ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಡಿಕೇರಿ ನಗರಸಭೆ: ಆತಂಕದ ನಡುವೆ ಉತ್ಸಾಹದ ಮತದಾನ

30ರಂದು 108 ಅಭ್ಯರ್ಥಿಗಳ ಭವಿಷ್ಯ ನಿರ್ಧಾರ
Last Updated 27 ಏಪ್ರಿಲ್ 2021, 12:04 IST
ಅಕ್ಷರ ಗಾತ್ರ

ಮಡಿಕೇರಿ: ಇಲ್ಲಿನ ನಗರಸಭೆಯ 23 ವಾರ್ಡ್‌ಗಳ ಸದಸ್ಯರ ಆಯ್ಕೆಗೆ ಮಂಗಳವಾರ ಶಾಂತಿಯುತ ಮತದಾನ ನಡೆಯಿತು.

ಕೋವಿಡ್‌ ಪ್ರಕರಣಗಳು ಮಡಿಕೇರಿ ನಗರದಲ್ಲೂ ಹೆಚ್ಚುತ್ತಿದ್ದು ಈ ಆತಂಕದ ನಡುವೆಯೂ ಮತದಾರರು ಮತಗಟ್ಟೆಗೆ ಬಂದು ಉತ್ಸಾಹದ ಮತದಾನ ಮಾಡಿದ್ದು ಮಾತ್ರ ವಿಶೇಷ. ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣ ಸಮೀಪದ ಮತಗಟ್ಟೆಯಲ್ಲಿ ಬೆಳಿಗ್ಗೆ 7ಕ್ಕೂ ಮೊದಲೇ ಮತದಾರರು ಸರದಿಯಲ್ಲಿ ನಿಂತು ಹಕ್ಕು ಚಲಾವಣೆ ಉತ್ಸಾಹ ತೋರಿದರು. ಉಳಿದ ಮತಗಟ್ಟೆಯಲ್ಲೂ ಉತ್ಸಾಹವಿತ್ತು; ವೃದ್ಧ ಮತದಾರರ ಸಂಖ್ಯೆ ಕಡಿಮೆಯಿತ್ತು. ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಹಾಗೂ ಯುವ ಮತದಾರರು ಬಂದು ಮತದಾನ ಮಾಡಿದರು.

ಸಂಜೆ 5ರಿಂದ 6 ಗಂಟೆಯ ಅವಧಿಯಲ್ಲಿ ಕೋವಿಡ್‌ ಸೋಂಕಿತರಿಗೆ ಮತದಾನಕ್ಕೆ ಅವಕಾಶವಿತ್ತು. ಕೆಲವು ಮತಗಟ್ಟೆಯಲ್ಲಿ, ಪಿ.ಪಿ.ಇ ಕಿಟ್‌ ಧರಿಸಿ ಮತದಾನ ಮಾಡಿದ್ದು ಕಂಡುಬಂತು. ಇದೇ 30ರಂದು ಅಭ್ಯರ್ಥಿಗಳ ಭವಿಷ್ಯ ನಿರ್ಧಾರ ಆಗಲಿದೆ.

‘ಉತ್ಸಾಹ’ಕ್ಕೆ ಕಾರಣವಾದರೂ?: ಕೋವಿಡ್‌ ಕಾರಣದಿಂದ ಮತದಾನ ಪ್ರಮಾಣ ಕಡಿಮೆಯಾಗಿ ತಮ್ಮ ಲೆಕ್ಕಾಚಾರವೇ ಉಲ್ಟಾಪಲ್ಟಾ ಆಗಲಿದೆ ಎಂದು ವಿವಿಧ ಪಕ್ಷಗಳ ಅಭ್ಯರ್ಥಿಗಳೂ ಹಾಗೂ ಪಕ್ಷೇತರ ಅಭ್ಯರ್ಥಿಗಳು ಆತಂಕದಲ್ಲಿದ್ದರು. ಶೇ 50ಕ್ಕಿಂತಲೂ ಕಡಿಮೆ ಪ್ರಮಾಣದಲ್ಲಿ ಮತದಾನವಾಗಲಿದೆ ಎಂಬುದು ಅಭ್ಯರ್ಥಿಗಳ ಲೆಕ್ಕಾಚಾರವಾಗಿತ್ತು. ಆದರೆ, ಬೆಳಿಗ್ಗೆಯೇ ಮತದಾರರು ಮತಗಟ್ಟೆಯತ್ತ ಧಾವಿಸಿ ಬಂದಿದ್ದು ಕಂಡು, ಅಭ್ಯರ್ಥಿಗಳು ಸಂತಸ ವ್ಯಕ್ತಪಡಿಸಿದರು.

ಕಳೆದ ಎರಡೂವರೆ ವರ್ಷದಿಂದ ನಗರಸಭೆಯಲ್ಲಿ ಚುನಾಯಿತ ಪ್ರತಿನಿಧಿಗಳು ಇರಲಿಲ್ಲ. ಅಧಿಕಾರಿಗಳೇ ಆಡಳಿತದ ಹೊಣೆ ಹೊತ್ತಿದ್ದರು. ಇತ್ತ ವಾರ್ಡ್‌ಗಳ ಸಮಸ್ಯೆ ಹಾಗೂ ಜನರ ಗೋಳನ್ನು ಯಾವೊಬ್ಬ ಅಧಿಕಾರಿಯೂ ಆಲಿಸುತ್ತಿರಲಿಲ್ಲ. ಇದರಿಂದ ಜನರೂ ಬೇಸತ್ತಿದ್ದರು. ನಗರಸಭೆಯಲ್ಲಿ ಜನಪ್ರತಿನಿಧಿಗಳ ಆಡಳಿತ ಬರಬೇಕೆಂದು ಮತದಾರರು ಬಯಸಿದ್ದರು. ಇದರ ಪರಿಣಾಮವೇ ಮತದಾನ ಹೆಚ್ಚಲು ಕಾರಣವೆಂದು ಹಿರಿಯರು ವಿಶ್ಲೇಷಿಸುತ್ತಾರೆ.

ನಿಯಮ ಪಾಲನೆಗೆ ಒತ್ತು: ಇನ್ನು ಮತದಾರರು ಮತಗಟ್ಟೆಯ ಬಳಿ ನಿಯಮ ಪಾಲನೆಗೆ ಹೆಚ್ಚಿನ ಒತ್ತು ನೀಡಿದರು. ಸರದಿಯಲ್ಲಿ ನಿಂತಾಗಲೂ ಅಂತರ ಕಾಯ್ದುಕೊಂಡಿದ್ದು ಕಂಡುಬಂತು. ಎಲ್ಲರೂ ಮಾಸ್ಕ್‌ ಧರಿಸಿದ್ದರು. ಜತೆಗೆ, ಮತಗಟ್ಟೆಗಳ ಬಳಿಯೂ, ಸ್ಯಾನಿಟೈಸರ್‌ ಇಡಲಾಗಿತ್ತು. ಮತದಾನ ಮಾಡಿದ ಕೂಡಲೇ ಮತದಾರರು ಮನೆಯತ್ತ ಹೆಜ್ಜೆ ಹಾಕಿದರು.

ಬಂದೋಬಸ್ತ್‌:

ಪ್ರತಿಮತಗಟ್ಟೆಯ ಬಳಿಯೂ ಪೊಲೀಸ್‌ ಬಂದೋಬಸ್ತ್‌ ವ್ಯವಸ್ಥೆಯಿತ್ತು. ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರು ವಿವಿಧ ಮತಗಟ್ಟೆಗಳಿಗೆ ಹೋಗಿ ಮತದಾನ ಪ್ರಕ್ರಿಯೆ ಪರಿಶೀಲನೆ ನಡೆಸಿದರು.

ಎಷ್ಟು ಮಂದಿ: 23 ವಾರ್ಡ್‌ನಲ್ಲಿ 108 ಮಂದಿ ಕಣದಲ್ಲಿದ್ದಾರೆ. 23 ವಾರ್ಡ್‌ನಲ್ಲೂ ಬಿಜೆಪಿ ಹಾಗೂ ಕಾಂಗ್ರೆಸ್‌ ತಮ್ಮ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿತ್ತು. ಜೆಡಿಎಸ್‌ ಅಭ್ಯರ್ಥಿಗಳು 22 ವಾರ್ಡ್‌ನಲ್ಲಿ ಕಣದಲ್ಲಿದ್ದರೆ, ಎಸ್‌ಡಿಪಿಐ 9, ಆಮ್‌ ಆದ್ಮಿ ಪಕ್ಷದಿಂದ 4 ಹಾಗೂ ಕರ್ನಾಟಕ ರಾಷ್ಟ್ರ ಸಂಘದ ಪಕ್ಷದಿಂದ ಒಬ್ಬ ಅಭ್ಯರ್ಥಿ ಕಣದಲ್ಲಿದ್ದರು. ಅವರ ಭವಿಷ್ಯ ಇದೇ 30ರಂದು ತಿಳಿಯಲಿದೆ.

ಜನಪ್ರತಿನಿಧಿಗಳಿಂದ ಮತದಾನ: ವಿರಾಜಪೇಟೆ ಶಾಸಕ ಕೆ.ಜಿ.ಬೋಪಯ್ಯ ಕುಟುಂಬ ಸಮೇತರಾಗಿ ಬಂದು ಮಡಿಕೇರಿ ಜೂನಿಯರ್ ಕಾಲೇಜಿನ ಮತಗಟ್ಟೆ ಸಂಖ್ಯೆ 6ರಲ್ಲಿ ಅಂತರ ಕಾಯ್ದುಕೊಂಡು ಮತದಾನ ಮಾಡಿದರು. ಇನ್ನು ವಿಧಾನ ಪರಿಷತ್‌ ಸದಸ್ಯೆ ವೀಣಾ ಅಚ್ಚಯ್ಯ ಅವರು ವಾರ್ಡ್‌ ನ.:3ರ ಮತಗಟ್ಟೆಯಲ್ಲಿ ತಮ್ಮ ಹಕ್ಕು ಚಲಾವಣೆ ಮಾಡಿದರು.

ಬಳಿಕ ಮಾತಾನಾಡಿದ ಕೆ.ಜಿ.ಬೋಪಯ್ಯ ಅವರು, ನಗರದಲ್ಲಿ 23 ವಾರ್ಡ್‌ಗಳಿಗೆ ಬಿಜೆಪಿ ಅಭ್ಯರ್ಥಿಗಳನ್ನು ಹಾಕಲಾಗಿದೆ. ಇದರಲ್ಲಿ 15 ವಾರ್ಡ್‌ಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲ್ಲುತ್ತಾರೆ. ಈ ಬಾರಿ ನಗರಸಭೆಯ ಅಧಿಕಾರದ ಚುಕ್ಕಾಣಿ ಬಿಜೆಪಿ ಪರವಾಗಿರುತ್ತದೆ ಎಂದರು.

ಕೋವಿಡ್ ನಿಯಂತ್ರಣಕ್ಕೆ ರಾಜ್ಯಕ್ಕೆ ಟಫ್ ರೂಲ್ಸ್ ಅಗತ್ಯವಿತ್ತು. ಬೆಂಗಳೂರಿಗೆ ಯಾವೆಲ್ಲಾ ರಾಜ್ಯಗಳಿಂದ ಜನರು ಬರುತ್ತಿದ್ದರು. ಬೆಂಗಳೂರಿಂದ ಹಳ್ಳಿಗಳಿಗೂ ಜನರ ಓಡಾಟವಿತ್ತು. ಹೀಗಾಗಿ ಟಫ್ ರೂಲ್ಸ್ ಜಾರಿ ಮಾಡಿರುವುದು ಸೂಕ್ತ. ಬೆಂಗಳೂರಿಂದ ಕೊಡಗಿಗೆ ಬಂದಿರುವವರಿಗೆ ಕೋವಿಡ್ ಟೆಸ್ಟ್ ಕಡ್ಡಾಯ ಮಾಡಬೇಕು. ಅಂತಹವರಿಗೆ ಹೋಂ ಕ್ವಾರಂಟೈನ್ ಮಾಡಬೇಕಾಗಿರುವುದು ಕಡ್ಡಾಯ ಜಿಲ್ಲಾಡಳಿತ ಈ ಬಗ್ಗೆ ಕ್ರಮ ವಹಿಸಬೇಕು ಎಂದು ಕೆ.ಜಿ ಬೋಪಯ್ಯ ಸಲಹೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT