ಸೋಮವಾರ, ಮೇ 17, 2021
28 °C
ಬೇತು ಗ್ರಾಮ: ಮೇ ತಿಂಗಳ ಹಬ್ಬಕ್ಕೆ ಮತ್ತೆ ನಿರ್ಬಂಧ; ಗ್ರಾಮಸ್ಥರಲ್ಲಿ ನಿರಾಸೆ

ಮಕ್ಕಿ ಶಾಸ್ತಾವು ವಾರ್ಷಿಕ ಉತ್ಸವ ರದ್ದು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನಾಪೋಕ್ಲು: ಪ್ರತಿ ವರ್ಷ ಮೇ ತಿಂಗಳ 3 ಮತ್ತು 4 ರಂದು ವಿಜೃಂಭಣೆಯಿಂದ ನಡೆಯುತ್ತಿದ್ದ ಸಮೀಪದ ಬೇತು ಗ್ರಾಮದ ಮಕ್ಕಿ ಶಾಸ್ತಾವು ದೇವರ ವಾರ್ಷಿಕ ಉತ್ಸವಕ್ಕೆ ಈ ಬಾರಿಯೂ ಕೋವಿಡ್ ಅಡ್ಡಿಯಾಗಿದೆ.

ಗ್ರಾಮೀಣ ಜನರ ಹಬ್ಬದ ಸಂಭ್ರಮಕ್ಕೆ ಕೊರೊನಾ ಕರಿನೆರಳು ಬಿದ್ದಿದೆ. ಕಳೆದ ವರ್ಷವೂ ಲಾಕ್‌ಡೌನ್‌ನಿಂದಾಗಿ ಶಾಸ್ತಾವು ಉತ್ಸವ ಸ್ಥಗಿತಗೊಂಡಿತ್ತು. ಮೇ ತಿಂಗಳಲ್ಲಿ ಜರುಗಬೇಕಿದ್ದ ಉತ್ಸವಕ್ಕೆ ಮತ್ತೆ ಅಂಕುಶ ಬಿದ್ದಿದ್ದು, ಹಬ್ಬದ ಸಂಭ್ರಮ ಮರೆಯಾಗಿದೆ.

ವರ್ಷದಲ್ಲಿ ಎರಡು ಬಾರಿ ಮಕ್ಕಿ ಶಾಸ್ತಾವು ಉತ್ಸವ ನಡೆಯುತ್ತಿದ್ದು, ಭಕ್ತರು ಒಂದೇ ಉತ್ಸವಕ್ಕೆ ತೃಪ್ತಿಪಟ್ಟುಕೊಳ್ಳುವಂತಾಗಿದೆ. ವಾರ್ಷಿಕ ಉತ್ಸವದಲ್ಲಿ ಸಾಂಪ್ರದಾಯಿಕ ಎತ್ತೇರಾಟ ದೀಪಾರಾಧನೆ, ಅಜ್ಜಪ್ಪ ಕೋಲ ಹಾಗೂ ಮಧ್ಯಾಹ್ನ ವಿಷ್ಣುಮೂರ್ತಿ ಕೋಲ ನಡೆಯುವುದು ವಿಶೇಷ. ಕೋಲಗಳನ್ನು ವೀಕ್ಷಿಸಲು ಹೆಚ್ಚಿನ ಸಂಖ್ಯೆಯ ಭಕ್ತರು ಪಾಲ್ಗೊಳ್ಳುತ್ತಿದ್ದರು.

ಕೋವಿಡ್‌ ‌ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲನೆ ಮಾಡಬೇಕಿದ್ದು, ಉತ್ಸವ ಸ್ಥಗಿತಗೊಂಡಿದೆ. ಮೇ ತಿಂಗಳ ಶಾಸ್ತಾವು ಹಬ್ಬಕ್ಕೆ ಗ್ರಾಮದಲ್ಲಿ ಹತ್ತು ದಿನಗಳ ಕಟ್ಟುಪಾಡು ಹೇರಬೇಕಿತ್ತು. ಹಬ್ಬ ಸ್ಥಗಿತಗೊಂಡಿರುವುದರಿಂದ ದೇವಾಲಯಕ್ಕೆ ಭಕ್ತರು ಸುಳಿಯುತ್ತಿಲ್ಲ. ಅರ್ಚಕ ಮಕ್ಕಿ ದಿವಾಕರ ನಿತ್ಯ ಪೂಜೆ ನೆರವೇರಿಸುತ್ತಿದ್ದಾರೆ.

ಡಿಸೆಂಬರ್ ತಿಂಗಳಲ್ಲಿ ಆಚರಿಸುವ ಹಬ್ಬದಲ್ಲಿ ಭಕ್ತರಿಂದ ನಾಯಿ ಹರಕೆ, ದೀಪಾರಾಧನೆ, ಕೋಲಗಳು ಜರುಗಿವೆ.

‘ಎರಡು ಬಾರಿ ಉತ್ಸವ ಆಚರಿಸಬೇಕಿತ್ತು, ಡಿಸೆಂಬರ್ ತಿಂಗಳ ಹಬ್ಬಕ್ಕೆ ಅವಕಾಶ ಸಿಕ್ಕಿತು. ಮೇ ತಿಂಗಳ ಹಬ್ಬವನ್ನು ಕಳೆದ ವರ್ಷದಂತೆ ಈ ವರ್ಷವೂ ಸ್ಥಗಿತಗೊಳಿಸಿದ್ದೇವೆ’ ಎಂದು ದೇವಾಲಯದ ಆಡಳಿತ ಮಂಡಳಿ ಅಧ್ಯಕ್ಷ ಕುಟ್ಟಂಚೆಟ್ಟೀರ ಶ್ಯಾಂ ಬೋಪಣ್ಣ ತಿಳಿಸಿದರು.

ಮೇ ತಿಂಗಳಲ್ಲಿ ದೇವಾಲಯದ ಪ್ರಾಂಗಣದಲ್ಲಿ ಎರಡು ಸುತ್ತಿನ ಎತ್ತೇರಾಟ ಕಾರ್ಯಕ್ರಮ ನಡೆಯುತ್ತದೆ. ಹನ್ನೆರಡು ಎತ್ತುಗಳ ಮೇಲೆ ಅಕ್ಕಿಯ ಚೀಲಗಳನ್ನಿರಿಸಿ ಭಕ್ತರು ಹರಕೆ ಸಲ್ಲಿಸುವರು. ಉತ್ಸವದಲ್ಲಿ ತೋತಕೋಲವು ಗಮನ ಸೆಳೆಯುತ್ತದೆ. ಅಜ್ಜಪ್ಪ ಕೋಲ ಹಾಗೂ ಮಧ್ಯಾಹ್ನ ಜರುಗುವ ವಿಷ್ಣುಮೂರ್ತಿ ಕೋಲ ಉತ್ಸವದ ಇತರೆ
ಆಕರ್ಷಣೆಗಳು.

ನಾಲ್ಕುನಾಡಿನ ಹಲವು ದೇವಾಲಯಗಳಲ್ಲಿ ವಾರ್ಷಿಕ ಉತ್ಸವಗಳು ಮಾರ್ಚ್-ಏಪ್ರಿಲ್ ತಿಂಗಳುಗಳಲ್ಲಿ ಜರುಗಿವೆ. ಮೇ ತಿಂಗಳಲ್ಲಿ ಜರುಗುವ ಮಕ್ಕಿ ಶಾಸ್ತಾವು ಉತ್ಸವ ಈ ಭಾಗದ ಧಾರ್ಮಿಕ ಆಚರಣೆಗಳಿಗೆ ಮುಕ್ತಾಯ ಹಾಡಿದಂತೆ. ಆ ಬಳಿಕ ಮಳೆಗಾಲವೂ ಮುನ್ನುಡಿ ಬರೆದು ಕೃಷಿ ಚಟುವಟಿಕೆಗಳಲ್ಲಿ ಗ್ರಾಮೀಣ ಜನರು ಮಗ್ನರಾಗುತ್ತಾರೆ.

ವಿಜೃಂಭಣೆಯ ಉತ್ಸವಕ್ಕೆ ಸಿದ್ಧತೆ ಮಾಡಿಕೊಂಡಿದ್ದ ಗ್ರಾಮಸ್ಥರಲ್ಲಿ ಕೊರೊನಾ ಕಾರ್ಮೋಡ ಆವರಿಸಿ ನಿರಾಸೆಯೊಂದಿಗೆ ಆತಂಕವೂ ಮನೆಮಾಡಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು