ಕೆ.ಎಸ್.ಗಿರೀಶ
ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಬರದ ಛಾಯೆ ಢಾಳವಾಗಿ ಗೋಚರಿಸಲಾರಂಭಿಸಿದೆ. ಹಿಂದೆಂದೂ ಆಗಸ್ಟ್ ತಿಂಗಳಿನಲ್ಲಿ ಕಂಡರಿಯದ ಬಿಸಿಲು ಎಲ್ಲೆಡೆ ಆವರಿಸಿದ್ದು, ಚಳಿಯಿಂದ ನಡುಗಬೇಕಿದ್ದ ಜನರು ಸೆಖೆಯಿಂದ ಬಳಲುವಂತೆ ಮಾಡಿದೆ.
ಜನವರಿಯಿಂದ ಇಲ್ಲಿಯವರೆಗೆ ಶೇ 45ರಷ್ಟು, ಮುಂಗಾರಿನಲ್ಲಿ ಜೂನ್‌ನಿಂದ ಇಲ್ಲಿಯವರೆಗೆ ಶೇ 46ರಷ್ಟು ಮಳೆ ಕೊರತೆಯಾಗಿದ್ದರೆ, ಶೇ 64ರಷ್ಟು ಬಿತ್ತನೆಯೇ ನಡೆದಿಲ್ಲ.
ಜಿಲ್ಲೆಯಲ್ಲಿ 29 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಭತ್ತದ ಬಿತ್ತನೆ ಗುರಿ ಹೊಂದಲಾಗಿತ್ತು. ಆದರೆ, ಕೇವಲ 18,117 ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿದೆ. ಶೇ 62ರಷ್ಟು ಭತ್ತದ ಬಿತ್ತನೆ ಕೊರತೆ ಉಂಟಾಗಿದೆ.
ಮಳೆಯಿಂದಲೇ ಭತ್ತ ಬೆಳೆಯುತ್ತಿದ್ದ ಪ್ರದೇಶಗಳಲ್ಲಿ ಪೈರುಗಳು ಒಣಗುತ್ತಿವೆ. ಸಮೀಪದ ಕೆರೆಗಳಿಂದ ನೀರು ಹಾಯಿಸುವ ಸ್ಥಿತಿ ಉದ್ಭವಿಸಿದೆ. ಕೆರೆಗಳ ನೀರೂ ಕಡಿಮೆಯಾಗುತ್ತಿದ್ದು, ಒಂದು ವೇಳೆ ಕೆರೆಗಳು ಒಣಗಿದರೆ ಮುಂದೇನು ಎಂಬ ಪ್ರಶ್ನೆ ಕಾಡುತ್ತಿದೆ.
ನಿತ್ಯವೂ ಬಿಸಿಲಿನ ಬೇಗೆ ಹೆಚ್ಚುತ್ತಿದೆ. ಉಕ್ಕುತ್ತಿದ್ದ ನೀರಿನ ಒರತೆಗಳು ಬೇಸಿಗೆ ಕಾಲದಲ್ಲಿ ಆಗುವಂತೆ ಸಂಪೂರ್ಣ ಬತ್ತಿವೆ. ಅಷ್ಟು ಮಾತ್ರವಲ್ಲ, ಗದ್ದೆಗಳಲ್ಲಿ ನೀರಿನ ಒರತೆಯೂ ಕಾಣದಾಗಿದೆ. ಪರಿಸ್ಥಿತಿ ಇದೇ ರೀತಿ ಮುಂದುವರಿದರೆ ಬಿತ್ತಿರುವ ಭತ್ತ ಫಸಲು ಕೊಡುವುದೇ ಅನುಮಾನ ಮೂಡಿಸಿದೆ.
ವಾತಾವರಣದ ಪರಿಸ್ಥಿತಿ ಗಮನಿಸಿದ ಶೇ 60ಕ್ಕೂ ಅಧಿಕ ರೈತರು ಭತ್ತವನ್ನು ಬಿತ್ತನೆ ಮಾಡದೇ ಗದ್ದೆಯನ್ನು ಹಾಗೆಯೇ ಬಿಟ್ಟಿದ್ದಾರೆ. ಮೆಕ್ಕೆಜೋಳದ ಬೆಳೆಯೂ ಒಣಗುತ್ತಿದ್ದು, ರೈತರು ಆತಂಕಗೊಂಡಿದ್ದಾರೆ.
ಸಾಮಾನ್ಯವಾಗಿ ಬೇಸಿಗೆಯಲ್ಲಿ ಕಾಫಿ ತೋಟಗಳಿಗೆ ನೀರನ್ನು ತುಂತುರು ನೀರಾವರಿ ಮೂಲಕ ಪೂರೈಸಲಾಗುತ್ತಿತ್ತು. ಆದರೆ, ಈಗ ಸುಡುತ್ತಿರುವ ಬಿಸಿಲಿನಿಂದ ಕಂಗೆಟ್ಟಿರುವ ರೈತರು ತಮ್ಮ ಕಾಫಿ ತೋಟಗಳಿಗೆ ತುಂತುರು ನೀರಾವರಿ ಮೂಲಕ ನೀರು ಹಾಯಿಸುತ್ತಿದ್ದಾರೆ.
ಬೆಳೆಗಾರರಿಗೆ ಸಲಹೆ
ಕಳೆದ ಕೆಲವು ವಾರಗಳಿಂದ ಮಳೆಯಾಗದೇ ಇರುವುದರಿಂದ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆಯ ಗೋಣಿಕೊಪ್ಪಲಿನ ಕೃಷಿ ವಿಜ್ಞಾನ ಕೇಂದ್ರದ ಜಿಲ್ಲಾ ಕೃಷಿ ಹವಾಮಾನ ಘಟಕವು ಕೆಲವೊಂದು ಸಲಹೆಗಳನ್ನು ಬೆಳೆಗಾರರಿಗೆ ನೀಡಿದೆ.
ಮಣ್ಣಿನಲ್ಲಿರುವ ತೇವಾಂಶವನ್ನು ರಕ್ಷಿಸಲು ಕರಿಮೆಣಸು ಬಳ್ಳಿಗಳು ಹಳದಿ ಬಣ್ಣಕ್ಕೆ ತಿರುಗಿ ಕೊತ್ತು ಉದುರುವುದನ್ನು ತಡೆಗಟ್ಟಲು ಬಳ್ಳಿಯ ಬುಡದ ಭಾಗ ವನ್ನು ಒಣ ತರಗಲೆಗಳಿಂದ ಮುಚ್ಚ ಬೇಕು. ಅಗತ್ಯವಿದ್ದರೆ ನೀರನ್ನು ಒದಗಿಸಬೇಕು. ಭತ್ತದ ಗದ್ದೆಗಳು ಒಣಗುತ್ತಿರುವುದು ಕಂಡು ಬಂದರೆ ತಕ್ಷಣವೇ ನೀರಾವರಿ ವ್ಯವಸ್ಥೆ ಮಾಡಿ, ಗದ್ದೆಯಲ್ಲಿ ನೀರು ನಿಲ್ಲುವಂತೆ ನೋಡಿಕೊಳ್ಳಬೇಕು ಎಂಬ ಸಲಹೆಗಳನ್ನು ಕೇಂದ್ರ ನೀಡಿದೆ.
ಮುಂದಿನ 5 ದಿನ ಬಿರುಸಿನ ಮಳೆ ಇಲ್ಲ
ಮುಂದಿನ 5 ದಿನಗಳವರೆಗೆ ಕೊಡಗು ಜಿಲ್ಲೆಯಲ್ಲಿ ಬಿರುಸಿನ ಮಳೆ ಬೀಳುವ ಲಕ್ಷಣಗಳಿಲ್ಲ ಎಂದು ಗೋಣಿಕೊಪ್ಪಲಿನ ಕೃಷಿ ವಿಜ್ಞಾನದ ಕೇಂದ್ರದ ಜಿಲ್ಲಾ ಕೃಷಿ ಹವಾಮಾನ ಘಟಕ ತಿಳಿಸಿದೆ.
ವಿರಾಜಪೇಟೆ ಹಾಗೂ ಪೊನ್ನಂಪೇಟೆ ತಾಲ್ಲೂಕುಗಳ ಕೆಲವೆಡೆ ಮಾತ್ರ ಗುಡುಗು, ಮಿಂಚಿನಿಂದ ಕೂಡಿದ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಮಡಿಕೇರಿ, ಕುಶಾಲನಗರ ಹಾಗೂ ಸೋಮವಾರಪೇಟೆ ತಾಲ್ಲೂಕುಗಳ ಒಂದೆರಡು ಕಡೆಗಳಲ್ಲಿ ಗುಡುಗು, ಮಿಂಚಿನಿಂದ ಕೂಡಿದ ಹಗುರ ಮಳೆಯಾಗುವ ಸಾಧ್ಯತೆ ಇದೆ ಎಂದು ಮುನ್ನಚ್ಚರಿಕೆ ನೀಡಲಾಗಿದೆ.
ಆಗಸ್ಟ್‌ನಲ್ಲೇ ಗರಿಷ್ಠ ಉಷ್ಣಾಂಶ ದಾಖಲು
ಪ್ರಸಕ್ತ ವರ್ಷ ಆಗಸ್ಟ್ ತಿಂಗಳಿನಲ್ಲೇ ಅತ್ಯಂತ ಹೆಚ್ಚಿನ ಉಷ್ಣಾಂಶ 31 ಡಿಗ್ರಿ ಸೆಲ್ಸಿಯಸ್‌ನಷ್ಟು ಇಲ್ಲಿನ ಗೋಣಿಕೊಪ್ಪಲಿನ ಕೃಷಿ ವಿಜ್ಞಾನ ಕೇಂದ್ರದ ಜಿಲ್ಲಾ ಕೃಷಿ ಹವಾಮಾನ ಘಟಕದಲ್ಲಿ ಬುಧವಾರ ದಾಖಲಾಗಿದೆ.
ಸಾಮಾನ್ಯವಾಗಿ ಆಗಸ್ಟ್ ತಿಂಗಳಿನಲ್ಲಿ ಉಷ್ಣಾಂಶ 30 ಡಿಗ್ರಿ ಸೆಲ್ಸಿಯಸ್ ಮುಟ್ಟುತ್ತಿರಲಿಲ್ಲ. ಆದರೆ, ಕಳೆದ ಮೂರು ದಿನಗಳಿಂದ 30 ಡಿಗ್ರಿ ಇದ್ದ ಉಷ್ಣಾಂಶ ಬುಧವಾರ 31 ಡಿಗ್ರಿಗೆ ಹೆಚ್ಚಿದೆ. ಮುಂದಿನ ದಿನಗಳಲ್ಲಿ ಕೊಡಗು ಜಿಲ್ಲೆಯಲ್ಲಿ ದಾಖಲಾಗುವ ಗರಿಷ್ಠ ಉಷ್ಣಾಂಶ ಮತ್ತಷ್ಟು ಹೆಚ್ಚುವ ಸಂಭವವಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.