ನಾಪೋಕ್ಲು: ‘ವಿವಿಧ ಧರ್ಮಗಳ ಹಬ್ಬಗಳ ಆಚರಣೆಯನ್ನು ಸಂಭ್ರಮದಿಂದ ಕೈಗೊಳ್ಳುವುದರ ಮೂಲಕ ಸಮಾಜದಲ್ಲಿ ಶಾಂತಿ ನೆಲೆಸುವಂತೆ ಮಾಡಲಾಗಿದೆ’ ಎಂದು ಶಾಸಕ ಎ.ಎಸ್.ಪೊನ್ನಣ್ಣ ಹೇಳಿದರು.
ನಾಪೋಕ್ಲು ಟೌನ್ ಮುಹಿಯುದ್ದೀನ್ ಸುನಿ ಜುಮಾ ಮಸೀದಿ ವತಿಯಿಂದ 3 ದಿನಗಳ ಕಾಲ ನಡೆದ ಬೃಹತ್ ಮಿಲಾದ್ ಸಮಾವೇಶ ‘ಮದದೆ ಮದೀನಾ’ ಮಿಲಾದ್ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
‘ಎಲ್ಲರೂ ತಮ್ಮ ತಮ್ಮ ಧಾರ್ಮಿಕ ನಂಬಿಕೆಗಳನ್ನು ಪಾಲನೆ ಮಾಡುತ್ತಿದ್ದಾರೆ. ಜಾತ್ಯತೀತ ಸಿದ್ದಾಂತದ ಆಧಾರದಲ್ಲಿ ರಾಜ್ಯ ಸರ್ಕಾರ ಕೆಲಸ ನಿರ್ವಹಿಸುತ್ತಿದೆ. ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಧರ್ಮ ನಿರಪೇಕ್ಷ ಆಡಳಿತಕ್ಕೆ ಬದ್ಧವಾಗಿದೆ. ರಾಜ್ಯಾದ್ಯಂತ ಶಾಂತಿ ನೆಲೆಸಿದೆ. ಉತ್ತಮ ಆಡಳಿತದ ಮೂಲಕ ಸಮಾನತೆಯ ತತ್ವಕ್ಕೆ ಬದ್ಧವಾಗಿದೆ’ ಎಂದರು.
‘ಕೆಲವು ಕಿಡಿಗೇಡಿಗಳ ಕೃತ್ಯದಿಂದ ಸಮಾಜಕ್ಕೆ ಹಾನಿಯಾಗುತ್ತಿದೆ. ರಾಜಕೀಯ ಪ್ರೇರಿತ ಕೆಲವು ಘಟನೆಗಳು ಅಲ್ಲಲ್ಲಿ ನಡೆಯುತ್ತಿದೆ. ತಪ್ಪಿತಸ್ಥರನ್ನು ಪತ್ತೆ ಹಚ್ಚಿ ಶಿಕ್ಷಿಸಲಾಗುವುದು’ ಎಂದರು.
ಸಮಾರೋಪ ಸಮಾರಂಭಕ್ಕೂ ಮುನ್ನ ಬೃಹತ್ ಮೆರವಣಿಗೆ ನಡೆಯಿತು. ಸಾವಿರಾರು ಸಂಖ್ಯೆಯಲ್ಲಿ ಜನರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ದಫ್ ಕಾರ್ಯಕ್ರಮ ಮೆರವಣಿಗೆಯಲ್ಲಿ ಗಮನ ಸೆಳೆಯಿತು.
ನಾಪೋಕ್ಲು ಟೌನ್ ಮುಹಿಯುದ್ದೀನ್ ಸುನಿ ಜುಮಾ ಮಸೀದಿ ವತಿಯಿಂದ 3 ದಿನಗಳ ಕಾಲ ನಡೆದ ಬೃಹತ್ ಮಿಲಾದ್ ಸಮಾವೇಶ ‘ಮದದೆ ಮದೀನಾ’ ಮಿಲಾದ್ ಕಾರ್ಯಕ್ರಮದ ಅಂಗವಾಗಿ ಪಟ್ಟಣದಲ್ಲಿ ಭಾನುವಾರ ಬೃಹತ್ ಮಿಲಾದ್ ರ‍್ಯಾಲಿ ನಡೆಯಿತು.