ಸೋಮವಾರ, ಡಿಸೆಂಬರ್ 9, 2019
26 °C

ವಾಹನಗಳಲ್ಲಿ ಕಾರ್ಮಿಕರ ಕರೆದೊಯ್ಯಲು ಅವಕಾಶಕ್ಕೆ ಮನವಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸೋಮವಾರಪೇಟೆ: ತಾಲ್ಲೂಕಿನ ಕಾಫಿ ತೋಟದ ಕೆಲಸಕ್ಕೆ ಕಾರ್ಮಿಕರನ್ನು ಗೂಡ್ಸ್ ಮತ್ತು ಪಿಕಪ್ ವಾಹನಗಳಲ್ಲಿ ಕರೆದೊಯ್ಯಲು ಅವಕಾಶ ಕಲ್ಪಿಸಬೇಕೆಂದು ಒತ್ತಾಯಿಸಿ, ಕಾಫಿ ಬೆಳೆಗಾರರ ಹೋರಾಟ ಸಮಿತಿ ಹಾಗೂ ಕಾಫಿ ಬೆಳೆಗಾರರು ಮತ್ತು ಕಾರ್ಮಿಕರ ಸಂಘದ ಸದಸ್ಯರು ಸೋಮವಾರ ಇಲ್ಲಿನ ಪೊಲೀಸ್ ಠಾಣೆಯ ಪಿಎಸ್‌ಐ ಅವರಿಗೆ ಮನವಿ ಸಲ್ಲಿಸಿದರು.

ಗ್ರಾಮೀಣ ಭಾಗ ಹಾಗೂ ಗುಡ್ಡಗಾಡು ಪ್ರದೇಶಗಳಲ್ಲಿ ಅರೇಬಿಕಾ ಹಾಗೂ ರೋಬಸ್ಟಾ ಕಾಫಿ ತೋಟಗಳಲ್ಲಿ ಈಗಾಗಲೇ ಕಾಫಿ ಕೊಯ್ಲು ಆರಂಭಗೊಂಡಿದೆ. ಆದರೆ, ಬಹುತೇಕ ಗ್ರಾಮಗಳಿಗೆ ಸಾರಿಗೆ ಸೌಲಭ್ಯವಿಲ್ಲ. ಬಾಡಿಗೆ ವಾಹನಗಳಲ್ಲಿ ಕಾರ್ಮಿಕರನ್ನು ಕರೆದೊಯ್ದು, ವಾಪಾಸು ಬಿಡಬೇಕು. ಈ ಸಂದರ್ಭದಲ್ಲಿ ಪೊಲೀಸರು ವಾಹನಗಳನ್ನು ತಡೆದು ದಂಡ ವಿಧಿಸುತ್ತಿರುವುದರಿಂದ ಕಾಫಿ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಅಧಿಕಾರಿಗೆ ಮನವರಿಕೆ ಮಾಡಿಕೊಟ್ಟರು.

ಕಳೆದ ಎರಡು ದಶಕಗಳಿಂದಲೂ ಕಾರ್ಮಿಕರನ್ನು ಖಾಸಗಿ ಅಥವಾ ಬಾಡಿಗೆ ವಾಹನಗಳಲ್ಲೇ ಕರೆದೊಯ್ಯಲಾಗುತ್ತಿದೆ. ನಾಲ್ಕೈದು ವರ್ಷಗಳಿಂದ ಅತಿವೃಷ್ಟಿ, ಅಕಾಲಿಕ ಮಳೆಯಿಂದ ಕಾಫಿ ಫಸಲಿಗೆ ಹಾನಿಯಾಗುತ್ತಿದೆ. ಈ ವರ್ಷವೂ ಕಾಫಿ ಕೊಯ್ಲಿನ ಸಂದರ್ಭ ಮಳೆ ಸುರಿಯುತ್ತಿದ್ದು, ಕಾಫಿ ಹಣ್ಣು ಮಣ್ಣು ಸೇರುತ್ತಿದೆ. ಜಿಲ್ಲಾಧಿಕಾರಿಗಳು ಕಾಫಿ ಬೆಳೆಗಾರರ ಸಂಕಷ್ಟಕ್ಕೆ ಸ್ಪಂದಿಸಬೇಕು. ವಾಹನಗಳಲ್ಲಿ ಕಾರ್ಮಿಕರನ್ನು ಕರೆದೊಯ್ಯಲು ಅವಕಾಶ ಮಾಡಿಕೊಡಬೇಕು ಎಂದು ಬೆಳೆಗಾರರು ಮನವಿ ಮಾಡಿದರು.

ಪಿಕಪ್, ಜೀಪು, ಗೂಡ್ಸ್ ವಾಹನದಲ್ಲಿ ಕಾರ್ಮಿಕರನ್ನು ಕರೆದೊಯ್ಯಲು ಅನುವು ಮಾಡಿಕೊಡದಿದ್ದರೆ ಶನಿವಾರ ಪಟ್ಟಣದ ಠಾಣೆಯ ಮುಂದೆ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ತಾಲ್ಲೂಕು ಕೃಷಿಕರ ಸಮಾಜದ ಅಧ್ಯಕ್ಷ ಎಸ್.ಪಿ.ಪೊನ್ನಪ್ಪ ತಿಳಿಸಿದರು.

ಸಂಘಟನೆಗಳ ಪ್ರಮುಖರಾದ ಹೋರಾಟ ಸಮಿತಿಯ ಅಧ್ಯಕ್ಷ ಎಂ.ಸಿ.ಮುದ್ದಪ್ಪ, ಬಿ.ಪಿ.ಅನಿಲ್, ಬಗ್ಗನ ತಮ್ಮಯ್ಯ, ಪೊನ್ನಪ್ಪ, ಹರೀಶ್, ಧರ್ಮಪ್ಪ, ಬಿ.ಎಸ್.ಸುದೀಪ್ ಮತ್ತಿತರರು ಇದ್ದರು.

ಪ್ರತಿಕ್ರಿಯಿಸಿ (+)