ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಡಿಕೇರಿಯಲ್ಲಿ ನಗರಸಭೆ ಚುನಾವಣೆ: ‘ಕಮಲ’ಕ್ಕೆ ಬಂಡಾಯದ ಬಿಸಿ

ಕೊನೆಯ ದಿನ ನಾಮಪತ್ರ ಸಲ್ಲಿಕೆಯ ಭರಾಟೆ, ಇಂದು ನಾಮಪತ್ರ ಪರಿಶೀಲನೆ
Last Updated 15 ಏಪ್ರಿಲ್ 2021, 19:30 IST
ಅಕ್ಷರ ಗಾತ್ರ

ಮಡಿಕೇರಿ: ‘ಮಂಜಿನ ನಗರಿ’ ಮಡಿಕೇರಿಯಲ್ಲಿ ನಗರಸಭೆ ಚುನಾವಣೆ ಕಾವು ಜೋರಾಗಿದ್ದು, ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾದ, ಗುರುವಾರ ನಾಮಪತ್ರ ಸಲ್ಲಿಕೆಯ ಭರಾಟೆ ಜೋರಾಗಿತ್ತು.

ಬಂಡಾಯದ ಬಿಸಿ ತಪ್ಪಿಸಿಕೊಳ್ಳಲು ಬಿಜೆಪಿ, ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಮುಖಂಡರು ನಾಮಪತ್ರ ಸಲ್ಲಿಕೆಗೆ ಒಂದು ದಿನ ಬಾಕಿಯಿರುವಾಗ ಅಭ್ಯರ್ಥಿಗಳ ಪಟ್ಟಿ ಘೋಷಣೆ ಮಾಡಿದ್ದರು. ಅದರ ನಡುವೆಯೂ ‘ಕಮಲ ಪಡೆ’ಗೆ ಬಂಡಾಯದ ಬಿಸಿ ಎದುರಾಗಿದೆ.

ನಗರಸಭೆ ವ್ಯಾಪ್ತಿಯಲ್ಲಿ 23 ವಾರ್ಡ್‌ಗಳಿದ್ದು, ಬಿಜೆಪಿಯಿಂದ 146 ಮಂದಿ ಟಿಕೆಟ್‌ ಬಯಸಿ ಅರ್ಜಿ ಸಲ್ಲಿಸಿದ್ದರು. ಮೊದಲೇ, ಬಂಡಾಯದ ಮಾಹಿತಿ ಪಡೆದಿದ್ದ ಮುಖಂಡರು ಅಳೆದು–ತೂಗಿ ಯುಗಾದಿ ಹಬ್ಬ ಕಳೆದ ಮರು ದಿವಸ ಅಂದರೆ, ಬುಧವಾರ ಪಟ್ಟಿ ಬಿಡುಗಡೆ ಮಾಡಿದ್ದರು. ಪಟ್ಟಿ ಬಿಡುಗಡೆಯ ಮರುಕ್ಷಣವೇ ಟಿಕೆಟ್‌ ವಂಚಿತರು ಬಂಡಾಯ ಎದ್ದಿದ್ದಾರೆ.

10ನೇ ವಾರ್ಡ್‌ನಿಂದ ಬಿಜೆಪಿ ಕಾರ್ಯಕರ್ತ ಪಿ.ಜಿ.ಸುಕುಮಾರ್ ಅವರಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡದೆ ವಂಚಿಸಲಾಗಿದೆ ಎಂದು ಆರೋಪಿಸಿ, ಬಿಜೆಪಿ ಪ್ರಮುಖರು ರಾಜೀನಾಮೆ ಸಲ್ಲಿದ್ದಾರೆ. ತಮಗೆ ಸ್ಪರ್ಧಿಸಲು ಅವಕಾಶ ಬೇಕು ಎಂದು ಸುಕುಮಾರ್‌ ಬೇಡಿಕೆ ಇಟ್ಟಿದ್ದರು. ಆದರೆ, ಕೊನೆಯ ಕ್ಷಣದಲ್ಲಿ ಬಿ.ಕೆ.ಜಗದೀಶ್ ಅವರನ್ನು ಬಿಜೆಪಿ ಕಣಕ್ಕಿಳಿಸಿತು.

ಇದರಿಂದ ಅಸಮಾಧಾನಗೊಂಡ ಪಿ.ಜಿ.ಸುಕುಮಾರ್ ತಮ್ಮ ಬೆಂಬಲಿಗರೊಂದಿಗೆ ಬಿಜೆಪಿಗೆ ರಾಜೀನಾಮೆ ನೀಡಿ, ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದಾರೆ.

10ನೇ ವಾರ್ಡ್‌ನ ಮತದಾರರೇ ಅಲ್ಲದವರಿಗೆ ಸ್ಪರ್ಧಿಸಲು ಅವಕಾಶ ನೀಡಲಾಗಿದೆ ಎಂದು ಮುನಿಸಿಕೊಂಡ ಪ್ರಮುಖರಾದ ಪಿ.ಜಿ.ಮಂಜುನಾಥ್, ಆರ್.ರಾಕೇಶ್, ಸಂತೋಷ್ ನಾಗರಾಜ್, ಕೆ.ಎನ್.ಶಿವಪ್ರಸಾದ್, ಕೆ.ಕಿಶೋರ್ ಅವರೂ ಬಿಜೆಪಿಗೆ ರಾಜೀನಾಮೆ ಸಲ್ಲಿಸಿದ್ದಾರೆ. ರಾಜೀನಾಮೆ ಪತ್ರವನ್ನು ಪಕ್ಷದ ನಗರ ಅಧ್ಯಕ್ಷ ಮನು ಮಂಜುನಾಥ್ ಅವರಿಗೆ ನೀಡಿದ್ದಾರೆ. ಇನ್ನೂ, ಹಲವು ವಾರ್ಡ್‌ಗಳಲ್ಲಿ, ಬಿಜೆಪಿಗೆ ಬಂಡಾಯ ಎದುರಾಗಿದೆ.

‘ಕೈ’ನಲ್ಲೂ ಮುನಿಸು

ಕಾಂಗ್ರೆಸ್‌ನಲ್ಲೂ ಬಂಡಾಯದ ಕಾವು ಜೋರಾಗಿದೆ. ಹಲವು ವಾರ್ಡ್‌ಗಳಿಂದ ಟಿಕೆಟ್‌ ನಿರೀಕ್ಷಿಸಿದ್ದ ಅಭ್ಯರ್ಥಿಗಳಿಗೆ ಟಿಕೆಟ್‌ ಸಿಕ್ಕಿಲ್ಲ. ಇದರಿಂದ ಆಯ್ಕೆ ಸಮಿತಿ ಸದಸ್ಯರ ವಿರುದ್ಧವೇ ಮುಖಂಡರು, ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ಹೊರ ಹಾಕಿದ್ದಾರೆ.

ಮಾಜಿಗಳಿಗೆ ಮಣೆ

ಕಾಂಗ್ರೆಸ್‌ ಹಾಗೂ ಬಿಜೆಪಿ ತಮ್ಮ ಪಕ್ಷದಿಂದ ಈ ಹಿಂದೆ ಗೆದ್ದು, ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಹುದ್ದೆಯನ್ನು ಭಾಯಿಸಿದ್ದವರಿಗೆ ಮತ್ತೆ ಮಣೆ ಹಾಕಿವೆ. ಕಾಂಗ್ರೆಸ್‌ನಿಂದ ಕಾವೇರಮ್ಮ ಸೋಮಣ್ಣ ಮತ್ತೆ ಸ್ಪರ್ಧಿಸಿದ್ದಾರೆ. ಬಿಜೆಪಿಯಿಂದ ಸ್ಥಾಯಿ ಸಮಿತಿ ಅಧ್ಯಕ್ಷರಾಗಿದ್ದ ಕೆ.ಎಸ್‌.ರಮೇಶ್‌ ಅವರೂ ಕಣದಲ್ಲಿದ್ದಾರೆ. ‘ಮುಡಾ’ದ ಮಾಜಿ ಅಧ್ಯಕ್ಷ ಚುಮ್ಮಿ ದೇವಯ್ಯ ಅವರೂ ಮತ್ತೊಮ್ಮೆ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.

ಸಾಲು ಸಾಲು ನಾಮಪತ್ರ

ಕೊಡಗಿನಲ್ಲಿ ದಿನ ಕಳೆದಂತೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಅಲ್ಲದೇ ಗುರುವಾರ ಒಂದೇ ದಿನದಲ್ಲಿ ಬರೋಬ್ಬರಿ 72 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಆದರೆ, ನಗರಸಭೆ ಚುನಾವಣೆಗೆ ನಾಮಪತ್ರ ಸಲ್ಲಿಕೆ ಮಾಡಲು ಬಂದವರು ಮಾಸ್ಕ್‌ ದರಿಸಿರಲಿಲ್ಲ. ಜೊತೆಗೆ, ಗುಂಪು ಗುಂಪಾಗಿ ಓಡಾಟ ನಡೆಸುತ್ತಿದ್ದು ಕಂಡುಬಂತು. ಕೊನೆಯ ದಿನ ನಾಮಪತ್ರ ಸಲ್ಲಿಕೆಯ ಭರಾಟೆ ಜೋರಾಗಿತ್ತು. ಮೂರು ಪಕ್ಷದ ಅಭ್ಯರ್ಥಿಗಳು ಕೊನೆಯ ದಿನ ನಾಮಪತ್ರ ಸಲ್ಲಿಕೆ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT