ಸೋಮವಾರ, ಅಕ್ಟೋಬರ್ 21, 2019
25 °C
‘ಸ್ಮಾರ್ಟ್‌ಕ್ಲಾಸ್’ ಆರಂಭಿಸಲು ವಿದ್ಯಾರ್ಥಿಗಳ ಮನವಿ

ಶಿಕ್ಷಣ ಸಚಿವರ ಎದುರು ವಿದ್ಯಾರ್ಥಿಗಳ ಪ್ರಶ್ನಾವಳಿ

Published:
Updated:
Prajavani

ಮಡಿಕೇರಿ: ಸಾರ್‌... ಸರ್ಕಾರಿ ಶಾಲಾ ಮಕ್ಕಳಿಗೂ ಬಸ್‌ ವ್ಯವಸ್ಥೆ ಕಲ್ಪಿಸಿ, ದೈಹಿಕ ಶಿಕ್ಷಣ ಶಿಕ್ಷಕರನ್ನು ನೇಮಿಸಿ, ಸರ್ಕಾರಿ ಶಾಲೆಯಲ್ಲಿಯೂ ‘ಸ್ಮಾರ್ಟ್‌ ಕ್ಲಾಸ್’ ಆರಂಭಿಸಿ, ನಮ್ಮ ಶಾಲೆಯಲ್ಲಿ ಕಂಪ್ಯೂಟರ್ ಇಲ್ಲ, ಜಾತಿ ನೀತಿ ಬಿಟ್ಟು ಎಲ್ಲ ಬಡ ಮಕ್ಕಳಿಗೂ ವಿದ್ಯಾರ್ಥಿ ವೇತನ ನೀಡಿ...’

ಈ ರೀತಿ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಸುರೇಶ್‌ಕುಮಾರ್‌ ಅವರಲ್ಲಿ ವಿದ್ಯಾರ್ಥಿಗಳು ಮೊರೆಯಿಟ್ಟ ಪರಿ.

ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಸಭಾಂಗಣದಲ್ಲಿ ಶನಿವಾರ ಪ್ರಾಥಮಿಕ, ಪ್ರೌಢಶಾಲೆ ಹಾಗೂ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳೊಂದಿಗೆ ಸಚಿವರು ಸಂವಾದ ನಡೆಸಿದರು.

ಸಂವಾದದಲ್ಲಿ ಮುಕ್ತ ಮನಸ್ಸಿನಿಂದ ವಿದ್ಯಾರ್ಥಿಗಳು ತಮ್ಮ ಅನಿಸಿಕೆ ಹಂಚಿಕೊಂಡರು. 2 ಗಂಟೆ ನಡೆದ ಸಂವಾದದಲ್ಲಿ ಶಿಕ್ಷಣ ವ್ಯವಸ್ಥೆಯಲ್ಲಿ ಆಗಬೇಕಾದ ಬದಲಾವಣೆ ಕುರಿತು ಬೆಳಕು ಚೆಲ್ಲಲಾಯಿತು.

ಬಸ್‌ ಸೌಲಭ್ಯ ನೀಡಿ: ಸರ್ಕಾರಿ ಪದವಿ ‍ಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿ ಹರಿಪ್ರಸಾದ್‌, ‘ಕೊಡಗು ಬೆಟ್ಟಗುಡ್ಡದ ಪ್ರದೇಶವಾಗಿದ್ದು ಗ್ರಾಮೀಣ ಭಾಗದ ಮಕ್ಕಳಿಗೆ ಬೇಗ ಶಾಲೆಗೆ ಬರಲು ಸಮಸ್ಯೆಯಾಗುತ್ತಿದೆ. ಸರ್ಕಾರಿ ಶಾಲೆಗೂ ಖಾಸಗಿಯವರಂತೆ ಬಸ್‌ ಸೌಲಭ್ಯ ನೀಡಿ’ ಎಂದು ಮನವಿ ಮಾಡಿದರು.

ಇದಕ್ಕೆ ಸುರೇಶ್‌ ಕುಮಾರ್‌ ಪ್ರತಿಕ್ರಿಯಿಸಿ, ‘ಸಾಕಷ್ಟು ಚರ್ಚೆಯಾಗಿದೆ. ಯಾವ ಭಾಗದಿಂದ ಎಷ್ಟು ಗಂಟೆಗೆ ಬಸ್‌ ಬೇಕು ಎನ್ನುವ ಪಟ್ಟಿ ಮಾಡಿದಲ್ಲಿ ಕೆಎಸ್‌ಆರ್‌ಟಿಸಿಯಿಂದ ಬಸ್ ವ್ಯವಸ್ಥೆ ಕಲ್ಪಿಸಲಾಗುವುದು’ ಎಂದು ಭರವಸೆಯಿತ್ತರು.

ದೈಹಿಕ ಶಿಕ್ಷಣ ಶಿಕ್ಷಕರನ್ನು ನೇಮಿಸಿ: ಪಿಯುಸಿ ವಿದ್ಯಾರ್ಥಿ ಕಾಟಕೇರಿ ನಿತೀಶ್‌ ‘ಶಾಲೆಗಳಲ್ಲಿ ಪಠ್ಯೇತರ ಚಟುವಟಿಕೆಗೆ ಹೆಚ್ಚು ಅವಕಾಶ ಕಲ್ಪಿಸಬೇಕು. ಕ್ರೀಡೆ, ಸಂಗೀತ, ಕರಾಟೆ, ನೃತ್ಯಕ್ಕೆ ಆಯಾ ಶಿಕ್ಷಕರನ್ನು ನೇಮಿಸಿ’ ಎಂದು ಕೋರಿದರು.

‘ಈಗಾಗಲೇ ಮಕ್ಕಳ ಸಂಖ್ಯೆ ಅನುಗುಣವಾಗಿ ದೈಹಿಕ ಶಿಕ್ಷಣ ಶಿಕ್ಷಕರನ್ನು ನೇಮಿಸಲಾಗಿದೆ. ಆಯಾ ಶಾಲೆಗೆ ಶಿಕ್ಷಕರು ಇಲ್ಲದೇ ಇದ್ದರೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು’ ಎಂದು ಹೇಳಿದರು.

9ನೇ ತರಗತಿ ವಿದ್ಯಾರ್ಥಿನಿ ಅಂಜಲಿ, ‘ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಕರೆತರುವುದಕ್ಕೆ ಏನು ಕ್ರಮ ಕೈಗೊಂಡಿದ್ದೀರಾ?’ ಎನ್ನುವ ಪ್ರಶ್ನೆಗೆ ಉತ್ತರಿಸಿದ ಸಚಿವರು ‘ಈಗಾಗಲೇ ಈ ಬಗ್ಗೆ ಸಮೀಕ್ಷೆ ನಡೆಸಲಾಗಿದೆ’ ಎಂದರು.

ಶಾಲಾ– ಕಾಲೇಜುಗಳಲ್ಲಿ ಖಾಸಗಿ ಶಾಲೆ ಮಾದರಿಯಲ್ಲಿ ಸ್ಮಾರ್ಟ್‌ ಕ್ಲಾಸ್ ತೆರೆಯಬೇಕು ಎಂದು ವಿದ್ಯಾರ್ಥಿನಿ ಮೋನಿಕಾ ಗಮನ ಸೆಳೆದಳು.

ಉತ್ತರ ಕನ್ನಡ, ಬೆಳಗಾವಿ ಹಾಗೂ ಮಲೆನಾಡು ಭಾಗದಲ್ಲಿ ಭಾರಿ ಮಳೆಯಿಂದ ಸರ್ಕಾರಿ ಶಾಲೆಯ ಕಟ್ಟಡಕ್ಕೆ ಹಾನಿಯಾಗಿವೆ. ಇಲ್ಲಿ ಹೊಸ ಕಟ್ಟಡಕ್ಕಾಗಿ ₹ 200 ಕೋಟಿ ವ್ಯಯಿಸಬೇಕಾಗಿದೆ. ಸ್ಥಿತಿಗತಿ ನೋಡಿಕೊಂಡು ಸ್ಮಾರ್ಟ್‌ಕ್ಲಾಸ್‌ ರೂಪಿಸುವ ಕುರಿತು ಚಿಂತನೆ ನಡೆಸಲಾಗುವುದು ಎಂದು ಸಚಿವರು ಭರವಸೆ ನೀಡಿದರು.

ಪಿಯು ವಿದ್ಯಾರ್ಥಿ ಅಭಿಷೇಕ್‌ ಮಾತನಾಡಿ, 7ನೇ ತರಗತಿಗೆ ಪಬ್ಲಿಕ್ ಪರೀಕ್ಷೆ ತಂದಿರುವುದು ಉತ್ತಮ ವಿಚಾರ, ಪ್ರಥಮ ಪಿಯುಗೂ ಈ ರೀತಿಯ ಪರೀಕ್ಷೆ ನಡೆಸಿ. ಇದರಿಂದ ದ್ವಿತೀಯ ಪಿಯುಸಿಯಲ್ಲಿ ಹೆಚ್ಚು ಅಂಕ ಗಳಿಸಲು ಅನುಕೂಲವಾಗಲಿದೆ ಎಂದು ಕೋರಿದರು.

ಈ ಬಗ್ಗೆ ಚರ್ಚಿಸಲಾಗುವುದು. ಮಕ್ಕಳಲ್ಲಿ ಈಚೆಗೆ ಕಲಿಕಾ ಗುಣಮಟ್ಟ ಕುಸಿಯುತ್ತಿದೆ. 7ನೇ ತರಗತಿಗೆ ಈ ವರ್ಷದಿಂದ ಪ್ರಾಯೋಗಿಕವಾಗಿ ಪಬ್ಲಿಕ್‌ ಪರೀಕ್ಷೆ ಮಾಡಲಾಗುತ್ತಿದೆ. ಆದರೆ, ಪಾಸ್‌–ಫೇಲ್‌ ವ್ಯವಸ್ಥೆ ಕಲ್ಪಿಸದೆ ಮುಂದಿನ ವರ್ಷದಿಂದ ಜಾರಿ ಮಾಡಲಾಗುವುದು. ಇದರಿಂದ ಕಲಿಯುವ ಉತ್ಸಾಹ ಹೆಚ್ಚುತ್ತೆ ಎಂದರು.

ಡಿಡಿಪಿಐ ಮಚಾಡೋ, ಡಿಡಿಪಿಯು ಕೆಂಚಪ್ಪ, ತಾಲ್ಲೂಕು ಶಿಕ್ಷಣಾಧಿಕಾರಿ ಗಾಯತ್ರಿ, ಮಡಿಕೇರಿ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ವಿಜಯ್‌ ಹಾಜರಿದ್ದರು.

ಚುನಾವಣಾ ಫಲಿತಾಂಶ 2019 | ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ 2019 ಚುನಾವಣೆಗೆ ಸಂಬಂಧಿಸಿದ ಸಮಗ್ರ ಸುದ್ದಿ, ಮಾಹಿತಿ, ವಿಶ್ಲೇಷಣೆ ಇಲ್ಲಿ ಲಭ್ಯ.

ಮಹಾರಾಷ್ಟ್ರ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಹರಿಯಾಣ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

Post Comments (+)