ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಸ್ತೆಗಿಳಿದ ಏಥರ್‌ ಇ–ಸ್ಕೂಟರ್‌

Last Updated 12 ಜೂನ್ 2018, 19:30 IST
ಅಕ್ಷರ ಗಾತ್ರ

ಪರಿಸರ ರಕ್ಷಣೆಯ ಉದ್ದೇಶದಿಂದ ದೇಶದಲ್ಲಿ ವಿದ್ಯುತ್‌ ಚಾಲಿತ ವಾಹನಗಳ ಬಳಕೆಗೆ ಆದ್ಯತೆ ನೀಡಲಾಗುತ್ತಿದೆ. ಕೇಂದ್ರ ಸರ್ಕಾರ ಈ ಉದ್ದೇಶಕ್ಕೆ ಪ್ರತ್ಯೇಕ ನೀತಿಯನ್ನೂ ರೂಪಿಸಿದೆ. ಮೂಲಸೌಕರ್ಯಗಳ ಕೊರತೆ ನೀಗಿದರೆ ವಾಹನಗಳನ್ನು ರಸ್ತೆಗಳಿಸಲು ನಾವು ಸಿದ್ಧ ಎಂದು ವಾಹನ ತಯಾರಿಕಾ ಸಂಸ್ಥೆಗಳು ಹೇಳುತ್ತಿವೆ. ಬೆಂಗಳೂರಿನ ನವೋದ್ಯಮ ‘ಏಥರ್‌ ಎನರ್ಜಿ’, ಅಗತ್ಯ ಮೂಲಸೌಕರ್ಯಗಳೊಂದಿಗೆ ತನ್ನ ಸ್ಕೂಟರ್‌ಗಳನ್ನು ರಸ್ತೆಗಳಿಸಲು ಆರಂಭಿಸಿದೆ.

‘ವಿದ್ಯುತ್‌ ಚಾಲಿತ ಸ್ಕೂಟರ್‌ ತಯಾರಿಸುವ ಆಲೋಚನೆ ಬಂದಾಗ ಅದಕ್ಕೆ ಬೇಕಾಗಿರುವ ಮೂಲಸೌಕರ್ಯ ಅಭಿವೃದ್ಧಿಪಡಿಸುವ ಕುರಿತಾಗಿಯೂ ಚಿಂತನೆ ನಡೆಸಿದೆವು. ಏಕೆಂದರೆ ಇಂತಹ ವಾಹನಗಳಿಗೆ ಚಾರ್ಜಿಂಗ್‌ ಕೇಂದ್ರಗಳು ಇಲ್ಲದೇ ಇದ್ದರೆ ಗ್ರಾಹಕರು ಖರೀದಿಗೆ ಮುಂದಾಗುವುದಿಲ್ಲ. ಹೀಗಾಗಿ ಐದು ವರ್ಷಗಳಲ್ಲಿ ಸ್ಕೂಟರ್ ತಯಾರಿಕೆಯ ಜತೆ ಜತೆಗೇ ಮೂಲಸೌಕರ್ಯ ಅಭಿವೃದ್ಧಿಗೂ ಗಮನ ನೀಡಿದೆವು. ಸದ್ಯ, ಬೆಂಗಳೂರಿನಲ್ಲಿ 12 ಕಡೆಗಳಲ್ಲಿ ‘ಏಥರ್‌ ಗ್ರಿಡ್‌’ ಚಾರ್ಜಿಂಗ್‌ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಕೇಂದ್ರಗಳನ್ನು ಸ್ಥಾಪಿಸಲಾಗುವುದು. ಕಚೇರಿಗಳು, ಮಾಲ್‌, ಕೆಫೆ, ರೆಸ್ಟೋರೆಂಟ್‌ ಮತ್ತು ಜಿಮ್‌ಗಳಲ್ಲಿ ಚಾರ್ಜಿಂಗ್‌ ಕೇಂದ್ರಗಳನ್ನು ಆರಂಭಿಸಲಾಗುವುದು’ ಎಂದು ಸಂಸ್ಥೆಯ ಸಹ ಸ್ಥಾಪಕ ಮತ್ತು ಸಿಇಒ ತರುಣ್‌ ಮೆಹ್ತಾ  ಹೇಳುತ್ತಾರೆ.

ಹೋಮ್‌ ಚಾರ್ಜಿಂಗ್‌ ಪಾಯಿಂಟ್‌
ಗ್ರಾಹಕರ ಮನೆ ಅಥವಾ ಕಚೇರಿ ಸ್ಥಳದಲ್ಲಿ ಚಾರ್ಜಿಂಗ್‌ ಪಾಯಿಂಟ್‌ ಅನ್ನು ಸಂಸ್ಥೆಯೇ ಅಳವಡಿಸಿಕೊಡಲಿದೆ. ಏಥ್‌ ಗ್ರಿಡ್‌ ಆ್ಯಪ್‌ನಿಂದ ಸಮೀಪದಲ್ಲಿ ಇರುವ ಚಾರ್ಜಿಂಗ್‌ ಕೇಂದ್ರ ಮತ್ತು ಅಲ್ಲಿಗೆ ತಲುಪುವ ದಾರಿಯ ಮಾಹಿತಿಯೂ ಸಿಗಲಿದೆ.

‘ಶೇ 90 ರಷ್ಟು ಸ್ವದೇಶಿ ತಂತ್ರಜ್ಞಾನ ಒಳಗೊಂಡಿರುವ ಏಥರ್‌ 340 ಮತ್ತು 450 ಸ್ಕೂಟರ್‌ಗಳನ್ನು ತಯಾರಿಸಿದ್ದೇವೆ. ಆನ್‌ ರೋಡ್‌ ಬೆಲೆ ‘340 ಸ್ಕೂಟರ್‌’ಗೆ  ₹ 1,09,750 ಮತ್ತು ‘450 ಸ್ಕೂಟರ್‌’ಗೆ ₹ 1,24,750 ಇದೆ. ₹ 22 ಸಾವಿರದ ಫೇಮ್‌ ಸಬ್ಸಿಡಿ, ಜಿಎಸ್‌ಟಿ, ರಸ್ತೆ ತೆರಿಗೆ, ಸ್ಮಾರ್ಟ್‌ ಕಾರ್ಡ್‌ ಶುಲ್ಕ, ನೋಂದಣಿ ಕಾರ್ಡ್‌ ಮತ್ತು ವಿಮೆಯ ಮೊತ್ತವನ್ನೂ ಇದು ಒಳಗೊಂಡಿದೆ’ ಎಂದು ಮೆಹ್ತಾ ಹೇಳುತ್ತಾರೆ.

ಇಂದಿರಾನಗರದಲ್ಲಿ ಎಕ್ಸ್‌ಪೀರಿಯನ್ಸ್ ಸೆಂಟರ್‌ ಇದ್ದು, ಟೆಸ್ಟ್‌ ಡ್ರೈವ್‌ ಮಾಡಬಹುದು. ಏಥರ್‌ ಆ್ಯಪ್‌ ಮೂಲಕ ದಿನ ಮತ್ತು ಸಮಯ ನಿಗದಿ ಮಾಡಿದರೆ ಸಂಸ್ಥೆಯ ಸಿಬ್ಬಂದಿ ಮನೆ ಬಾಗಿಲಿಗೆ ಬಂದು ಸ್ಕೂಟರ್‌ ಅನ್ನು ಸರ್ವೀಸ್‌ಗೆ ತೆಗೆದುಕೊಂಡು ಹೋಗುತ್ತಾರೆ.

ಏಥರ್‌ ಆ್ಯಪ್‌
ಸ್ಕೂಟರಿನ ನಿರ್ವಹಣೆ ಮತ್ತು ಮಾಹಿತಿಯನ್ನು ಈ ಆ್ಯಪ್‌ನಿಂದ ಪಡೆಯಬಹುದು. 7 ಇಂಚಿನ ಟಚ್‌ಸ್ಕ್ರೀನ್‌ ಡ್ಯಾಷ್‌ಬೋರ್ಡ್‌ ಹೊಂದಿದ್ದು, ನ್ಯಾಷಿಗೇಷನ್‌ ಆಯ್ಕೆ ಇದೆ. ಪ್ರಯಾಣವನ್ನು ಸುಲಭವಾಗಿಸಲು ಪರ್ಯಾಯ ಮಾರ್ಗಗಳು ಮತ್ತು ಒಮ್ಮೆ ಪ್ರಯಾಣಿಸಿದ ಸ್ಥಳವನ್ನು ಸೇವ್‌ ಮಾಡುವ ಅವಕಾಶ ನೀಡಲಾಗಿದೆ. 

ಸಂಸ್ಥೆ ಬೆಳೆದು ಬಂದ ಹಾದಿ
ಮದ್ರಾಸಿನ ಭಾರತೀಯ ತಂತ್ರಜ್ಞಾನ ಸಂಸ್ಥೆಯ ಹಿರಿಯ ವಿದ್ಯಾರ್ಥಿಗಳಾದ ತರುಣ್‌ ಮೆಹ್ತಾ ಹಾಗೂ ಸ್ವಪ್ನಿಲ್‌ ಜೈನ್ ಅವರಿಂದ 2013ರಲ್ಲಿ ಈ ನವೋದ್ಯಮ ಸ್ಥಾಪ‍ನೆಯಾಯಿತು. ಭಾರತದ ಪ್ರಮುಖ ದ್ವಿಚಕ್ರ ವಾಹನ ತಯಾರಿಸುವ ಹೀರೊ ಮೋಟೊಕಾರ್ಪ್‌ ಸಂಸ್ಥೆಯು 2016ರ ಅಕ್ಟೋಬರ್‌ನಲ್ಲಿ ₹ 205 ಕೋಟಿ ಹಾಗೂ ಟೈಗರ್‌ ಗ್ಲೋಬಲ್‌ ಮತ್ತು ಫ್ಲಿಪ್‌ಕಾರ್ಟ್‌ ಸ್ಥಾಪಕರು ₹ 80 ಕೋಟಿ ಹೂಡಿಕೆ ಮಾಡುವ ಮೂಲಕ ಇದರ ಬೆಳವಣಿಗೆಗೆ ನೆರವಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT