ಶನಿವಾರ, ಮಾರ್ಚ್ 6, 2021
21 °C
ಮಕ್ಕಳ 2ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷೆ ಕೃತಜ್ಞಾ ಬೆಸೂರು ಸಲಹೆ

ಶಾಲೆಗಳು ಜ್ಞಾನವೃದ್ಧಿಯ ದೇಗುಲ ಆಗಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ಶನಿವಾರಸಂತೆ: ಶಾಲೆಗಳು ಕೇವಲ ಮಾಹಿತಿ ರವಾನೆ ಮಾಡುವ ಕೇಂದ್ರಗಳಾಗದೇ ಜ್ಞಾನವೃದ್ಧಿಯ ದೇಗುಲಗಳಾಗಬೇಕು ಎಂದು ಮಕ್ಕಳ 2ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಕೃತಜ್ಞಾ ಬೆಸೂರು ಹೇಳಿದರು.

ಕನ್ನಡ ಸಾಹಿತ್ಯ ಪರಿಷತ್‌ ಜಿಲ್ಲಾ ಘಟಕ, ತಾಲ್ಲೂಕು ಹಾಗೂ ಹೋಬಳಿ ಘಟಕ, ಕಿರಿಕೊಡ್ಲಿಮಠದ ಎಸ್.ಜಿ.ಎಸ್ ವಿದ್ಯಾಪೀಠದ ಆಶ್ರಯದಲ್ಲಿ ಸಮೀಪದ ಕೊಡ್ಲಿಪೇಟೆಯ ಭದ್ರಮ್ಮ ಮಹಾಂತಪ್ಪ ಪ್ರಾರ್ಥನಾ ಮಂದಿರದ ಎಸ್.ಎಸ್.ನೇಮಿರಾಜ್ ಪ್ರಧಾನ ವೇದಿಕೆಯಲ್ಲಿ ಶನಿವಾರ ನಡೆದ ಮಕ್ಕಳ 2ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಅವರು ಮಾತನಾಡಿದರು.

ಇಂದು ಶಿಕ್ಷಣ ಆಧುನಿಕತೆಯ ಬಣ್ಣ ಹಚ್ಚಿಕೊಂಡಿದೆ. ಶಾಲಾ– ಕಾಲೇಜುಗಳು ವೈದ್ಯ, ಎಂಜಿನಿಯರ್‌ಗಳನ್ನು ಸೃಷ್ಟಿ ಮಾಡುತ್ತಿವೆ. ಆದರೆ, ಬರಹಗಾರರನ್ನು ಸೃಷ್ಟಿ ಮಾಡುವುದು ಸುಲಭದ ಕೆಲಸವಲ್ಲ ಎಂದರು.

ಮಕ್ಕಳ ವ್ಯಕ್ತಿತ್ವಕ್ಕೆ ಗಟ್ಟಿ ಕವಚ ನಿರ್ಮಾಣ ಮಾಡುವ ಶಿಕ್ಷಣದ ಅಗತ್ಯವಿದೆ. ಶಿಕ್ಷಣ ಪಠ್ಯಕ್ಕೆ ಮಾತ್ರ ಸೀಮಿತವಾಗದೇ ಕಲೆ, ಸಾಹಿತ್ಯ, ಕ್ರೀಡೆ, ಸಂಗೀತ, ನೃತ್ಯ, ಲಲಿತಕಲೆಗಳಿಗೂ ಒತ್ತು ನೀಡಬೇಕು. ಪ್ರತಿ ಶಾಲೆಯಲ್ಲೂ ಕನ್ನಡ ಸಂಘ ಸ್ಥಾಪನೆಯಾಗಬೇಕು ಎಂದರು.

ಸಾಹಿತ್ಯ ಮಾನವನನ್ನು ಸಾಂಸ್ಕೃತಿಕವಾಗಿ ಬಹಳ ಎತ್ತರಕ್ಕೆ ಕೊಂಡೊಯ್ಯುತ್ತದೆ. ಕನ್ನಡ ಭಾಷೆಯನ್ನು ಆಪ್ತವಾಗಿ ಎದೆಯಲ್ಲಿ ತುಂಬಿಕೊಳ್ಳುವ ತಾಣವೇ ಸಾಹಿತ್ಯ ಸಮ್ಮೇಳನ ಎಂದರು.

ಸಮಾರಂಭವನ್ನು ಉದ್ಘಾಟಿಸಿದ ಎಸ್.ಜಿ.ಎಸ್.ವಿದ್ಯಾಪೀಠದ ಅಧ್ಯಕ್ಷ ಸದಾಶಿವ ಸ್ವಾಮೀಜಿ ಮಾತನಾಡಿ, ‘ಪಂಚಭೂತ ಅವಶ್ಯಕತೆಗಳೊಂದಿಗೆ ಮಾನವನು ಸತ್ಯ, ನಿಷ್ಠೆ, ಸಾಹಿತ್ಯ, ಸಂಸ್ಕೃತಿಯನ್ನು ದಾರಿದೀಪವಾಗಿ ಮಾಡಿಕೊಂಡಾಗ ಜೀವನ ಸಾರ್ಥಕವಾಗುತ್ತದೆ. ಮಕ್ಕಳು ಚಿಕ್ಕವರಾಗಿರುವಾಗಲೇ ಸಾಹಿತ್ಯದ ಅಭಿರುಚಿ ಮೂಡಿಸಬೇಕು’ ಎಂದರು.

ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಎಸ್.ಲೋಕೇಶ್ ಸಾಗರ್ ಮಾತನಾಡಿ, ‘ಗ್ರಾಮೀಣ ಪ್ರದೇಶದಲ್ಲಿ ಕನ್ನಡ ಮಾಧ್ಯಮದಲ್ಲಿ ಓದುವ ಮಕ್ಕಳಲ್ಲಿ ಸ್ಫೂರ್ತಿ ತುಂಬುವಲ್ಲಿ ಈ ಸಮ್ಮೇಳನ ಯಶಸ್ವಿಯಾಗಿದೆ. ಮಕ್ಕಳ ಪ್ರತಿಭೆ ಅನಾವರಣಕ್ಕೂ ವೇದಿಕೆ ಒದಗಿಸಿದೆ’ ಎಂದು ಹೇಳಿದರು.

ಸರ್ಕಾರಿ ಅಭಿಯೋಜಕ ಎಚ್.ಎಸ್.ಚಂದ್ರಮೌಳಿ ಮಾತನಾಡಿ, ‘ಮಕ್ಕಳ ಮುಗ್ಧ ಮನಸ್ಸುಗಳನ್ನು ಸರಿದಾರಿಯಲ್ಲಿ ಕರೆದೊಯ್ಯುವ ಜವಾಬ್ದಾರಿ ಪೋಷಕರ ಮೇಲಿದೆ. ಮಕ್ಕಳಿಗೆ ಸಂಸ್ಕೃತಿ, ಸಂಸ್ಕಾರದ ಅರಿವು ಮೂಡಿಸಬೇಕು. ಶಿಕ್ಷಣದ ಮೂಲಕ ಉತ್ತಮ ನಾಗರಿಕರ ನ್ನಾಗಿ ರೂಪಿಸಬೇಕು ಎಂದರು.

ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಪುಷ್ಪಾ ರಾಜೇಶ್, ಸದಸ್ಯ ಕುಶಾಲಪ್ಪ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ರೋಹಿಣಿ ಸುಬ್ರಹ್ಮಣ್ಯಾಚಾರ್, ಹಂಡ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಸಂದೀಪ್, ಬೆಸೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪಾರ್ವತಿ ಹಾಗೂ ಕಸಾಪ ಕೊಡ್ಲಿಪೇಟೆ ಹೋಬಳಿ ಘಟಕದ ಅಧ್ಯಕ್ಷ ಎಂ.ಎಸ್.ಅಬ್ದುಲ್ ರಬ್ ಮಾತನಾಡಿದರು.

ವಿದ್ಯಾರ್ಥಿ ಜಿ.ದಿಶಾಂಕ್, ಮಾಜಿ ಸಚಿವ ಬಿ.ಎ.ಜೀವಿಜಯ, ಜಿಲ್ಲಾ ಪಂಚಾಯಿತಿ ಸದಸ್ಯ ಪುಟ್ಟರಾಜ್, ಬ್ಯಾಡಗೊಟ್ಟ ಗ್ರಾಮ ಪಂಚಾಯಿತಿ ಅಧ್ಯಕ್ಷೆ ನಿರ್ಮಲಾ, ಕ್ಷೇತ್ರ ಶಿಕ್ಷಣಾಧಿಕಾರಿ ನಾಗರಾಜಯ್ಯ, ಕಸಾಪ ಮಾಧ್ಯಮ ಕಾರ್ಯದರ್ಶಿ ಎನ್.ಎ.ಅಶ್ವಥ್ ಕುಮಾರ್, ಕೋಶಾಧ್ಯಕ್ಷ ಮುರಳೀಧರ್, ಕಸಾಪ ಸೋಮವಾರಪೇಟೆ ತಾಲ್ಲೂಕು ಘಟಕದ ಅಧ್ಯಕ್ಷ ಎಸ್.ಡಿ.ವಿಜೇತ್, ಮಡಿಕೇರಿ ತಾಲ್ಲೂಕು ಘಟಕದ ಅಧ್ಯಕ್ಷ ಕುಡೆಕಲ್ ಸಂತೋಷ್, ಹೋಬಳಿ ಘಟಕದ ಕಾರ್ಯದರ್ಶಿ ಬೆಸೂರು ಶಾಂತೇಶ್, ಕೆ.ಕೆ.ರೇಣುಕಾ, ಶಿಲ್ಪಿ ವರಪ್ರಸಾದ್ ಉಪಸ್ಥಿತರಿದ್ದರು.

 

ಮಕ್ಕಳ ಪ್ರತಿಭೆ ಬೆಂಕಿಕಡ್ಡಿ ಇದ್ದಂತೆ:

ಮಕ್ಕಳ ಪ್ರತಿಭೆ ಬೆಂಕಿಕಡ್ಡಿಗಳಿದ್ದಂತೆ. ಸ್ವತಃ ಉಪಯೋಗಿಸದ ಹೊರತು ಅದರ ಸಾಮರ್ಥ್ಯ ಗೊತ್ತಾಗದು ಎಂದು ಕೃತಜ್ಞಾ ಬೆಸೂರು ಹೇಳಿದರು.

ಮಕ್ಕಳು ಬೋನ್ಸಾಯಿ ಗಿಡದಂತೆ ಆಗಬಾರದು. ಬೆಳವಣಿಗೆ ಸ್ಥಗಿತಗೊಳ್ಳದಂತೆ ವಿವಿಧ ಆಯಾಮಗಳಲ್ಲಿ ಬೆಳೆಯಬೇಕು. ಪಠ್ಯಕ್ಕೆ ಮಾತ್ರ ಸೀಮಿತವಾಗದೆ ಕಲೆ, ಸಾಹಿತ್ಯ, ಕ್ರೀಡೆ, ಸಂಗೀತ, ನೃತ್ಯ, ಲಲಿತಕಲೆಯಂತಹ ಕ್ಷೇತ್ರಗಳ ಕಡೆಗೂ ಗಮನ ಹರಿಸಬೇಕು ಎಂದು ಸಲಹೆ ನೀಡಿದರು.

 

ಪುಸ್ತಕ ಹಿಡಿಯಬೇಕಾದ ಕೈಯಲ್ಲಿ ಮೊಬೈಲ್‌:

ಪುಸ್ತಕಗಳು ಜ್ಞಾನದ ಅಣೆಕಟ್ಟೆಗಳು. ಪುಸ್ತಕ ಓದುವುರಿಂದ ಜಾತ್ಯತೀತ ಧೋರಣೆ, ವೈಚಾರಿಕತೆ, ಆಲೋಚನಾ ಶಕ್ತಿ ಬೆಳೆಯುತ್ತದೆ. ದೇವಸ್ಥಾನಕ್ಕೆ ಕಳಸ ಶೋಭೆ ನೀಡುವಂತೆ ಮನೆಗಳಿಗೆ ಗ್ರಂಥಾಲಯ ಶೋಭೆ ನೀಡುತ್ತದೆ. ಪುಸ್ತಕಗಳು ಸಾಂಸ್ಕೃತಿಕ ರಾಯಭಾರಿಗಳಿದ್ದಂತೆ. ಆದರೆ, ಪುಸ್ತಕಗಳು ಇರಬೇಕಾದ ಕೈಗಳಲ್ಲಿ ತಂತ್ರಜ್ಞಾನದ ಕೂಸುಗಳು ಆಡುತ್ತಿವೆ. ಮೊಬೈಲ್‌ ಮೋಹಿಗಳ ಸಂಖ್ಯೆ ಹೆಚ್ಚುತ್ತಿದೆ. ತಂತ್ರಜ್ಞಾನದ ಗುಲಾಮರಾಗದೇ ಪುಸ್ತಕಗಳಿಗೆ ದಾಸರಾಗಬೇಕಿದೆ ಎಂದು ಕೃತಜ್ಞಾ ಬೆಸೂರು ಹೇಳಿದರು.

 

ಸಮ್ಮೇಳನದ ಅಧ್ಯಕ್ಷರ ಮೆರವಣಿಗೆ:

ಮಕ್ಕಳ 2ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷೆ ಕೃತಜ್ಞಾ ಬೆಸೂರು ಅವರನ್ನು ಅದ್ಧೂರಿಯಾಗಿ ಮೆರವಣಿಗೆ ಮಾಡಲಾಯಿತು.

ಸಮ್ಮೇಳನದ ಅಧ್ಯಕ್ಷೆ ಜೊತೆ ಕಿರಿಕೊಡ್ಲಿ ಮಠಾಧೀಶ ಸದಾಶಿವ ಸ್ವಾಮೀಜಿ, ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಲೋಕೇಶ್ ಸಾಗರ್, ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ಎಸ್.ಡಿ.ವಿಜೇತ್, ಹೋಬಳಿ ಘಟಕದ ಅಧ್ಯಕ್ಷ ಅಬ್ದುಲ್ ರಬ್ ಇದ್ದರು.

ಬೆಳಿಗ್ಗೆ 9.30ಕ್ಕೆ ಹೊಸ ಮುನ್ಸಿಪಾಲಿಟಿ ಗಣಪತಿ ದೇವಸ್ಥಾನದ ಬಳಿ ಮೆರವಣಿಗೆಗೆ ದೊಡ್ಡಕೊಡ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿನಿ ಅಕ್ಷತಾ ಚಾಲನೆ ನೀಡಿದರು.

2 ಕಿ.ಮೀ. ದೂರದ ಮೆರವಣಿಗೆಯಲ್ಲಿ 500 ಮೀಟರ್‌ ಉದ್ದದ ನಾಡಧ್ವಜವನ್ನು ಹಿಡಿದು ವಿದ್ಯಾರ್ಥಿಗಳು ಮೆರವಣಿಗೆಯಲ್ಲಿ ಸಾಗಿದರು. ಕನ್ನಡ ನಾಡು, ನುಡಿ, ಪ್ರಕೃತಿ– ಪರಿಸರ, ಸಾಹಿತಿಗಳು, ಕವಿಪುಂಗವರು, ಕೊಡಗಿನ ಕಾವೇರಿ ಮಾತೆ, ಸೈನಿಕರು, ಬಸವಣ್ಣ, ವಿಜ್ಞಾನ ಮಾದರಿಯ ಸ್ತಬ್ಧಚಿತ್ರಗಳು ನೋಡುಗರ ಕಣ್ಮನ ಸೆಳೆದವು.

ಬೊಂಬೆ ನೃತ್ಯ, ಕೊಂಬು, ಮಂಗಳವಾದ್ಯ,ವೈವಿಧ್ಯಮಯ ಕಲಾತಂಡಗಳು, ಸ್ತ್ರೀಶಕ್ತಿ, ಧರ್ಮಸ್ಥಳ ಸಂಘ, ಕನ್ನಡಪರ ಸಂಘಟನೆಗಳ ಪದಾಧಿಕಾರಿಗಳು ಪಾಲ್ಗೊಂಡಿದ್ದರು. ಬೈಕ್ ಜಾಥಾ ನಡೆಯಿತು.

ಬೊಂಬೆ ನೃತ್ಯ, ಮಂಗಳವಾದ್ಯ ಸೇರಿದಂತೆ ವಿವಿಧ ಕಲಾತಂಡಗಳು ಮೆರವಣಿಗೆಗೆ ಮೆರುಗು ನೀಡಿದವು. ಸ್ತ್ರೀಶಕ್ತಿ, ಧರ್ಮಸ್ಥಳ ಸಂಘ, ಕನ್ನಡಪರ ಸಂಘಟನೆಗಳ ಪದಾಧಿಕಾರಿಗಳು ಪಾಲ್ಗೊಂಡಿದ್ದರು.

ಗ್ರಾಮ ಪಂಚಾಯಿತಿ ಅಧ್ಯಕ್ಷೆ ರೋಹಿಣಿ, ಸುಬ್ರಹ್ಮಣ್ಯಾಚಾರ್ ರಾಷ್ಟ್ರ ಧ್ವಜಾರೋಹಣ ನೆರವೇರಿಸಿದರು. ಲೋಕೇಶ್ ಸಾಗರ್ ಅವರು ನಾಡಧ್ವಜ ಹಾಗೂ ಎಸ್.ಡಿ.ವಿಜೇತ್ ಅವರು ಪರಿಷತ್ ಧ್ವಜಾರೋಹಣ ಮಾಡಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.