ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಫಾಯಿ ಕರ್ಮಚಾರಿಗಳಿಗೆ ಸೌಲಭ್ಯ ಕಲ್ಪಿಸಲು ಸೂಚನೆ

ರಾಷ್ಟ್ರೀಯ ಸಫಾಯಿ ಕರ್ಮಚಾರಿ ಆಯೋಗದ ಸದಸ್ಯ ಜಗದೀಶ್ ಹಿರೇಮಣಿ ಅಧ್ಯಕ್ಷತೆಯಲ್ಲಿ ಸಭೆ
Last Updated 14 ಮಾರ್ಚ್ 2020, 13:41 IST
ಅಕ್ಷರ ಗಾತ್ರ

ಮಡಿಕೇರಿ: ಸಫಾಯಿ ಕರ್ಮಚಾರಿಗಳಿಗೆ ಸರ್ಕಾರದ ಸೌಲಭ್ಯಗಳನ್ನು ಚಾಚು ತಪ್ಪದೇ ತಲುಪಿಸುವುದು ಅಧಿಕಾರಿಗಳ ಕರ್ತವ್ಯ ಎಂದು ರಾಷ್ಟ್ರೀಯ ಸಫಾಯಿ ಕರ್ಮಚಾರಿ ಆಯೋಗದ ಸದಸ್ಯ ಜಗದೀಶ್ ಹಿರೇಮಣಿ ಸೂಚಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಶನಿವಾರ ನಡೆದ ಸಫಾಯಿ ಕರ್ಮಚಾರಿಗಳ ಸೌಲಭ್ಯ ಸಂಬಂಧ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

‘ಸಫಾಯಿ ಕರ್ಮಚಾರಿಗಳು ಅನಾದಿ ಕಾಲದಿಂದಲೂ ಕನಿಷ್ಠ ಸೌಲಭ್ಯವಿಲ್ಲದೇ ಬದುಕು ಸವೆಸುತ್ತಿದ್ದಾರೆ. ಇಂತಹ ಸಮಾಜಕ್ಕೆ ಕನಿಷ್ಠ ಮೂಲ ಸೌಲಭ್ಯಗಳನ್ನು ನೀಡಬೇಕಿದೆ. ಈಗಾಗಲೇ ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಎಲ್ಲ ರೀತಿಯ ನೆರವು ಸಿಗುತ್ತಿದೆ. ಆ ನಿಟ್ಟಿನಲ್ಲಿ ಅಗತ್ಯ ಪ್ರಸ್ತಾವ ಸಲ್ಲಿಸಿದರೆ ಹೆಚ್ಚಿನ ಅನುದಾನ ಒದಗಿಸಲಾಗುವುದು‘ ಎಂದು ಹೇಳಿದರು.

ಜಿಲ್ಲೆಯ ನಗರಸಭೆ ಪ.ಪಂ, ಗ್ರಾ.ಪಂ ಹಾಗೂ ಆಸ್ಪತ್ರೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಫಾಯಿ ಕರ್ಮಚಾರಿಗಳಿಗೆ ಸರಿಯಾದ ಸಮಯಕ್ಕೆ ವೇತನ ಪಾವತಿಸಬೇಕು. ವಿಳಂಬ ಮಾಡುವ ಬಗ್ಗೆ ದೂರು ಬಂದಲ್ಲಿ ನಿಯಮಾನುಸಾರ ಕ್ರಮ ವಹಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಕಾಯಂ ನೌಕರರಿಗೆ ಬಡ್ತಿ ಮತ್ತು ವಿಶೇಷ ಭತ್ಯೆಗಳನ್ನು ಕಲ್ಪಿಸಬೇಕು. ನಿವೃತ್ತರಿಗೆ ಸರ್ಕಾರದ ಸೌಲಭ್ಯಗಳು ದೊರಕಿಸಬೇಕು. ಸಫಾಯಿ ಕರ್ಮಚಾರಿಗಳಿಗೆ ಕಾಲಕಾಲಕ್ಕೆ ಆರೋಗ್ಯ ತಪಾಸಣೆ ಮಾಡಿಸುವುದು, ಸಾಧನ ಸಲಕರಣೆ ವಿತರಿಸಬೇಕು. ಗೃಹ ಭಾಗ್ಯ ಯೋಜನೆ ಅಡಿ ಮನೆ ನಿರ್ಮಿಸಿಕೊಡುವುದು ಹಾಗೂ ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವು ನೀಡಬೇಕು ಎಂದು ಜಗದೀಶ್ ಸೂಚಿಸಿದರು.

ಸಫಾಯಿ ಕರ್ಮಚಾರಿ ಮಕ್ಕಳು ವೈದ್ಯಕೀಯ, ಎಂಜಿನಿಯರಿಂಗ್, ಡೆಂಟಲ್ ಮತ್ತಿತರ ಉನ್ನತ ವ್ಯಾಸಂಗ ಮಾಡುವವರಿಗೆ ವಿದೇಶಗಳಲ್ಲಿ ವ್ಯಾಸಂಗ ಮಾಡಲು ಕೇಂದ್ರ ಸರ್ಕಾರಿಂದ ₹ 25 ಲಕ್ಷಗಳ ವರೆಗೆ ನೆರವು ನೀಡಲಾಗುತ್ತಿದೆ. ಈ ಸೌಲಭ್ಯವನ್ನು ಬಳಸಿ ಕೊಳ್ಳುವಂತಾಗಬೇಕುಎಂದು ಕೋರಿದರು.

ಸಫಾಯಿ ಕರ್ಮಚಾರಿಗಳಿಗೆ ಯಾವುದೇ ರೀತಿಯಲ್ಲಿ ಅನ್ಯಾಯ ಆಗದಂತೆ. ಸಾಮಾಜಿಕ ನ್ಯಾಯದಂತೆ ಅಗತ್ಯ ಸೌಲಭ್ಯಗಳನ್ನು ತಲುಪಿಸಬೇಕೆಂದು ರಾಷ್ಟ್ರೀಯ ಸಫಾಯಿ ಕರ್ಮಚಾರಿ ಆಯೋಗದ ಸದಸ್ಯರು ಸೂಚಿಸಿದರು.

ಸಫಾಯಿ ಕರ್ಮಚಾರಿಗಳು ಸೇವೆಯಲ್ಲಿದ್ದು, ತೀರಿಕೊಂಡರೆ ಅಂತಹ ಕುಟುಂಬದ ಅವಲಂಬಿತರಿಗೆ ಉದ್ಯೋಗ ನೀಡಬೇಕು ಎಂದು ಸೂಚಿಸಿದರು.

ಭೂದಾಖಲೆಗಳ ಉಪ ನಿರ್ದೇಶಕ ಶ್ರೀನಿವಾಸ್ ಮಾತನಾಡಿ, ‘ನಗರಸಭೆಯಲ್ಲಿ ಒಟ್ಟು 49 ಪೌರಕಾರ್ಮಿಕ ಹುದ್ದೆಗಳಿದ್ದು ಹಾಲಿ 45 ಮಂದಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಕುಶಾಲನಗರ, ಸೋಮವಾರಪೇಟೆಯಲ್ಲಿ ಒಟ್ಟು 34 ಉದ್ದೆಗಳು ಭರ್ತಿಯಾಗಿದ್ದು, ಯಾವುದೇ ಹುದ್ದೆ ಖಾಲಿ ಇಲ್ಲ. ವಿರಾಜಪೇಟೆ ಪ.ಪಂಯಲ್ಲಿ ಒಟ್ಟು 25 ಪೌರ ಕಾರ್ಮಿಕರು ಕಾರ್ಯನಿರ್ವಹಿಸುತ್ತಿದ್ದು 2 ಹುದ್ದೆಗಳು ಖಾಲಿ ಇವೆ’ ಎಂದು ಮಾಹಿತಿ ನೀಡಿದರು.

ಜಗದೀಶ್ ಹಿರೇಮಣಿ ಅವರು, ಸದ್ಯ 6 ಹುದ್ದೆಗಳು ಖಾಲಿಯಿದ್ದು, ನಿಯಮಾನುಸಾರ ಅವುಗಳನ್ನು ಭರ್ತಿಮಾಡಿ. ಸದ್ಯ ಪ್ರತಿ 700 ಜನರಿಗೆ ಒಬ್ಬ ಪೌರ ಕಾರ್ಮಿಕನನ್ನು ನೇಮಿಸಲಾಗಿದ್ದು, ಮುಂದಿನ ದಿನಗಳಲ್ಲಿ ಸರ್ಕಾರದ ಮಟ್ಟದಲ್ಲಿ ತೀರ್ಮಾನಿಸಿ ಪ್ರವಾಸಿ ಸ್ಥಳಗಳನ್ನು ಒಳಗೊಂಡ ಪ್ರದೇಶಗಳಲ್ಲಿ 500 ಜನರಿಗೆ ಒಬ್ಬ ಪೌರ ಕಾರ್ಮಿಕರನ್ನು ನೇಮಿಸುವ ನಿಟ್ಟಿನಲ್ಲಿ ಪ್ರಯತ್ನಿಸಲಾಗುವುದು ಎಂದು ಜಗದೀಶ್ ಹಿರೇಮಣಿ ಹೇಳಿದರು.

ನಗರಸಭೆ ಪೌರಾಯುಕ್ತ ಎಂ.ಎಲ್.ರಮೇಶ್ ಮಾತನಾಡಿ, ‘ನಗರ ಸ್ಥಳೀಯ ಸಂಸ್ಥೆಗಳಲ್ಲಿ ಒಟ್ಟು 49 ಪೌರ ಕಾರ್ಮಿಕರು ಕರ್ತವ್ಯ ನಿರ್ವಹಿಸುತ್ತಿದ್ದು, ಈ ಸಿಬ್ಬಂದಿಗಳಿಗೆ ಶೇ 4.76ರಂತೆ ನಗರ ಸ್ಥಳೀಯ ಸಂಸ್ಥೆ ವತಿಯಿಂದ ಇಎಸ್‍ಐ ಹಾಗೂ ಶೇ 1.75ರಂತೆ ವೇತನದಲ್ಲಿ ಕಟಾಯಿಸಿ ಸಂಬಂಧಟ್ಟ ಕಾರ್ಮಿಕರ ರಾಜ್ಯ ವಿಮಾ ನಿಗಮಕ್ಕೆ ಪಾವತಿಸಲಾಗುತ್ತಿದೆ. ಶೇ 12ರಂತೆ ಪಿಎಫ್‌ನ್ನು ಸಿಬ್ಬಂದಿಗಳ ವೇತನದಿಂದ ಕಟಾಯಿಸಿ ಸಂಬಂಧಪಟ್ಟ ಕಾರ್ಮಿಕರ ಭವಿಷ್ಯ ನಿಧಿಗೆ ಪಾವತಿಸಲಾಗುತ್ತಿದೆಎಂದು ತಿಳಿಸಿದರು.

ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕಿ ಭಾರತಿ ಮಾಹಿತಿ ನೀಡಿ, 2019-20ನೇ ಸಾಲಿನಲ್ಲಿ ಪ್ರವೇಶ ಕೋರಿ ಬಂದ 1 ವಿದ್ಯಾರ್ಥಿಗೆ ಬಸವನಹಳ್ಳಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಪ್ರವೇಶ ನೀಡಲಾಗಿದೆ ಎಂದು ತಿಳಿಸಿದರು.

ಆರೋಗ್ಯ ಇಲಾಖೆಯಿಂದ ಯಾವುದೇ ರೀತಿಯಲ್ಲೂ ಲೋಪವಾಗದಂತೆ ಪೌರಕಾರ್ಮಿಕರಿಗೆ ಆಯುಷ್ಮಾನ್ ಭಾರತ ಆರೋಗ್ಯ ಕರ್ನಾಟಕ ಕಾರ್ಡ್‍ಗಳನ್ನು ನೀಡಲು ಸೂಚಿಸಿದರು.

ಜಿಲ್ಲಾಧಿಕಾರು ಅನೀಸ್ ಕಣ್ಮಣಿ ಜಾಯ್ ಮಾತನಾಡಿ, ಬಾಳಗೋಡುವಿನಲ್ಲಿ ಈಗಾಗಲೆ ಸರ್ವೆ ಕಾರ್ಯ ಪೂರ್ಣಗೊಂಡಿದ್ದು. ಜಾಗವನ್ನು ತಾಲ್ಲೂಕು ಪಂಚಾಯಿತಿಗೆ ನೀಡಲಾಗಿದೆ. ನಿಯಮಾನುಸಾರ ಸಕಾರದ ವಸತಿ ಯೋಜನೆಗಳಿಂದ ಮನೆ ಇಲ್ಲದವರಿಗೆ ಮನೆ ನಿರ್ಮಾಣ ಮಾಡಿಕೊಡಲಾಗುವುದು ಎಂದು ತಿಳಿಸಿದರು.

ಪಳನಿ ಪ್ರಕಾಶ್ ಮಾತನಾಡಿದರು. ಜಿ.ಪಂ ಸಿಇಒ ಲಕ್ಷ್ಮೀಪ್ರಿಯಾ, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಸುಮನ್ ಡಿ.ಪನ್ನೇಕರ್, ಜಿ.ಪಂ ಯೋಜನಾ ನಿರ್ದೇಶಕ ಶ್ರೀಕಂಠ ಮೂರ್ತಿ, ಲೀಡ್ ಬ್ಯಾಂಕ್ ಜಿಲ್ಲಾ ಮುಖ್ಯಸ್ಥ ಆರ್.ಕೆ.ಬಾಲಚಂದ್ರ, ಕೆಎಸ್‌ಆರ್‌ಟಿಸಿ ಮಡಿಕೇರಿ ಘಟಕದ ವ್ಯವಸ್ಥಾಪಕಿ ಗೀತಾ, ಕಾರ್ಮಿಕ ಇಲಾಖೆ ತಾಲ್ಲೂಕು ಅಧಿಕಾರಿ ಯತ್ನಟ್ಟಿ, ಅಂಬೇಡ್ಕರ್ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ದಯಾನಂದ್, ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.ಆನಂದ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT