ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸತ್ತಿದ್ದು ಅಪಾಯಕಾರಿ ಹುಲಿ: ಟೈಗರ್ ಸೆಲ್‌

ಪ್ರತಿಭಟನೆ ಮುಂದುವರಿಸಲು ರೈತರ ತೀರ್ಮಾನ; ಮುಖ್ಯಮಂತ್ರಿ ಬಿಎಸ್‌ವೈ ಭೇಟಿಗೆ ನಿರ್ಧಾರ
Last Updated 20 ಮಾರ್ಚ್ 2021, 19:48 IST
ಅಕ್ಷರ ಗಾತ್ರ

ಮಡಿಕೇರಿ: ಕೊಡಗು ಜಿಲ್ಲೆಯ ನಾಗರ ಹೊಳೆ ವನ್ಯಜೀವಿ ವಲಯದ ಲಕ್ಕುಂದ ಎಂಬಲ್ಲಿ, ಮೃತಪಟ್ಟ ಸ್ಥಿತಿಯಲ್ಲಿ ‍ಶುಕ್ರ ವಾರ ಪತ್ತೆಯಾಗಿದ್ದ ಹುಲಿ ಹಾಗೂ ಕಾರ್ಯಾಚರಣೆ ವೇಳೆ ಅಳವಡಿಸಿದ್ದ ಕ್ಯಾಮೆರಾದಲ್ಲಿ ಸೆರೆಯಾದ ಹುಲಿ ಎರಡರ ಚಿತ್ರಗಳನ್ನೂ ಪರಿಶೀಲಿಸಿರುವ ಬೆಂಗಳೂರಿನ ಟೈಗರ್‌ ಸೆಲ್‌ ತಜ್ಞರು, ಎರಡೂ ಚಿತ್ರಗಳಲ್ಲಿರುವ ಹುಲಿ ಒಂದೇ ಆಗಿದೆ ಎಂದು ದೃಢಪಡಿಸಿದ್ದಾರೆ.

ಹುಲಿಯ ಕಳೇಬರ ಪತ್ತೆಯಾದ ಮೇಲೆ, ಕೊಡಗು ಅರಣ್ಯಾಧಿಕಾರಿಗಳು, ಎರಡೂ ಛಾಯಾಚಿತ್ರಗಳನ್ನು ‘ಟೈಗರ್‌ ಸೆಲ್‌’ಗೆ ಕಳುಹಿಸಿದ್ದರು.

ಲಕ್ಕುಂದದಲ್ಲಿ ಸಿಕ್ಕಿದ್ದು, ಮಾನವ ಪ್ರಾಣ ಹಾನಿ ಹಾಗೂ ಜಾನುವಾರುಗಳ ಸಾವಿಗೆ ಕಾರಣವಾದ ಹುಲಿಯ ಕಳೇಬರ (Tiger nagarahole 13-u285) ಎಂದು ವಿರಾಜಪೇಟೆ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಸ್ಪಷ್ಟಪಡಿಸಿದ್ದು, ಅಧಿಕೃತ ಪ್ರಕಟಣೆ ಹೊರಡಿಸಿದ್ದಾರೆ.

ಆತ್ಮರಕ್ಷಣೆಗೆ ಹಾರಿಸಿದ್ದ ಗುಂಡು: ಮೃತ ಹುಲಿಯ ಕುತ್ತಿಗೆ ಹಾಗೂ ಭುಜದ ಭಾಗದಲ್ಲಿ ಗುಂಡೇಟಿನ ಗುರುತುಗಳಿವೆ. ಹುಲಿ ಸೆರೆ ಕಾರ್ಯಾಚರಣೆ ವೇಳೆ ಇಲಾಖೆಯ ಸಿಬ್ಬಂದಿಯು ಆತ್ಮ ರಕ್ಷಣೆಗಾಗಿ ಸಿಡಿಸಿದ ಗುಂಡು ಎಂದು ಮರಣೋತ್ತರ ಪರೀಕ್ಷೆಯಲ್ಲಿ ದೃಢಪಟ್ಟಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಪೊನ್ನಂಪೇಟೆ ತಾಲ್ಲೂಕಿನ ಬೆಳ್ಳೂರಿನಲ್ಲಿ ನಡೆದ ಪ್ರತಿಭಟನಾ ಸಭೆಯಲ್ಲಿ ರೈತ ಸಂಘದ ಜಿಲ್ಲಾ ಅಧ್ಯಕ್ಷ ಕಾಡ್ಯಮಾಡ ಮನು ಸೋಮಯ್ಯ ಮಾತನಾಡಿದರು
ಪೊನ್ನಂಪೇಟೆ ತಾಲ್ಲೂಕಿನ ಬೆಳ್ಳೂರಿನಲ್ಲಿ ನಡೆದ ಪ್ರತಿಭಟನಾ ಸಭೆಯಲ್ಲಿ ರೈತ ಸಂಘದ ಜಿಲ್ಲಾ ಅಧ್ಯಕ್ಷ ಕಾಡ್ಯಮಾಡ ಮನು ಸೋಮಯ್ಯ ಮಾತನಾಡಿದರು

‘ಲಕ್ಕುಂದ ಎಂಬ ಪ್ರದೇಶವು, ಮಾನವ ಪ್ರಾಣ ಹಾನಿಯಾದ ಸ್ಥಳದ ಸಮೀಪವೇ ಇದೆ. ಮರಣೋತ್ತರ ಪರೀಕ್ಷೆಯಲ್ಲಿ ಸಂಗ್ರಹಿಸಿದ ಮಾದರಿ ಗಳನ್ನು, ವಿಧಿ ವಿಜ್ಞಾನ ಪರೀಕ್ಷೆಗೆ ಕಳುಹಿಸಲಾಗಿದೆ. ವರದಿ ಬಂದ ಮೇಲೆ ಹುಲಿಯ ಸಾವಿಗೆ ನಿಖರ ಕಾರಣ ತಿಳಿಯಲಿದೆ’ ಎಂದು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ವಿಜಯಕುಮಾರ್‌ ಗೋಗಿ ತಿಳಿಸಿದ್ದಾರೆ.

ಶಿಬಿರ ತೆರವು: ಬೆಳ್ಳೂರು ಗ್ರಾಮದಲ್ಲಿ ಹುಲಿ ಸೆರೆ ಕಾರ್ಯಾಚರಣೆಗಾಗಿ ಸ್ಥಾಪಿಸಿದ್ದ ಶಿಬಿರವನ್ನು ಅರಣ್ಯ ಇಲಾಖೆ ತೆರವುಗೊಳಿಸಿದೆ.

ಪೊನ್ನಂಪೇಟೆ ತಾಲ್ಲೂಕಿನಲ್ಲಿ ಇನ್ನೂ ಹಲವು ಹುಲಿಗಳಿದ್ದು, ಸೆರೆ ಹಿಡಿಯುವಂತೆ ನಾಗರಿಕರು ಒತ್ತಾಯಿಸಿದ್ದಾರೆ.

ತಣ್ಣಗಾಗದ ರೈತರ ಆಕ್ರೋಶ: ಮತ್ತೆರಡು ಹುಲಿಗಳ ದರ್ಶನ

ಜನರು ಹಾಗೂ ಜಾನುವಾರುಗಳ ಮೇಲೆ ದಾಳಿ ನಡೆಸಿ ಅಪಾಯಕಾರಿ ಎನ್ನಲಾಗಿದ್ದ ಹುಲಿಯ ಮೃತದೇಹ ಸಿಕ್ಕರೂ ರೈತರು ಹಾಗೂ ಕಾರ್ಮಿಕರ ಆಕ್ರೋಶ ತಣ್ಣಗಾಗಿಲ್ಲ. ಇನ್ನೂ ಕೆಲವು ದಿನಗಳ ಕಾಲ ಪೊನ್ನಂಪೇಟೆ ತಾಲ್ಲೂಕಿನ ಬೆಳ್ಳೂರಿನಲ್ಲಿ ಪ್ರತಿಭಟನೆ ಮುಂದುವರಿಸಲು ರೈತರು ಹಾಗೂ ಕಾರ್ಮಿಕರು ಶನಿವಾರ ನಿರ್ಧರಿಸಿದ್ದಾರೆ.

ಬೆಳ್ಳೂರಿನ ಪ್ರತಿಭಟನಾ ಸ್ಥಳದಲ್ಲಿ ರೈತ ಸಂಘದ ಕೊಡಗು ಜಿಲ್ಲಾ ಅಧ್ಯಕ್ಷ ಕಾಡ್ಯಮಾಡ ಮನು ಸೋಮಯ್ಯ ಮಾತನಾಡಿ, ‘ಅಪಾಯಕಾರಿ ಹುಲಿಯು ಮೃತಪಟ್ಟಿದೆ ಎಂದು ಅರಣ್ಯಾಧಿಕಾರಿಗಳು ಹೇಳಿದ್ದಾರೆ. ಆದರೆ, ಸಾರ್ವಜನಿಕ ವಲಯದಲ್ಲಿ ಸಂಶಯವಿದೆ. ಅಧಿಕಾರಿಗಳು, ಈ ಸಂಶಯ ನಿವಾರಿಸಬೇಕು. ಉಳಿದ ಹುಲಿಗಳನ್ನೂ ಸೆರೆ ಹಿಡಿಯಬೇಕು’ ಎಂದು ಕೋರಿದರು.

‘ಮಾರ್ಚ್‌ 22ರಂದು ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಹಾಗೂ ಅರಣ್ಯ ಸಚಿವ ಅರವಿಂದ ಲಿಂಬಾವಳಿ ಅವರನ್ನು ಭೇಟಿ ಮಾಡಿ, ಕೊಡಗು ರೈತರ ಸಮಸ್ಯೆ ಬಗ್ಗೆ ವಿವರಿಸಲಾಗುವುದು. ಅಲ್ಲಿಯ ತನಕ ಹೋರಾಟ ಮುಂದುವರಿಯಲಿದೆ’ ಎಂದು ಪ್ರಕಟಿಸಿದರು. ಅದಕ್ಕೆ ಪ್ರತಿಭಟನಕಾರರು ಒಪ್ಪಿಗೆ ಸೂಚಿಸಿದರು.

ನಿರಂತರವಾಗಿ ಅಹೋರಾತ್ರಿ ಚಳವಳಿ ನಡೆಯುತ್ತಿದ್ದು, ಕೆಲವು ದಿನಗಳ ಮಟ್ಟಿಗೆ ಪ್ರತಿಭಟನೆ ಮುಂದುವರಿಸುವುದು ಅನಿವಾರ್ಯ ಎಂದು ಪುನರುಚ್ಚರಿಸಿದರು. ಹಿತರಕ್ಷಣಾ ಸಮಿತಿಯ ಅಧ್ಯಕ್ಷ ಅಜ್ಜಮಾಡ ಕಟ್ಟಿ ಮಂದಯ್ಯ ಮಾತನಾಡಿ, ಹುಲಿ ಹಾವಳಿಯ ಬಗ್ಗೆ ನಿರಂತರ ಹೋರಾಟ ಮಾಡಿದರಷ್ಟೇ ಪರಿಹಾರ ಸಿಗಲು ಸಾಧ್ಯ. ಕೊಡಗು ರೈತರ ಹೋರಾಟದ ಬಿಸಿ, ರಾಜ್ಯ ಸರ್ಕಾರಕ್ಕೂ ತಟ್ಟಿದೆ ಎಂದರು.

ಹುಲಿಗಳ ದರ್ಶನ (ನಾಪೋಕ್ಲು ವರದಿ): ಸಮೀಪದ ಕುಂಜಿಲ ಗ್ರಾಮದಲ್ಲಿ ಎರಡು ಹುಲಿಗಳು ಕಾಣಿಸಿಕೊಂಡಿದ್ದಾಗಿ ಗ್ರಾಮಸ್ಥರು ತಿಳಿಸಿದ್ದಾರೆ.

ಶನಿವಾರ ಬೆಳಿಗ್ಗೆ 6.45ರ ವೇಳೆಗೆ ಕಾಫಿ ತೋಟದಲ್ಲಿ ಹುಲಿಗಳನ್ನು ನೋಡಿರುವುದಾಗಿ, ಪುದರ್‌ ಅಬೂಬಕರ್‌ ಎಂಬುವವರು ತೋಟದ ಮಾಲೀಕ ಪತ್ತಂಗೂಡ್‌ ಮೂಸ ಅವರಿಗೆ ತಿಳಿಸಿದ್ದಾರೆ. ವಿಷಯ ತಿಳಿದ ಅರಣ್ಯಾಧಿಕಾರಿಗಳು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ.

* ಒಂದು ತಿಂಗಳು ನಿರಂತರವಾಗಿ ಕಾರ್ಯಾಚರಣೆ ನಡೆಸಿದ್ದರಿಂದ ಸಿಬ್ಬಂದಿಗೂ ವಿಶ್ರಾಂತಿ ಅಗತ್ಯವಿದೆ. ಆ ಬಳಿಕ ಕಾರ್ಯಾಚರಣೆ ಆರಂಭಿಸಬೇಕು.

–ಕಾಡ್ಯಮಾಡ ಮನು ಸೋಮಯ್ಯ, ಜಿಲ್ಲಾ ಅಧ್ಯಕ್ಷ, ರೈತ ಸಂಘ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT