ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನುಭವಿ – ಹೊಸಬರ ಕಾದಾಟ

ವಿಧಾನ ಪರಿಷತ್ತಿನ ನೈರುತ್ಯ ಪದವೀಧರರ ಕ್ಷೇತ್ರದ ಚುನಾವಣೆ
Last Updated 6 ಜೂನ್ 2018, 19:30 IST
ಅಕ್ಷರ ಗಾತ್ರ

ಮಂಗಳೂರು: ನಾಲ್ಕು ದಶಕಗಳಿಂದ ಬಿಜೆಪಿ ಹಿಡಿತದಲ್ಲೇ ಇದ್ದ ವಿಧಾನ ಪರಿಷತ್ತಿನ ನೈರುತ್ಯ ಪದವೀಧರರ ಕ್ಷೇತ್ರದಲ್ಲಿ ಡಿ.ಎಚ್‌.ಶಂಕರಮೂರ್ತಿ ಅವರು ಸ್ಪರ್ಧೆಯಿಂದ ದೂರ ಉಳಿದಿರುವ ಕಾರಣದಿಂದ ಈ ಬಾರಿಯ ಚುನಾವಣೆ ಕುತೂಹಲ ಹೆಚ್ಚಿಸಿದೆ. ಇಲ್ಲಿ ಬಿಜೆಪಿ ಮತ್ತೊಬ್ಬ ಅನುಭವಿ ರಾಜಕಾರಣಿಯನ್ನು ಕಣಕ್ಕಿಳಿಸಿದರೆ, ಕಾಂಗ್ರೆಸ್‌ ಹಳೆಯ ಅಭ್ಯರ್ಥಿಯನ್ನೇ ಸ್ಪರ್ಧೆಗಿಳಿಸಿದೆ. ಇಬ್ಬರ ನಡುವೆ ಜೆಡಿಎಸ್‌ನ ಹೊಸ ಅಭ್ಯರ್ಥಿಯೂ ಇದ್ದಾರೆ.

ವಿಧಾನ ಪರಿಷತ್‌ನ ಹಾಲಿ ಸಭಾಪತಿ ಡಿ.ಎಚ್‌.ಶಂಕರಮೂರ್ತಿ ಐದು ಅವಧಿಗೆ ಸತತವಾಗಿ ಈ ಕ್ಷೇತ್ರವನ್ನು ಪ್ರತಿನಿಧಿಸಿದ್ದಾರೆ. 1988ರಲ್ಲಿ ಮೊದಲ ಬಾರಿ ಗೆಲುವು ಸಾಧಿಸಿದ್ದ ಅವರು, 2012ರ ಚುನಾವಣೆಯಲ್ಲಿ ಶೇಕಡ 75ರಷ್ಟು ಮತಗಳನ್ನು ಪಡೆಯುವ ಮೂಲಕ ದೊಡ್ಡ ಅಂತರದ ಗೆಲುವು ದಾಖಲಿಸಿದ್ದರು. ಈ ಬಾರಿ ಅವರ ಬದಲಿಗೆ ಆಯನೂರು ಮಂಜುನಾಥ ಅವರನ್ನು ಕಣಕ್ಕಿಳಿಸಿರುವ ಬಿಜೆಪಿ ಮತ್ತೆ ಗೆಲುವಿನ ನಿರೀಕ್ಷೆಯಲ್ಲಿದೆ.

ಕಾಂಗ್ರೆಸ್‌ ಅಭ್ಯರ್ಥಿಯಾಗಿ ಶಿವಮೊಗ್ಗದ ಎಸ್‌.ಪಿ.ದಿನೇಶ್ ಎರಡನೇ ಬಾರಿ ಕಣದಲ್ಲಿದ್ದಾರೆ. ಉಡುಪಿಯ ಅರುಣ ಕುಮಾರ್ ಜೆಡಿಎಸ್‌ ಹುರಿಯಾಳು. ದಾವಣಗೆರೆಯ ಜೆ.ಸಿ.ಪಟೇಲ್ ಸರ್ವ ಜನತಾ ಪಕ್ಷದ ಹೆಸರಿನಲ್ಲಿ ಸ್ಪರ್ಧಿಸಿದ್ದಾರೆ. ಶಿವಮೊಗ್ಗದ ಜಫರುಲ್ಲಾ ಸತ್ತರ್ ಖಾನ್, ಚಿಕ್ಕಮಗಳೂರಿನ ಜಿ.ಎಂ.ಜಯಕುಮಾರ್, ತರೀಕೆರೆಯ ಪ್ರಭುಲಿಂಗ ಬಿ.ಆರ್. ಮತ್ತು ಭದ್ರಾವತಿಯ ಬಿ.ಕೆ.ಮಂಜುನಾಥ ಪಕ್ಷೇತರ ಅಭ್ಯರ್ಥಿಗಳಾಗಿ ಕಣದಲ್ಲಿದ್ದಾರೆ.

ಕಣದಲ್ಲಿ ಒಟ್ಟು ಎಂಟು ಅಭ್ಯರ್ಥಿಗಳಿದ್ದಾರೆ. ಆದರೆ, ಪೈಪೋಟಿ ಇರುವುದು ಬಿಜೆಪಿ, ಕಾಂಗ್ರೆಸ್‌ ಮತ್ತು ಜೆಡಿಎಸ್‌ ನಡುವೆಯೇ. ಅದರಲ್ಲೂ ಬಿಜೆಪಿ ಮತ್ತು ಕಾಂಗ್ರೆಸ್‌ ನಡುವೆಯೇ ಹೆಚ್ಚೂ ಕಡಿಮೆ ನೇರ ಎನ್ನುವಷ್ಟು ಸ್ಪರ್ಧೆ ಕಾಣಿಸುತ್ತಿದೆ. ಎರಡೂ ಪಕ್ಷಗಳು ಸಾಕಷ್ಟು ತಯಾರಿ ಮಾಡಿಕೊಂಡು ಚುನಾವಣಾ ಕಣಕ್ಕೆ ಧುಮುಕಿದ್ದು, ಪೈಪೋಟಿಯಲ್ಲಿ ಇತರರಿಗಿಂತ ಒಂದು ಹೆಜ್ಜೆ ಮುಂದಿದ್ದಾರೆ.

ನೈರುತ್ಯ ಪದವೀಧರರ ಕ್ಷೇತ್ರದಲ್ಲಿ 67,306 ಮತದಾರರಿದ್ದಾರೆ. ಶಿವಮೊಗ್ಗ ಜಿಲ್ಲೆಯಲ್ಲಿ ಅತ್ಯಧಿಕ ಸಂಖ್ಯೆಯ ಮತದಾರರಿದ್ದಾರೆ. ಗೆಲುವಿಗಾಗಿ ಕದನ ನಡೆಸುತ್ತಿರುವ ಇಬ್ಬರು ಅಭ್ಯರ್ಥಿಗಳು ಚುನಾವಣೆಗೂ ಮೊದಲು ನಡೆಸಿರುವ ತಯಾರಿಗೆ ಇದು ಸಾಕ್ಷ್ಯ ನೀಡುತ್ತದೆ. ಉಳಿದಂತೆ ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರಿನಲ್ಲಿ ಹೆಚ್ಚಿನ ಮತದಾರರಿದ್ದಾರೆ.

ವಿಧಾನಸಭೆಯ ಸದಸ್ಯರಾಗಿ, ಸಂಸದರಾಗಿ, ರಾಜ್ಯಸಭೆ ಸದಸ್ಯರಾಗಿ ಕೆಲಸ ಮಾಡಿ ಅನುಭವವಿರುವ ಆಯನೂರು ಮಂಜುನಾಥ, ಈ ಕ್ಷೇತ್ರದುದ್ದಕ್ಕೂ ಪ್ರಬಲವಾಗಿರುವ ಬಿಜೆಪಿ ಮತ್ತು ಸಂಘ ಪರಿವಾರದ ಕಾರ್ಯಕರ್ತರನ್ನು ನೆಚ್ಚಿಕೊಂಡು ಚುನಾವಣೆ ಎದುರಿಸುತ್ತಿದ್ದಾರೆ. ಈ ಕ್ಷೇತ್ರದ ವ್ಯಾಪ್ತಿಯಲ್ಲಿರುವ 30 ವಿಧಾನಸಭಾ ಕ್ಷೇತ್ರಗಳ ಪೈಕಿ 27ರಲ್ಲಿ ಬಿಜೆಪಿ ಗೆಲುವು ಸಾಧಿಸಿರುವುದು ಅವರಿಗೆ ಮತ್ತಷ್ಟು ಬಲ ತುಂಬಿದೆ.

ವಿಧಾನಸಭಾ ಚುನಾವಣೆಯ ಮಾದರಿಯಲ್ಲೇ ವಿಧಾನ ಪರಿಷತ್ ಚುನಾವಣೆಗೂ ಬಿಜೆಪಿ ‘ಪೇಜ್‌ ಪ್ರಮುಖ’ರನ್ನು ನಿಯುಕ್ತಿ ಮಾಡಿದೆ. ಮತದಾರರ ಪಟ್ಟಿ ಹಿಡಿದು ಒಬ್ಬೊಬ್ಬರನ್ನೂ ಸಂಪರ್ಕಿಸುತ್ತಿರುವ ಅವರು, ಮತ ಇತರರ ತೆಕ್ಕೆಗೆ ಸರಿಯದಂತೆ ‘ಕಾವಲು’ ಹಾಕುತ್ತಿದ್ದಾರೆ. ಇನ್ನು ಬಿಜೆಪಿ ನಾಯಕರು, ಸಂಸದರು, ಶಾಸಕರು, ಮುಖಂಡರು ಕೂಡ ವಿಧಾನಸಭೆ ಚುನಾವಣೆ ಗೆಲುವಿನ ಉತ್ಸಾಹದಲ್ಲೇ ಪರಿಷತ್‌ ಚುನಾವಣೆಯ ಪ್ರಚಾರ ಕಣದಲ್ಲಿ ಸಕ್ರಿಯವಾಗಿದ್ದಾರೆ. ಬಿಜೆಪಿ ಪಾಳೆಯ ಈ ಬಾರಿಯೂ ಕ್ಷೇತ್ರ ಕೈತಪ್ಪದಂತೆ ಕೋಟೆ ಕಟ್ಟುವ ಹಠಕ್ಕೆ ಬಿದ್ದಂತೆ ಕಾಣಿಸುತ್ತಿದೆ.

ವ್ಯಕ್ತಿ ನೆಲೆಯ ಹೋರಾಟ: ಕಾಂಗ್ರೆಸ್‌ ಅಭ್ಯರ್ಥಿ ಎಸ್‌.ಪಿ.ದಿನೇಶ್ ಅವರಿಗೆ ಇದು ಎರಡನೇ ಚುನಾವಣೆ. 2012ರಲ್ಲಿ ಶಂಕರಮೂರ್ತಿ ಅವರ ಎದುರು ಸೋಲು ಕಂಡ ಬಳಿಕವೂ ಪದವೀಧರರ ಕ್ಷೇತ್ರದ ಸಂಪರ್ಕದಿಂದ ಅವರು ದೂರ ಸರಿದಿರಲಿಲ್ಲ. ಶಿವಮೊಗ್ಗದಲ್ಲಿ ಪದವೀಧರರ ಸಹಕಾರ ಸಂಘ ಸ್ಥಾಪಿಸಿ, ಅದರ ಮೂಲಕ ಸಕ್ರಿಯವಾಗಿದ್ದರು. 5,000ಕ್ಕೂ ಹೆಚ್ಚು ಪದವೀಧರರನ್ನು ಸಹಕಾರ ಸಂಘದ ಸದಸ್ಯರನ್ನಾಗಿ ನೋಂದಣಿ ಮಾಡುವ ಮೂಲಕ ಚುನಾವಣಾ ತಯಾರಿ ಮುಂದುವರಿಸಿದ್ದರು.

ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಸಮಿತಿಯ ಉಪಾಧ್ಯಕ್ಷರಾಗಿಯೂ ಸಕ್ರಿಯ ರಾಜಕಾರಣದಲ್ಲಿದ್ದ ಅವರನ್ನು ಈ ಬಾರಿಯ ಅಭ್ಯರ್ಥಿಯನ್ನಾಗಿ ಆರು ತಿಂಗಳ ಮೊದಲೇ ಆಯ್ಕೆ ಮಾಡಲಾಗಿತ್ತು. ಪಕ್ಷಕ್ಕಿಂತಲೂ ವೈಯಕ್ತಿಕ ನೆಲೆಯಲ್ಲೇ ಹೆಚ್ಚು ತಯಾರಿ ಮಾಡಿಕೊಂಡಿದ್ದ ಅವರು, ಆ ಸಂಪರ್ಕ ಬಲದಲ್ಲೇ ಗೆಲುವಿಗಾಗಿ ಹೋರಾಟ ಆರಂಭಿಸಿದ್ದಾರೆ. ಕಾಂಗ್ರೆಸ್‌ ಪಕ್ಷದ ಮುಖಂಡರು, ಚುನಾಯಿತ ಪ್ರತಿನಿಧಿಗಳು ಕೂಡ ಅವರ ಸ್ಪರ್ಧೆಗೆ ಬಲ ತುಂಬುವ ಕೆಲಸ ಮಾಡುತ್ತಿದ್ದಾರೆ. ಆದರೆ, ಬಿಜೆಪಿಗೆ ಹೋಲಿಸಿದರೆ ಕಾಂಗ್ರೆಸ್‌ನಲ್ಲಿ ಪಕ್ಷದ ನೆಲೆಯ ಹೋರಾಟದ ಪ್ರಮಾಣ ತುಸು ಕಡಿಮೆ ಇದ್ದಂತೆ ಭಾಸವಾಗುತ್ತಿದೆ.

ಜೆಡಿಎಸ್‌ ಅಭ್ಯರ್ಥಿ ಅರುಣ ಕುಮಾರ್ ಅವರಿಗೆ ಇದು ಮೊದಲ ಚುನಾವಣೆ. ಉಳಿದ ಇಬ್ಬರಿಗೆ ಹೋಲಿಸಿದರೆ ಚುನಾವಣೆಗೂ ಮೊದಲು ಇವರು ಕ್ಷೇತ್ರದ ಪದವೀಧರರ ವಲಯದಲ್ಲಿ ಸಂಪರ್ಕ ಸಾಧಿಸುವ ಪ್ರಯತ್ನ ನಡೆಸಿದ್ದು ಕಡಿಮೆಯೇ. ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಗಳ ಹೊರತಾಗಿ ಜೆಡಿಎಸ್‌ ಪಕ್ಷ ಹೆಚ್ಚಿನ ಪ್ರಾಬಲ್ಯವನ್ನೂ ಹೊಂದಿಲ್ಲ. ಹೀಗಾಗಿ ಉಳಿದ ಇಬ್ಬರ ನಡುವೆ ಜೆಡಿಎಸ್‌ ತುಸು ಮಂಕಾಗಿ ಕಾಣುತ್ತಿದೆ.

ಕಣದಲ್ಲಿರುವ ಅಭ್ಯರ್ಥಿಗಳು

* ಆಯನೂರು ಮಂಜುನಾಥ– ಬಿಜೆಪಿ

* ಎಸ್‌.ಪಿ.ದಿನೇಶ್– ಕಾಂಗ್ರೆಸ್

* ಅರುಣ ಕುಮಾರ್– ಜೆಡಿಎಸ್‌

* ಜೆ.ಸಿ.ಪಟೇಲ್– ಸರ್ವ ಜನತಾ ಪಕ್ಷ

ಪಕ್ಷೇತರರು

* ಜಫರುಲ್ಲಾ ಸತ್ತಾರ್ ಖಾನ್

* ಜಿ.ಎಂ.ಜಯಕುಮಾರ್

* ಪ್ರಭುಲಿಂಗ ಬಿ.ಆರ್.

* ಬಿ.ಕೆ.ಮಂಜುನಾಥ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT