ವಿರಾಜಪೇಟೆ: ‘ಕೆಸರು ಗದ್ದೆ ಕ್ರೀಡಾಕೂಟಗಳು ನಗರ ವಾಸಿಗಳಿಗೆ ಗ್ರಾಮೀಣ ಬದುಕಿನ ಸೊಗಡನ್ನು ಪರಿಚಯಿಸುತ್ತದೆ’ ಎಂದು ಪಂಜರುಪೇಟೆಯ ಶಾಂತಪ್ಪ ಪೂಜಾರಿ ಅಭಿಪ್ರಾಯಪಟ್ಟರು.
ಪಟ್ಟಣದ ಪಂಜರು ಪೇಟೆಯಲ್ಲಿ ಬಿ.ಎಂ. ಮಂಜಪ್ಪ ಪೂಜಾರಿ ಅವರ ಸ್ಮರಣಾರ್ಥ ಭಾನುವಾರ ಆಯೋಜಿಸಿದ್ದ ಕೆಸರುಗದ್ದೆ ಕ್ರೀಡಾಕೂಟದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.
‘ಕೊಡಗು ಜಿಲ್ಲೆ ಕೃಷಿ ಆಧಾರಿತ ಜಿಲ್ಲೆಯಾಗಿದ್ದು, ಇಂದು ಜಿಲ್ಲೆಯಲ್ಲಿ ಭತ್ತ ಬೆಳೆಯುವ ಗದ್ದೆಗಳನ್ನು ನಾನಾ ಕಾರಣಗಳಿಂದ ಪಾಳು ಬಿಡಲಾಗಿದೆ. ಭತ್ತದ ಗದ್ದೆಗಳನ್ನು ಯಾವುದೇ ಕಾರಣ ನೀಡಿ ಪಾಳು ಬಿಡಬಾರದು. ಪ್ರತಿಯೊಬ್ಬರು ತಮ್ಮ ಭತ್ತದ ಗದ್ದೆಗಳಲ್ಲಿ ಬೇಸಾಯ ಮಾಡಬೇಕು. ಸಾಂಪ್ರದಾಯಿಕ ಕೃಷಿ ವ್ಯವಸ್ಥೆ ಜೀವಂತವಾಗಿರಿಸಬೇಕು’ ಎಂದರು.
ಸಾಂಪ್ರದಾಯಿಕವಾಗಿ ಭೂಮಿತಾಯಿಗೆ ಪೂಜೆ ಸಲ್ಲಿಸುವ ಮೂಲಕ ಹಿರಿಯರಾದ ಬಿ.ಆರ್.ರಾಜ ಮತ್ತು ವಕೀಲ ಬಿ.ಎಂ. ಸತೀಶ್ ಅವರು ಕ್ರೀಡಾಕೂಟಕ್ಕೆ ಚಾಲನೆ ನೀಡಿದರು.
ಈ ಸಂದರ್ಭ ಕ್ರೀಡಾಕೂಟದ ಆಯೋಜಕರಾದ ಬಿ.ಎಂ. ಸದಾಶಿವ ಮತ್ತು ಬಿ.ಎಂ.ಕುಮಾರ್ ಇದ್ದರು.
ಹಗ್ಗಜಗ್ಗಾಟ, ನಿಂಬು ಚಮಚ ಓಟದ ಸ್ಪರ್ಧೆ, ಓಟದ ಸ್ಪರ್ಧೆ, ಫುಟ್‌ಬಾಲ್ ಪಂದ್ಯಗಳನ್ನು ಕ್ರೀಡಾಕೂಟದಲ್ಲಿ ಆಯೋಜಿಸಲಾಗಿತ್ತು. ಮಕ್ಕಳ ವಿಭಾಗ, ಯುವಕ ಮತ್ತು ಯುವತಿಯರ ವಿಭಾಗ, ಮಹಿಳೆಯರ ಮತ್ತು ಪುರುಷರ ವಿಭಾಗ ಎಂದು ಪ್ರತ್ಯೇಕ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು.
ಈ ಸಂದರ್ಭ ಸಾಂಪ್ರದಾಯಿಕ ಖಾದ್ಯಗಳನ್ನೊಳಗೊಂಡ ಊಟದ ವ್ಯವಸ್ಥೆ ಮಾಡಲಾಗಿತ್ತು. ವಿಜೇತರಿಗೆ ನಗದು ಬಹುಮಾನ ನೀಡಲಾಯಿತು. ಕ್ರೀಡಾಕೂಟದಲ್ಲಿ ಪಂಜರ್ ಪೇಟೆ, ಗಣಪತಿ ಬೀದಿ, ಸುಭಾಷ್ ನಗರದ ನಿವಾಸಿಗಳು ಸೇರಿದಂತೆ ಪಟ್ಟಣದ ವಿವಿಧ ಭಾಗದ ನಿವಾಸಿಗಳು ಭಾಗವಹಿಸಿದ್ದರು.
ವಿರಾಜಪೇಟೆಯ ಪಂಜರುಪೇಟೆಯಲ್ಲಿ ಭಾನುವಾರ ಆಯೋಜಿಸಿದ್ದ ಕೆಸರು ಗದ್ದೆ ಕ್ರೀಡಾಕೂಟದಲ್ಲಿ ಹಗ್ಗಜಗ್ಗಾಟ ಸ್ಪರ್ಧೆ ನಡೆಯಿತು.