ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟವರ್ ನಿರ್ಮಾಣಕ್ಕೆ ಮೇಕೇರಿ ಗ್ರಾ.ಪಂ ತಡೆ

ಎನ್‌ಒಸಿ ಪತ್ರ ನೀಡಲು ನಿರಾಕರಣೆ: ದಸಂಸ ಆರೋಪ
Last Updated 28 ಫೆಬ್ರುವರಿ 2020, 12:57 IST
ಅಕ್ಷರ ಗಾತ್ರ

ಮಡಿಕೇರಿ: ತಾಲ್ಲೂಕಿನ ಮೇಕೇರಿಯ ಸುಭಾಷ್ ನಗರದಲ್ಲಿ ಮೊಬೈಲ್ ಟವರ್ ನಿರ್ಮಾಣಕ್ಕೆ ಅಲ್ಲಿನ ವ್ಯಕ್ತಿಯೊಬ್ಬ ಜಾಗ ನೀಡಲು ಮುಂದೆ ಬಂದಿದ್ದರೂ ವಿನಾಕಾರಣ ಅಲ್ಲಿನ ಪಂಚಾಯಿತಿ ನಿರಾಪೇಕ್ಷಣಾ ಪತ್ರ ನೀಡಲು ನಿರಾಕರಿಸುತ್ತಿದೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ವಿಭಾಗೀಯ ಸಂಚಾಲಕ ಎನ್.ವೀರಭದ್ರಯ್ಯ ದೂರಿದರು.

ನಗರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಸಮಿತಿ ಮೇಕೇರಿ ಗ್ರಾಮದಲ್ಲಿ ಮೊಬೈಲ್ ಟವರ್ ನಿರ್ಮಿಸಲು ಖಾಸಗಿ ಮೊಬೈಲ್ ಕಂಪೆನಿಯೊಂದು ಮುಂದೆ ಬಂದಿದ್ದು ಅಲ್ಲಿನ ನಿವಾಸಿ ಎಚ್.ಸಿ. ಪೊನ್ನಪ್ಪ ಜಾಗ ನೀಡಲು ಮುಂದಾಗಿದ್ದರು. ಆದರೆ, ಈ ಜಾಗ ದಲಿತನಿಗೆ ಸೇರಿದ್ದು ಎಂಬ ಕಾರಣಕ್ಕೆ ಪಂಚಾಯಿತಿ ಆಡಳಿತ ಮಂಡಳಿ ನಿರಾಪೇಕ್ಷಣಾ ಪತ್ರ ನೀಡಿಲ್ಲ ಎಂದು ದೂರಿದರು.

100ಕ್ಕೂ ಅಧಿಕ ನಿವಾಸಿಗಳ ಸಹಿ ಪಡೆದು ಕಳೆದ ಆಗಸ್ಟ್ ತಿಂಗಳಿನಲ್ಲಿ ಮೇಕೇರಿ ಪಂಚಾಯಿತಿಗೆ ಅರ್ಜಿ ಸಲ್ಲಿಸಿ ಟವರ್ ನಿರ್ಮಾಣಕ್ಕೆ ಅನುಮತಿ ನೀಡುವಂತೆ ಕೋರಿದ್ದಾರೆ. ಅವರ ಅರ್ಜಿಯನ್ನು ಪರಿಶೀಲಿಸಿದ ಪಂಚಾಯಿತಿ ಆಡಳಿತ ಮಂಡಳಿ ಬಹುತೇಕ ಸದಸ್ಯರು ಒಪ್ಪಿಗೆ ಸೂಚಿಸಿದ್ದರೂ, ನಿರಾಪೇಕ್ಷಣಾ ಪತ್ರ ನೀಡದೇ ಸತಾಯಿಸಲಾಗುತ್ತಿದೆ ಎಂದು ಆರೋಪಿಸಿದರು.

ಕೇಂದ್ರ ಸರ್ಕಾರ ದೇಶವನ್ನು ಡಿಜಿಟಲ್ ಇಂಡಿಯಾ ಮಾಡುವುದಾಗಿ ಹೇಳಿಕೊಳ್ಳುತ್ತಿದೆ. ಆದರೆ, ಗ್ರಾಮೀಣ ಪ್ರದೇಶಗಳಲ್ಲಿ ಮೊಬೈಲ್ ಸಂಪರ್ಕದ ಮೂಲಕ ಪ್ರಗತಿ ಸಾಧಿಸಲು ಯೋಜನೆಯನ್ನು ರೂಪಿಸಿ, ಅನುಮತಿ ಕೋರಿದರೆ ಸ್ವತಃ ಬಿಜೆಪಿ ಕಾರ್ಯಕರ್ತರೇ ತಡೆ ಮಾಡುತ್ತಿದ್ದಾರೆ. ಬೆರಳೆಣಿಕೆಯಷ್ಟು ಮಂದಿ ಸ್ವಾರ್ಥಕ್ಕಾಗಿ ಟವರ್ ನಿರ್ಮಾಣಕ್ಕೆ ತಡೆಯೊಡ್ಡುವ ಮೂಲಕ ಗ್ರಾಮಸ್ಥರನ್ನು ವಂಚಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಗ್ರಾಮದ ಪ್ರಗತಿಯ ದೃಷ್ಟಿಯಿಂದ ಟವರ್ ಅಳವಡಿಕೆಗೆ ಅನುಮತಿ ನೀಡುವಂತೆ ಒತ್ತಾಯಿಸಿ ಮಾರ್ಚ್ 13ರಂದು ಸಮಿತಿ ವತಿಯಿಂದ ಗ್ರಾಮಸ್ಥರ ಬೆಂಬಲದೊಂದಿಗೆ ಮೇಕೇರಿ ಗ್ರಾ.ಪಂ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ತಿಳಿಸಿದರು.

ಸಮಿತಿ ಜಿಲ್ಲಾ ಸಂಚಾಲಕ ಎಚ್.ಎಲ್ ದಿವಾಕರ್ ಮಾತನಾಡಿ, ಬಿಜೆಪಿ ಆಡಳಿತವಿರುವ ಗ್ರಾ.ಪಂಗಳಲ್ಲಿ ದಲಿತರಿಗೆ ಅನ್ಯಾಯ ಮಾಡಲಾಗುತ್ತಿದೆ‌. ಈ ಬಗ್ಗೆ ದಲಿತ ಜನಪ್ರತಿನಿಧಿಗಳು, ಮುಖಂಡರ ಗಮನಕ್ಕೆ ತಂದಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಈ ಹಿನ್ನೆಲೆ ಹೋರಾಟ ಮಾಡಲು ನಿರ್ಧರಿಸಲಾಗಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ತಾಲ್ಲೂಕು ಸಂಚಾಲಕ ದೀಪಕ್, ನಗರ ಸಂಚಾಲಕ ಸಿದ್ದೇಶ್ವರ್‌ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT