧಾರ ಮಾಡಲಾಗಿತ್ತು. ಅದರಂತೆಯೇ ಕೆಲಸಗಳು ನಡೆಯಲಿ. ಇತಿಹಾಸದ ಕುರುಹುಗಳಿಗೆ ಧಕ್ಕೆ ಆಗಬಾರದು. ಆವರಣದಲ್ಲಿ ಗುಂಡಿಗಳನ್ನು ಮೊದಲು ಮುಚ್ಚಬೇಕು. ಗಿಡಗಂಟಿಗಳನ್ನು ತೆರವುಗೊಳಿಸಿ ಆಕರ್ಷಣೀಯ ತಾಣವಾಗಿ ರೂಪಿಸಬೇಕು ಎಂದು ಸ್ಥಳೀಯ ನಿವಾಸಿ ಅಯ್ಯಪ್ಪ ಆಗ್ರಹಿಸುತ್ತಾರೆ.
– ವಿಕಾಸ್‌ ಬಿ. ಪೂಜಾರಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !